ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಗದ ತ್ಯಾಜ್ಯ ಕೆರೆ ಅಂಗಳದಿಂದ ತೆಗೆದರು

Last Updated 21 ಮೇ 2017, 10:31 IST
ಅಕ್ಷರ ಗಾತ್ರ

ತುಮಕೂರು: ‘ಮಾಲಿನ್ಯ ಮುಕ್ತ ಸ್ವಚ್ಛ ಹಸಿರು ತುಮಕೂರು’ ಅಭಿಯಾನದ ಭಾಗವಾಗಿ ಸಿಜ್ಞಾ ಯುವ ಸಂವಾದ ಕೇಂದ್ರ, ವಿಜ್ಞಾನ ಕೇಂದ್ರ, ಯುವ ಮುನ್ನಡೆ ಮತ್ತು ವರ್ಡ್‌ ವೈಲ್ಡ್ ಫಂಡ್‌ (ಡಬ್ಲ್ಯೂ ಡಬ್ಲ್ಯೂ ಎಫ್ ಇಂಡಿಯಾ) ಸಂಘಟನೆಗಳು ಶುಕ್ರವಾರ ಬೆಳಿಗ್ಗೆ ಸಂಘಟಿಸಿದ್ದ ‘ಅಮಾನಿಕೆರೆ ಸ್ವಚ್ಛಗೊಳಿಸೋಣ, ನೀರಿನ ಸೆಲೆ ಹುಡುಕೋಣ’ ಸ್ವಚ್ಛತಾ ಅಭಿಯಾನದಲ್ಲಿ ಯುವ ಜನರು ಉತ್ಸಾಹದಿಂದ ಪಾಲ್ಗೊಂಡರು.

ಕೆರೆ ಆವರಣದಲ್ಲಿ ಬಿದ್ದಿದ್ದ ಭೂಮಿಯಲ್ಲಿ ಕರಗದ ಪ್ಲಾಸ್ಟಿಕ್ ಕವರ್, ಹಳೇ ಚಪ್ಪಲಿ, ವಾಟರ್ ಬಾಟಲಿಗಳನ್ನು ಸ್ವಯಂ ಸೇವಕರು ಸಂಗ್ರಹಿಸಿ ವಿಲೇವಾರಿ ಮಾಡುತ್ತಿದ್ದರೆ ವಾಯುವಿಹಾರಕ್ಕೆ ಬಂದವರು, ರಸ್ತೆಯಲ್ಲಿ ಸಾಗಿದ್ದ ಸಾರ್ವಜನಿಕರು ಯುವ ಸಮುದಾಯದ ಕೆಲಸವನ್ನು ಮೆಚ್ಚಿದರು.

100ಕ್ಕೂ ಹೆಚ್ಚು ಸ್ವಯಂ ಸೇವಕರು ಬೆಳಿಗ್ಗೆ 6ರಿಂದ 11ರವರೆಗೆ ಕೆರೆ ಪ್ರವೇಶ ದ್ವಾರದ ಬಲಬದಿ ಹಾಗೂ ಚಿಲುಮೆಯ ಸುತ್ತ ಸ್ವಚ್ಛತಾ ಕಾರ್ಯ ನಡೆಸಿದರು. ವಾಯು ವಿಹಾರಕ್ಕೆ ಬಂದಿದ್ದ ಎಂಟತ್ತು ಜನರು ತಾವೂ ಜೊತೆಗೂಡಿ ಕಸ ಎತ್ತಿದರು.

8ರಿಂದ 10 ಚೀಲ ಕಸ ಸಂಗ್ರಹಿಸಿದರು. ಪಾಲಿಕೆಯ ಪೌರ ಕಾರ್ಮಿಕರೂ ಇದಕ್ಕೆ ಜೊತೆಗೂಡಿದರು. ಟ್ರ್ಯಾಕ್ಟರ್‌ನಲ್ಲಿ ಕಸ ತೆಗೆದುಕೊಂಡು ಹೋದರು. 9.30ರಿಂದ ಅರ್ಥ ತಾಸು ಉಪಾಹಾರಕ್ಕೆ ಬಿಡುವು ಅಷ್ಟೇ. ಸಾರ್ವಜನಿಕವಾದ ಕೆರೆ ತಮ್ಮ ಮನೆಯ ಪಡಸಾಲೆ ಎನ್ನುವ ಭಾವನೆ ಹೊತ್ತು ಕೆಲಸ ಮಾಡಿದರು.

ಯುವ ಸಮುದಾಯದ ಈ ಪರಿಸರ ಕಾಳಜಿಯ ಕೆಲಸಕ್ಕೆ ಮಾರ್ಗದರ್ಶನ ನೀಡಲು ಮತ್ತು ನಾವೂ ನಿಮ್ಮ ಜೊತೆ ಇದ್ದೇವೆ ಎಂದು ಆತ್ಮವಿಶ್ವಾಸ ತುಂಬಲು ತುಮಕೂರು ವಿಜ್ಞಾನ ಕೇಂದ್ರದ ಉಪಾಧ್ಯಕ್ಷ  ಸಿ.ಯತಿರಾಜು ಅವರಂಥ ಹಿರಿಯರೂ ಕೈ ಜೋಡಿಸಿದ್ದರು.

ಸಮಗ್ರ ಅಧ್ಯಯನ ಅಗತ್ಯ: ‘ನಗರದ ಕೆರೆಗಳ ಮಾಲಿನ್ಯ ನಿಯಂತ್ರಿಸಲು ನಗರಾಭಿವೃದ್ಧಿ ಪ್ರಾಧಿಕಾರ ಸಮಗ್ರ ಅಧ್ಯಯನ ನಡೆಸಬೇಕು’ ಎಂದು ಸಿ.ಯತಿರಾಜು ಅಭಿಪ್ರಾಯಪಟ್ಟರು.‘ಮಾಲಿನ್ಯಕ್ಕೆ ಕಾರಣವಾದ ತ್ಯಾಜ್ಯಗಳು ಕೆರೆ ಸೇರದಂತೆ ನಿಯಂತ್ರಿಸಬೇಕು. ಕೆರೆಯಲ್ಲಿ ಸುಟ್ಟ ಪ್ಲಾಸ್ಟಿಕ್ ವಸುಗಳೇ ಹೆಚ್ಚು ಕಂಡು ಬಂದಿವೆ.

ಈ ತ್ಯಾಜ್ಯಗಳು ಸುಮಾರು ವರ್ಷಗಳಿಂದ ಕೆರೆಯ ಒಳ ಪದರದಲ್ಲಿ ಅಡಗಿವೆ. ಇದರಿಂದ ಆಗುವ ತೊಂದರೆಗಳು ಹೆಚ್ಚು. ಈ ಕುರಿತು ವಿಶ್ಲೇಷಣೆ ಮಾಡಬೇಕು’ ಎಂದು ಹೇಳಿದರು.‘ರಾಜ ಕಾಲುವೆಗಳ ಮೂಲಕ ತ್ಯಾಜ್ಯ ಕೆರೆ ಪ್ರವೇಶಿಸದಂತೆ ವ್ಯವಸ್ಥೆ ರೂಪಿಸಬೇಕು. ಕೆರೆಗಳಿಗೆ ತ್ಯಾಜ್ಯ ಸುರಿಯುವುದು ನಿಲ್ಲಬೇಕು’ ಎಂದರು.

ಸಿಜ್ಞಾ ಯುವ ಸಂವಾದ ಕೇಂದ್ರದ ಮಾರ್ಗದರ್ಶಕ  ಜ್ಞಾನ ಸಿಂಧೂಸ್ವಾಮಿ ಮಾತನಾಡಿ, ‘ನಗರದಲ್ಲಿ 15 ಕೆರೆಗಳಿದ್ದರೂ  ಅಂತರ್ಜಲ ಕುಸಿದಿದೆ. ಉಪಕಾಲುವೆಗಳಿಂದ ಕೆರೆಗೆ ನೀರು ಬರುತ್ತಿಲ್ಲ. ಕೊಳಚೆ ನೀರನ್ನು ಕೆರೆಗಳಿಗೆ ಬಿಡಲಾಗುತ್ತಿದೆ. ರಾಜಕಾಲುವೆಗಳು ಒತ್ತುವರಿಯಾಗುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕಸ ವೈಜ್ಞಾನಿಕವಾಗಿ ಸಂಸ್ಕರಿಸಬೇಕು. ಚರಂಡಿ ನೀರಿನ ಶುದ್ಧೀಕರಣ ಘಟಕವನ್ನು ವ್ಯವಸ್ಥಿತವಾಗಿ ನಡೆಸಬೇಕು’ ಎಂದು ನಗರಾಡಳಿತವನ್ನು ಒತ್ತಾಯಿಸಿದರು.
‘ಈಗ ಕೆರೆ ಮುಂಭಾಗವನ್ನು ಸ್ವಚ್ಛಗೊಳಿಸಿದ್ದೇವೆ. ಶೀಘ್ರದಲ್ಲಿಯೇ ಕೆರೆ ಹಿಂಬದಿಯ ಸ್ವಚ್ಛತೆಗೆ ದಿನಾಂಕ ಗೊತ್ತು ಮಾಡಲಾಗುವುದು’ ಎಂದು ತಿಳಿಸಿದರು.

ಡಬ್ಲ್ಯೂಡಬ್ಲ್ಯೂಎಫ್ ಇಂಡಿಯಾದ ಬೋಪಯ್ಯ ಮಾತನಾಡಿ, ‘ಪ್ರತಿ ಗ್ರಾಮಗಳಲ್ಲಿ ಪರಿಸರ ಸಂರಕ್ಷಣೆ, ಸುಸ್ಥಿರ ಕೃಷಿ, ಅರಣ್ಯೀಕರಣದ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಇದರಿಂದ ಬದಲಾವಣೆ ಸಾಧ್ಯ’ ಎಂದರು.

‘ಬೆಳಿಗ್ಗೆಯಿಂದಲೇ ಕೆರೆ ಸ್ವಚ್ಛತೆಯಲ್ಲಿ ಪಾಲ್ಗೊಂಡೆ. ಕೆರೆಯ ಆರೋಗ್ಯ ಕಲುಷಿತಗೊಂಡಿದೆ ಎಂಬುದು ಅರ್ಥವಾಗುತ್ತಿದೆ. ನಗರಾಡಳಿತ ಕೆರೆ ಸ್ವಚ್ಛಗೊಳಿಸಬೇಕು’ ಎಂದು ಯುವ ಮುನ್ನಡೆಯ ಸುಕೃತಿ ಆಗ್ರಹಿಸಿದರು.

ಡಬ್ಲ್ಯೂಡಬ್ಲ್ಯೂಎಫ್ ಇಂಡಿಯಾದ ಲೋಹಿತ್, ‘ಮಾಲಿನ್ಯ ಮುಕ್ತ ಸ್ವಚ್ಛ ಹಸಿರು ತುಮಕೂರು’ ಅಭಿಯಾನದ ಸಂಯೋಜಕರಾದ ಲಕ್ಷ್ಮಿಶ್ರೀ, ರಶ್ಮಿ, ಯುವಮುನ್ನಡೆ ಕಾರ್ಯಕರ್ತರಾದ ಕವಿತಾ, ಕಾರ್ತಿಕ್, ಬಾಬು ಜಂಬೆ, ಹರೀಶ್, ಶಶಿಕುಮಾರ್ ಇದ್ದರು.

ಕೆರೆ ಕಟ್ಟೆಗಳನ್ನು ಉಳಿಸಲಿ
‘ನಗರ ವ್ಯಾಪ್ತಿಯಲ್ಲಿರುವ ಅಮಾನಿಕೆರೆ, ಮರಳೂರು ಕೆರೆ, ಗೂಳೂರು ಕೆರೆ,ಗಾರೆ ನರಸಯ್ಯನ ಕಟ್ಟೆ, ಶೆಟ್ಟಿಹಳ್ಳಿ ಕೆರೆ, ಬಡ್ಡಿಹಳ್ಳಿಕೆರೆ,  ಗುಂಡಮ್ಮನ ಕೆರೆ, ಅಕ್ಕತಂಗಿ ಕಟ್ಟೆ ಕೆರೆಗಳನ್ನು ರಕ್ಷಿಸಬೇಕು. ಕಸಕ್ಕೆ ಬೆಂಕಿ ಹಚ್ಚದಂತೆ ಎಚ್ಚರಿಕೆ ವಹಿಸಬೇಕು’ ಎಂದು ಯುವ ಮುನ್ನಡೆ ಸಂಘಟನೆ ಸಂಚಾಲಕಿ ಎಚ್.ಎನ್. ರಶ್ಮಿ ಒತ್ತಾಯಿಸಿದರು.

ಹಕ್ಕೊತ್ತಾಯ
ಕಾನೂನು ಬಾಹಿರವಾಗಿ ಕೆರೆಯ ಮಣ್ಣನ್ನು ತೆಗೆದು ಗುಂಡಿಗಳಾಗಿ ಮಾರ್ಪಡಿಸುವುದನ್ನು ತಪ್ಪಿಸಬೇಕು, ಕೋಳಿ ತ್ಯಾಜ್ಯ, ಘನ ತ್ಯಾಜ್ಯ  ಸುರಿಯುವುದನ್ನು ತಡೆಯಬೇಕು, ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಬೇಕು,  ಕೆರೆ, ಕಟ್ಟೆ, ಕುಂಟೆಗಳನ್ನು ಸಮಗ್ರವಾಗಿ ಸಂರಕ್ಷಿಸಿ ಅಭಿವೃದ್ಧಿಪಡಿಸಬೇಕು, ಕೆರೆಗಳಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆ ತಡೆಯಬೇಕು, ಕೆರೆಯ ಜೀವಂತಿಕೆ ಕೆಲಸ ಮಾಡಬೇಕು, ಒತ್ತುವರಿದಾರರಿಂದ ಕೆರೆಗಳನ್ನು ರಕ್ಷಿಸಬೇಕು, ಅಮಾನಿಕೆರೆಯಲ್ಲಿ ಗಾಜಿನ ಮನೆ, ಮೇಲ್ಸೇತುವೆ ನಿರ್ಮಾಣ ಮಾಡುತ್ತಿರುವುದು ನ್ಯಾಯಾಲಯದ ಆದೇಶ ಉಲ್ಲಂಘನೆಯಾಗುತ್ತಿದ್ದು ಇದನ್ನು ತಡೆಯಬೇಕು’ ಎಂದು ಸಂಘಟನೆಗಳು ಒತ್ತಾಯಿಸಿದವು.  ಸ್ಥಳಕ್ಕೆ ಬಂದ ಮಹಾನಗರ ಪಾಲಿಕೆ ಆಯುಕ್ತ ಅಶದ್ ಷರೀಫ್ ಹಾಗೂ ಟೂಡಾ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಲಾಯಿತು.

* *

ನಗರದಲ್ಲಿ ಪ್ಲಾಸ್ಟಿಕ್ ಹಾವಳಿ ಹೆಚ್ಚಿದೆ. ಕುಡಿಯಲು ನೀರು ಸಿಗುತ್ತಿಲ್ಲ. ಹೀಗೆ ಇದ್ದರೆ ಮುಂದೊಂದು ದಿನ ನಾವೆಲ್ಲ ನೀರಿಗೆ ಗುಳೆ ಹೋಗುವ ಸ್ಥಿತಿ ಎದುರಾಗುತ್ತದೆ.
ಲಕ್ಷ್ಮಿಶ್ರೀ, ಸಂಯೋಜಕಿ, ಮಾಲಿನ್ಯ ಮುಕ್ತ ಸ್ವಚ್ಛ ಹಸಿರು ತುಮಕೂರು

* * 

ಗ್ರೀನ್‌ಪೀಸ್‌ ಸಂಸ್ಥೆ ಪ್ರಕಟಿಸಿದ ಮಾಲಿನ್ಯ ನಗರಗಳ ಪಟ್ಟಿಯಲ್ಲಿ ತುಮಕೂರು 152ನೇ ಸ್ಥಾನ ಪಡೆದಿರುವುದು ಆತಂಕದ ವಿಷಯ. ನನ್ನ ಕನಸಿನ ತುಮಕೂರು, ಆರೋಗ್ಯವಾಗಿ, ಹಸಿರಾಗಿರಬೇಕು.
ವಿನೋದ್ ರಾಜ್, ಯುವ ಮುನ್ನಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT