ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಗರಿಯ ‘ತೂಕ’ ಹೆಚ್ಚಿಸಿದ ತುಲಾಭವನ

Last Updated 22 ಮೇ 2017, 5:10 IST
ಅಕ್ಷರ ಗಾತ್ರ

ದಾವಣಗೆರೆ: ಹಿಂದೊಮ್ಮೆ ಅವಿಭಾಜ್ಯ ಅಂಗವಾಗಿ ಇತಿಹಾಸದ ಪುಟಗಳನ್ನು ಸೇರಿಕೊಂಡ ವಸ್ತುಗಳು ಇಲ್ಲಿ ಜೀವಂತಿಕೆ ಪಡೆದುಕೊಂಡಿವೆ. ಪುರಾತನ ತೂಕ, ಅಳತೆ ವಸ್ತುಗಳ ಸಂಗ್ರಹಾಲಯವಾಗಿರುವ ಚಾಮರಾಜಪೇಟೆಯ  ‘ತುಲಾಭವನ’ಕ್ಕೆ ಈಗ ಇನ್ನಷ್ಟು ಅಪರೂಪದ ವಸ್ತುಗಳು ಸೇರಿಕೊಂಡಿವೆ.

ದಶಕಗಳ ಕಾಲ ಗೋಡೆಗಳ ಮೇಲೆ ಪ್ರತಿಷ್ಠಾಪನೆಗೊಂಡು ಟಿಕ್‌...ಟಿಕ್‌...ಸದ್ದು ಮಾಡುತ್ತಿದ್ದ ಪೆಂಡುಲಂ ಗಡಿಯಾರಗಳ ಅಪರೂಪದ ಸಂಗ್ರಹ ಇಲ್ಲಿದೆ. ಆಧುನಿಕತೆಯ ಪ್ರಭಾವದಿಂದ ಪೆಂಡುಲಂ ಗಡಿಯಾರಗಳ ಜಾಗವನ್ನು ಡಿಜಿಟಲ್‌ ಗಡಿಯಾರಗಳು ಆಕ್ರಮಿಸಿದವು.

ದುರಸ್ತಿ ಮಾಡುವವರೂ ಕಡಿಮೆಯಾದ ಪರಿಣಾಮ ಕೆಟ್ಟುನಿಂತ ಈ ಗಡಿಯಾರಗಳು ಮತ್ತೆ ಗೋಡೆ ಏರಲಿಲ್ಲ. ಬದಲಾಗಿ, ಮನೆಯ ಅಟ್ಟ ಹಾಗೂ ಗುಜರಿ ಅಂಗಡಿಗಳನ್ನು ಸೇರಿದವು. ಹೀಗೆ, ನಿರುಪಯುಕ್ತವಾದ ಗಡಿಯಾರಗಳನ್ನು ಹುಡುಕಿಸಿ ತೆಗೆದು ಸಂಗ್ರಹಾಲಯದ ಗೋಡೆಯಲ್ಲಿ ಜಾಗ ನೀಡಲಾಗಿದೆ ಎನ್ನುತ್ತಾರೆ ತುಲಾಭವನದ ಸಂಸ್ಥಾಪಕ ಬಸವರಾಜ ಯಳಮಲ್ಲಿ.

ಎಲ್ಲವೂ ಸುಸ್ಥಿತಿಯಲ್ಲಿ
ಫ್ರಾನ್ಸ್‌, ಅಮೆರಿಕಾ, ಜರ್ಮನಿ, ಜಪಾನ್ ದೇಶಗಳ 25ಕ್ಕೂ ಹೆಚ್ಚು ಪೆಂಡುಲಂ ಗಡಿಯಾರಗಳು ಮ್ಯೂಸಿಯಂನಲ್ಲಿ ಮತ್ತೆ ಸದ್ದು ಮಾಡುತ್ತಿವೆ. ಎಲ್ಲವೂ ಸುಸ್ಥಿತಿಯಲ್ಲಿರುವುದು ವಿಶೇಷ. ಈ ಗಡಿಯಾರಗಳ ಮೇಲಿನ ಪ್ರೀತಿಗೆ ರಿಪೇರಿ ಮಾಡುವುದನ್ನೂ ಕಲಿಯಬೇಕಾಯಿತು ಎನ್ನುತ್ತಾರೆ ಅವರು.

ವಿದ್ಯುತ್‌ ಮೀಟರ್‌
‘ತುಲಾಭವನ’ದಲ್ಲಿ ಗಡಿಯಾರಗಳಿಗಷ್ಟೇ ಅಲ್ಲ ವಿದ್ಯುತ್‌ ಮೀಟರ್‌ಗಳಿಗೂ ಜಾಗವಿದೆ. ಸುಮಾರು 80 ರಿಂದ 90ವರ್ಷಗಳಷ್ಟು ಹಳೆಯ ವಿದ್ಯುತ್ ಮೀಟರ್‌ಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕೆ ಇಡಲಾಗಿದೆ. ಇಂಗ್ಲೆಂಡ್‌, ಫ್ರಾನ್ಸ್‌ ಹಾಗೂ ದೇಶೀಯವಾಗಿ ತಯಾರಾದ 37 ಮೀಟರ್‌ಗಳನ್ನು ಇಲ್ಲಿ ಜೋಡಿಸಿಡಲಾಗಿದೆ.

ಆಯಾ ಕಾಲಘಟ್ಟದಲ್ಲಿ ಬಳಕೆಯಲ್ಲಿದ್ದ, ಪ್ರಸ್ತುತ ಬಳಕೆಯಲ್ಲಿರುವ ಡಿಜಿಟಲ್‌ ಮೀಟರ್‌ಗಳೂ ಇಲ್ಲಿವೆ. ಕೆಪಿಟಿಸಿಎಲ್‌ ಬಳಿಯೂ ಇಷ್ಟು ಸಂಗ್ರಹವಿಲ್ಲ ಎಂದು ಹೆಮ್ಮೆಯಿಂದ ಹೇಳುತ್ತಾರೆ ಯಳಮಲ್ಲಿ.

‘ತಂದೆ ಚನ್ನವೀರಪ್ಪ ಯಳಮಲ್ಲಿ ಅವರು ತೂಕ ಮತ್ತು ಅಳತೆ ಸಾಧನಗಳನ್ನು ಮಾರಾಟ ಮಾಡುತ್ತಿದ್ದರು. ಅವರಿಂದ ಉದ್ಯಮ ಬಳುವಳಿಯಾಗಿ ಬಂತು. ವೃತ್ತಿ ಹಾಗೂ ಪ್ರವೃತ್ತಿಯು ಜತೆಯಾದಾಗ ‘ತುಲಾಭವನ’ ರೂಪುಗೊಂಡಿತು.

ತಂದೆಯ ಸ್ಮರಣಾರ್ಥ ಮಲ್ಲಿಕಾರ್ಜುನ ಯಳಮಲ್ಲಿ ಅವರ ಹೆಸರಲ್ಲಿ ಟ್ರಸ್ಟ್‌ ಸ್ಥಾಪಿಸಲಾಗಿದ್ದು, ದಿನೇ ದಿನೇ ಪುರಾತನ ವಸ್ತುಗಳ ಸಂಗ್ರಹ ಹೆಚ್ಚುತ್ತಲೇ ಇದೆ. ಈ ಕಾರ್ಯಕ್ಕೆ ಆಡಳಿತಾಧಿಕಾರಿ ಹೊನ್ನಪ್ಪಗೌಡರು ಹೆಗಲು ಕೊಟ್ಟಿದ್ದಾರೆ. ಕುಟುಂಬ ವರ್ಗ ಬೆಂಬಲಕ್ಕಿದೆ’ ಎನ್ನುತ್ತಾರೆ ಬಸವರಾಜ್‌.

ಗಿನ್ನಿಸ್‌ ದಾಖಲೆಯತ್ತ...

ದೇಶದಲ್ಲೇ ಮೊದಲ ತೂಕ ಹಾಗೂ ಅಳತೆ ಸಾಧನಗಳ ಸಂಗ್ರಹಾಲಯ ಎಂಬ ಗೌರವ ತುಲಾಭವನದ ಮುಡಿಗೇರಿದೆ. ಈಚೆಗೆ ‘ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌’ನಲ್ಲೂ ಸ್ಥಾನ ಸಿಕ್ಕಿದೆ. ಇದೀಗ ‘ಗಿನ್ನಿಸ್‌ ಬುಕ್‌ ಆಫ್‌ ರೆಕಾರ್ಡ್‌’ ಪುಟ ಸೇರುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿದೆ. ಅಂಚೆ ಇಲಾಖೆಯು ಈಚೆಗೆ ತುಲಾಭವನದ ನೆನಪಿಗೆ ವಿಶೇಷ ಲಕೋಟೆ ಬಿಡುಗಡೆಗೊಳಿಸಿ ಗೌರವ ನೀಡಿದೆ.

ದೇಶದಲ್ಲೇ ಏಕೈಕ ತೂಕ ಮತ್ತು ಅಳತೆ ಸಾಧನಗಳ ಮ್ಯೂಸಿಯಂಗೆ ನಿರೀಕ್ಷಿತ ಪ್ರಮಾಣದಲ್ಲಿ ಜನರು ಭೇಟಿ ನೀಡುತ್ತಿಲ್ಲ ಎಂಬ ಕೊರಗಿದೆ. ಪ್ರತಿ ಭಾನುವಾರ ಸಂಗ್ರಹಾಲಯಕ್ಕೆ ಉಚಿತ ಪ್ರವೇಶವಿದೆ.
ಮಾಹಿತಿಗೆ www.tulabhavan.org, ಮೊಬೈಲ್: 98806 07222.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT