ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮರಳು ಗಣಿಗಾರಿಕೆ ನಿರಂತರ

Last Updated 22 ಮೇ 2017, 6:21 IST
ಅಕ್ಷರ ಗಾತ್ರ

ಗಂಗಾವತಿ: ತುಂಗಭದ್ರಾ ನದಿ ಪಾತ್ರದ ಹಳ್ಳಕೊಳ್ಳ, ತೊರೆಗಳು ಹರಿಯುವ ಪ್ರದೇಶಗಳಲ್ಲಿ ಅನಧಿಕೃತ ಮರಳು ಗಣಿಗಾರಿಕೆ ನಡೆಯುತ್ತಿರುವ ಪರಿಣಾಮ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಅಂತರ್ಜಲದ ಮಟ್ಟ ಸಂಪೂರ್ಣ ಕುಸಿತವಾಗಿದೆ.

ನಂದಿಹಳ್ಳಿ, ಕಕ್ಕರಗೋಳ ಹಾಗೂ ಬರಗೂರು ಗ್ರಾಮದ ಮರಳು ಕೇಂದ್ರಗಳನ್ನು ಲೋಕೋಪಯೋಗಿ ಇಲಾಖೆ ಗುರುತಿಸಿದೆ. ಆದರೆ ತಾಲ್ಲೂಕಿನ ಸುಮಾರು 20ಕ್ಕೂ ಹೆಚ್ಚು ಕಡೆ ಅಕ್ರಮ ಮರಳು ಗಣಿಗಾರಿಕೆ  ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

‘ತಾಲ್ಲೂಕಿನ ಮುಸ್ಟೂರು ಬಳಿ ಕಳೆದ ಹಲವು ದಿನಗಳಿಂದ ಅನಧಿಕೃತವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ. ಇದರಲ್ಲಿ ಪ್ರಭಾವಿ ರಾಜಕಾರಣಿಗಳ ಬೆಂಬಲಿಗರು, ತಾಲ್ಲೂಕು ಪಂಚಾಯಿತಿ ಕೆಲವು ಮಾಜಿ ಸದಸ್ಯರು ಭಾಗಿಯಾಗಿದ್ದಾರೆ. ನದಿ ದಂಡೆ, ಪಕ್ಕದ ಹೊಲಗಳಲ್ಲಿ ಜೆಸಿಬಿಯಿಂದ ಗುಂಡಿ ತೋಡಲಾಗುತ್ತಿದೆ. ಹತ್ತಾರು ಟ್ರ್ಯಾಕ್ಟರ್ ಮೂಲಕ ಸಾಗಿಸಲಾಗುತ್ತಿದೆ. ವಿರೋಧ ವ್ಯಕ್ತಪಡಿಸುವರಿಗೆ ಬೆದರಿಕೆ ಹಾಕಲಾಗುತ್ತಿದೆ’ ಎಂದು ಗ್ರಾಮಸ್ಥರು ದೂರಿದ್ದಾರೆ.

‘ಗ್ರಾಮಸ್ಥರನ್ನು ಸಮಾಧಾನಪಡಿಸಲು ಗ್ರಾಮದ ದೇವಸ್ಥಾನಕ್ಕೆ ವಾರ್ಷಿಕ ₹50 ಸಾವಿರದಿಂದ ₹1 ಲಕ್ಷ  ದೇಣಿಗೆ ನೀಡುತ್ತಿದ್ದಾರೆ. ಮುಷ್ಟೂರಿನಿಂದ ನಿತ್ಯ ಸುಮಾರು 250ಕ್ಕೂ ಹೆಚ್ಚು ಟ್ರಾಕ್ಟರ್‌ಗಳಲ್ಲಿ ಮರಳು ಸಾಗಿಸಲಾಗುತ್ತಿದ್ದು, ಶೇ 80ರಷ್ಟು ವಾಹನಕ್ಕೆ ಪರ್ಮಿಟ್ (ಅನುಮತಿ ಪತ್ರ) ಇಲ್ಲ. ಇನ್ನು ಕೆಲವು ವಾಹನಕ್ಕೆ ಬರಗೂರು, ನಂದಿಹಳ್ಳಿ, ಕಕ್ಕರಗೋಳದ ಮರಳು ಕೇಂದ್ರದಿಂದ ಮರಳು ಸಾಗಿಸಲು ಅನುಮತಿ ನೀಡಿದ್ದರೂ ಇಲ್ಲಿಂದಲೇ ಮರಳು ಸಾಗಿಸಲಾಗುತ್ತಿದೆ’ ಎನ್ನುತ್ತಾರೆ ಸಾರ್ವಜನಕರು.

‘ನದಿಪಾತ್ರದ ಹೊಲಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿರುವುದರಿಂದ ಅಂತರ್ಜಲದ ಮಟ್ಟ  ಕುಸಿದು ಹೋಗಿದೆ.  20 ವರ್ಷದಲ್ಲಿ ಮೊದಲ ಬಾರಿಗೆ ನೀರಿನ ಸಮಸ್ಯೆ ಮಿತಿಮೀರಿದೆ’ ಎಂದು ಮುಸ್ಟೂರು ಗ್ರಾಮದ ಕೆ.ಹನುಮಂತಮ್ಮ  ಆರೋಪಿಸಿದರು.

’ಲೋಕೋಪಯೋಗಿ ಇಲಾಖೆಯಿಂದ ಬೆಳಗ್ಗೆ 9ರಿಂದ ಸಂಜೆ 6 ಗಂಟೆ ವರೆಗೆ ಪರ್ಮಿಟ್‌ ನೀಡಲಾಗುತ್ತಿದೆ. ಆದರೆ ಮುಷ್ಟೂರು ಗ್ರಾಮದಿಂದ ಸಂಜೆ ಏಳು ಗಂಟೆ ಬಳಿಕವೇ ಮರಳು ಸಾಗಿಸಲಾಗುತ್ತಿದೆ’ ಎಂದು ಯುವಕ ಆನಂದ್ ತಿಳಿಸಿದ್ದಾರೆ.

ಮರಳಿ ಗ್ರಾಮದಲ್ಲಿರುವ ಟೋಲ್‌ಗೇಟ್‌ಗಳಲ್ಲಿ ಕ್ಯಾಮೆರಾ ಅಳವಡಿಸಿದ್ದರಿಂದ ಮರಳು ಲಾರಿ, ಟ್ರಾಕ್ಟರ್‌ಗಳನ್ನು ಪರ್ಯಾಯ ಮಾರ್ಗದಲ್ಲಿ ಗಂಗಾವತಿಗೆ, ಬಳಿಕ  ಬೇರೆ ಕಡೆಗೆ ಸಾಗಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅಕ್ರಮ ಮರಳು ಸಾಗಣೆ ತಡೆಗಟ್ಟಲು ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಲೋಕೋಪಯೋಗಿ, ಪೊಲೀಸ್ ಹಾಗೂ ಪಂಚಾಯಿತಿ ಪಿಡಿಒ ಒಳಗೊಂಡ ಜಾಗೃತ ದಳವಿದ್ದರೂ ಅಕ್ರಮ ಮರಳು ಸಾಗಣೆ ನಿಂತಿಲ್ಲ.

* * 

ದಾಳಿ ನಡೆಸಲು ವಿವಿಧ ಇಲಾಖೆ ಅಧಿಕಾರಿಗಳಲ್ಲಿ ಸಮನ್ವಯದ ಸಮಸ್ಯೆಯಿದೆ. ಈ ಬಗ್ಗೆ ಸೂಕ್ತ ನಿರ್ದೇಶನ ಕೋರಿ ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಾಗುವುದು.
ಎಲ್‌.ಡಿ.ಚಂದ್ರಕಾಂತ
ತಹಶೀಲ್ದಾರ್, ಗಂಗಾವತಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT