ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಿತಾಂಶ ಕೊರತೆಯೂ ಬಡ್ತಿ ಕಡಿತವೂ

Last Updated 21 ಮೇ 2017, 19:30 IST
ಅಕ್ಷರ ಗಾತ್ರ
‘ಶಿಕ್ಷಕರಿಗೆ ಇನ್‌ಕ್ರಿಮೆಂಟ್ ಕಡಿತ’  ವರದಿ (ಪ್ರ.ವಾ., ಮೇ 18) ಗಮನಿಸಿದೆ. ರಾಜಕುಮಾರನ ವಿದ್ಯಾರ್ಜನೆಯ ಪ್ರಗತಿ ತಿಳಿಯಲು ರಾಜಸಭೆಯಲ್ಲಿ ಮಂತ್ರಿ ಅವನಿಗೆ ಬಗೆ ಬಗೆಯಾಗಿ ಪ್ರಶ್ನಿಸುತ್ತಾನೆ. ರಾಜಕುಮಾರ ಉತ್ತರಿಸದ ಒಂದೊಂದು ಪ್ರಶ್ನೆಗೂ ರಾಜಗುರುವಿಗೆ ಒಂದೊಂದು ಬಾರಿ ಥಳಿಸಲಾಗುತ್ತದೆ!

ಬಿ.ಬಿ.ಎಂ.ಪಿ. ತನ್ನ ವ್ಯಾಪ್ತಿಯ ಶಾಲಾ– ಕಾಲೇಜುಗಳಲ್ಲಿನ ಶಿಕ್ಷಕರಿಗೆ ಪರೀಕ್ಷೆಗಳಲ್ಲಿ ಫಲಿತಾಂಶ ‘ಕುಸಿತ’ಕ್ಕೆ ವೇತನ ಬಡ್ತಿ ಕಡಿತಗೊಳಿಸುವ ನಿರ್ಧಾರ ಹಳೆಯ ಪೌರಾಣಿಕ ಸಿನಿಮಾವೊಂದರ ಈ ಹಾಸ್ಯ ಸನ್ನಿವೇಶವನ್ನು ನೆನಪಿಸುತ್ತದೆ.
 
ಶಿಕ್ಷಕರು ಚೆನ್ನಾಗಿ ಪೂರ್ವತಯಾರಿ ನಡೆಸಿ ಆಯಾ ತರಗತಿ ನಿರ್ವಹಿಸಬೇಕು, ಅವರ ಬೋಧನೆ ಎಲ್ಲ ವಿದ್ಯಾರ್ಥಿಗಳನ್ನೂ ತಲುಪಬೇಕು ಎನ್ನುವುದು ಸರಿಯೇ. ಆದರೆ ಪರೀಕ್ಷೆಯಲ್ಲಿ ಇಂತಿಷ್ಟು ಮಂದಿ ವಿದ್ಯಾರ್ಥಿಗಳನ್ನು  ತೇರ್ಗಡೆಯಾಗಿಸುತ್ತೇನೆಂದು ಶಿಕ್ಷಕರು ಭರವಸೆ ನೀಡಲು ಸಾಧ್ಯವೇ? 
 
ಮಕ್ಕಳು ಪರೀಕ್ಷೆಗಳಲ್ಲಿ ಗಳಿಸುವ ಗ್ರೇಡ್, ದರ್ಜೆ, ಅಂಕಗಳನ್ನು ಒಂದು ಉತ್ಪನ್ನವಾಗಿ ಪರಿಗಣಿಸಲಾಗದು. ಪಾಠವನ್ನು ಮಕ್ಕಳಿಗೆ ಒಂದೇ ಸೂರಿನಡಿ ಬೋಧಿಸಲಾಗುತ್ತದೆ. ಒಬ್ಬೊಬ್ಬ ವಿದ್ಯಾರ್ಥಿಯ ಏಕಾಗ್ರತೆ, ಗ್ರಹಣಶಕ್ತಿ, ಆಸಕ್ತಿ ಒಂದೇ ತೆರನಾಗಿರದು. ಆಯಾ ವಿಷಯದಲ್ಲಿ ಮಾಸ್ತರರು ಎಷ್ಟೇ ಹೊಣೆಗಾರಿಕೆಯಿಂದ ತಮ್ಮ ಕರ್ತವ್ಯ ನಿರ್ವಹಿಸಿದರೂ ತರಗತಿಯಲ್ಲಿರುವವರೆಲ್ಲ ಸರಿಸುಮಾರು ಒಂದೇ ಅಂಕ ಪಡೆಯುವುದಿರಲಿ ತೇರ್ಗಡೆಯಾಗುವುದು ಸಹ ಅಸಂಭವ.
 
ಶಿಕ್ಷಕರ ಸಂವಹನಕ್ಕೂ ಇತಿಮಿತಿಗಳಿರುತ್ತವೆ. ಕುದುರೆಯನ್ನು ನೀರಿನ ತನಕ ಕರೆದೊಯ್ಯಬಹುದು. ನೀರು ಕುಡಿಯಬೇಕಾದ್ದು ಕುದುರೆಯೇ.  ಮಕ್ಕಳ ವಯೋಸಹಜವೆನ್ನಬಹುವಾದ ಕೀಟಲೆ, ಗದ್ದಲ, ಗೌಜು, ಅಶಿಸ್ತು, ತಂಟೆಗಳೊಂದಿಗೆ ಸೆಣಸಾಡುತ್ತಲೇ ಪಾಠ ಮಾಡಬೇಕಾಗುತ್ತದೆ.
 
ಅಚ್ಚುಕಟ್ಟಾಗಿ ಬೋಧಿಸಬೇಕು, ವಿದ್ಯಾರ್ಥಿಗಳು ಚೆನ್ನಾಗಿ ಕಲಿಯಬೇಕು ಎನ್ನುವ ಆಶಯ ಎಲ್ಲ ಶಿಕ್ಷಕರಿಗೂ ಇರುತ್ತದೆ. ಹಾಗಾಗಿಯೇ ಅವರು  ಮಕ್ಕಳಲ್ಲಿ, ಸಹೋದ್ಯೋಗಿಗಳಲ್ಲಿ, ಪೋಷಕರಲ್ಲಿ ತಮ್ಮ ಬೋಧನೆ ಹೇಗಿದೆ ಎಂದು ಅಭಿಪ್ರಾಯಗಳನ್ನು ಕುತೂಹಲದಿಂದ ಕಲೆಹಾಕುತ್ತಾರೆ. ಕೊರತೆಯಿದ್ದರೆ ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ.   
 
ಅಧ್ಯಾಪಕರ ಬೋಧನೆಯ ಪಕ್ವತೆ, ಶ್ರೇಷ್ಠತೆಯನ್ನು ಮೂರು ತಾಸುಗಳ ಅವಧಿಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಬರೆಯುವ ಉತ್ತರಗಳಿಗೆ ಸೀಮಿತವಾಗಿಸುವುದು ಅತಾರ್ಕಿಕ. ಬೋಧನೆ ಮಕ್ಕಳನ್ನು ನೇರವಾಗಿ ಪ್ರಭಾವಿಸಬಹುದು, ಕೆಲವೊಮ್ಮೆ ಪ್ರಭಾವ ಬೀರದೆಯೂ ಇರಬಹುದು.  ಕಾಲಾಂತರದಲ್ಲಿ ಅದರ ಪ್ರಭಾವ ಅವರ ಮಿದುಳಿನಲ್ಲಿ ಕುಡಿಯೊಡೆಯುವುದೇ ಸಹಜ ಶಿಕ್ಷಣ. 
 
ಮಕ್ಕಳು ಪರೀಕ್ಷೆ ಎದಿರುಸುವಲ್ಲಿ ಪೋಷಕರ ಪಾತ್ರವೂ ಇದೆಯೆನ್ನುವುದನ್ನು ಮರೆಯಬಾರದು. ಮಕ್ಕಳ ಮಿತಿ–ಸಾಮರ್ಥ್ಯ ಅರಿತು ಅದಕ್ಕೆ ತಕ್ಕಂತೆ ಸ್ಪಂದಿಸಬೇಕು. ಮಾರ್ಗದರ್ಶನ ನೀಡಬೇಕು. ಮಕ್ಕಳನ್ನು ಸೆಳೆಯುವ ಮೊಬೈಲು, ಟಿ.ವಿ., ವಿಡಿಯೊ ಗೇಮ್‌ಗಳಂಥ ಆಕರ್ಷಣೆಗಳಿಗೆ  ಪರೀಕ್ಷಾ ದಿನಗಳು ಸಮೀಪಿಸುತ್ತಿರುವಾಗಲಾದರೂ ಕಡಿವಾಣ ಹಾಕಬಹುದಲ್ಲವೇ? ಮಕ್ಕಳ ಮನವೊಲಿಸುವ ಮೂಲಕವೇ ಈ ಕೆಲಸ ಮಾಡಬಹುದು. 
 
‘ಇಂತಿಷ್ಟು ಫಲಿತಾಂಶ ತರಿಸಬೇಕು ನೋಡಿ’ ಎಂದು ಶಿಕ್ಷಕರ ಮೇಲೆ ಒತ್ತಡವೇರಿದರೆ ಅವರ ಚಿತ್ತ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಪಡಿಸುವುದರತ್ತ ಮಾತ್ರ ಹರಿಯುವಂತೆ ಪ್ರೇರೇಪಿಸಿದಂತಾಗುತ್ತದೆ. ಅದರಿಂದ ನೈಜ ಬೋಧನೆ ಹಾಗೂ ಕಲಿಕೆಗೆ ಅವಕಾಶ ಕಡಿಮೆಯಾಗುತ್ತದೆ. ‘ಹೇಗಾದರೂ ಸರಿ’ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತೇರ್ಗಡೆಗೆ ಕನಿಷ್ಠ ಅಂಕಗಳನ್ನು ಪಡೆಯಬೇಕು ಎನ್ನುವ ಗುರಿ ಆತಂಕಕಾರಿ. ಅರಿವು, ವಿವೇಕ ಗೌಣವಾಗಿ ಅಂಕಮಲ್ಲತನ ಅದೇ ಪ್ರತಿಭೆಯೇನೊ ಎನ್ನುವಂತೆ ಮೆರೆಯುತ್ತದೆ. 
 
ತಮಗೆ ಪರೀಕ್ಷೆಗಿಂತ ಗುರು ಸಾನ್ನಿಧ್ಯ, ತಿಳಿವಳಿಕೆ, ಸಹಪಾಠಿಗಳ ಒಡನಾಟ, ಆಟೋಟ, ಗ್ರಂಥಾಲಯ, ವಿದ್ಯಾಲಯದ ಪರಿಸರ ಮುಖ್ಯ ಎನ್ನುವ ಎಳೆಯ ಮನಸ್ಸುಗಳು ಅಪರೂಪಕ್ಕಾದರೂ ಉಂಟು ತಾನೆ?  ಅನೇಕ ಸಂದರ್ಭಗಳಲ್ಲಿ ವಿದ್ಯಾರ್ಥಿಗಳ  ಕೋರ್ಸ್, ಕಲಿಕಾ ವಿಷಯಗಳ ಆಯ್ಕೆಯೇ ಸರಿ ಇರುವುದಿಲ್ಲ. ಅವರು ಒಲುಮೆಯಿಂದ ‘ಇದನ್ನೇ ಕಲಿಯುವೆ’ ಎಂದಿರುವುದಿಲ್ಲ.
 
ತಮಗೆ ಅಷ್ಟಾಗಿ ಆಸಕ್ತಿಯಿರದ ಕೋರ್ಸ್‌ ಅನ್ನು ಪೋಷಕರ ಒತ್ತಾಯಕ್ಕೆ ಮಣಿದು  ಕೆಲವರು ಆರಿಸಿಕೊಂಡಿರುತ್ತಾರೆ.  ಇನ್ನು ಪೋಷಕರೋ ಘನತೆ ಎಂದು ಭಾವಿಸಿಯೋ ಅಥವಾ ಯಾರನ್ನೋ ಮೆಚ್ಚಿಸಲು ತಮ್ಮ ಮಕ್ಕಳಿಗೆ ಇಂಥದ್ದನ್ನು ವ್ಯಾಸಂಗ ಮಾಡಿ ಎಂದಿರುತ್ತಾರೆ. ಒಲ್ಲದ್ದನ್ನು ಓದು, ಅದರಲ್ಲಿ ಯಶಸ್ಸು ಸಾಧಿಸು ಎನ್ನುವುದು ಅವರ ಪಾಲಿಗೆ ದೊಡ್ಡ ಶಿಕ್ಷೆಯಾದೀತು. 
 
ಎಳೆಗೂಸಿಗೂ ಕಲಿಕೆಯಲ್ಲಿ ಅದರದೇ ಆಸಕ್ತಿ ಇರುತ್ತದೆ. ಫಲಿತಾಂಶ ಕೇಂದ್ರಿತ ಬೋಧನೆಯು ಪಠ್ಯಕ್ಕಷ್ಟೇ ಅಂಟಿಕೊಳ್ಳುತ್ತದೆ. ಅದರ ಪರಿಣಾಮವಾಗಿ ಸ್ವಾರಸ್ಯ  ಕಳೆದುಕೊಳ್ಳುತ್ತದೆ. ಶಿಕ್ಷಕರು-ವಿದ್ಯಾರ್ಥಿಗಳ ನಡುವಿನ ಸಂವಾದದ ನೆಲೆಯಾಗಬೇಕಾದ ತರಗತಿಯಲ್ಲಿ ವಿಷಯದ ಬಗ್ಗೆ ಪ್ರಶ್ನೆಗಳಿಗೆ ಆಸ್ಪದವೇ ಇಲ್ಲವಾಗುತ್ತದೆ. ಅಲ್ಲಿ ಏನಿದ್ದರೂ ‘ಈ ಅಧ್ಯಾಯ ಪರೀಕ್ಷೆಗೆ ಮುಖ್ಯವೇ?’ ‘ಈ ಪ್ರಶ್ನೆ ಎಂದೂ ಕೇಳಿಲ್ಲವಲ್ಲ?’
 
‘ಯಾವ ಅಧ್ಯಾಯವನ್ನು ಈ ಬಾರಿ ಓದದೆ ಬಿಡಬಹುದು?’- ಇವೇ ಸಂದೇಹಗಳಾಗುತ್ತವೆ! ಒಂದು ವಿಷಯದಲ್ಲಿನ ಫಲಿತಾಂಶವನ್ನು ಇನ್ನೊಂದು ವಿಷಯದ ಫಲಿತಾಂಶಕ್ಕೆ ಹೋಲಿಸಲಾಗದು. ಏಕೆಂದರೆ ಸಾಮಾನ್ಯವಾಗಿ ವಿದ್ಯಾರ್ಥಿಗಳು ಐಚ್ಛಿಕ ವಿಷಯಗಳಿಗಿಂತ ಭಾಷಾ ವಿಷಯಗಳಲ್ಲಿ ಹೆಚ್ಚಿನ ಅಂಕ ಪಡೆಯುತ್ತಾರೆ. 
 
ಶೈಕ್ಷಣಿಕ ಪ್ರಕ್ರಿಯೆಯ ಒಂದು ಭಾಗವಷ್ಟೇ ಆದ ಫಲಿತಾಂಶದ ಕೊರತೆಯೆಂದ ಮಾತ್ರಕ್ಕೆ ಮಕ್ಕಳ ಜ್ಞಾನ, ಬುದ್ಧಿ ಶಕ್ತಿಯ ಕೊರತೆ ಎಂದು ತೀರ್ಮಾನಿಸುವ ಅಗತ್ಯವಿಲ್ಲ. ಶಿಕ್ಷಕರಿಗೆ ಸೇವಾ ಭದ್ರತೆ, ಆಗಿಂದಾಗ್ಗೆ ಅದರಲ್ಲೂ ವಿಶೇಷವಾಗಿ ಪಠ್ಯ ವಿಷಯ ಮಾರ್ಪಾಡಾದಾಗ ಅಧ್ಯಾಪಕರಿಗೆ ಸೂಕ್ತ ತರಬೇತಿ, ಪುನರ್‌ಮನನ ಕಮ್ಮಟಗಳನ್ನು ಏರ್ಪಡಿಸುವುದು, ಶೈಕಣಿಕ ವರ್ಷಾರಂಭಕ್ಕೆ ಮೊದಲೇ ಮಕ್ಕಳಿಗೆ ಪಠ್ಯ ಪುಸ್ತಕಗಳ ಪೂರೈಕೆ, ಸರಳ ಸಮವಸ್ತ್ರ, ಭಾರವೆನ್ನಿಸದ ಪುಸ್ತಕ ಚೀಲ ಮುಂತಾದ ಕ್ರಮಗಳು ಪರಿಣಾಮಕಾರಿಯಾಗಬಲ್ಲ ಫಲಿತಾಂಶದ ಉತ್ತಮೀಕರಣದ ದಿಟ್ಟ ಹೆಜ್ಜೆಗಳು. 
 
ಮಕ್ಕಳಲ್ಲಿ ಪುಸ್ತಕ ಪ್ರೀತಿ ಮೂಡಿಸಿ, ಅವರಲ್ಲಿ ಸ್ವಅಧ್ಯಯನ ಪ್ರವೃತ್ತಿ ಬೆಳೆಸಬೇಕಿದೆ. ಶಿಕ್ಷಕರನ್ನು ವಿದ್ಯಾರ್ಥಿಗಳ, ಪೋಷಕರ ಒಟ್ಟಾರೆ ಸಮಾಜದ ಮುಂದೆ ತಪ್ಪಿತಸ್ಥರನ್ನಾಗಿ ಮಾಡಿ ‘ದಂಡ’ ವಿಧಿಸುವುದು ಭಾವಿ ಪ್ರಜೆಗಳನ್ನು ಅಣಿಗೊಳಿಸುವ ಕೈಂಕರ್ಯವನ್ನು ಅಪಮಾನಿಸಿದಂತೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT