ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಸಿರು, ಗದ್ದೆಗಳ ನೆನಪಿನ ನನ್ನೂರು’

Last Updated 21 ಮೇ 2017, 19:30 IST
ಅಕ್ಷರ ಗಾತ್ರ

ಹುಟ್ಟಿದ್ದು ಮೈಸೂರಿನಲ್ಲಿ. ನಾನು ಮಗುವಾಗಿದ್ದಾಗಲೇ ಅಪ್ಪ ಬೆಂಗಳೂರಿಗೆ ಬಂದುಬಿಟ್ಟರು. ಶ್ರೀರಾಮಪುರದ ಐದನೇ ಅಡ್ಡರಸ್ತೆಯಲ್ಲಿ ಸಾಂದೀಪನಿ ಭವನ ಇದೆ. ನಾವು ಅಲ್ಲಿದ್ದೆವು. ಅದನ್ನು ಶಾಲೆಗೆ ಕೊಟ್ಟೆವು. ನಂತರದ ದಿನಗಳಲ್ಲಿ ಅಂದರೆ ಸುಮಾರು 80 ವರ್ಷದ ಹಿಂದೆ ಅಪ್ಪ ಶ್ರೀರಾಮಪುರದ ಅಯ್ಯಪ್ಪ ದೇವಸ್ಥಾನದ ಬಳಿ ಮನೆ ಕಟ್ಟಿಸಿದರು. ಇಂದಿನವರೆಗೂ ನಾನು ವಾಸ ಇರುವುದು ಅದೇ ಮನೆಯಲ್ಲಿ. ಮಣ್ಣಿನ ಮನೆಗೆ ಈಗ ಸಿಮೆಂಟ್ ಪ್ಲಾಸ್ಟರಿಂಗ್‌ ಆಗಿದೆ.

ನನ್ನ ಬಾಲ್ಯ, ವಿದ್ಯಾರ್ಥಿ ಬದುಕು, ಸಂಘ ಪರಿವಾರಗಳೊಂದಿಗಿನ ನಂಟು... ಎಲ್ಲದಕ್ಕೂ ಸಾಕ್ಷಿ ಇದೇ ಮನೆ. ಸಂಘದ ಅನೇಕ ಗಣ್ಯರು ಇದೇ ಮನೆಯಲ್ಲಿ ಉಳಿದಿದ್ದರು. ಅಟಲ್‌ ಬಿಹಾರಿ ವಾಜಪೇಯಿ ನನ್ನಮ್ಮನ ಅಡುಗೆಯನ್ನು ತುಂಬಾ ಇಷ್ಟಪಡುತ್ತಿದ್ದರು.

ಅಪ್ಪ–ಅಮ್ಮ ಇಬ್ಬರೂ ಪರೋಪಕಾರಿಗಳು. ಹೀಗಾಗಿ ನಾವು ಐದೂ ಜನ ಮಕ್ಕಳು ಅದೇ ರೀತಿ ಬೆಳೆದೆವು. ಅಣ್ಣ, ಅಕ್ಕ ಕೂಡ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರೇ.
ಆಗ ದೇವಯ್ಯ ಪಾರ್ಕ್‌ ರಸ್ತೆಯಾಚೆಗೆ ಬರೀ ಹೊಲಗಳೇ ಇದ್ದವು. ವಿಜಯನಗರವೂ ಅಷ್ಟೇ, ಕಣ್ಣು ಹಾಯಿಸಿದಷ್ಟು ಹಸಿರು ತುಳುಕಿಸುತ್ತಿದ್ದ ಗದ್ದೆಗಳಿದ್ದವು. ಅಲ್ಲಿಂದ ತುಸು ದೂರದಲ್ಲಿ ಚಿಕ್ಕದಾದ ಹಳ್ಳಿಯೊಂದಿತ್ತು. ಬಿಟ್ಟರೆ, ಮಾಗಡಿ ರಸ್ತೆಯುದ್ದಕ್ಕೂ ಗದ್ದೆಗಳೇ ಇದ್ದುವು.

ಗದ್ದೆಗಳೇ ಮಕ್ಕಳ ಆಟದ ಮೈದಾನ. ಚಿನ್ನಿ ದಾಂಡು, ಫುಟ್‌ಬಾಲ್‌, ಕ್ರಿಕೆಟ್‌ ಮೆಚ್ಚಿನ ಆಟವಾಗಿತ್ತು. ಈಗ ಶಂಕರಪುರ ಶಾಲೆ ಇದೆಯಲ್ಲ, ಆ ಜಾಗದಲ್ಲೂ ಆಡುತ್ತಿದ್ದೆವು. ಅಂದಿನ ಬೆಂಗಳೂರು ನೆನಪಿಸಿಕೊಂಡರೆ ಹಳ್ಳಿಯಲ್ಲಿ ಜೀವಿಸಿದ್ದೆ ಎನ್ನುವ ತೃಪ್ತಿಯಾಗುತ್ತದೆ. ಹೀಗೆ, ಇಷ್ಟೊಂದು ಕಟ್ಟಡಗಳ ಅಬ್ಬರ ಅಂದು ಇರಲಿಲ್ಲ.

(ಬಾಲ್ಯದಲ್ಲಿ ಅಣ್ಣ, ಅಕ್ಕ, ತಮ್ಮನೊಂದಿಗೆ ಕೃ.ನರಹರಿ)

ಒಂದು ಇಡೀ ಕುಟುಂಬಕ್ಕೆ ಒಂದು ಮನೆ. ಸಹಕಾರ ಮನೋಭಾವ ಇತ್ತು. ಏನೇ ಕೆಲಸ ಮಾಡಿದರೂ ಒಟ್ಟಾಗಿ ಮಾಡುತ್ತಿದ್ದರು. ಇಂದಿಗೂ ಅನೇಕ ಹಳ್ಳಿಗಳಲ್ಲಿ ಇಂಥ ವಾತಾವರಣವಿದೆ. ಆಗೆಲ್ಲಾ ರಾತ್ರಿ ಹೊತ್ತಿನಲ್ಲಿ ‘ಕವಳಾ ತಾಯಿ’ ಅಂತ ಜನ ಬರುತ್ತಿದ್ದರು. ಹಸಿದು ಬಂದವರಿಗೆ ಊಟ ಹಾಕಿ ಕಳುಹಿಸುತ್ತಿದ್ದ ಸಂಸ್ಕೃತಿಯಿತ್ತು. ಸಂಪಾದನೆ ಕಡಿಮೆ ಇದ್ದರೂ ಗುಣಕ್ಕೆ ಕೊರತೆ ಇರಲಿಲ್ಲ. ಈಗಿನವರಿಗೆ ಕವಳಾ ತಾಯಿ ಸಂಸ್ಕೃತಿ ಬಗ್ಗೆ ಗೊತ್ತಿಲ್ಲ.

ಈಗ ಹೊಂದಾಣಿಕೆಯ ಭಾವ ಕಡಿಮೆ ಆಗಿ ವೈಯಕ್ತಿಕ ಆದ್ಯತೆ ಹೆಚ್ಚಿದೆ. ಸಮಾಜದಲ್ಲಷ್ಟೇ ಅಲ್ಲ, ಮನೆಗಳಲ್ಲೂ ಇದೇ ಪರಿಸ್ಥಿತಿ ಬಂದಿದೆ ಎನ್ನಿ. ಆಗ ನೆಮ್ಮದಿಯಾಗಿರಲು ಒಬ್ಬರಿಗೆ ಒಂದು ಮನೆ ಸಾಕಿತ್ತು. ಈಗ ಒಬ್ಬರಿಗೆ ಒಂದು ಮನೆ ಸಾಲದು. ಉಳಿಯಲೊಂದು, ಬಾಡಿಗೆ ನೀಡಲೊಂದು, ಮತ್ತೊಂದು –ಇನ್ನೊಂದು ಮನೆ ಬೇಕು. ಹೀಗಾಗಿಯೇ ಈಗ ಬೆಂಗಳೂರು ಕಟ್ಟಡಗಳಿಂದಲೇ ತುಂಬಿ ತುಳುಕುತ್ತಿದೆ.  ಆಡಲು ಖಾಲಿ ಜಾಗ ಬೇಕು ಎಂದರೆ ಹುಡುಕಬೇಕು. ಹೀಗಾಗಿದೆ ಪರಿಸ್ಥಿತಿ.

ನಾನು ಓದಿದ್ದೆಲ್ಲಾ ಸರ್ಕಾರಿ ಶಾಲೆಯಲ್ಲೇ. ಆಗ ಖಾಸಗಿ ಶಾಲೆ ಎನ್ನುವ ಪರಿಕಲ್ಪನೆಯೇ ಇರಲಿಲ್ಲ. ಶ್ರೀರಾಮಪುರ ಶಾಲೆಯಲ್ಲಿ ಪ್ರಾಥಮಿಕ ಅಭ್ಯಾಸ ಮಾಡಿದ್ದು. ಮಲ್ಲೇಶ್ವರದಲ್ಲಿ ಹೈಸ್ಕೂಲ್‌ ಓದಿದೆ. ಈಗ ಆರ್ಟ್ಸ್‌ ಆಂಡ್‌ ಸೈನ್ಸ್‌ ಕಾಲೇಜು ಇದೆಯಲ್ಲ. ಅಲ್ಲಿ ಇಂಟರ್‌ಮೀಡಿಯೆಟ್‌ ಕಾಲೇಜು ಇತ್ತು. ಅಲ್ಲಿಯೇ ಪಿಯುಸಿ ಓದಿದೆ. ಸೆಂಟ್ರಲ್‌ ಕಾಲೇಜಿನಲ್ಲಿ ಬಿಎಸ್‌ಸಿ ಮುಗಿಸಿದೆ.  ಬಿಎಂಎಸ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಮಾಡಿದೆ. ಮುಂದೆ ಎರಡು ವರ್ಷ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕನಾಗಿ ಕೊಡಗಿನಲ್ಲಿದ್ದೆ. ನಂತರ ಬಿಎಂಎಸ್‌ ಕಾಲೇಜಿನಲ್ಲೇ ಉಪನ್ಯಾಸಕನಾಗಿ ಸೇರಿಕೊಂಡೆ.

ಆಗೆಲ್ಲಾ ಸಾರಿಗೆ ಸಂಪರ್ಕದ ವ್ಯವಸ್ಥೆ ಇಲ್ಲದ ಕಾಲ. ಎಲ್ಲೆಲ್ಲೂ ಕಿರಿದಾದ ಮಣ್ಣು ರಸ್ತೆ. ಹೀಗಾಗಿ ಶಾಲಾ ಕಾಲೇಜು ದಿನಗಳನ್ನು ನಡೆದುಕೊಂಡೇ ಸವೆಸಿದ್ದೇನೆ. ಕೆಲವೊಮ್ಮೆ ಓಡಿಕೊಂಡು ಹೋಗಿ ಶಾಲೆ ಸೇರಿದ್ದೂ ಇದೆ. ಬಿಎಂಎಸ್‌ ಶಾಲೆ ಸೇರಿದ ಮೇಲೆ ಸೈಕಲ್‌ ಏರಿದೆ. ಉಪನ್ಯಾಸಕನಾದ ಮೇಲೆ ಮೋಟಾರ್‌ ಸೈಕಲ್‌ ಸಹವಾಸ. 1960 ರಿಂದ 1984ರವರೆಗೆ ಅಲ್ಲಿಯೇ ಶಿಕ್ಷಕನಾಗಿದ್ದೆ. 1984 ರಿಂದ ಮೂರು ಸಲ  ಬೆಂಗಳೂರನ್ನು ಒಳಗೊಂಡ ಶಿಕ್ಷಕರ ಕ್ಷೇತ್ರದಿಂದ  ವಿಧಾನಪರಿಷತ್‌ಗೆ ಆಯ್ಕೆಯಾಗಿದ್ದೆ.

ಬದುಕಿನ ಹೆಚ್ಚಿನ ಕ್ಷಣಗಳನ್ನು ಕಳೆದಿದ್ದು ಆರ್‌ಎಸ್‌ಎಸ್‌ ಕಾರ್ಯಕರ್ತನಾಗಿಯೇ. 1942ರಿಂದ ಇಲ್ಲಿಯವರೆಗೂ ನಾನು ಸಂಘದ ಕೆಲಸದಲ್ಲಿ ತೊಡಗಿಕೊಂಡಿದ್ದೇನೆ. ಮಕ್ಕಳೆಲ್ಲಾ ಸೇರಿ ಆಡಲು ಹೋಗುತ್ತಿದ್ದ ಸ್ಥಳದಲ್ಲಿಯೇ ಸಂಘದ ಶಾಖೆಯೊಂದಿತ್ತು. ಹೀಗಾಗಿ ನಿಧಾನವಾಗಿ ಅಲ್ಲಿಯ ಸಂಪರ್ಕ ಬೆಳೆಯಿತು. ನಾನು ಸಂಘ ಸೇರುವಾಗ ನನಗೆ ಹತ್ತು ವರ್ಷ.

ಜನಸೇವೆ ಮಾಡಬೇಕು ಎನ್ನುವ ಆಸೆಯಲ್ಲೇ ಇದ್ದ ನಾನು ಮದುವೆ ಆಗಿಲ್ಲ. ದುಡಿದ ಸಂಬಳದಲ್ಲಿ ನನಗೆ ಬೇಕಾದಷ್ಟು ಇಟ್ಟುಕೊಂಡು ಉಳಿದವನ್ನು ಸಂಘಕ್ಕೆ  ನೀಡುತ್ತಿದ್ದೆ. ಈಗಲೂ ನನ್ನ ಪೆನ್ಶನ್‌ನ ಹೆಚ್ಚಿನ ಭಾಗ ಶಾಲೆ, ಸಂಘಕ್ಕೆ ಮೀಸಲು. ನಿಸ್ವಾರ್ಥ ಮನೋಭಾವದಿಂದ ಸೇವೆ ಮಾಡುವ ಸಾವಿರಾರು ಜನರನ್ನು ನಾನು ಕಂಡಿದ್ದೇನೆ. ಅದರಲ್ಲಿರುವ ಖುಷಿ ಬೇರೆಲ್ಲೂ ಇಲ್ಲ.

ಸಂಘದ ಕೆಲಸಕ್ಕೆಂದು ಮೋಟಾರ್‌ಸೈಕಲ್‌ ಏರಿ ಊರೂರು ಸುತ್ತಿದ್ದೇನೆ. ಹೆಚ್ಚಾಗಿ ಬೆಂಗಳೂರು ಕೋಟೆಯಲ್ಲಿ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆಗ ಎಲ್ಲರಿಗೂ ಮುಕ್ತ ಪ್ರವೇಶವಿತ್ತು. ಬಸವನಗುಡಿಗೂ ಸಾಕಷ್ಟು ಬಾರಿ ಹೋಗುತ್ತಿದ್ದೆ. ಇಲ್ಲಿಂದ ನಡೆದು ಅಥವಾ ಓಡಿಕೊಂಡು ಹೋಗುತ್ತಿದ್ದೆ. ಆ ಜಾಗವೂ ತುಂಬಾ ಇಷ್ಟ. ಮರಾಠಾ ಹಾಸ್ಟೆಲ್‌ನಲ್ಲಿ ಸಾಕಷ್ಟು ಕ್ಯಾಂಪ್‌ಗಳನ್ನು ಆಯೋಜಿಸುತ್ತಿದ್ದೆವು.

ಅದರ ಹಿಂಭಾಗ ಕೇಶವ ಕೃಪಾ ಅಂತಿದೆ. ಅದು ಆರ್‌ಎಸ್‌ಎಸ್‌ನ ರಾಜ್ಯ ಮುಖ್ಯ ಕಚೇರಿ.  ಅಲ್ಲಿ ನಿತ್ಯ ಹೋಗುತ್ತಿದ್ದೆ. ಸಂಘ,  ಶಿಕ್ಷಕರ ಸಂಘ, ಎಬಿವಿಪಿಗಳ ಕೆಲಸಕ್ಕಾಗಿ ಯಾದವ ಸ್ಮೃತಿಗೂ ಹೋಗುತ್ತಿದ್ದೆ. ಭಾವೂರಾವ್‌ ದೇಶಪಾಂಡೆ ಸ್ಮಾರಕ ಟ್ರಸ್ಟ್‌ ನಮ್ಮ ಮನೆ ಬಳಿಯ ಬ್ರಿಡ್ಜ್‌ ಪಕ್ಕದಲ್ಲಿಯೇ ಇದೆ. ಅಲ್ಲಿಗೂ ಆಗಾಗ ಹೋಗುತ್ತೇನೆ.  ಸಂಘದ ಅನೇಕ ಸದಸ್ಯರು ಸೇರಿ ಮಾಗಡಿ ರಸ್ತೆಯಲ್ಲಿ ಜನಸೇವಾ ವಿದ್ಯಾಕೇಂದ್ರ ಪ್ರಾರಂಭಿಸಿದೆವು. ಆ ಜಾಗ ನನಗೆ ತುಂಬ ಪ್ರಿಯ. ಮನಸ್ಸು ಬಯಸಿದಾಗೆಲ್ಲಾ ಅಲ್ಲಿಗೆ ಹೋಗಿ ಬರುತ್ತಿರುತ್ತೇನೆ.

ಹೀಗೆ ಸಂಘದ ಕೆಲಸ, ದೇಣಿಗೆ ಸಂಗ್ರಹ, ಕಾರ್ಯಕ್ರಮಗಳ ನಿರ್ವಹಣೆ ಎಂದು ಓಡಾಡುತ್ತಲೇ ಇರುತ್ತೇನೆ. ಆಗ ಹೋಲಿಸಿದರೆ ಈಗ ರಸ್ತೆಗಳು ಚೆನ್ನಾಗಿವೆ. ಸಂವಹನ, ಸಾರಿಗೆ ವ್ಯವಸ್ಥೆ ಬೆಳೆದಿದೆ. ಆದರೆ ಮೊದಲಿದ್ದ ಸಹಕಾರ ಮನೊಭಾವ, ಸಹಾಯ ಹಸ್ತ ಚಾಚುವ ಮಾನವೀಯತೆ ಕಡಿಮೆ ಆಗಿದೆ. ಎಲ್ಲೆಲ್ಲೂ ಮಾಲ್‌ ಸಂಸ್ಕೃತಿ ಬೆಳೆಯುತ್ತಿದೆ. ಹೀಗೆ ಬದಲಾದ ಬೆಂಗಳೂರಿನ ಚಹರೆಯಲ್ಲಿ ಮನಸ್ಸು ನೆನೆಯುವುದು ಮಾತ್ರ ಹಳೆಯ ಬೆಂಗಳೂರಿನ ವೈಭವವನ್ನೇ.

ಪರಿಚಯ
* ಜನನ: ಮೇ25, 1932
* 1942ರಿಂದ ಆರ್‌ಎಸ್‌ಎಸ್‌ ಪರಿಚಾರಕ, ಅಧ್ಯಾಪನ
* ತಂದೆ: ಕೃಷ್ಣಪ್ಪ
* ತಾಯಿ: ಸುಂದರಮ್ಮ
* ಒಡಹುಟ್ಟಿದವರು: ಸೂರ್ಯನಾರಾಯಣ ರಾವ್‌, ಅನಂತ್‌ರಾಮ್‌, ರುಕ್ಮಿಣಿ, ಗೋಪಿನಾಥ್‌, ಶಿವಶಂಕರ
  ಕೃ.ನರಹರಿ ಅವರು ಹುಟ್ಟಿದ್ದು ಮೇ 25, 1932ರಲ್ಲಿ. 1942ರಲ್ಲಿ ಆರ್‌ಎಸ್‌ಎಸ್‌ ಸೇರಿ ಇಂದಿಗೂ ಸಂಘದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮೂರು ಬಾರಿ     ಎಂಎಲ್‌ಸಿ ಆಗಿಯೂ ಆಯ್ಕೆಯಾಗಿದ್ದಾರೆ.  ಬಿಎಂಎಸ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಶಿಕ್ಷಕವೃತ್ತಿ ಅವರಿಗೆ ತುಂಬಾ ಪ್ರಿಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT