ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನಿನ ತೊಡಕು ಅಭಿವೃದ್ಧಿಗೆ ತೊಡರು

Last Updated 22 ಮೇ 2017, 5:21 IST
ಅಕ್ಷರ ಗಾತ್ರ

ಚಿತ್ರದುರ್ಗ: ಕಳೆದ ವರ್ಷ ಪ್ರವಾಸೋದ್ಯಮ ಇಲಾಖೆ ಆರಂಭಿಸಿದ್ದ ಚಂದ್ರವಳ್ಳಿಯ ಅಂಕಲಿಮಠಕ್ಕೆ ಮೆಟ್ಟಿಲು ನಿರ್ಮಿಸುವ ಕಾಮಗಾರಿ ಸ್ಥಗಿತಗೊಂಡಿದೆ. ಕೋಟೆ ಅಂಗಳದಲ್ಲಿ ಆರಂಭವಾಗಬೇಕಿದ್ದ ಲಗೇಜ್ ರೂಮ್ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ಕಾಮಗಾರಿ ಇನ್ನೂ ಆರಂಭವಾಗಿಲ್ಲ !

ಭಾರತೀಯ ಪುರಾತತ್ವ ಇಲಾಖೆ ಯಿಂದ ಸೂಕ್ತ ರೀತಿ ಅನುಮತಿ ಪಡೆಯದ ಕಾರಣ, ಅಂಕಲಿಮಠದ ಮೆಟ್ಟಿಲು ನಿರ್ಮಾಣ ಕಾಮಗಾರಿ ಸ್ಥಗಿತ ಗೊಳಿಸುವಂತೆ ಸ್ಥಳೀಯ ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆಗೆ ನೋಟಿಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿದೆ. ಇದೇ ಕಾರಣದಿಂದಲೇ, ಕೋಟೆಯ ಪ್ರಾಂಗಣದಲ್ಲಿ ಅಭಿವೃದ್ಧಿ ಕೆಲಸಗಳೂ ಆರಂಭವಾಗಿಲ್ಲ.

ಚಂದ್ರವಳ್ಳಿಯ ಅಂಕಲಿ ಮಠಕ್ಕೆ ಹೋಗುವ ದಾರಿ ಕೊರಕಲಾಗಿತ್ತು. ಕಲ್ಲಿನ ಮೆಟ್ಟಿಲುಗಳು ಕಿತ್ತು ಹೋಗಿದ್ದವು. ವಯೋವೃದ್ಧರು, ಮಕ್ಕಳು ಮಠಕ್ಕೆ ಹೋಗಲು ಹರಸಾಹಸ ಪಡುವಂತಹ ಪರಿಸ್ಥಿತಿ ಇತ್ತು. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ₹. 75 ಲಕ್ಷ ವೆಚ್ಚದಲ್ಲಿ ಮೆಟ್ಟಿಲು ನಿರ್ಮಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಪ್ರಸ್ತಾವನೆಗೆ ಅನುಮೋದನೆ ನೀಡಿದ ಸರ್ಕಾರ, ಮೊದಲ ಕಂತಾಗಿ ₹. 25 ಲಕ್ಷ ಬಿಡುಗಡೆ ಮಾಡಿತು. 2016  ರಿಂದ ಭೂ ಸೇನಾ ನಿಮಗದವರು ಕಾಮಗಾರಿ ಆರಂಭಿಸಿದ್ದರು. ಈಗ ಮುಕ್ಕಾಲು ಭಾಗ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ನಿಯಮಾನುಸಾರ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಕಾಮಗಾರಿ ಸ್ಥಗಿತಗೊಂಡಿದೆ.

ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಡಾ.ತಿಪ್ಪೇಸ್ವಾಮಿ ‘ಕಾಮಗಾರಿ ಆರಂಭಿಸುವ ಮುನ್ನ ಹಿಂದಿನ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕರಿಂದ ಅನುಮತಿ ಪಡೆದಿದ್ದೆವು. ಅದು ಸರಿಯಿಲ್ಲ. ದೆಹಲಿಯ ಪುರಾತತ್ವ ಇಲಾಖೆಯ ವಲಯ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕೆಂದು ಇಲ್ಲಿನ ಪುರಾತತ್ವ ಅಧಿಕಾರಿ ತಿಳಿಸಿದರು. ಆ ಪ್ರಕಾರ ಜಿಲ್ಲಾಧಿಕಾರಿಯವರು ಪ್ರಾಧಿಕಾರಕ್ಕೆ ಪತ್ರ ಬರೆದಿದ್ದಾರೆ. ಲಗೇಜ್ ಕೊಠಡಿ ನಿರ್ಮಾಣದ ಅನುಮತಿಗಾಗಿ ಪತ್ರ ಬರೆಯಲಾಗಿದೆ. ಇಲ್ಲಿವರೆಗೂ ಈ ಪತ್ರಗಳಿಗೆ ಉತ್ತರ ಬಂದಿಲ್ಲ' ಎಂದು ವಿವರಿಸುತ್ತಾರೆ.

ಆದರೆ, ಪುರಾತತ್ವ ಇಲಾಖೆಯ ಸಹಾಯ ನಿರ್ದೇಶಕ ಗಿರೀಶ್, 'ಅನುಮತಿ ಪಡೆಯಲು ಪತ್ರ ಬರೆಯುವಂತಿಲ್ಲ. ಅದಕ್ಕೊಂದು ನಿಗದಿತ ಅರ್ಜಿ ನಮೂನೆ ಇದೆ. ಅದನ್ನು ಭರ್ತಿ ಮಾಡಿ ಪ್ರಾಧಿಕಾರಕ್ಕೆ ಕಳಿಸಬೇಕು. ಇಂಥ ಕಾಮಗಾರಿಗಳಿಗೆ ಅನುಮತಿ ನೀಡಲು ತಜ್ಞರ ಸಮಿತಿ ಇದೆ. ಆ ಸಮಿತಿಯವರು ಸಮೀಕ್ಷೆ ನಡೆಸಿ ವರದಿ ಕೊಟ್ಟ ಮೇಲೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು. ಪ್ರವಾಸೋದ್ಯಮ ಇಲಾಖೆಯವರು ಈ ಪ್ರಕ್ರಿಯೆನ್ನು ಅನುಸರಿಸಿಲ್ಲ' ಎಂದು ಹೇಳುತ್ತಾರೆ.

'ಸ್ಮಾರಕಗಳಿಂದ 200 ಮೀಟರ್ ಒಳಗೆ ಯಾವುದೇ ಕಾಮಗಾರಿ ಕೈಗೊಳ್ಳಲು ನಾವೂ ಸಹ  ಇದೇ ರೀತಿ ಅನುಮತಿ ಪಡೆಯುತ್ತೇವೆ. ಈ ವಿಷಯ ವನ್ನು ಒಂದೂವರೆ ವರ್ಷದ ಹಿಂದೆಯೇ ಸಂಬಂಧಪಟ್ಟ ಪ್ರವಾ ಸೋದ್ಯಮ ಇಲಾಖೆಗೆ ತಿಳಿಸಿದ್ದೇನೆ. ಆದರೂ ಅವರು ಅನುಮತಿ ಪಡೆದಿಲ್ಲ. ಈ ಕಾರಣದಿಂದಲೇ ಕಾಮಗಾರಿ ಸ್ಥಗಿತಗೊಂಡಿದೆ' ಎಂದು ಅವರು ವಿವರಣೆ ನೀಡುತ್ತಾರೆ.

ಕೇಂದ್ರ ಪುರಾತತ್ವ ಇಲಾಖೆಯ ನೀತಿ ನಿಯಮ, ನಿಬಂಧನೆಗಳು, ಅವುಗಳನ್ನು ಪಾಲಿಸಲು ಹಿಂದೆ ಬಿದ್ದಿ ರುವ ಪ್ರವಾಸೋದ್ಯಮ ಇಲಾಖೆಯ ಕ್ರಮದಿಂದಾಗಿ ಚಿತ್ರದುರ್ಗದ ಪ್ರವಾಸೋದ್ಯಮ ಅಭಿವೃದ್ಧಿಗೆ ತೊಡಕು ಉಂಟಾಗುತ್ತಿದೆ.  ಆದರೆ, ಅಭಿವೃದ್ಧಿ ಆಗಬೇಕು ಎಂಬುದು ಪ್ರವಾಸಿಗರ, ನಾಗರಿಕರ ಒತ್ತಾಯವೂ ಆಗಿದೆ.

ಅನುದಾನವಿದೆ..  ಕೆಲಸ ನಡೆಯುತ್ತಿಲ್ಲ...

ಈ ಹಿಂದೆ ಅಂಕಲಿಮಠಕ್ಕೆ ಹೋಗಲು ಇದ್ದಂಥ ಮೆಟ್ಟಿಲುಗಳು ಸಂಪೂರ್ಣ ಹಾಳಾಗಿದ್ದವು. ವಯೋವೃದ್ಧರೊಬ್ಬರು ಕಾಲು ಜಾರಿ ಬಿದ್ದು, ಬಲವಾದ ಪೆಟ್ಟು ಮಾಡಿಕೊಂಡಿದ್ದರು. ಈಗಾಗಲೇ ಅನೇಕ ಪ್ರವಾಸಿಗರು, ಸ್ಥಳೀಯ ವಾಯುವಿಹಾರಿಗಳು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಪ್ರವಾಸಿಗರಿಗೆ, ವಯೋ ವೃದ್ಧರಿಗೆ, ಮಕ್ಕಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಪ್ರವಾಸೋದ್ಯಮ ಇಲಾಖೆ ನೂತನ ಮೆಟ್ಟಿಲು ನಿರ್ಮಿಸಲು ಅನುದಾನ ತಂದಿದೆ. ಆದರೂ ಕಾಮಗಾರಿ ಸ್ಥಗಿತಗೊಂಡಿರುವುದು ನಿಜಕ್ಕೂ ವಿಪರ್ಯಾಸ.

ನಿಯಮಾನುಸಾರ ನಡೆಯಬೇಕು ಎಂಬುದು ಪುರಾತತ್ವ ಇಲಾಖೆ ಅಧಿಕಾರಿಗಳ ವಾದ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಜಿಲ್ಲಾಡಳಿತವಾಗಲಿ ಕೂಡಲೇ ಮಧ್ಯ ಪ್ರವೇಶಿಸಿ ತೊಡಕಾಗಿರುವ ಈ ಸಮಸ್ಯೆ ಬಗೆಹರಿಸುವ ಮೂಲಕ ನಾಗರಿಕರಿಗೆ ಅನುಕೂಲವಾಗುವಂಥ ಕಾಮಗಾರಿಯನ್ನು ಪುನಃ ಒಂದು ವಾರದೊಳಗೆ ಪ್ರಾರಂಭಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ಪ್ರತಾಪ್ ಜೋಗಿ ಎಚ್ಚರಿಕೆ ನೀಡಿದ್ದಾರೆ.

* * 

ಹಿಂದುಳಿದ ಜಿಲ್ಲೆಗೆ ಅನುದಾನ ಬರುವುದೇ ಕಷ್ಟ. ಬಂದ ಅನುದಾನದಲ್ಲಿ  ಪ್ರವಾಸಿ ತಾಣಗಳು ಅಭಿವೃದ್ಧಿ ಆಗುವುದು ಮುಖ್ಯ. ಕಾಮಗಾರಿ ನಿಲ್ಲಬಾರದು.
ಶಿವಪ್ರಸಾದ್‌ ಗೌಡ,
ಜೆಡಿಎಸ್‌ ಹಿರಿಯೂರು ತಾಲ್ಲೂಕು ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT