ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ: ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ

Last Updated 21 ಮೇ 2017, 10:26 IST
ಅಕ್ಷರ ಗಾತ್ರ

ತುಮಕೂರು: ‘ಜಿಲ್ಲಾ ಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾರ, ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ (ಕೋಡಿಹಳ್ಳಿ ಚಂದ್ರಶೇಖರ ಬಣ) ಸದಸ್ಯರು, ಪದಾಧಿಕಾರಿಗಳು ಜಿಲ್ಲಾ ಪಂಚಾಯಿತಿ ಮುಂದೆ ಶನಿವಾರ ಧರಣಿ ನಡೆಸಿದರು. ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನದವರೆಗೂ ಜಿಲ್ಲಾ ಪಂಚಾಯಿತಿ ಮುಂದೆ ಧರಣಿ ಮಾಡಿದರು.

ಉಪಕಾರ್ಯದರ್ಶಿ ಪ್ರಕಾಶ್ ಅವರು ಮನವಿ ಸ್ವೀಕರಿಸಲು ಬಂದಾಗ ರೈತರು ಅವರನ್ನು ತರಾಟೆಗೆ ತೆಗೆದುಕೊಂಡರು. ‘ಈಗಾಗಲೇ ಮನವಿ ಸಲ್ಲಿಸಿದ್ದೇವೆ. ಪರಿಶೀಲಿಸಿ ಏನು ಕ್ರಮ ಜರುಗಿಸಿದ್ದೀರಿ’ ಎಂದು ಪ್ರಶ್ನಿಸಿದರು. ‘ನಮ್ಮ ಸಂಘಟನೆಯ 24 ಪ್ರಶ್ನೆಗಳಿವೆ. ಅವುಗಳಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಮುಖ್ಯಕಾರ್ಯನಿರ್ವಾಹಣಾಧಿಕಾರಿ (ಸಿಇಒ) ಉತ್ತರಿಸಬೇಕು’ ಎಂದು ಪಟ್ಟುಹಿಡಿದರು.

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿಯೇ ಇದ್ದ ಅಧ್ಯಕ್ಷೆ ಲತಾ ರವಿಕುಮಾರ್ ಅವರು ಧರಣಿ ನಿರತರ ಬಳಿ ಬರಲಿಲ್ಲ. ಮಧ್ಯಾಹ್ನ ಸಿಇಒ ಕೆ.ಜಿ.ಶಾಂತಾರಾಂ ಅವರು ರೈತ ಸಂಘದ ಪ್ರಶ್ನೆಗಳ ಪಟ್ಟಿ ಸ್ವೀಕರಿಸಿದರು.‘ಬರಗಾಲದಲ್ಲಿ ಕಂದಾಯ ವಸೂಲಿ ಮಾಡಬಾರದು ಎಂದು ಸರ್ಕಾರ ನಿರ್ದೇಶಿಸಿದೆ. ಆದರೂ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ₹ 50 ಸಾವಿರದವರೆಗೂ ಕಂದಾಯ ವಸೂಲಿ ಮಾಡಲಾಗಿದೆ.

ಯಾವ್ಯಾವ ಪಂಚಾಯಿತಿಯಲ್ಲಿ ಎಷ್ಟು ಕಂದಾಯ ವಸೂಲಿ ಮಾಡಲಾಗಿದೆ ಎಂಬ ವಿವರ ಒದಗಿಸಬೇಕು, ಬರ ಪರಿಹಾರ ಇನ್ನೂ ಸಮರ್ಪಕವಾಗಿ ಯಾಕೆ ಕಲ್ಪಿಸಿಲ್ಲ ಎಂಬುದಕ್ಕೆ ಉತ್ತರ ನೀಡಬೇಕು’ ಎಂದು ಆಗ್ರಹಿಸಿದರು.

ಎಂ.ಕೆ.ಪಾಳ್ಯ ಮತ್ತು ಕೆ.ಕೆ. ಪಾಳ್ಯದಲ್ಲಿ ಕಂದಾಯ ಕಟ್ಟಿದರೆ ಮಾತ್ರ  ಕುಡಿಯುವ ನೀರು ದೊರಕಿಸಲಾಗುವುದು ಎಂಬ ಧೋರಣೆ ಯಾಕೆ? ಇದ್ಯಾವ ನ್ಯಾಯ ಎಂದು ಪ್ರಶ್ನಿಸಿದರು.ಉದ್ಯೋಗ ಖಾತರಿ ಯೋಜನೆ ಹಣ ಪಾವತಿ ಕೇವಲ ಬಲಿಷ್ಠ  ಮತ್ತು ರಾಜಕೀಯ ವ್ಯಕ್ತಿಗಳ ಅನುಯಾಯಿಗಳಿಗೆ ಸೀಮಿತವಾಗಿದೆ.

ಶಿರಾ ತಾಲ್ಲೂಕು ಚಂಗಾವರ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿದ  ನಂದೀಶ್, ಕಿರಣಕುಮಾರ್, ಲಿಂಗಣ್ಣ, ಮಾರುತಿ, ತಿಪ್ಪಮ್ಮ, ರಾಜಣ್ಣ, ಭಾರತಿ ನಾಗರಾಜ್, ಹನುಮಂತಣ್ಣ, ರಾಮಣ್ಣ ಅವರಿಗೆ ಹಣ ಪಾವತಿಸಿಲ್ಲ. ಈಗಾಗಲೇ ಉಪ ಕಾರ್ಯದರ್ಶಿ ಪಂಚಾಯಿತಿಗೆ ಭೇಟಿ ನೀಡಿದ್ದಾಗ  ಸಮಸ್ಯೆ ವಿವರಿಸಲಾಗಿತ್ತು. ಆದರೂ ಯಾಕೆ ಪಾವತಿ ಮಾಡಿಲ್ಲ ಎಂಬುದಕ್ಕೆ ಉತ್ತರಿಸಬೇಕು ಎಂದು ಪಟ್ಟು ಹಿಡಿದರು.

ಸಂಘಟನೆ ಜಿಲ್ಲಾ ಕಾರ್ಯದರ್ಶಿ ಧನಂಜಯ ಆರಾಧ್ಯ, ಶಿರಾ ತಾಲ್ಲೂಕು ಘಟಕದ ಅಧ್ಯಕ್ಷ ಪರಮಶಿವಯ್ಯ ಮಾತನಾಡಿದರು. ಸಂಚಾಲಕ ಜಂಗಣ್ಣ, ಸೋಮಣ್ಣ, ಜಪಂಣ್ಣ, ರಮೇಶ್, ಪ್ಯಾರಾ ಜಾನ್, ವೆಂಕಟೇಶ್, ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT