ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಗಾಳಿಗೆ ಅಸ್ತವ್ಯಸ್ತಗೊಂಡ ಜನಜೀವನ

ಹತ್ತಾರು ಕಡೆ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳಿಗೆ, ಟ್ರ್ಯಾಕ್ಟರ್, ಎರಡು ಆಟೊ ಟಿಪ್ಪರ್‌ಗಳಿಗೆ ಹಾನಿ
Last Updated 22 ಮೇ 2017, 5:02 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಶನಿವಾರ ರಾತ್ರಿ ಕಾಣಿಸಿಕೊಂಡ ಬಿರುಗಾಳಿ ಸಹಿತ ಭಾರಿ ಮಳೆ ಸೃಷ್ಟಿಸಿದ ಅವಾಂತರ ನಾಗರಿಕರ ವಾರಂತ್ಯದ ಖುಷಿ ಕಳೆಯಿತು.

ನಗರದಲ್ಲಿಯೇ ಮೂರು ಕಡೆಗಳಲ್ಲಿ ಬೃಹತ್ ಮರಗಳು, ಐದಾರು ಕಡೆಗಳಲ್ಲಿ ತೆಂಗಿನ ಗಿಡಗಳು ಗಾಳಿಯ ಹೊಡೆತಕ್ಕೆ ನೆಲಕ್ಕೆ ಉರುಳಿವೆ. ಅನೇಕ ಕಡೆಗಳಲ್ಲಿ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ಕಂಬಗಳಿಗೆ ಹಾನಿಯಾಗಿ, ತಂತಿಗಳು ತುಂಡಾಗಿವೆ. ಇದರಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡು ಭಾನುವಾರದ ರಜೆಯ ಮೋಜಿಗೆ ‘ಕತ್ತಲು’ ಕವಿಯಿತು.

ಶನಿವಾರ ರಾತ್ರಿ ನಗರಸಭೆ ಆವರಣದಲ್ಲಿದ್ದ ಬೃಹತ್ ಅತ್ತಿ ಮರ ಉರುಳಿ ಬಿದ್ದ ಪರಿಣಾಮ ನಾಲ್ಕು ಟ್ರ್ಯಾಕ್ಟರ್, ಎರಡು ಆಟೊ ಟಿಪ್ಪರ್‌ಗಳಿಗೆ ಹಾನಿಗೊಂಡಿವೆ. ಸಿಎಸ್‌ಐ ರಸ್ತೆಯಲ್ಲಿ ಮರ ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಎಂ.ಜಿ.ರಸ್ತೆಯಲ್ಲಿ ಎಪಿಎಂಸಿ ಬಳಿ ಮರವೊಂದು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಸವಾರರು ಪರದಾಡಿದರು.

ವಾರ್ಡ್ ನಂ 9 ಮತ್ತು 16 ರಲ್ಲಿ ತೆಂಗಿನ ಮರಗಳು ಉರುಳಿ ಬಿದ್ದು ವಿದ್ಯುತ್ ಕಂಬಗಳು ಮತ್ತು ತಂತಿಗಳಿಗೆ ಹಾನಿಯಾಗಿದೆ. ನಿಮ್ಮಾಕಲಕುಂಟೆಯಲ್ಲಿ ಮರ ಬಿದ್ದು ಜಿ.ಕೆ.ವೆಂಕಟೇಶಪ್ಪ ಎಂಬುವರ ಮನೆ ಚಾವಣಿ ಹಾನಿಗೊಂಡಿದೆ. ನಕ್ಕಲಕುಂಟೆಯಲ್ಲಿ ನಾಲ್ಕು ಮನೆಗಳ ಶಿಟ್‌ಗಳು ಹಾರಿ ಹೋಗಿವೆ. ಅಗಲಗುರ್ಕಿ ಬಿಜಿಎಸ್‌ ಶಾಲೆ ಬಳಿ ಶೆಡ್‌ ಶೀಟ್‌ಗಳು ಮುರಿದಿವೆ. ಹಾನಿಗೊಂಡ ಮನೆಗಳಿಗೆ ಭಾನುವಾರ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದರು.

ಶನಿವಾರ ರಾತ್ರಿಯೇ ನಗರಸಭೆ, ಅರಣ್ಯ, ಬೆಸ್ಕಾಂ, ಪೊಲೀಸ್ ಇಲಾಖೆಯ ಸಿಬ್ಬಂದಿ ಬಿದ್ದಿರುವ ಮರಗಳನ್ನು ಬದಿಗೆ ಸರಿಸಿ ಸಂಚಾರಕ್ಕೆ   ಅನುವು ಮಾಡಿ ಕೊಟ್ಟರು. ಪುನಃ ಭಾನುವಾರ ಬೆಳಿಗ್ಗೆ ಯಿಂದಲೇ ನಗರಸಭೆ ಆಯುಕ್ತ ಉಮಾ ಕಾಂತ್ ನೇತೃತ್ವದಲ್ಲಿ ತೆರವು ಕಾರ್ಯಾ ಚರಣೆ ನಡೆಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ನಗರದ ವಿವಿಧೆಡೆ ಮುರಿದ ಕಂಬಗಳನ್ನು, ಹರಿದ ತಂತಿಗಳನ್ನು ಸರಿ ಪಡಿಸುವ ಕಾರ್ಯ ಭರದಿಂದ ಸಾಗಿತ್ತು.  ರಾತ್ರಿ 7.20ರ ವರೆಗೆ ವಿದ್ಯುತ್ ಪೂರೈಕೆ ಯಲ್ಲಿ ವ್ಯತ್ಯಯ ಉಂಟಾಗಿತ್ತು.

ತುರ್ತು ಸಹಾಯಕ್ಕೆ ಕರೆ ಮಾಡಿ
ಮಳೆ ಸಂದರ್ಭದಲ್ಲಿ ಮರ ಬಿದ್ದರೆ, ವಿದ್ಯುತ್ ಕಂಬಗಳಿಗೆ ಧಕ್ಕೆಯಾದರೆ, ಮನೆಗಳಿಗೆ ಹಾನಿಯಾದರೆ, ಸಂಚಾರಕ್ಕೆ ಅಡಚಣೆಯಾದರೆ, ಮನೆಗೆ ನೀರು ನುಗ್ಗಿದರೆ ನಾಗರಿಕರು ತುರ್ತು ಸಹಾಯಕ್ಕಾಗಿ ನಗರಸಭೆಯ ಆಯುಕ್ತ ಉಮಾಕಾಂತ್ ಅವರನ್ನು ಈ 94498 36737 ಸಂಖ್ಯೆಯ ಮೂಲಕ ಸಂಪರ್ಕಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಧರೆಗೆ ತಂಪೆರೆದ ಮಳೆ
ಚಿಂತಾಮಣಿ:
ನಗರ ಹಾಗೂ ತಾಲ್ಲೂಕಿನಾದ್ಯಂತ ಶನಿವಾರ ರಾತ್ರಿ ಮಳೆ ಸುರಿದಿದ್ದು ಜನರಿಗೆ ತಂಪೆರೆದಿದೆ.  ಕೆರೆ ಕುಂಟೆಗಳಿಗೆ ನೀರು ಹರಿಯದಿದ್ದರೂ ಮೇವಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿಯುತ್ತದೆ ಎನ್ನುವ ಆಸೆ ರೈತರಲ್ಲಿ ಇದೆ. ರೈತರು ಖುಷಿಯಾಗಿ ಮಾಗಿ ಉಳುಮೆಯಲ್ಲಿ ತೊಡಗಿದ್ದಾರೆ.

ಮಾಗಿ ಉಳುಮೆಯಿಂದ ಹೊಲಗಳಿದ್ದ ಕಸಕಡ್ಡಿ, ಎಲೆ ಸೊಪ್ಪು ಭೂಮಿಗೆ ಸೇರಿ ಫಲವತ್ತಾಗುತ್ತದೆ. ‘ಇಳಿಜಾರಿಗೆ ಅಡ್ಡಲಾಗಿ ಮಾಗಿ ಉಳುಮೆ ಮಾಡಬೇಕು’ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ನಗರದ ಚೌಡರೆಡ್ಡಿ ಪಾಳ್ಯದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಎಂ.ರಸ್ತೆಯಲ್ಲಿ ಚರಂಡಿಗಳು ತುಂಬಿ ರಸ್ತೆಗೆ ನೀರು ಹರಿಯಿತು. ಗ್ರಾಮೀಣ ಭಾಗಗಳಲ್ಲಿ ಬಿರುಗಾಳಿ ಮತ್ತು ಮಳೆಗೆ ಮಾವಿನ ಕಾಯಿಗಳು ಉದುರಿದ್ದು ಬೆಳೆಗಾರರಿಗೆ ನಷ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT