ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯ ಶಿಕ್ಷಕರಿಗೆ ನೋಟಿಸ್ ನೀಡಲು ಶಾಸಕರ ಸೂಚನೆ

ಎಸ್ಸೆಸ್ಸೆಲ್ಸಿಯಲ್ಲಿ ಕಡಿಮೆ ಫಲಿತಾಂಶ
Last Updated 22 ಮೇ 2017, 4:59 IST
ಅಕ್ಷರ ಗಾತ್ರ

ತುಮಕೂರು: ಎಸ್ಸೆಸ್ಸೆಲ್ಸಿಯಲ್ಲಿ ಶೇ 90ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಯ ಮುಖ್ಯ ಶಿಕ್ಷಕರಿಗೆ ನೋಟಿಸ್ ನೀಡಬೇಕು  ಎಂದು ಶಾಸಕ ಬಿ.ಸುರೇಶಗೌಡ ಸೂಚಿಸಿದರು. ತುಮಕೂರು ತಾಲ್ಲೂಕು ಪಂಚಾಯಿತಿಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹತ್ತನೇ ತರಗತಿಯಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿಶೇಷ ತರಗತಿ ನಡೆಸಬೇಕು. ಅನುತ್ತೀರ್ಣರಾದ ವಿದ್ಯಾರ್ಥಿಗಳು ಮನವೊಲಿಸಿ ಪರೀಕ್ಷೆ ಕಟ್ಟಿಸಬೇಕು  ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಸವರಾಜು ಅವರಿಗೆ ಸೂಚಿಸಿದರು.

‘ ಗ್ರಾಮಾಂತರ ಕ್ಷೇತ್ರದಲ್ಲಿ 17,523 ಕೃಷಿ ಕುಟುಂಬಗಳು, 11,150 ತೋಟಗಾರಿಕಾ ಕೃಷಿ ಅವಲಂಬಿತ ಕುಂಟುಂಬಗಳು ಇವೆ. ಇವರೆಲ್ಲರಿಗೂ ಸರ್ಕಾರ ನೀಡುವ  ಬೆಳೆ ಪರಿಹಾರ ಧನ  ಸಮರ್ಪಕವಾಗಿ ವಿತರಣೆ ಆಗಬೇಕು’ ಅಧಿಕಾರಿಗಳಿಗೆ ಸೂಚಿಸಿದರು.

ನಾಗವಲ್ಲಿ ವೃತ್ತದ 600 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಅವಲಂಬಿತ ಕುಟುಂಬಗಳಿಗೆ ಬೆಳೆ ಪರಿಹಾರ ಧನ  ನೀಡಲು  ರೈತರ ಪಟ್ಟಿ  ಒದಗಿಸದೇ  ಕರ್ತವ್ಯ ಲೋಪವೆಸಗಿರುವ ನಾಗವಲ್ಲಿ ವೃತ್ತದ ಗ್ರಾಮ ಲೆಕ್ಕಿಗರ ಅಮಾನತು ಮಾಡಲು ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್‌ ಅವರಿಗೆ ದೂರವಾಣಿ ಮೂಲಕ ತಿಳಿಸಿದರು.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಬಗ್ಗೆ ರೈತರಲ್ಲಿ ಹೆಚ್ಚು ಅರಿವು ಮೂಡಿಸಬೇಕು. ಈ ವರ್ಷ ಬೆಳೆ ನಷ್ಟ ಪರಿಹಾರವಾಗಿ ₹ 78 ಲಕ್ಷ  ಬೆಳೆ ವಿಮೆ ಬಂದಿದೆ ಎಂದು ತಿಳಿಸಿದರು.

‘ಕಳೆದ ಎರಡು ಅವಧಿಗಳಿಂದ ಸುಮಾರು 20 ರಿಂದ 25 ಲಕ್ಷ  ಸಸಿಗಳನ್ನು ಗ್ರಾಮಾಂತರ ಕ್ಷೇತ್ರದ ಶಾಲಾ ಆವರಣ, ಗುಂಡು ತೋಪು, ಅರಣ್ಯಪ್ರದೇಶ, ಗೋಮಾಳ, ಬಡಾವಣೆಗಳು, ದೇವಸ್ಥಾನದ ಆವರಣ, ಕೆರೆ ಅಂಗಳದಲ್ಲಿ  ಹಾಕಿಸಲಾಗಿದೆ. ಇತ್ತೀಚಿಗೆ ಇಸ್ರೋ ನಡೆಸಿದ ಹಸಿರು ಹೊದಿಕೆ ಸಮೀಕ್ಷೆಯಲ್ಲಿ ಶೇ13 ಇದ್ದ ಹಸಿರು ವಲಯ ಈಗ ಶೇಕಡ 18 ಆಗಿದೆ.  ಶೇ 5 ರಷ್ಟು ಪ್ರಮಾಣ ಹೆಚ್ಚಾಗಿದೆ’ ಎಂದು ತಿಳಿಸಿದರು.

‘ಶೇ 33ರಷ್ಟು ಹಸಿರು ಹೊದಿಕೆ ತರಲು ರೈತರು, ಅರಣ್ಯ ಇಲಾಖೆಯವರು ಹೆಚ್ಚು  ಗಿಡಗಳನ್ನು ಹಾಕಬೇಕು. ಜನತೆಯಲ್ಲಿ ಅರಿವು ಮೂಡಿಸಬೇಕು’ ಎಂದು ಶಾಸಕರು  ಸೂಚಿಸಿದರು.

‘ಸರ್ಕಾರದ ಯೋಜನೆಗಳಲ್ಲಿ ದಲಿತರಿಗೆ, ಹಿಂದುಳಿದವರಿಗೆ ಪರಿಶಿಷ್ಟ ವರ್ಗದವರಿಗೆ ಸಾಲ ಸೌಲಭ್ಯ ನೀಡಲು ಬ್ಯಾಂಕ್ ಅಧಿಕಾರಿಗಳು ಸತಾಯಿಸುತ್ತಿದ್ದಾರೆ.  ದಲಿತರಿಗೆ ಸಾಲ ನೀಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಗ್ರಾಮಾಂತರ ಕ್ಷೇತ್ರದ 280 ಅಂಗನವಾಡಿಗಳ ಪೈಕಿ 60 ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಇಲ್ಲ. ಈ ಅಂಗನವಾಡಿಗಳಿಗೆ ಕಟ್ಟಡ ನಿರ್ಮಾಣಕ್ಕಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಕ್ರಿಯಾ ಯೋಜನೆ ರೂಪಿಸಬೇಕು’ ಎಂದು ಕಾರ್ಯನಿರ್ವಾಹಕ ಅಧಿಕಾರಿ ನಾಗಣ್ಣ ಅವರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT