ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ನಿಯಮ ಕಡ್ಡಾಯವಾಗಿ ಪಾಲಿಸಿ

Last Updated 21 ಮೇ 2017, 10:21 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಸಂಚಾರ ನಿಯಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ನಗರದಲ್ಲಿ ಶನಿವಾರ ಪೊಲೀಸ್ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ‘ಸುರಕ್ಷ ಚಿಕ್ಕಬಳ್ಳಾಪುರ’ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎನ್ನುವ ಸಂದೇಶ ಸಾರುವ ನಿಟ್ಟಿನಲ್ಲಿ ಸ್ವತಃ ಹೆಲ್ಮೆಟ್‌ ಧರಿಸಿ ಶಾಸಕ ಡಾ.ಕೆ.ಸುಧಾಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜೆ.ಮಂಜು ನಾಥ್, ಜಿಲ್ಲಾ ಎಸ್‌ಪಿ ಕಾರ್ತಿಕ್ ರೆಡ್ಡಿ, ವಕೀಲರು, ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರಸಭೆ ಖಾಸಗಿ ಬಸ್‌ ನಿಲ್ದಾಣದಿಂದ ಬೈಕ್ ರ್‌್ಯಾಲಿಯಲ್ಲಿ ಸಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು.

ಬಳಿಕ ‘ವಾಹನ ಚಾಲನಾ ಪರವಾನಗಿ ಅಭಿಯಾನ’ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶಾಸಕ ಸುಧಾಕರ್, ‘ವಿದೇಶಗಳ ಮಾದರಿಯಲ್ಲಿ ಸಂಚಾರ ನಿಯಮ ಗಳನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತಂದಾಗ ಮಾತ್ರ ದೇಶದಲ್ಲಿ ಅಪಘಾತ ಗಳಿಗೆ ಕಡಿವಾಣ ಹಾಕಲು ಸಾಧ್ಯ. ಇವತ್ತು ಅತಿವೇಗದ ಚಾಲನೆ, ಮೊಬೈಲ್‌ಗಳಲ್ಲಿ ಮಾತನಾಡುತ್ತ ವಾಹನ ಚಲಾಯಿ ಸುವುದು ಹೆಚ್ಚುತ್ತಿರುವ ಕಾರಣ ಅಪಘಾತಗಳ ಪ್ರಮಾಣ ಕೂಡ ಏರಿಕೆಯಾಗುತ್ತಿದೆ. ಇದರಲ್ಲಿ ಯುವ ಜನರೇ ಅಧಿಕ ಸಂಖ್ಯೆಯಲ್ಲಿ ಸಾಯುತ್ತಿ ರುವುದು ದುರಂತ’ ಎಂದು ಬೇಸರ ವ್ಯಕ್ತಪಡಿಸಿದರು.

‘ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಈ ಕುರಿತು ಸಾರಿಗೆ ಇಲಾಖೆ ಅರಿವು ಮೂಡಿಸುತ್ತಲೇ ಇದೆ ಆದರೂ ಸಾರ್ವಜನಿಕರಲ್ಲಿ ಹೆಲ್ಮೆಟ್‌ ಕುರಿತು ಜಾಗೃತಿ ಬಂದಂತೆ ಕಾಣುತ್ತಿಲ್ಲ. ಹೆಲ್ಮೆಟ್ ಧರಿಸುವುದರಿಂದ ಹೆಚ್ಚಿನ ಪ್ರಾಣಹಾನಿ   ತಡೆಗಟ್ಟಬಹುದು. ಆದ್ದರಿಂದ ಪ್ರತಿ ಯೊಬ್ಬ ಬೈಕ್ ಸವಾರರು ಕಡ್ಡಾಯವಾಗಿ  ಹೆಲ್ಮೆಟ್‌ ಧರಿಸಬೇಕು’ ಎಂದು ಹೇಳಿದರು.

‘ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ (ಆರ್‌ಟಿಒ) ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸುವವರಿಗೆ ಯಾವುದೇ ಪರಿಶೀಲನೆ ನಡೆಸದೆ ಪರವಾನಗಿ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದನ್ನು ಸಹಿಸಲಾಗದು. ಸಂಚಾರ ನಿಯಮಗಳ ಸಂಪೂರ್ಣ ಅರಿವು ಪಡೆದುಕೊಂಡ ವ್ಯಕ್ತಿಗೆ ಮಾತ್ರ ಚಾಲನಾ ಪರವಾನಗಿ ನೀಡಬೇಕು’ ಎಂದು ಆರ್‌ಟಿಒ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಅವರು ಆಟೊ ಚಾಲಕರಿಗೆ ಉಚಿತವಾಗಿ ವಾಹನ ಪರವಾನಗಿ ಮಾಡಿಕೊಡುವ ಭರವಸೆ ನೀಡಿದರು.

ಎಸ್‌ಪಿ ಕಾರ್ತಿಕ್ ರೆಡ್ಡಿ ಮಾತನಾಡಿ, ‘ಕಳೆದ ವರ್ಷ ಜಿಲ್ಲೆಯಲ್ಲಿ 165 ದ್ವಿಚಕ್ರ ವಾಹನ ಸವಾರರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆ ಪೈಕಿ 163 ಜನರು ಹೆಲ್ಮೆಟ್‌ ಧರಿಸಿರಲಿಲ್ಲ. ಯಾವುದೇ ವಸ್ತುಗಳನ್ನು ಕಳೆದುಕೊಂಡರೆ ಪುನಃ ಖರೀದಿಸಬಹುದು ಆದರೆ, ಅಮೂಲ್ಯ ವಾದ ಪ್ರಾಣ ಒಮ್ಮೆ ಕಳೆದುಕೊಂಡರೆ ಯಾರಿಂದಲೂ ವಾಪಸ್ ನೀಡಲು ಸಾಧ್ಯ ವಿಲ್ಲ. ಆದ್ದರಿಂದ ಸವಾರರು ಸಂಚಾರ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು’ ಎಂದು ತಿಳಿಸಿದರು.

‘ನಗರದಲ್ಲಿ ಸಂಚಾರ ನಿಯಮ ಗಳನ್ನು ಉಲ್ಲಂಘಿಸುವವರ ಮೇಲೆ ಕಣ್ಣಿಡುವ ಉದ್ದೇಶದಿಂದ ಬೆಂಗಳೂರು ಮಾದರಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಸಿಸಿ ಕ್ಯಾಮೆರಾ ಅಳವಡಿ ಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಈಗಾಗಲೇ ಸಮೀಕ್ಷೆ ನಡೆಸಲಾಗಿದ್ದು, ನಗರದ 128 ಕಡೆಗಳಲ್ಲಿ ಶೀಘ್ರದಲ್ಲಿಯೇ ಕ್ಯಾಮೆರಾ ಅಳವಡಿಸಲಾಗುತ್ತದೆ’ ಎಂದರು.

ಸಿಇಒ ಜೆ. ಮಂಜುನಾಥ್ ಮಾತ ನಾಡಿ, ‘ವಾಹನ ಸವಾರರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅದರಿಂದ ಅನೇಕ ಪ್ರಯೋಜನಗಳಿವೆ. ಬೈಕ್‌ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವರಿಂದ ಸಾವಿನ ಅಪಾಯವನ್ನು ತಪ್ಪಿಸಬಹುದು’ ಎಂದು ಹೇಳಿದರು.

ವಾಹನ ಚಾಲನಾ ಪರವಾನಗಿ ಅಭಿಯಾನದಡಿ ಅರ್ಜಿ ಸಲ್ಲಿಸಿರುವ 4,200 ಜನರ ಪೈಕಿ 30 ಮಂದಿಗೆ ಸಾಂಕೇತಿಕವಾಗಿ ಕಾರ್ಯಕ್ರಮದಲ್ಲಿ ವಾಹನ ಚಾಲನಾ ಪರವಾನಗಿ ಮತ್ತು ವಿಮೆ ಪತ್ರಗಳನ್ನು ವಿತರಿಸಲಾಯಿತು.

ಡಿವೈಎಸ್‌ಪಿ ಎಂ.ಎಲ್. ಪುರುಷೋತ್ತಮ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಪಾಂಡುರಂಗ ಶೆಟ್ಟಿ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿದ್ದರಾಮಯ್ಯ, ಸರ್ಕಲ್ ಇನ್‌ಸ್ಪೆಕ್ಟರ್‌ ಕೆ.ಪಿ.ಸತ್ಯನಾರಾಯಣ, ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಶ್ರೀನಿವಾಸ್ ಉಪಸ್ಥಿತರಿದ್ದರು.

* * 

ಅಪಘಾತ ಸಂಭವಿಸಿದಾಗ ಗಾಯಾಳುಗಳನ್ನು ರಕ್ಷಿಸುವ ಬದಲು ಮೊಬೈಲ್ ಚಿತ್ರೀಕರಿಸಿಕೊಳ್ಳುವ ಅಮಾನವೀಯ ಪ್ರವೃತ್ತಿ ಹೆಚ್ಚುತ್ತಿದೆ. ಇದು ಬದಲಾಗಬೇಕು.
ಕಾರ್ತಿಕ್ ರೆಡ್ಡಿ,
ಎಸ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT