ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ವ್ಯವಸ್ಥೆ ಸ್ಪಷ್ಟಗೊಂಡ ತೆರಿಗೆ ಸ್ವರೂಪ

Last Updated 21 ಮೇ 2017, 19:30 IST
ಅಕ್ಷರ ಗಾತ್ರ
ಸರಕು ಮತ್ತು ಸೇವಾ ತೆರಿಗೆಯ ಉನ್ನತ ಮಟ್ಟದ ಸಮಿತಿಯಾಗಿರುವ ಜಿಎಸ್‌ಟಿ ಮಂಡಳಿಯು ತೆರಿಗೆ ದರಗಳನ್ನು ಅಂತಿಮಗೊಳಿಸಿದೆ. ಜುಲೈ 1ರಿಂದ ದೇಶದಾದ್ಯಂತ ಏಕರೂಪವಾಗಿ ಜಾರಿಗೆ ಬರಲಿರುವ ಹೊಸ ತೆರಿಗೆ ವ್ಯವಸ್ಥೆಯ  ಸಮಗ್ರ ಚಿತ್ರಣ ಈಗ ಸ್ಪಷ್ಟಗೊಂಡಿದೆ.
 
ನಾಲ್ಕು ಹಂತದ ತೆರಿಗೆ ದರಗಳ (ಶೇ 5, 12, 18 ಮತ್ತು 28) ವ್ಯಾಪ್ತಿಗೆ ಬರುವ ಸರಕು ಮತ್ತು ಸೇವೆಗಳ  ಪಟ್ಟಿ ಅಂತಿಮಗೊಳಿಸಿರುವುದು ಜಿಎಸ್‌ಟಿ ಜಾರಿ ನಿಟ್ಟಿನಲ್ಲಿನ ಮಹತ್ವದ ಹೆಜ್ಜೆಯಾಗಿದೆ. ಚಿನ್ನ, ಬೀಡಿ, ಪಾದರಕ್ಷೆ, ಕೃಷಿ ಸಲಕರಣೆಗಳಂತಹ ಕೆಲವೇ ಸರಕುಗಳ ತೆರಿಗೆ ದರದ ಬಗ್ಗೆ ನಿರ್ಧಾರಕ್ಕೆ ಬರುವುದು ಈಗ ಬಾಕಿ ಉಳಿದಿದೆ.
 
ಈ ಸರಕುಗಳಿಗೆ ಪ್ರತ್ಯೇಕ ದರ ನಿಗದಿಪಡಿಸಿದರೆ, ಅಲ್ಲಿಗೆ ಐದು ಹಂತದ ತೆರಿಗೆ ವ್ಯವಸ್ಥೆ ರೂಪುಗೊಂಡಂತಾಗಲಿದೆ. ಶೇ 81ರಷ್ಟು ಸರಕುಗಳನ್ನು ಶೇ 18 ಮತ್ತು ಅದಕ್ಕಿಂತ ಕಡಿಮೆ ತೆರಿಗೆ ಹಂತದ ವ್ಯಾಪ್ತಿಗೆ ತರಲಾಗಿದೆ. ಹೊಸ ವ್ಯವಸ್ಥೆಯಲ್ಲಿ ಬಹುಪಾಲು ಆಹಾರಧಾನ್ಯಗಳಿಗೆ ತೆರಿಗೆಯಿಂದ ವಿನಾಯಿತಿ ದೊರೆತಿರುವುದು ಒಳ್ಳೆಯ ಅಂಶ.
 
ಅಲ್ಲದೇ ದಿನಬಳಕೆಯ ಸರಕುಗಳು ಕಡಿಮೆ ತೆರಿಗೆ ದರಪಟ್ಟಿಯಲ್ಲಿ ಇರುವುದರಿಂದ ಅವುಗಳು ಗ್ರಾಹಕರಿಗೆ ಹೊರೆಯಾಗಲಾರವು. ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳ ಮೇಲಿನ ತೆರಿಗೆ ದರಗಳು ಬಳಕೆಯನ್ನು ಉತ್ತೇಜಿಸುವಂತಿವೆ. ‘ಒಂದು ದೇಶ, ಒಂದು ಮಾರುಕಟ್ಟೆ’ ಪರಿಕಲ್ಪನೆ ಹೊಂದಿರುವ ಈ ತೆರಿಗೆ ವ್ಯವಸ್ಥೆ ಜಾರಿ ಹಾದಿಯಲ್ಲಿನ ಅಡಚಣೆಗಳೆಲ್ಲ ಈಗ ದೂರವಾಗಿವೆ.
 
ಹೊಸ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಏನು ಕಂಟಕ ಕಾದಿದೆಯೋ ಎನ್ನುವ ಆತಂಕಕ್ಕೂ ಈಗ ಸಮಾಧಾನಕರ ಉತ್ತರ ಸಿಕ್ಕಿದೆ.  ಬಳಕೆದಾರರಲ್ಲಿ ಮೂಡಿದ್ದ ಅನುಮಾನಗಳನ್ನೆಲ್ಲ ಶ್ರೀನಗರದಲ್ಲಿ ಎರಡು ದಿನ ನಡೆದ ಜಿಎಸ್‌ಟಿ ಮಂಡಳಿ ಸಭೆ  ನಿವಾರಿಸಿದೆ. ಸರಕು ತಯಾರಿಕೆಯ ಮತ್ತು ಸೇವೆ ಒದಗಿಸುವ ಸಂಸ್ಥೆಗಳು ತಮ್ಮ ಹಿತಾಸಕ್ತಿ ರಕ್ಷಣೆಗಾಗಿ ಪ್ರಭಾವ ಬೀರಲಿವೆ ಎನ್ನುವ  ಅನುಮಾನವೂ ದೂರವಾಗಿದೆ.
 
ಜಿಎಸ್‌ಟಿ ಜಾರಿಯಿಂದ  ಹಣದುಬ್ಬರದ ಪರಿಣಾಮ ಕಡಿಮೆ ಮಟ್ಟದಲ್ಲಿ ಇರುವಂತೆ ಎಚ್ಚರ ವಹಿಸಿ ಮಂಡಳಿಯು ಜಾಣ್ಮೆ ಮೆರೆದಿದೆ.  ಸಾಮಾನ್ಯ ತೆರಿಗೆದಾರರಿಗೆ ಹೊರೆಯಾಗದ ರೀತಿಯಲ್ಲಿ ದರಗಳನ್ನು ನಿಗದಿಪಡಿಸಲಾಗಿದೆ. ತೆರಿಗೆ ದರಗಳು ಉದ್ಯಮದ ಪಾಲಿಗೂ ಉತ್ತೇಜನಕಾರಿಯಾಗಿವೆ.
 
ದೀರ್ಘಾವಧಿಯಲ್ಲಿ ಇದು ದೇಶದ ಆರ್ಥಿಕ ವೃದ್ಧಿ ದರವನ್ನು  ಗರಿಷ್ಠ ಶೇ 2ರಷ್ಟು ಹೆಚ್ಚಿಸಲಿದೆ ಎನ್ನುವ ಆಶಾಭಾವ ಮೂಡಿಸಿದೆ. ಗ್ರಾಹಕರು ದಿನನಿತ್ಯ ಬಳಸುವ ಬಹುತೇಕ ಸರಕುಗಳ ಬೆಲೆ, ಈಗಿನ ದರಗಳಿಗೆ ಹೋಲಿಸಿದರೆ ಅಗ್ಗವಾಗುವ ಸಾಧ್ಯತೆ ಇದೆ.
 
ಕೆಲವು ಸರಕುಗಳನ್ನು ಕನಿಷ್ಠ ಮಟ್ಟದ ತೆರಿಗೆ ಹಂತದ (ಶೇ 5) ವ್ಯಾಪ್ತಿಗೆ ತಂದಿರುವುದರಿಂದ ತಯಾರಿಕಾ ಉದ್ಯಮ ವಲಯದಲ್ಲಿಯೂ ಉತ್ಸಾಹ ಗರಿಗೆದರಲಿದೆ. ಈ ಅಗ್ಗದ ದರದ ಪ್ರಯೋಜನವನ್ನು ಉದ್ಯಮಿಗಳು ಗ್ರಾಹಕರಿಗೆ ವರ್ಗಾಯಿಸಿದರೆ ಮಾತ್ರ ಬೇಡಿಕೆ ಇನ್ನಷ್ಟು ಹೆಚ್ಚಳಗೊಂಡು 
ಆರ್ಥಿಕ ಚಟುವಟಿಕೆಗಳು ಪ್ರಗತಿ ಪಥದಲ್ಲಿ ಮುನ್ನಡೆಯಲಿವೆ.
 
ಸಿನಿಮಾ ವೀಕ್ಷಣೆ, ಮೊಬೈಲ್‌ ಫೋನ್‌, ವಿಮೆ  ಮತ್ತು ಹಣಕಾಸು ಸೇವೆಗಳು ಕೆಲ ಮಟ್ಟಿಗೆ ದುಬಾರಿಯಾಗಲಿವೆ. ಮಿತವ್ಯಯ ಶ್ರೇಣಿಯ  ಹೋಟೆಲ್‌ ಹೊರತುಪಡಿಸಿ ಪ್ರವಾಸೋದ್ಯಮದ ಮೇಲೆ ಹೊಸ ವ್ಯವಸ್ಥೆ ಪ್ರತಿಕೂಲ ಪರಿಣಾಮ ಬೀರಲಿದೆ ಎನ್ನುವ ಆತಂಕ ವ್ಯಕ್ತವಾಗಿದೆ.
 
ಗಮನಾರ್ಹ ಪ್ರಮಾಣದಲ್ಲಿ ಉದ್ಯೋಗ ಅವಕಾಶ ಸೃಷ್ಟಿಸುವ  ಈ ಉದ್ಯಮದ  ಕಳವಳ ದೂರ ಮಾಡಲು ಸರ್ಕಾರ  ಮಾರ್ಗೋಪಾಯ ಕಂಡುಕೊಳ್ಳಬೇಕಾಗಿದೆ. ರಾಜ್ಯ ಸರ್ಕಾರಗಳಿಗೆ ಆಗುವ ತೆರಿಗೆ ವರಮಾನ ನಷ್ಟವನ್ನು ಐದು ವರ್ಷಗಳವರೆಗೆ ಕೇಂದ್ರ ಸರ್ಕಾರವೇ ತುಂಬಿಕೊಡಬೇಕಾಗಿದೆ. ಇದಕ್ಕಾಗಿ ವಸೂಲಿ ಮಾಡುವ ಉಪಕರ (ಸೆಸ್‌) ಹೊರೆ ಇನ್ನಷ್ಟು  ಹೆಚ್ಚಳಗೊಳ್ಳದಂತೆ ಎಚ್ಚರ ವಹಿಸಬೇಕಾಗಿದೆ. 
 
ಪರೋಕ್ಷ ತೆರಿಗೆಗಳಿಗೆ ಸಂಬಂಧಿಸಿದಂತೆ ಗರಿಷ್ಠ ತೆರಿಗೆ ಇರುವ ದೇಶ ಎನ್ನುವ ಅಪಖ್ಯಾತಿ ಭಾರತಕ್ಕೆ ಅಂಟಿಕೊಂಡಿದೆ.  ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿನ ತೆರಿಗೆ ದರಗಳು ತುಸು ದುಬಾರಿ ಎಂಬ ಟೀಕೆ ಇದೆ.
 
ಮುಂಬರುವ ದಿನಗಳಲ್ಲಾದರೂ ಸರ್ಕಾರ  ತೆರಿಗೆ ಪ್ರಮಾಣ ತಗ್ಗಿಸಲು ಕಾಳಜಿ ತೋರಬೇಕು. ರಿಯಾಯ್ತಿಗೆ ಒಳಪಟ್ಟಿರುವ ಸರಕು ಮತ್ತು ಸೇವೆಗಳ ಲಾಭವನ್ನು ಉದ್ಯಮವು ಗ್ರಾಹಕರಿಗೆ ವರ್ಗಾಯಿಸಲು ಮುತುವರ್ಜಿ ತೋರಬೇಕಾಗಿದೆ. ಜಿಎಸ್‌ಟಿ ಯಶಸ್ಸಿಗೆ ಇದು ಅನಿವಾರ್ಯವೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT