ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊಳೆಗೇರಿ ಪ್ರತಿಭೆಗಳನ್ನು ಗುರುತಿಸಿ’

Last Updated 21 ಮೇ 2017, 10:01 IST
ಅಕ್ಷರ ಗಾತ್ರ

ಚಾಮರಾಜನಗರ: ಕೊಳೆಗೇರಿ ಹಾಗೂ ಅತ್ಯಂತ ಹಿಂದುಳಿದ ವರ್ಗದವರು ವಾಸಿಸುವ ಪ್ರದೇಶಗಳಲ್ಲಿ ಪ್ರತಿಭಾವಂತ ಮಕ್ಕಳಿದ್ದು, ಅವರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಬೇಸಿಗೆ ಶಿಬಿರಗಳಿಂದ ಆಗಬೇಕು ಎಂದು ಕರ್ನಾಟಕ ಬಾಲ ವಿಕಾಸ ಆಕಾಡೆಮಿ ಸದಸ್ಯೆ ಪದ್ಮಾ ಪುರುಷೋತ್ತಮ್ ಹೇಳಿದರು.

ನಗರದ ಉಪ್ಪಾರ ಬೀದಿಯಲ್ಲಿರುವ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಾಲವಿಕಾಸ ಅಕಾಡೆಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಆರಂಭಿಸಲಾದ 10 ದಿನಗಳ ತಾಲ್ಲೂಕು ಮಟ್ಟದ ಬೇಸಿಗೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಈ ಹಿಂದೆ ಶಿಕ್ಷಕರ ಭವನ, ಪೇಟೆ ಪ್ರೈಮರಿ ಶಾಲೆ, ಪಿಡಬ್ಲ್ಯೂಡಿ ಶಾಲೆಗಳಲ್ಲಿ ಬೇಸಿಗೆ ಶಿಬಿರ ಆಯೋಜಿಸಲಾಗುತ್ತಿತ್ತು. ಈ ವರ್ಷ ಕೊಳೆಗೇರಿ ಪ್ರದೇಶ ಹಾಗೂ ಅತ್ಯಂತ ಹಿಂದುಳಿದ ಸಮುದಾಯದವರು ವಾಸಿಸುವ ಸ್ಥಳಗಳ ಸಮೀಪದ ಶಾಲೆಗಳಲ್ಲಿಯೇ ಶಿಬಿರ ಆಯೋಜನೆ  ಮಾಡಲಾಗಿದೆ. ಇಲ್ಲಿನ ಮಕ್ಕಳಲ್ಲಿ ಅಗಾಧ ಪ್ರತಿಭೆ ಇದೆ. ಅವರಲ್ಲಿ ಕಲೆ ಸುಪ್ತವಾಗಿ ಅಡಗಿದೆ. ಅದನ್ನು ಗುರುತಿಸಿ, ಪ್ರೋತ್ಸಾಹಿಸಿದರೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಒಳ್ಳೆಯ ಪ್ರತಿಭೆಗಳನ್ನು ರೂಪಿಸಲು ಸಾಧ್ಯ ಎಂದರು.

ನಶಿಸುತ್ತಿರುವ ಗ್ರಾಮೀಣ ಕ್ರೀಡಾಕೂಟಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಕಬಡ್ಡಿ, ಕುಂಟೆಬಿಲ್ಲೆ, ಲಗೋರಿ, ಚಿನ್ನಿದಾಂಡು, ಮರಕೋತಿ ಆಟ, ಗೋಲಿ, ಬುಗುರಿ ಮುಂತಾದ ಆಟಗಳನ್ನು ಆಡಿಸಿದಾಗ ಮಕ್ಕಳು ಸಹ ಉತ್ಸುಕತೆಯಿಂದ ಶಿಬಿರದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಅಭಿಪ್ರಾಯಪಟ್ಟರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಸರ್ವೇಶ್‌ ಮಾತನಾಡಿ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬೇಸಿಗೆ ಶಿಬಿರ ಸಹಕಾರಿಯಾಗಿದೆ. ಪಟ್ಟಣ ಪ್ರದೇಶಗಳಲ್ಲಿ ಬೇಸಿಗೆ ಶಿಬಿರಕ್ಕೆ ಮಕ್ಕಳನ್ನು ಸೇರಿಸಲು ಸರದಿಯಲ್ಲಿ ನಿಲ್ಲುತ್ತಾರೆ.

ಅಲ್ಲಿ ನೀಡುವ ಸೌಲಭ್ಯಗಳನ್ನು ಗ್ರಾಮೀಣ ಹಾಗು ಬಡಮಕ್ಕಳಿಗೆ ನೀಡಬೇಕು ಎಂಬ ಉದ್ದೇಶ ನಮ್ಮದು ಎಂದು ಹೇಳಿದರು.ರಾಜ್ಯ ಬಾಲವಿಕಾಸ ಅಕಾಡೆಮಿ ಸದಸ್ಯ ರವಿಗೌಡ, ಸಿಡಿಪಿಒ ರಾಮಕೃಷ್ಣಯ್ಯ, ಮುಖ್ಯ ಶಿಕ್ಷಕ ಕೆ.ಎಸ್. ಮಹದೇವಸ್ವಾಮಿ, ಮೇಲ್ವಿಚಾರಕರಾದ ಕಸ್ತೂರಿ, ಲಕ್ಷ್ಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT