ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಮೂಕವೇದನೆ ಕೇಳುವವರಿಲ್ಲ

Last Updated 22 ಮೇ 2017, 5:32 IST
ಅಕ್ಷರ ಗಾತ್ರ

ರಿಪ್ಪನ್‌ಪೇಟೆ:  ಬೇಡಿಕೆಗಳ ಈಡೇರಿಕೆಗಾಗಿ ಪಶು ವೈದ್ಯರು ನಡೆಸಿದ ಮುಷ್ಕರದಿಂದಾಗಿ  ಪಶು ಆಸ್ಪತ್ರೆಗೆ ಬೀಗ ಹಾಕಲಾಗಿತ್ತು. ಸರ್ಕಾರ ಮತ್ತು ಪಶು ವೈದ್ಯರ ನಡುವಿನ ಹಗ್ಗ ಜಗ್ಗಾಟದಲ್ಲಿ ಜಾನುವಾರಿನ ಮೂಕ ವೇದನೆಯನ್ನು ಕೇಳುವವರೇ ಇಲ್ಲ ಎಂಬಂತಾಗಿದೆ. 

ಹೊಸನಗರ ತಾಲ್ಲೂಕಿನ 22 ಪಶು ಆಸ್ಪತ್ರೆಗೆ ಒಂಬತ್ತು ವೈದ್ಯರನ್ನು ನೇಮಕ ಮಾಡಲಾಗಿದೆ. ಆದರೆ, ನಾಲ್ವರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ ನಿಟ್ಟೂರಿನ ಡಾ. ರಾಮಚಂದ್ರ ಅವರು ತಾಲ್ಲೂಕು ಕಾರ್ಯ ನಿರ್ವಾಹಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂವರು ವೈದ್ಯರು ಮಾತ್ರ ವೈದ್ಯಕೀಯ ಸೇವೆ ನೀಡುತ್ತಿದ್ದರು.

ತಾಲ್ಲೂಕಿನಲ್ಲಿ ಪಶು ಪರಿವೀಕ್ಷಕ ಹಾಗೂ ಸಿಬ್ಬಂದಿ 80ರ ಬದಲು ಕೇವಲ 20 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರು.
ರಿಪ್ಪನ್‌ಪೇಟೆ, ಬಟ್ಟೆ ಮಲ್ಲಪ್ಪ, ರಾಮಚಂದ್ರಾಪುರ ಮಠ, ನಗರಕ್ಕೆ ಡಾ. ನಾಗರಾಜ್‌ ಅವರೊಬ್ಬರೇ ಕಾರ್ಯನಿರ್ವಹಿಸುತ್ತಿದ್ದಾರೆ.

ಪುರಪ್ಪೆಮನೆ, ಹೊಸನಗರ, ನಿಟ್ಟೂರು, ಯಡೂರು, ಹುಂಚ, ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಇಬ್ಬರು ವೈದ್ಯರು ಕೆಲಸ ಮಾಡುತ್ತಿದ್ದಾರೆ.ಅಂಕಿ ಅಂಶಗಳ ಪ್ರಕಾರ ಕೆರೆಹಳ್ಳಿ, ನಗರ, ಹುಂಚ, ಕಸಬಾ ಹೋಬಳಿ  ವ್ಯಾಪ್ತಿಯಲ್ಲಿ ಜರ್ಸಿ, ಮಲೆನಾಡು ಗಿಡ್ಡತಳಿ, ಎಚ್‌ಎಫ್‌ ಸೇರಿ ಸುಮಾರು 1.15 ಲಕ್ಷ ಜಾನುವಾರು ಇದೆ.

ವಿತರಣೆಯಾಗದ ಮೇವು: ರಿಪ್ಪನ್‌ಪೇಟೆ ಎಪಿಎಂಸಿ ಯಾರ್ಡ್‌ನಲ್ಲಿ ರಾಜ್ಯ ಸರ್ಕಾರ ಬರಗಾಲದ ಹಿನ್ನೆಲೆಯಲ್ಲಿ ಮೇವು ಬ್ಯಾಂಕ್‌ ತೆರೆದು ರೈತರಿಂದ  ಕೆ.ಜಿ.ಗೆ ₹ 6 ದರದಲ್ಲಿ ಖರೀದಿ ಮಾಡಿ ಸುಮಾರು 50 ಟನ್‌ ಒಣ ಹುಲ್ಲು ಶೇಖರಣೆ ಮಾಡಿದೆ.

ಮೇವು, ನೀರಿಲ್ಲದೆ ಜಾನುವಾರನ್ನು ಕಸಾಯಿ ಖಾನೆಗೆ ಸಾಗಿಸಲು ರೈತರು ಮುಂದಾಗುತ್ತಿದ್ದರೂ ಮೇವು ವಿತರಣೆಗೆ ಕ್ರಮ ಕೈಗೊಂಡಿಲ್ಲ. ದುಡ್ಡಿದ್ದವರು ಶುಂಠಿ ಬೆಳೆಗಳಿಗೆ ಮುಚ್ಚಲು ಒಣ ಹುಲ್ಲನ್ನು ದುಬಾರಿ ಬೆಲೆ ತೆತ್ತು ಖರೀದಿ ಮಾಡುತ್ತಿದ್ದಾರೆ. ಹೈನುಗಾರಿಕೆಯನ್ನೇ ಅವಲಂಬಿಸಿರುವ ರೈತರು ಮೇವಿಗಾಗಿ ಪರಿತಪಿಸುವಂತಾಗಿದೆ ಎನ್ನುತ್ತಾರ ಜಾನುವಾರು ಸಾಕಣೆದಾರರು.

ರೈತರ ಬಗ್ಗೆ ಕಾಳಜಿ ತೋರುವ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರಿಗೂ ಮೂಕಪ್ರಾಣಿಗಳ ಹಸಿವಿನ ಅರಿವು ಆಗದಿರುವುದು ದುರ್ದೈವದ ಸಂಗತಿ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT