ಊಹೆಗೂ ನಿಲುಕದ ಚಟುವಟಿಕೆ

ಶುಕ್ರವಾರ ಷೇರುಪೇಟೆಯ ಹೆಗ್ಗುರುತಾದ ಮುಂಬೈ ಷೇರು ವಿನಿಮಯ ಕೇಂದ್ರದ  ಸಂವೇದಿ ಸೂಚ್ಯಂಕವು 30,717  ಅಂಶಗಳಿಗೆ ತಲುಪಿ ಸಾರ್ವಕಾಲಿಕ ದಾಖಲೆ ನಿರ್ಮಿಸಿ 30,464.92 ರಲ್ಲಿ ಕೊನೆಗೊಂಡಿತು.

ಆನೆ ನಡೆದಿದ್ದೇ ದಾರಿ ಪೇಟೆ ಸಾಗಿದ್ದೇ ಗುರಿ ಎನ್ನುವಂತೆ ಷೇರುಪೇಟೆಯ ಸೂಚ್ಯಂಕ ದಿನ ನಿತ್ಯ ಹೊಸ   ದಾಖಲೆಯ ಮಟ್ಟಕ್ಕೆ ಜಿಗಿದು ವಿಜೃಂಭಿಸುತ್ತಿವೆ.  ಆದರೆ ಈ ಜಿಗಿತವು ದಿನದ ಮಧ್ಯಂತರದಲ್ಲಿದ್ದು, ಅಂತಿಮವಾಗಿ ಸ್ವಲ್ಪ ಇಳಿಕೆಯಾಗುತ್ತಿವೆ. 

ಶುಕ್ರವಾರ ಷೇರುಪೇಟೆಯ ಹೆಗ್ಗುರುತಾದ ಮುಂಬೈ ಷೇರು ವಿನಿಮಯ ಕೇಂದ್ರದ  ಸಂವೇದಿ ಸೂಚ್ಯಂಕವು 30,717  ಅಂಶಗಳಿಗೆ ತಲುಪಿ ಸಾರ್ವಕಾಲಿಕ ದಾಖಲೆ ನಿರ್ಮಿಸಿ 30,464.92 ರಲ್ಲಿ ಕೊನೆಗೊಂಡಿತು.   

ಪೇಟೆಯಲ್ಲಿ ಪ್ರಕಟವಾಗುತ್ತಿರುವ  ಹೆಚ್ಚಿನ ಕಂಪೆನಿಗಳ ಫಲಿತಾಂಶವು ನಿರೀಕ್ಷಿತ ಮಟ್ಟಕ್ಕಿಂತ ಉತ್ತಮವಾಗಿದೆ ಎಂಬ ಕಾರಣಕ್ಕೆ ರಭಸದ ಏರಿಕೆ ಬಿಂಬಿತವಾಗುತ್ತಿದೆ. ಪೇಟೆಗಳು ಗರಿಷ್ಠದಲ್ಲಿರುವಾಗ ಅಸ್ಥಿರತೆಯು ಹೂಡಿಕೆದಾರರಲ್ಲಿ ಅಪನಂಬಿಕೆ ಹೆಚ್ಚಿಸಿದೆ. ಈ ಕಾರಣಕ್ಕೆ ದಿನ ನಿತ್ಯದ ಚುಕ್ತಾ ವಹಿವಾಟು ಹೆಚ್ಚಾಗಿದ್ದು, ವಿಲೇವಾರಿ ಪ್ರಮಾಣ ಕಡಿಮೆಯಾಗುತ್ತಿದೆ.  ಅಂದರೆ, ಊಹಾತ್ಮಕ  ಚಟುವಟಿಕೆ ಹೆಚ್ಚಿದೆ.

ಪೇಟೆಯ ಚಟುವಟಿಕೆಯು ಕಲ್ಪನೆ ಮೀರಿ ನಡೆಯುತ್ತಿದೆ ಎಂಬುದಕ್ಕೆ ಗುರುವಾರ ಅನಿರೀಕ್ಷಿತವಾಗಿ ತಾಂತ್ರಿಕ ವಲಯದ ಕಂಪೆನಿಗಳಾದ ಟಿಸಿಎಸ್, ಇನ್ಫೊಸಿಸ್, ವಿಪ್ರೊ  ಗಗನಕ್ಕೇರಿದವು.   ಈ ಏರಿಕೆಯ ಹಿಂದೆ ಅಂದಿನಿಂದ ಟಿಸಿಎಸ್ ಷೇರು ಹಿಂದೆ ಕೊಳ್ಳುವಿಕೆ ಆರಂಭದ ಕಾರಣವಿದ್ದರೂ, ಇತರೆ ಕಂಪೆನಿಗಳ ಏರಿಕೆಗೆ ಸಕಾರಣವಿರಲಿಲ್ಲ.  ಇದುವರೆಗೂ ಸತತವಾಗಿ ನಿರ್ಲಕ್ಷಿಸಲ್ಪಟ್ಟಿದ್ದ ಕಾರಣ ವಹಿವಾಟುದಾರರು  ಈ ವಲಯದ ಷೇರುಗಳ ಚಟುವಟಿಕೆಗೆ ಮುಂದಾಗಿರಬಹುದು.  ಅಂದರೆ ಅವರು ವ್ಯಾಲ್ಯೂ ಪಿಕ್ ಕಡೆ ಗಮನಹರಿಸುತ್ತಾರೆ.

ಈ ವಾರ ಪ್ರಕಟವಾದ ಫಲಿತಾಂಶಗಳಲ್ಲಿ  ಟಾಟಾ ಸ್ಟೀಲ್ ಕಂಪೆನಿಯ ಸಾಧನೆ  ಮತ್ತು ಲಾಭಾಂಶದ ಪ್ರಮಾಣ ತೃಪ್ತಿದಾಯಕವಾಗಿದೆ ಎಂಬ ಕಾರಣಕ್ಕಾಗಿ  ₹436 ರ ಸಮೀಪದಿಂದ ₹498 ರವರೆಗೂ ಏರಿಕೆ ಕಂಡು ಶುಕ್ರವಾರ ₹481 ರವರೆಗೂ ಕುಸಿದು ₹489 ರ ಸಮೀಪ ವಾರಾಂತ್ಯ ಕಂಡಿತು. ಕಂಪೆನಿಗಳ ಸಾಧನೆಯ ಅಂಕಿ ಅಂಶಗಳು ನಿರೀಕ್ಷಿತ ಮಟ್ಟದಲ್ಲಿ ಇಲ್ಲವೆಂದರೆ ಅವುಗಳ ಕುಸಿತ ಯಾವ ಮಟ್ಟಕ್ಕಿರುತ್ತದೆ ಎಂಬುದಕ್ಕೆ ಕ್ರೆಡಿಟ್ ಅನಾಲಿಸಿಸ್ ಆ್ಯಂಡ್ ರೀಸರ್ಚ್ ಷೇರಿನ ಬೆಲೆ ಕುಸಿತ ತಿಳಿಸುತ್ತದೆ.  ಈ ಕಂಪೆನಿಯ ಷೇರಿನ ಬೆಲೆಯು ₹1,618ರ ಸಮೀಪದಿಂದ ₹1,459ರವರೆಗೂ ಕುಸಿದಿದೆ.  ಕಂಪೆನಿ ಪ್ರಕಟಿಸಿದ ₹10ರ ಲಾಭಾಂಶ ಹೂಡಿಕೆದಾರರ ಬೆಂಬಲ ಪಡೆಯಲು ವಿಫಲವಾಯಿತು.

ಅದೇ ರೀತಿ ಶುಕ್ರವಾರ ದಿನದ ವಹಿವಾಟು ಆರಂಭಿಕ ಕ್ಷಣಗಳಿಂದಲೇ ಕಮ್ಮಿನ್ಸ್ ಷೇರಿನ ಬೆಲೆಯು ಕುಸಿದು ₹1,019 ರಿಂದ ₹933 ರವರೆಗೂ ಬಂದು ನಂತರ   ಕೊಳ್ಳುವಿಕೆಯ ಪರಿಣಾಮ ₹967 ರವರೆಗೂ ಚೇತರಿಕೆ ಕಂಡಿತು.  ಈ ಕಂಪೆನಿಯು ಪ್ರತಿ ಷೇರಿಗೆ ₹9 ರ ಲಾಭಂಶ ಪ್ರಕಟಿಸಿದೆ. ಇಷ್ಟೆಲ್ಲ ಬದಲಾವಣೆಯಾದರೂ ವಿಲೆವಾರಿಯಾದ ಷೇರುಗಳ ಪ್ರಮಾಣ ಶೇ16 ರಷ್ಟು ಮಾತ್ರ.

ಒಟ್ಟಾರೆ ಈ ವಾರಾಂತ್ಯದಲ್ಲಿ ಸಂವೇದಿ ಸೂಚ್ಯಂಕ 277 ಅಂಶಗಳ ಏರಿಕೆ ಪಡೆದುಕೊಂಡರೆ ಮಧ್ಯಮ ಮತ್ತು ಕೆಳ ಮಧ್ಯಮ ಶ್ರೇಣಿಯ ಸೂಚ್ಯಂಕಗಳು ಕ್ರಮವಾಗಿ 210 ಮತ್ತು 301 ಅಂಶ ಇಳಿಕೆ ಕಂಡು ವಿರುದ್ಧ ದಿಕ್ಕಿನಲ್ಲಿ ಚಲಿಸಿದವು.  ವಿದೇಶಿ ವಿತ್ತೀಯ ಸಂಸ್ಥೆಗಳು ಒಟ್ಟು ₹987ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದರೆ, ಸ್ಥಳೀಯ ವಿತ್ತೀಯ ಸಂಸ್ಥೆಗಳು ₹1,392 ಕೋಟಿ ಮೌಲ್ಯದ ಷೇರು ಖರೀದಿಸಿವೆ. ಪೇಟೆಯ ಬಂಡವಾಳೀಕರಣ ಮೌಲ್ಯ ₹125.68ಲಕ್ಷ ಕೋಟಿಯಲ್ಲಿತ್ತು.

ಬೋನಸ್ ಷೇರು: ಹಿಂದುಸ್ತಾನ್ ಕಾಂಪೋಸಿಟ್ಸ್ 1:2 ರ ಅನುಪಾತದ ಬೋನಸ್ ಷೇರು ವಿತರಣೆಗೆ 26ನೇ ಮೇ ನಿಗದಿತ ದಿನವಾಗಿದೆ.
ಮಹೀಂದ್ರಾ ಹಾಲಿಡೇಸ್ ಅಂಡ್ ರಿಸಾರ್ಟ್ಸ್ ಇಂಡಿಯಾ 1:2 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.

ಮುಂಜಾಲ್ ಆಟೋ ಇಂಡಸ್ಟ್ರೀಸ್ 22ರಂದು, ಇಗಾರ್ಷಿ ಮೋಟಾರ್ಸ್ ಇಂಡಿಯಾ 27 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.
‌ಮುಖಬೆಲೆ ಸೀಳಿಕೆ: ಹಿಂದುಸ್ತಾನ್ ಕಾಂಪೋಸಿಟ್ಸ್ ಕಂಪೆನಿಯ ಷೇರಿನ ಮುಖಬೆಲೆಯನ್ನು ₹10 ರಿಂದ ₹5ಕ್ಕೆ ಸೀಳಲು  ಮೇ26 ನಿಗದಿತ ದಿನವಾಗಿದೆ.
ಡೆಕ್ಕನ್ ಸಿಮೆಂಟ್ಸ್ ಕಂಪೆನಿ  ಷೇರಿನ ಮುಖಬೆಲೆಯನ್ನು ₹10 ರಿಂದ ₹5 ಕ್ಕೆ ಸೀಳಲಿದೆ. ಸಟ್ಲೆಜ್ ಟೆಕ್ಸಟೈಲ್ಸ್ ಕಂಪೆನಿಯ ಷೇರಿನ ಮುಖಬೆಲೆಯನ್ನು ₹10 ರಿಂದ ₹1 ಕ್ಕೆ ಸೀಳಲಿದೆ. ನೆಸ್ಕೊ ಲಿ. 29ರಂದು ಮುಖಬೆಲೆ ಪರಿಶೀಲಿಸಲಿದೆ.

ಸಿಇಎಸ್‌ಸಿ ಲಿಮಿಟೆಡ್‌ನ ಬೇರ್ಪಡಿಸುವ ಯೋಜನೆ: ಕೋಲ್ಕತ್ತಾದ ಈ ಕಂಪೆನಿಯು ತನ್ನ ವಿವಿಧ ಚಟುವಟಿಕೆಗಳನ್ನು ಬೇರ್ಪಡಿಸಿ ಷೇರುದಾರರಿಗೆ ಹೊಸ ಕಂಪೆನಿಗಳ ಷೇರುಗಳನ್ನು ನೀಡಲು ನಿರ್ಧರಿಸಿದೆ. ಅದರಂತೆ ಇಸಿಇಎಸ್‌ಸಿ ಲಿಮಿಟೆಡ್ ಕಂಪೆನಿಯ ಹತ್ತು ಷೇರುಗಳನ್ನು ಹೊಂದಿರುವ ಷೇರುದಾರರಿಗೆ ಐದು ವಿದ್ಯುತ್‌ ಉತ್ಪಾದಿಸುವ ಕಂಪೆನಿಯ ಷೇರು, ಐದು ಹಂಚಿಕೆದಾರ ಕಂಪೆನಿಯ  ಷೇರು,  ಮೂರು ರಿಟೇಲ್ ಕಂಪೆನಿಯ  ಷೇರು ಹಾಗೂ ಉಳಿದ ಚಟುವಟಿಕೆಯ ಎರಡು ಷೇರುಗಳನ್ನು ಬೇರ್ಪಡಿಸುವ ಪ್ರಕ್ರಿಯೆಯಿಂದ ಲಭ್ಯವಾಗುವುದು. ಈ ಬೇರ್ಪಡಿಸುವ ಕ್ರಿಯೆಯ ಜೊತೆಗೆ ಕಂಪೆನಿಯ ಷೇರಿನ ಮುಖಬೆಲೆಯನ್ನು ₹10 ರಿಂದ ₹5ಕ್ಕೆ ಇಳಿಸಿ ನಂತರ ಎರಡು ಷೇರುಗಳನ್ನು ಕ್ರೋಡೀಕರಿಸಿ ಷೇರಿನ ಮುಖಬೆಲೆಯನ್ನು  ₹10 ಕ್ಕೆ  ಬದಲಾಯಿಸುವ ಕ್ರಮವಾಗಿ, ಮೂಲ ಷೇರುಗಳ ಸಂಖ್ಯೆ ಅರ್ಧಕ್ಕೆ ಇಳಿಯುವುದು.

ಕಂಪೆನಿಗಳ ಲಾಭಾಂಶ ವಿತರಣೆ
ಹೆಚ್ಚು ಲಾಭಾಂಶದ ಕಂಪೆನಿಗಳು: ಬಜಾಜ್ ಆಟೊ ಪ್ರತಿ ಷೇರಿಗೆ ₹55, ಅಬ್ಬಾಟ್  ₹40, ಗ್ಲಾಕ್ಸೊ ಸ್ಮಿಥ್ ಕ್ಲೈನ್ ಫಾರ್ಮಾ ₹ 30,ಚೆನ್ನೈ ಪೆಟ್ರೋಲಿಯಂ ₹ 21, ಶ್ರೀ ಸಿಮೆಂಟ್ ₹ 24, ಮಹಾರಾಷ್ಟ್ರ ಸ್ಕೂಟರ್ಸ್ ₹ 30, ವೋಲ್ ಟ್ಯಾಮ್ಪ್ ಟ್ರಾನ್ಸ್ ಫಾರ್ಮರ್  ₹15,  ಅಕ್ ಜೋ ನೋಬಲ್  ₹22,  ಬಜಾಜ್ ಹೋಲ್ಡಿಂಗ್ಸ್  ₹32.50, ಸಟ್ಲೆಜ್ ಟೆಕ್ಸ್ ಟೈಲ್ಸ್  ₹13.

ಪ್ರತಿ ಷೇರಿಗೆ ₹10 ರ ಲಾಭಾಂಶ ವಿತರಿಸಿದ ಕಂಪೆನಿಗಳು: ಕ್ರೆಡಿಟ್ ಅನಾಲಿಸಿಸ್ ಆ್ಯಂಡ್ ರಿಸರ್ಚ್ ಲಿಮಿಟೆಡ್‌, ಕಾಸ್ಮೋ ಫಿಲಂಸ್, ದ್ವಾರಿಕೇಶ್ ಶುಗರ್ಸ್, ಹಿಂದುಸ್ತಾನ್ ಯುನಿಲಿವರ್, ಇಂಡಿಯನ್ ಮೆಟಲ್ಸ್ ಅಂಡ್ ಫೆರೋ ಅಲಾಯ್ಸ್, ಟಾಟಾ ಸ್ಟೀಲ್, ಯು ಎಫ್ ಓ ಮೂವೀಸ್

ಪ್ರತಿ ಷೇರಿಗೆ ₹5 ಕ್ಕೂ ಹೆಚ್ಚಿನ ಲಾಭಾಂಶ ವಿತರಿಸಿದ ಕಂಪೆನಿಗಳು: ಅಲ್ಕೈಲ್ ಅಮೈನ್ಸ್ ₹5, ಮಹೀಂದ್ರ  ಹಾಲಿಡೇಸ್ ₹5, ಎಂಕೋ ಎಲಿಕಾನ್ ₹5, ವರ್ಧಮಾನ್ ಹೋಲ್ಡಿಂಗ್ಸ್  ₹5, ಗ್ರಾಸಿಮ್ ₹5.5೦ ಎಂಆರ್‌ಪಿಎಲ್  ₹6, ಜ್ಯೋತಿ ಲ್ಯಾಬ್  ₹6, ಡೆಕ್ಕನ್ ಸಿಮೆಂಟ್ಸ್ ₹6, ಟಿ ಸಿ ಎಲ್ ಪ್ಯಾಕೇಜಿಂಗ್ ₹6.25,  ವಿಂದ್ಯಾ ಟೆಲಿ ಲೈಕೆನ್ಸ್ ₹7, ಹೋಂಡಾ ಸಿಎಲ್  ₹7.50, ಅಮೃತ್ ಕಾರ್ಪ್  ₹7.50,  ಆಟೋ ಆಕ್ಸಲ್ಸ್ ₹8, ಕಮ್ಮಿನ್ಸ್ ₹9, ಪಿಡಿಲೈಟ್ ₹4.72, ಲುಮ್ಯಾಕ್ಸ್ ಆಟೊ ₹4.70, ಸ್ಟ್ರೈಡ್ಸ್ ಶಾಸೂನ್  ₹4.50, ಎಚ್ಎಸ್ಐಎಲ್   ₹4, ಗೆಟ್ ವೇ ಡಿಸ್ಟ್ರಿಪಾರ್ಕ್ಸ್  ₹4, ರಾಣೆ ಮದ್ರಾಸ್  ₹4, ಬಜಾಜ್ ಫೈನಾನ್ಸ್  ₹3.6೦, ಬಾಟಾ ಇಂಡಿಯಾ ₹3.50, ಸಿಂಗರ್ ₹3.50, ಕಜಾರಿಯ ಸಿರಾಮಿಕ್ಸ್ ₹3, ವರ್ಲ್ ಫುಲ್ ₹3, ಪಾಂಡಿ ಆಕ್ಸೈಡ್ಸ್  ₹3,  ಎಡಿ ಸಿ ಇಂಡಿಯಾ ಕಮ್ಯುನಿಕೇಷನ್ ₹3,  ಗುಜರಾತ್ ಇಂಡಸ್ಟ್ರಿಯಲ್ ಪವರ್ ₹2.70, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ₹2.60, ಕೆಲ್ಟ್ರಾನ್ ₹2.50,  ರಾಣೆ ಎಂಜಿನ್ ವಾಲ್ವ್ಸ್ ₹2.50,  ಶೋಭಾ ₹2.50, ಪಿಐ ಇಂಡಸ್ಟ್ರೀಸ್ ₹2.50, ಜೆ.ಕೆ. ಟೈರ್ ₹2.50, ಇಂಡಿಯನ್ ಹುಮ್ ಪೈಪ್ ₹2.40,         ಗ್ರಾಫೈಟ್ ಇಂಡಿಯಾ ₹2.

ವಾರದ ವಿಶೇಷ
ನೆಪಮಾತ್ರದ ಫಲಿತಾಂಶ

ಇತ್ತೀಚಿನ ದಿನಗಳಲ್ಲಿ ಷೇರುಗಳ ಏರಿಳಿತಕ್ಕೆ ಫಲಿತಾಂಶ ಕೇವಲ ನೆಪಮಾತ್ರವಾಗಿದೆ. ಒಂದು ಕಂಪೆನಿಯ ಫಲಿತಾಂಶ ಪ್ರಕಟವಾಗಲಿದೆ ಎಂದು ಅದರ ಸಾಧನೆಯು ಯಾವರೀತಿ ಇರುತ್ತದೆಂದು ಮೊದಲೇ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ವಿಶ್ಲೇಷಕರ ಮೂಲಕ ಪ್ರಚಾರವಾಗಿರುತ್ತದೆ. ಆದರೆ ಫಲಿತಾಂಶವು ನಿರೀಕ್ಷಿತ ಮಟ್ಟದಲ್ಲಿದ್ದರೂ ಅಥವಾ ಅದಕ್ಕೂ ಉತ್ತಮವಾಗಿದ್ದರೂ, ಪ್ರಕಟಣೆಯ ನಂತರ ಷೇರಿನ ಬೆಲೆಗಳು ಕುಸಿಯುವುದನ್ನು ಕಾಣುತ್ತಿದ್ದೇವೆ. 

ಉದಾಹರಣೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಷೇರಿನ ಬೆಲೆಯು ಫಲಿತಾಂಶ ಪ್ರಕಟಣೆಗೆ ಮುಂಚೆ ₹185ರ ಸಮೀಪಕ್ಕೆ ಏರಿಕೆ ಕಂಡಿತ್ತು.  ಫಲಿತಾಂಶ ಪ್ರಕಟಣೆಯ ದಿನ ಸ್ವಲ್ಪ ರಭಸದ ವಹಿವಾಟು ಪ್ರದರ್ಶಿಸಿ ನಂತರದ ದಿನಗಳಲ್ಲಿ ಸತತವಾಗಿ ಇಳಿಕೆ ಕಂಡು ₹155ರ ಸಮೀಪ ಕೊನೆಗೊಂಡಿದೆ.  ಅಂದರೆ  ಈ ಷೇರಿನ ಬೆಲೆಯು ಒಂದು ತಿಂಗಳ ಹಿಂದೆ ಇದ್ದಂತಹ ಮಟ್ಟಕ್ಕೆ ಕುಸಿದಿದೆ.  ₹152 ರ ಹಂತದಿಂದ  ₹185 ರವರೆಗೂ ಏರಿಕೆ ಕಂಡು ಅಲ್ಲಿಂದ ₹155 ಕ್ಕೆ ಮರಳಿದೆ. ಒಂದೇ ತಿಂಗಳಲ್ಲಿ ಈ ರೀತಿಯ ಲಾಭ ಗಳಿಕೆ ಅವಕಾಶ ಯಾವ ವ್ಯವಹಾರದಲ್ಲೂ ಇರಲಾರದು. 

₹155 ರ ಸಮೀಪ ಕೊಂಡವರು ಫಲಿತಾಂಶಕ್ಕೆ ಮುನ್ನ ಮಾರಾಟ ಮಾಡಿ, ನಂತರದ ದಿನಗಳಲ್ಲಿ ಮರು ಖರೀದಿ ಮಾಡುವುದರಿಂದ ಪ್ರತಿ ಷೇರಿಗೆ ₹25ರಿಂದ ₹30 ನ್ನು ಅಪಾಯವಿಲ್ಲದೆ ಪೇಟೆ ಒದಗಿಸಿಕೊಟ್ಟಿದೆ.    ಇದೇ ರೀತಿಯಾಗಿ ಫಲಿತಾಂಶ ಉತ್ತಮವಾಗಿರಲಾರದೆಂಬ ಮತ್ತು ಎನ್‌ಪಿಎ ಮಟ್ಟ ಹೆಚ್ಚಿರುತ್ತದೆಂಬ ಭಾವನೆಯಿಂದ ಐಸಿಐಸಿಐ ಬ್ಯಾಂಕ್ ಷೇರಿನ ಬೆಲೆಯನ್ನು ₹270 ರ ಹಂತದಲ್ಲೇ ಫಲಿತಾಂಶ ಪೂರ್ವದಲ್ಲಿ  ಇರಿಸಲಾಗಿತ್ತು.  ಆದರೆ ಫಲಿತಾಂಶದ ನಂತರ ಷೇರಿನ ಬೆಲೆಯು ₹312 ರವರೆಗೂ ಕೊಂಡೊಯ್ಯಲಾಗಿದೆ.  ಇದಕ್ಕೆ ಮೌಲ್ಯ ಆಧಾರಿತ ಖರೀದಿಯೇ ಕಾರಣವಾಗಿದೆ. ಒಂದು ವರ್ಷದಲ್ಲಿ ಹೆಚ್ಚಿನ ಏರಿಕೆ ದಾಖಲಿಸಿದ  ಇಂಡಸ್ ಇಂಡ್ ಬ್ಯಾಂಕ್, ಎಸ್ ಬ್ಯಾಂಕ್ ವೈವಿಧ್ಯಮ ಕಾರಣಗಳಿಂದಾಗಿ ಕುಸಿತ ಕಂಡಿವೆ.  ಅದೇ ರೀತಿ ಟಾಟಾ ಸ್ಟಿಲ್ ಕಂಪೆನಿಯ ಷೇರಿನ ಬೆಲೆಯು ₹435 ರಿಂದ ₹460  ರವರೆಗೂ ಫಲಿತಾಂಶ ಪ್ರಕಟಣೆಗೆ ಮುಂಚಿನಿಂದ ಏರಿಕೆಯತ್ತ ಸಾಗಿತ್ತು. 

ಫಲಿತಾಂಶ  ಪ್ರಕಟಣೆಯ ನಂತರ ಷೇರಿನ ಬೆಲೆಯನ್ನು ₹498 ರವರೆಗೂ ಏರಿಕೆ ಪ್ರದರ್ಶಿಸಿ ನಂತರ ಮಾರಾಟದ ಒತ್ತಡಕ್ಕೊಳಗಾಗಿ ₹480 ರಸಮಿಪಕ್ಕೆ ಇಳಿಯಿತು. ಅಂದರೆ ಕಂಪೆನಿಯ ಸಾಧನೆಗೂ ಪೇಟೆಯ ದರಕ್ಕೂ ಈಗಿನ ದಿನಗಳಲ್ಲಿ ಯಾವುದೇ ಸಂಬಂಧವಿಲ್ಲ. ಆದರೆ ಕಂಪೆನಿಯ ಗುಣಮಟ್ಟ ಮತ್ತು ಸಾಧನೆಯೊಂದಿಗೆ ಪೇಟೆಯ ದರ ತಾಳೆ ಹಾಕಿ ಹೂಡಿಕೆಯ ನಿರ್ಧಾರ ತೆಗೆದುಕೊಂಡಲ್ಲಿ ಈಗಲೂ ಪೇಟೆಯಲ್ಲಿ ಲಾಭ ಗಳಿಸಲು ಸಾಕಷ್ಟು ಅವಕಾಶಗಳಿವೆ. 

ಶುಕ್ರವಾರ ಫಲಿತಾಂಶ ಪ್ರಕಟಿಸಲಿದೆ ಎಂಬ ಕಾರ್ಯಸೂಚಿಯು ಗೊತ್ತಿದ್ದರೂ ಫಾರ್ಮಾ ವಲಯದ ಗ್ಲ್ಯಾಕ್ಸೋ ಸ್ಮಿತ್ ಕ್ಲೈನ್ ಫಾರ್ಮಾ ಷೇರಿನ ಬೆಲೆಯು ಮಧ್ಯಾಹ್ನ  3ಗಂಟೆಯವರೆಗೂ  ₹2,406ರ ಸಮೀಪ, ವಹಿವಾಟಾಗುತ್ತಿತ್ತು.  ತದನಂತರ ಫಲಿತಾಂಶ ಪ್ರಕಟಿಸುತ್ತಿದ್ದಂತೆ ಷೇರಿನ ಬೆಲೆಯು ₹2,476 ರವರೆಗೂ ಚಿಮ್ಮಿತು. ಈ ಕಂಪೆನಿಯು ಪ್ರತಿ ಷೇರಿಗೆ ₹30 ರಂತೆ ಲಾಭಾಂಶ ಪ್ರಕಟಿಸಿದೆ. ಇದು ಹಿಂದಿನ ವರ್ಷದ ₹50 ಕ್ಕಿಂತ ಕಡಿಮೆಯಾದರೂ, ಪ್ರಸಕ್ತ ತ್ರೈಮಾಸಿಕದ ಫಲಿತಾಂಶ ಉತ್ತಮವಾಗಿರುವ ಕಾರಣ ಈ ಏರಿಕೆ ಕಂಡು ಬಂದಿದೆ. ಪೇಟೆಯಲ್ಲಿ ಬೆಲೆ ಏರಿಕೆ ಕಾಣಲು ಪ್ರತ್ಯಕ್ಷವಾಗಿ, ಕೆಲವು ಪರೋಕ್ಷವಾಗಿ ಪರಿಣಾಮ ಬೀರುವ ಕಾರಣಗಳಿರುತ್ತವೆ.  ಒಂದೇ  ಕಾರಣ ಆಧರಿಸಿ ನಿರ್ಧರಿಸುವುದು ಸರಿಯಲ್ಲ.

ಮೊ: 9886313380 (ಸಂಜೆ 4.30ರ ನಂತರ)

Comments
ಈ ವಿಭಾಗದಿಂದ ಇನ್ನಷ್ಟು
ಒತ್ತಡದಲ್ಲಿ ಷೇರುಪೇಟೆ ವಹಿವಾಟು

ಷೇರು ಸಮಾಚಾರ
ಒತ್ತಡದಲ್ಲಿ ಷೇರುಪೇಟೆ ವಹಿವಾಟು

12 Mar, 2018
ಹೂಡಿಕೆದಾರರಲ್ಲಿ ಮೂಡಿದ ಗೊಂದಲ

ಷೇರು ಸಮಾಚಾರ
ಹೂಡಿಕೆದಾರರಲ್ಲಿ ಮೂಡಿದ ಗೊಂದಲ

5 Mar, 2018
ಎಣಿಕೆಗೆ ನಿಲುಕದ ಪೇಟೆಯ ಚಲನೆ

ಷೇರು ಸಮಾಚಾರ
ಎಣಿಕೆಗೆ ನಿಲುಕದ ಪೇಟೆಯ ಚಲನೆ

26 Feb, 2018

ಷೇರು ಸಮಾಚಾರ
ಲಾಭ ನಗದೀಕರಣಕ್ಕೆ ದೊರೆತ ಅವಕಾಶ

ಷೇರುಪೇಟೆಯಲ್ಲಿನ ಕೆಲವು ಬೆಳವಣಿಗೆಗಳು ಕೇವಲ ಭಾಷಣ, ವಿಶ್ಲೇಷಣೆಗೆ ಮಾತ್ರ ಸೀಮಿತವಾಗಿದ್ದು ಅವನ್ನು ಕೈಗೆ ಎಟುಕಿಸಿಕೊಳ್ಳಲು ಸಾಧ್ಯವಿಲ್ಲದಂತಿರುತ್ತವೆ.

18 Feb, 2018
ಸಣ್ಣ ಹೂಡಿಕೆದಾರರಿಗೆ ಉತ್ತಮ ಅವಕಾಶ

ಷೇರು ಸಮಾಚಾರ
ಸಣ್ಣ ಹೂಡಿಕೆದಾರರಿಗೆ ಉತ್ತಮ ಅವಕಾಶ

12 Feb, 2018