ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿ ಹುದ್ದೆ ಭರ್ತಿ ಮಾಡಿ: ತರಾಟೆ

ಆಸ್ಪತ್ರೆಗೆ ಆಯುಕ್ತ ಡಾ.ಸುಬೋಧ ಯಾದವ್ ಭೇಟಿ, ಪರಿಶೀಲನೆ
Last Updated 22 ಮೇ 2017, 4:58 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ವಿಫಲವಾಗಿರುವ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರ ಕ್ರಮವನ್ನು ಖಂಡಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಾ.ಸುಬೋಧ ಯಾದವ್ ತರಾಟೆಗೆ ತೆಗೆದುಕೊಂಡರು.

ನಗರದ ಎಸ್‌ಎನ್‌ಆರ್‌ ಆಸ್ಪತ್ರೆಗೆ ಭಾನುವಾರ ಧಿಡೀರ್ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ‘ಆಸ್ಪತ್ರೆಯಲ್ಲಿ ಹಿರಿಯ ವೈದ್ಯರೇ ಇಲ್ಲದ ಮೇಲೆ ಯಾವ ರೀತಿ ಕೆಲಸ ಮಾಡುತ್ತಿದ್ದೀರಾ. ಸ್ಪೆಷಲಿಸ್ಟ್‌ (ತಜ್ಞ ವೈದ್ಯರು) ಸಿಗದಿದ್ದರೆ ಹೊರಗುತ್ತಿಗೆ ಆಧಾರ ಮೇಲೆ ವೈದ್ಯರನ್ನು ನೇಮಕ ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು. ಯಾಕೆ ನೇಮಕ ಮಾಡಿಕೊಂಡಿಲ್ಲ’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾ ಶಸ್ತ್ರಚಿಕಿತ್ಸಕ ಶಿವಕುಮಾರ್, ‘ತಜ್ಞ ವೈದ್ಯರ 8 ಹುದ್ದೆಗಳಲ್ಲಿ ಕೇವಲ ಮೂವರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. 65 ವಿವಿಧ ರೀತಿಯ ಶುಶ್ರೂಷಕಿ ಹುದ್ದೆಗಳಿದ್ದು, ಆ ಪೈಕಿ 30 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 33 ಹುದ್ದೆಗಳು ಖಾಲಿ ಇವೆ. ಪ್ರಯೋಗಾಲಯದಲ್ಲಿ ಕೇವಲ ಒಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಇನ್ನು 4 ಮಂದಿ ಅಗತ್ಯವಿದೆ’ ಎಂದರು.

‘ನೀವೆಲ್ಲ ಹಳೇ ಸುತ್ತೋಲೆಗಳನ್ನೇ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೀರಾ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ’ ಎಂದು ಯಾದವ್ ಹೇಳಿದರು.

ಏನು ಸಮಸ್ಯೆ..?: ‘ಯಾವುದೇ ಆಸ್ಪತ್ರೆಯಲ್ಲಿ ಪ್ರಮುಖವಾಗಿ ರೋಗಲಕ್ಷಣ ಶಾಸ್ತ್ರ ತಜ್ಞ, ಎಲುಬು ಮತ್ತು ಮೂಳೆ ತಜ್ಞ, ಮಕ್ಕಳ ತಜ್ಞರು ವೈದ್ಯರು ಇದ್ದರೆ ಉತ್ತಮ ಆರೋಗ್ಯ ಸೇವೆ ಸಲ್ಲಿಸಲು ಸಾಧ್ಯ. ಅಗತ್ಯವಿರುವ ಹುದ್ದೆಗಳೇ ಬೇಕಾದಷ್ಟು ಖಾಲಿ ಇವೆ. ಎಂಡಿ, ಎಂಎಸ್ ಮಾಡಿರುವ ವೈದ್ಯರು ದೊರೆಯುವ ತನಕ ಎಂಬಿಬಿಎಸ್ ವೈದ್ಯರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವಂತೆ ಸ್ಪಷ್ಟವಾಗಿ ತಿಳಿಸಲಾಗಿದೆ. ನಗರದಲ್ಲಿ ವೈದ್ಯಕೀಯ ಕಾಲೇಜು ಇದ್ದರು ಯಾರು ಬರುತ್ತಿಲ್ಲವೆ. ವೈದ್ಯರನ್ನು ನೇಮಕ ಮಾಡಿಕೊಳ್ಳಲು ನಿಮಗೇನು ಸಮಸ್ಯೆ’ ಎಂದು ಪ್ರಶ್ನಿಸಿದರು.

‘ಶೀಘ್ರದಲ್ಲೇ ಟೆಂಡರ್ ಕರೆದು ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುತ್ತೇವೆ’ ಎಂದು ಆರೋಗ್ಯಾಧಿಕಾರಿ ಡಾ.ವಿಜಿಕುಮಾರ್ ತಿಳಿಸಿದರು.

ಇದಕ್ಕೆ ಅಸಮಾಧಾನಗೊಂಡ ಆಯುಕ್ತರು, ‘ಐದು ವರ್ಷಗಳ ಹಿಂದಿನ ಆದೇಶ ಪತ್ರವನ್ನು ಮುಂದಿಟ್ಟುಕೊಂಡು ಮಾತನಾಡಬೇಡಿ. ಹಿರಿಯ ಅಧಿಕಾರಿಗಳು ಲೋಪ ಎಸಗಿದರೆ ಕಚೇರಿಯಲ್ಲಿನ ಗುಮಾಸ್ತನ ಮಾತನ್ನು ಕೇಳಬೇಕಾಗುತ್ತದೆ. ಅಂತಹ ದುರಂತಕ್ಕೆ ಹೋಗಬೇಡಿ. ಎಲ್ಲ ವಿಚಾರಗಳನ್ನು ಬಹಿರಂಗವಾಗಿ ಮಾತನಾಡಲು ಸಾಧ್ಯವಿಲ್ಲ. ಸಮಸ್ಯೆ ಎದುರಾಗುವ ಮೊದಲೇ ಪರಿಹಾರ ಕಂಡುಕೊಳ್ಳಲು ಮುಂದಾಗಿ’ ಎಂದರು.

ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಧಿಕಾರಿಗಳ ಸೇವೆ ತೃಪ್ತಿ ತಂದಿಲ್ಲ. ಇಲಾಖೆಯಿಂದ ನೀಡಿರುವ ಕೆಲವೇ ಸೂಚನೆಗಳನ್ನು ಮಾತ್ರ ಅನುಸರಿಸಿದ್ದಾರೆ. ಉಳಿದ ಸೂಚನೆಗಳನ್ನು ಅನುಸರಿಸುವಲ್ಲಿ ಸಿಬ್ಬಂದಿಯ ಕೊರತೆ ನೆಪ ಹೇಳಿ ಅಧಿಕಾರಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಡಯಾಲಿಸಿಸ್‌ ಕೇಂದ್ರ ಸ್ಥಾಪನೆ: ‘ರಾಜ್ಯದ ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ 10 ಡಯಾಲಿಸಿಸ್‌ ಯಂತ್ರಗಳನ್ನು ಸ್ಥಾಪಿಸಲು ಖಾಸಗಿ ಏಜೆನ್ಸಿಗೆ ಗುತ್ತಿಗೆ ನೀಡಲಾಗಿದೆ. ಅವರಿಗೆ ಇಲಾಖೆಯಿಂದ ಕೊಠಡಿ, ನೀರು, ವಿದ್ಯುತ್ ಕಲ್ಪಿಸಿಕೊಟ್ಟರೆ, ಕೇಂದ್ರಕ್ಕೆ ಬೇಕಾಗಿರುವ ಸಿಬ್ಬಂದಿಯನ್ನು ಅವರೇ ನೇಮಕ ಮಾಡಿಕೊಳ್ಳುತ್ತಾರೆ’ ಎಂದರು.

‘ಐಸಿಯು, ಸಿಟಿ ಸ್ಕ್ಯಾನ್, ಎಂಆರ್‌ಐ ಘಕಟಗಳನ್ನು ಸ್ಥಾಪಿಸಲು ಚಿಂತನೆ ನಡೆಸಲಾಗಿದ್ದು, ಅದನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಲಾಗುವುದು. ರಾಜ್ಯದಲ್ಲಿ 240 ಸಂಜೀವಿನಿ ಔಷಧ ಕೇಂದ್ರಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿದ್ದು, ಈಗಾಗಲೇ 40ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಜಾರಿಗೊಳಿಸಲಾಗಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಒಟ್ಟು 1,400 ವೈದ್ಯರ ಹುದ್ದೆಗಳು ಖಾಲಿ ಇದ್ದು, ಕೆಪಿಎಸ್ಸಿ ನಿಯಮಗಳ ಪ್ರಕಾರ ನೇಮಕ ಮಾಡಿಕೊಳ್ಳಲು ಕಾಲಾವಕಾಶ ಬೇಕಾಗುತ್ತದೆ. ಅಲ್ಲಿಯತನಕ ಹೊರಗುತ್ತಿಗೆ ಆಧಾರದ ಮೇಲೆ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.

ಸರ್ವೇಕ್ಷಣಾಧಿಕಾರಿ ಡಾ.ಎಸ್.ವಿಜಯಲಕ್ಷ್ಮಿ, ಡಿಪಿಎಂಒ ಡಾ.ಎಸ್.ಜಿ.ನಾರಾಯಣಸ್ವಾಮಿ, ವೈದ್ಯರಾದ ಡಾ.ಸುಧಾಮಣಿ, ಡಾ.ನಂದೀಶ್, ಡಾ.ಬಾಲಸುಂದರ್, ಡಾ.ಜಗದೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT