ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅ.31ರೊಳಗೆ ಪಹಣಿ ತಿದ್ದುಪಡಿ ಪೂರ್ಣಗೊಳಿಸಿ

Last Updated 21 ಮೇ 2017, 10:18 IST
ಅಕ್ಷರ ಗಾತ್ರ

ಚಿಂತಾಮಣಿ: ‘ಸರ್ಕಾರ ಪಹಣಿಗಳ  ತಿದ್ದುಪಡಿ ಅಧಿಕಾರವನ್ನು ತಹಶೀಲ್ದಾರ್‌ ಅವರಿಗೆ ನೀಡಿದೆ. ಹೋಬಳಿವಾರು ಕಂದಾಯ ಅದಾಲತ್‌ಗಳನ್ನು ನಡೆಸಿ ತಿದ್ದುಪಡಿ ಪ್ರಕರಣಗಳನ್ನು ಅ.31 ರ ಒಳಗೆ ಪೂರ್ಣವಾಗಿ ಮುಕ್ತಾಯಗೊಳಿಸಬೇಕು’  ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ಸೂಚಿಸಿದರು.

ನಗರದಲ್ಲಿ ಶನಿವಾರ ನಡೆದ ‘ರೈತರ ಕುಂದುಕೊರತೆಗಳ ಪರಿಶೀಲನಾ ಸಭೆ’ಯಲ್ಲಿ ಅವರು ಮಾತನಾಡಿದರು. ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಂ.ಗೋವಿಂದಪ್ಪ, ‘ತಹಶೀಲ್ದಾರ್‌ ಕಚೇರಿಯಲ್ಲಿ ಪಹಣಿಗಳ ತಿದ್ದುಪಡಿ, ಖಾತೆ ಬದಲಾವಣೆ, ಪೋಡಿ ಪ್ರಕರಣ ಗಳು ಅನೇಕ ವರ್ಷಗಳಿಂದ ಬಾಕಿ ಇವೆ.

ರೈತರು ತಹಶೀಲ್ದಾರ್‌ ಕಚೇರಿ, ವಿಭಾಗಾ ಧಿಕಾರಿಗಳ ಕಚೇರಿಗೆ ಅಲೆದರೂ ಪ್ರಯೋಜನವಾಗುತ್ತಿಲ್ಲ. ರೈತರು ಕಂದಾಯ ದಾಖಲೆಗಳ ಬಗ್ಗೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಬೆಳೆನಷ್ಟ ಪರಿಹಾರವನ್ನು 5 ಎಕರೆಗೆ ನೀಡಬೇಕು ಎಂಬ ಆದೇಶವಿದ್ದರೂ ಕೇವಲ 2.5 ಎಕರೆಗೆ ಮಾತ್ರ  ನೀಡುತ್ತಿದ್ದಾರೆ. ರೇಷ್ಮೆ ಸಾಕಾಣಿಕೆ ಮನೆಗಳಿಗೆ ಸೋಲಾರ್‌ ಅಳವಡಿಸುವ ಅರ್ಜಿಗಳು ಸಾಕಷ್ಟು ಬಾಕಿ ಉಳಿದಿವೆ. ಅರಣ್ಯ ಇಲಾಖೆಯವರು ಗಿಡಗಳನ್ನು  ನೆಡುತ್ತಿ ದ್ದರೂ ಸಂರಕ್ಷಣೆ ಮಾಡುತ್ತಿಲ್ಲ’ ಎಂದು ದೂರಿದರು.

ಉಪವಿಭಾಗಾಧಿಕಾರಿ ಶಿವಸ್ವಾಮಿ ಉತ್ತರಿಸಿ, ‘ಪಹಣಿ ತಿದ್ದುಪಡಿ ಕುರಿತು ತಹಶೀಲ್ದಾರ್‌ ಅವರಿಗೆ ನೀಡಿದ್ದ ಅಧಿ ಕಾರ  ಡಿಸೆಂಬರ್‌ಗೆ ಮುಕ್ತಾಯವಾಗಿತ್ತು. ಸರ್ಕಾರ ಮತ್ತೆ ಆದೇಶ ಹೊರ ಡಿಸಿ ತಿದ್ದುಪಡಿ ಅಧಿಕಾರ ನೀಡಿದೆ’ ಎಂದರು.

ತಹಶೀಲ್ದಾರ್‌ ಎಂ.ಗಂಗಪ್ಪ ಮಾತನಾಡಿ, ‘ಬೆಳೆನಷ್ಟ ಪರಿಹಾರವನ್ನು ರೈತರ ಬ್ಯಾಂಕ್‌ ಖಾತೆಗಳಿಗೆ ಜಮೆ ಮಾಡಲಾಗಿದೆ. ಸರ್ಕಾರ 4.30ಎಕರೆಗೆ ಮಿತಿಗೊಳಿಸಿದ್ದು ಎಲ್ಲರಿಗೂ ನೀಡಲಾಗುತ್ತಿದೆ. ಬಾಕಿ ಇರುವ ರೈತರಿಗೆ ಈ ತಿಂಗಳ 25 ರವರೆಗೂ ಕಾಲಾವಕಾಶ ನೀಡಲಾಗಿದೆ.ಅಗತ್ಯ ವಿವರಗಳನ್ನು ನೀಡಬೇಕು’ ಎಂದು ಕೋರಿದರು.

ನಗರಸಭೆ ಸದಸ್ಯ ಆರ್‌.ಪ್ರಕಾಶ್‌ ಮಾತನಾಡಿ, ‘ತಾಲ್ಲೂಕು ಕಚೇರಿಯಲ್ಲಿ ಬೆಳೆ ದೃಢೀಕರಣ ಪ್ರಮಾಣ ಪತ್ರವನ್ನು ನೀಡುತ್ತಿಲ್ಲ. ರಸಗೊಬ್ಬರದ ಅಂಗಡಿ ಗಳಲ್ಲಿ ಖರೀದಿಗೆ ರಸೀದಿಗಳನ್ನು ನೀಡು ತ್ತಿಲ್ಲ. ನಗರದ ಎಪಿಎಂಸಿಯಲ್ಲಿರುವ ಕ್ಯಾಂಟಿನ್‌ ಖಾಸಗಿಯವರಿಗೆ ದಾಸ್ತಾನು ಮಳಿಗೆಗಾಗಿ ಬಾಡಿಗೆಗೆ ನೀಡಲಾಗಿದೆ’ ಎಂದು ಆರೋಪಿಸಿದರು.

3 ತಿಂಗಳ ಒಳಗೆ ರೈತರ ಅನುಕೂಲ ಕ್ಕಾಗಿ ಕ್ಯಾಂಟಿನ್‌ ತೆರೆಯುಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದರು. ಮಾನವ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ‘ಪ್ರಧಾನ ಮಂತ್ರಿಗಳ ಬಿಮಾ ಫಸಲ್‌ ವಿಮೆ ಯೋಜನೆಯಲ್ಲಿ ತಾಲ್ಲೂಕಿನ ರೈತರಿಗೆ ವಿಮಾ ಹಣ ದೊರೆತಿಲ್ಲ.

ರೈತರು ಮತ್ತು ಸಾಮಾನ್ಯ ಜನರು ಜಿಲ್ಲಾಧಿಕಾರಿಗೆ ಅಹವಾಲು ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ಕೈವಾರದ ಎಸ್‌ಎಫ್‌ಎಸ್‌ ಸೊಸೈಟಿ ಸೂಪರ್‌ಸೀಡ್‌ ಆಗಿದ್ದರೂ ಒಂದೇ ಕುಟುಂಬದವರು 5–6 ಗ್ರಾಮಗಳಲ್ಲಿ ಪಡಿತರ ವಿತರಣೆ ಮಾಡುತ್ತಿದ್ದಾರೆ. ಆಹಾರ ಇಲಾಖೆಗೆ ದೂರು ನೀಡಿದ್ದರೂ ಪ್ರಯೋಜನ ವಾಗಿಲ್ಲ. ತಾಲ್ಲೂಕಿನ  ಉಪ ನೋಂದ ಣಾಧಿಕಾರಿ ಕಚೇರಿಯಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ. ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿ ದರು.

ಪಡಿತರ ಚೀಟಿಗಳ ಸಮಸ್ಯೆಗಳ ಕುರಿತು ಬಹುತೇಕರು ಅಸಮಾಧಾನ ವ್ಯಕ್ತಪಡಿಸಿದರು. ‘ಒಂದೂವರೆ ವರ್ಷದಿಂದ ಕಾರ್ಡ್‌ಗಳನ್ನು ನೀಡದಿರು ವುದರಿಂದ ಬಡವರಿಗೆ ತೊಂದರೆ ಯಾಗಿದೆ’ ಎಂದು ದೂರಿದರು.

‘ಪಡಿತರ ಚೀಟಿ ವಿತರಣೆ ಕುರಿತು  ಸರ್ಕಾರದ ಹಂತದಲ್ಲಿ ಆದೇಶಗಳ ಬದಲಾವಣೆಯಿಂದ ತೊಂದರೆಯಾಗಿದೆ.  ಒಂದು ತಿಂಗಳ ಒಳಗೆ ಹೊಸ ಕಾರ್ಡ್‌ಗಳನ್ನು ವಿತರಿಸಲಾಗುವುದು. ಅರ್ಜಿದಾರರ ಆದಾಯ ₹ 1.20 ಲಕ್ಷದ ಒಳಗಿದ್ದರೆ ಬಿಪಿಎಲ್‌, ₹ 1.20 ಲಕ್ಷಕ್ಕಿಂತ ಹೆಚ್ಚಿದ್ದರೆ ಎಪಿಎಲ್‌ ಕಾರ್ಡ್‌ ನೀಡಲಾಗುವುದು’ ಎಂದು ಆಹಾರ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ರೈತರ ಸಂಘದ ಮುಖಂಡ ಜೆ.ವಿ.ರಘುನಾಥರೆಡ್ಡಿ, ನಗರಸಭೆ ಸದಸ್ಯ ನಟರಾಜ್‌, ರಕ್ಷಣಾ ವೇದಿಕೆಯ ಅಂಬರೀಶ್‌, ಸೀಕಲ್‌ ರಮಣಾರೆಡ್ಡಿ ಕುಂದುಕೊರತೆಗಳ ಕುರಿತು ಅಹವಾಲುಗಳನ್ನು ಸಲ್ಲಿಸಿದರು.

ನಗರಸಭೆ ಅಧ್ಯಕ್ಷೆ, ಸುಜಾತಶಿವಣ್ಣ, ಉಪಾಧ್ಯಕ್ಷೆ ಸುಜಾತಶಿವಪ್ಪ, ಪೌರಾ ಯುಕ್ತ ಮುನಿಸ್ವಾಮಿ, ತಾ.ಪಂ ಇಒ ಸಿ.ಶ್ರೀನಿವಾಸ್‌ ಹಾಗೂ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

* * 

ಪ್ರತಿ ಸೋಮವಾರ ಅರ್ಧ ದಿನ ಕಡ್ಡಾಯವಾಗಿ ಕಚೇರಿಯಲ್ಲಿ ಇರುತ್ತೇನೆ. ಯಾರು ಬೇಕಾದರೂ ಭೇಟಿ ಮಾಡಬಹುದು. ಸಾಧ್ಯವಾಗದವರು ಪತ್ರದ ಮೂಲಕ, ಇ ಮೇಲ್‌ ಮೂಲಕ  ಸಮಸ್ಯೆ ತಿಳಿಸಬಹುದು.
ದೀಪ್ತಿ ಕಾನಡೆ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT