ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 22–5–1967

Last Updated 21 ಮೇ 2017, 19:30 IST
ಅಕ್ಷರ ಗಾತ್ರ
ಯು.ಎ.ಆರ್., ಇಸ್ರೇಲ್ ಸೇನೆಗಳ ಪೂರ್ಣ ಸಜ್ಜು: ಸೇವೆಗೆ ಹಾಜರಾಗಲು ಮೀಸಲು ಸೈನಿಕರಿಗೆ ಆಜ್ಞೆ
ಕೈರೊ, ಮೇ 21– ಸೇವೆಗೆ ಹಾಜರಾಗುವಂತೆ ಮೀಸಲು ಸೈನಿಕರಿಗೆ ಕರೆ ನೀಡಿರುವುದೂ ಸೇರಿ, ಪೂರ್ಣ ಪ್ರಮಾಣದ ಸೇನಾ ಸನ್ನದ್ಧತೆಯ ಕ್ರಮಗಳನ್ನು ಸಂಯುಕ್ತ ಅರಬ್ ಗಣರಾಜ್ಯ ಮತ್ತು ಇಸ್ರೇಲ್‌ಗಳು ಕೈಗೊಂಡಿವೆ.
 
ಮೀಸಲು ಸೈನಿಕರು ಸೇನಾ ಸೇವೆಗೆ ಹಾಜರಾಗಬೇಕೆಂದು ಪ್ರಥಮ ಉಪಾಧ್ಯಕ್ಷರೂ, ಸೇನೆಗಳ  ಉಪ ದಂಡನಾಯಕರೂ ಆದ ಫೀಲ್ಡ್ ಮಾರ್ಷಲ್ ಅಬ್ಡೆಲ್ ಹಕೀಂ  ಅವೆದ್ ಆಜ್ಞೆ ಮಾಡಿರುವರೆಂಬ ಸಂಕ್ಷಿಪ್ತ ಪ್ರಕಟಣೆಯನ್ನು ಕೈರೊ ರೇಡಿಯೋ ಪ್ರಸಾರ ಮಾಡಿತು.
 
ಇಂದಿರಾ ಕಳವಳ
ನವದೆಹಲಿ, ಮೇ 21– ಪಶ್ಚಿಮ ಏಷ್ಯದಲ್ಲಿನ ವಿದ್ಯಮಾನಗಳ ಬಗ್ಗೆ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ತೀವ್ರ ಕಳವಳ ವ್ಯಕ್ತಪಡಿಸಿದರು.
‘ಸ್ಫೋಟಕ’ ಪರಿಸ್ಥಿತಿ ಇದೆಯೆಂದು ಪಾರ್ಲಿಮೆಂಟಿನ ಕಾಂಗ್ರೆಸ್ ಸದಸ್ಯರ ಸಭೆಯಲ್ಲಿ ವಿವರಿಸಿದ ಪ್ರಧಾನಿಯವರು ಈ ಪ್ರದೇಶದಲ್ಲಿ  ಶಾಂತಿ ಸ್ಥಾಪನೆಯಾಗಬೇಕಾದುದು ನಮ್ಮ ಹಿತದೃಷ್ಟಿಯಿಂದ ಅಗತ್ಯವಾಗಿದೆ ಎಂದು ನುಡಿದರು.
 
‘ಭಾರತ ಮತ್ತು ಸಂಯುಕ್ತ ಅರಬ್ ಗಣರಾಜ್ಯಗಳ ಮೈತ್ರಿಯು ದೃಢವಾದುದು ಹಾಗೂ ಪರಸ್ಪರ ಬದ್ಧವಾದುದು ಎಂಬುದನ್ನು ನಮ್ಮ ಅರಬ್ ಮಿತ್ರರು ಅರಿಯಬೇಕೆಂಬುದೇ ನಮ್ಮ ಆಶಯ’ ಎಂಬುದು ಪ್ರಧಾನಿಯವರ ಮಾತಿನ ಸಾರಾಂಶವಾಗಿತ್ತೆಂದು ಹೇಳಲಾಗಿದೆ.
 
ಪೋಪ್‌ರ ಆತಂಕ
ವ್ಯಾಟಿಕನ್‌ನಗರ, ಮೇ 21– ಮಧ್ಯ ಪ್ರಾಚ್ಯದಲ್ಲಿ ಹೊಸ ಘರ್ಷಣೆಯ ಬೆದರಿಕೆ ಹಾಗೂ ವಿಯಟ್ನಾಂ ಯುದ್ಧವು ವ್ಯಾಪಕಗೊಳ್ಳುತ್ತಿರುವ ಬಗ್ಗೆ ಆರನೇ ಪೋಪ್ ಪಾಲ್ ಅವರು ಕಳವಳ ವ್ಯಕ್ತಪಡಿಸಿದರು.
 
ಜಂಟಿ ರಾಜತಾಂತ್ರಿಕ ಕ್ರಮಕ್ಕೆ ಕೊಸಿಗಿನ್‌ಗೆ ಅಧ್ಯಕ್ಷ ಜಾನ್ಸನ್ ಮನವಿ
ಲಂಡನ್, ಮೇ 21– ಮಧ್ಯ ಪ್ರಾಚ್ಯದಲ್ಲಿ ಶಾಂತಿಯನ್ನು ಸಂರಕ್ಷಿಸುವುದಕ್ಕೆ ಜಂಟಿ ರಾಜತಾಂತ್ರಿಕ ಕ್ರಮವನ್ನು ಕೈಗೊಳ್ಳುವಂತೆ ರಷ್ಯ ಪ್ರಧಾನಿ ಅಲೆಕ್ಸಿ ಕೊಸಿಗಿನ್ ಅವರಿಗೆ ಅಮೆರಿಕ ಅಧ್ಯಕ್ಷ ಲಿಂಡನ್ ಬಿ. ಜಾನ್ಸನ್  ರಹಸ್ಯ ಮನವಿ ಮಾಡಿಕೊಂಡಿದ್ದಾರೆ. 
 
ಸಿರಿಯಾದ ನಿಲುವಿಗೆ ರಷ್ಯ ಬೆಂಬಲ ಕೊಟ್ಟಿದೆಯೆಂದು ಸಿರಿಯಾ ಸರಕಾರ ಹೇಳಿಕೆ ನೀಡಿದ ಮೇಲೆ ಅಧ್ಯಕ್ಷ ಜಾನ್ಸನ್ ಅವರು ಈ ರೀತಿ ಮನವಿ ಮಾಡಿದ್ದಾರೆಂದು ಲಂಡನ್ನಿನ ‘ಸಂಡೇ ಟೈಂಸ್’ ಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT