ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ಟಿಲು ಕಾಮಗಾರಿಗೆ ಮರುಜೀವ

ಕರಿವರದರಾಜ ಸ್ವಾಮಿ ಬೆಟ್ಟ: ಜುಲೈಗೆ ಪೂರ್ಣ ಸಾಧ್ಯತೆ
Last Updated 22 ಮೇ 2017, 6:24 IST
ಅಕ್ಷರ ಗಾತ್ರ

ಚಾಮರಾಜನಗರ: ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ನಗರದ ಕರಿವರದರಾಜ ಸ್ವಾಮಿ ಬೆಟ್ಟದ ಮೆಟ್ಟಿಲು ನಿರ್ಮಾಣ ಕಾರ್ಯ ಮರುಜೀವ ಪಡೆದುಕೊಂಡಿದೆ. ಅನುಷ್ಠಾನ ಗೊಂಡು ಮೂರು ವರ್ಷದ ಬಳಿಕ ಕಾಮಗಾರಿ ಪೂರ್ಣ ಗೊಳ್ಳುವ ನಿರೀಕ್ಷೆ ಮೂಡಿಸಿದೆ.

ಈ ಬೆಟ್ಟದ ತಪ್ಪಲಿನಿಂದ ಕಾಣಸಿಗುವ ಸೂರ್ಯೋ ದಯದ ನೋಟ ಆಹ್ಲಾದ ನೀಡುತ್ತದೆ. ತುತ್ತತುದಿಯಲ್ಲಿ ನಿಂತರೆ ಇಡೀ ನಗರ ಪುಟ್ಟದಾಗಿ ಜೋಡಿಸಿಟ್ಟಂತೆ ಕಾಣುತ್ತದೆ. ಇತ್ತೀಚೆಗೆ ನೆಟ್ಟ ಔಷಧೀಯ ಸಸ್ಯಗಳು ಬೆಟ್ಟದ ಚಹರೆಯನ್ನು ಬದಲಿಸಿವೆ. ವಾಯುವಿಹಾರ ಪ್ರಿಯರಿಗೆ ಮತ್ತು ಇಲ್ಲಿರುವ ದೇವಸ್ಥಾನದ ಭಕ್ತರಿಗೆ ಈ ಬೆಟ್ಟ ಅಚ್ಚುಮೆಚ್ಚು.

ಆದರೆ, ಬೆಟ್ಟವನ್ನು ಏರುವುದು ಜನರ ಪಾಲಿಗೆ ದುಸ್ಸಾಹಸವೇ ಸರಿ. ಬೆಟ್ಟವನ್ನು ಸುತ್ತಿಬಳಸಿ ಹತ್ತುವಂತೆ ನಿರ್ಮಿಸಲಾಗಿರುವ ರಸ್ತೆಯೂ ಓಡಾಡಲು ಅನುಕೂಲಕರ ವಾಗಿಲ್ಲ.

ಈ ಕಾರಣದಿಂದ ಪ್ರವಾಸೋದ್ಯಮ ಇಲಾಖೆ 2014–15ರಲ್ಲಿ ₹1 ಕೋಟಿ ವೆಚ್ಚದಲ್ಲಿ ಈ ಬೆಟ್ಟಕ್ಕೆ ಮೆಟ್ಟಿಲು ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಿತ್ತು. ಬೆಟ್ಟದ ತಳಭಾಗದಿಂದ 135 ಮತ್ತು ಮೇಲ್ಭಾಗದಿಂದ 20 ಮೆಟ್ಟಿಲುಗಳನ್ನು ನಿರ್ಮಿಸಿದ ನಂತರ ಕೆಲಸ ಬಹುತೇಕ ಸ್ಥಗಿತ ಗೊಂಡಿತ್ತು. ಅಲ್ಲದೆ, ಸಿಮೆಂಟ್‌ ಕಾಂಕ್ರೀಟ್‌ ನಿಂದ ಮೆಟ್ಟಿಲು ನಿರ್ಮಿಸುತ್ತಿರುವುದಕ್ಕೆ ಮತ್ತು ಅದರ ಗುಣಮಟ್ಟದ ಕುರಿತು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದರು.

ಕಲ್ಲಿನ ಮೆಟ್ಟಿಲು: ಈ ಹಿಂದೆ ಇದ್ದ ಕಲ್ಲಿನ ಚಪ್ಪಡಿಗಳ ಮೆಟ್ಟಿಲು ಗಳನ್ನು ಕಿತ್ತು ಹೊಸದಾಗಿ ಕಾಂಕ್ರೀಟ್‌ ಮೆಟ್ಟಿಲು ನಿರ್ಮಿಸ ಲಾಗಿತ್ತು. ಅದಕ್ಕೆ ಈಗ ಸಾಣೆ ಹಿಡಿದ ಬಿಳುಪು ಕಲ್ಲನ್ನು ಹೊದಿಸುವ ಕೆಲಸ ಸಾಗುತ್ತಿದೆ. ಪ್ರತಿ ಕಲ್ಲೂ 180 ರಿಂದ 200 ಕೆ.ಜಿ. ತೂಗುತ್ತದೆ.

ಈ ರೀತಿ ಸುಮಾರು 800 ಮೆಟ್ಟಿಲುಗಳನ್ನು ತಳಭಾಗದಿಂದ ಮೇಲ್ತುದಿಯವರೆಗೆ ನಿರ್ಮಿಸಲಾಗುತ್ತಿದೆ. ಒಂದೇ ಸಮನೆ ಮೆಟ್ಟಿಲುಗಳನ್ನು ಏರುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಅಲ್ಲಲ್ಲಿ ವಿರಮಿಸಲು ಮಟ್ಟಸ ಜಾಗವನ್ನು ಕಲ್ಪಿಸಲಾಗುತ್ತಿದೆ.

ದೊಡ್ಡಬಳ್ಳಾಪುರದಿಂದ ಈ ಕಲ್ಲುಗಳನ್ನು ತರಿಸಿಕೊಳ್ಳ ಲಾಗುತ್ತಿದೆ. ಅದಕ್ಕೆ ಸೂಕ್ತ ಆಕಾರ ನೀಡಿ ಅಂದಗೊಳಿಸಿ ಅಳವಡಿಸುವ ಕೆಲಸಕ್ಕೆ ಸುಮಾರು ₹4,000 ದಿಂದ ₹5,000 ವೆಚ್ಚವಾಗುತ್ತಿದೆ.  ಮೆಟ್ಟಿಲಿನ ಎರಡೂ ಭಾಗಗಳಲ್ಲಿ ಕಬ್ಬಿಣದ ಗ್ರಿಲ್‌ ಅಳವಡಿಸಲಾಗುತ್ತಿದೆ. ಓಡಾಡುವ ವೇಳೆ ಆಯಾಸ ವಾದಾಗ ಮತ್ತು ಆಯತಪ್ಪದಂತೆ ಹಿಡಿದುಕೊಳ್ಳಲು ಇದು ನೆರ ವಾಗುತ್ತದೆ.

ಸಮಸ್ಯೆಗಳದ್ದೇ ಕಾರುಬಾರು: ಮಹತ್ವಾಕಾಂಕ್ಷೆಯ ಯೋಜನೆಗೆ ಸದಾ ಒಂದಿಲ್ಲೊಂದು ಅಡ್ಡಿ ಆತಂಕಗಳು ಎದುರಾಗುತ್ತಲೇ ಇವೆ. ಈ ಕಾರಣದಿಂದಲೇ ಕಾಮಗಾರಿ ವಿಳಂಬವಾಗಿದೆ ಎನ್ನುತ್ತಾರೆ ಸಹಾಯಕ ಎಂಜಿನಿಯರ್ ಚಿಕ್ಕಲಿಂಗಯ್ಯ.

ಕಾಮಗಾರಿಗೆ ಮುಖ್ಯವಾಗಿ ಎದುರಾಗಿರುವುದು ಕಾರ್ಮಿಕರ ಕೊರತೆ. ಹೆಚ್ಚು ಶ್ರಮ ಬೇಡುವ ಈ ಕೆಲಸಕ್ಕೆ ಅಧಿಕ ಕಾರ್ಮಿಕರ ಅಗತ್ಯವಿದೆ. ಆದರೆ ಸಾಕಷ್ಟು ಪ್ರಮಾಣದಲ್ಲಿ ಕಾರ್ಮಿಕರು ಸಿಗುತ್ತಿಲ್ಲ. ಕಾಂಕ್ರೀಟ್‌ ಹಾಕುವ ಕೆಲಸವನ್ನು ಸ್ಥಳೀಯ ಕೆಲಸಗಾರರಿಂದ ಮಾಡಿಸಲಾಗಿದೆ. ಕಲ್ಲಿನ ಮೆಟ್ಟಿಲನ್ನು ಹೊತ್ತು ತರುವ ಮತ್ತು ಅದನ್ನು ಕೂರಿಸುವ ಕೆಲಸಕ್ಕೆ ಆಂಧ್ರಪ್ರದೇಶದ ಕಾರ್ಮಿಕರೇ ಬೇಕಾಗಿದ್ದಾರೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಲ್ಲು ಮತ್ತಿತರ ಪರಿಕರಗಳನ್ನು ಬೆಟ್ಟದ ಮೇಲ್ಭಾಗಕ್ಕೆ ಕೊಂಡೊಯ್ಯಲು ಟ್ರ್ಯಾಕ್ಟರ್‌ಗಳ ಅಗತ್ಯವಿತ್ತು. ಕಡಿದಾದ ರಸ್ತೆಯಲ್ಲಿ ಅವುಗಳನ್ನು ಸಾಗಿಸುವ ಪರಿಣತ ಚಾಲಕರು ಕಡಿಮೆ. ಅವರನ್ನೇ ಕಾಡಿ ಬೇಡಿ ಒಪ್ಪಿಸಬೇಕು. ಅಲ್ಲದೆ ಬಾಡಿಗೆಯೂ ಹೆಚ್ಚು. ಇನ್ನು ಕಾಮಗಾರಿ ನಡೆಯುವ ಸ್ಥಳಕ್ಕೆ ನೀರು ಸಾಗಿಸುವುದು ಸಹ ಸುಲಭವಲ್ಲ.

ನೀರಿನ ಕೊರತೆಯೂ ಹಲವು ಬಾರಿ ಅಡಚಣೆ ಉಂಟುಮಾಡಿದೆ. ನಡುವೆ ಅನುದಾನ ಬಿಡುಗಡೆಯಾಗದೆ ಸಂಕಷ್ಟ ಎದುರಾಗಿತ್ತು. ಬಿಸಿಲ ಝಳ ಹೆಚ್ಚಿದ್ದರಿಂದ ಕೆಲಸ ಸರಾಗವಾಗಿ ನಡೆಯುತ್ತಿರಲಿಲ್ಲ. ಈಗ ಮಳೆಬಂದರೂ ಅಡ್ಡಿಯಾಗಬಹುದು ಎಂದು ಸಮಸ್ಯೆಗಳ ಸರಮಾಲೆಯನ್ನೇ ಅವರು ತೆರೆದಿಟ್ಟರು.

ಶ್ರಾವಣಕ್ಕೆ ಕಾಮಗಾರಿ ಪೂರ್ಣ
ಚಾಮರಾಜನಗರ:
ಬೆಟ್ಟದ ಮೇಲ್ಭಾಗದಲ್ಲಿರುವ ಕರಿವರದರಾಜ ಸ್ವಾಮಿ ದೇವಸ್ಥಾನದ ಬಾಗಿಲು ತೆರೆಯುವುದು ಶನಿವಾರ ಮಾತ್ರ. ಈ ದಿನ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ಶ್ರಾವಣ ಮಾಸದ ಶನಿವಾರ ಅಧಿಕ ಸಂಖ್ಯೆಯಲ್ಲಿ ಭಕ್ತರ ದಂಡು ಹರಿದುಬರುತ್ತದೆ.

ಈ ವೇಳೆಗೆ ಮೆಟ್ಟಿಲು ಮತ್ತು ಗ್ರಿಲ್ ಅಳವಡಿಸುವ ಕಾರ್ಯ ಸಂಪೂರ್ಣಗೊಳ್ಳುವ ನಿರೀಕ್ಷೆಯಿದೆ.  ಅಗತ್ಯ ಪ್ರಮಾಣದ ಕಾರ್ಮಿಕರು ಲಭ್ಯವಾಗಿದ್ದಾರೆ.
ಹೀಗಾಗಿ ಕಾಮಗಾರಿ ಚುರುಕು ಗೊಳ್ಳಲಿದ್ದು, ಇನ್ನು ಎರಡು ತಿಂಗಳಲ್ಲಿ ಮಾರ್ಗ ಓಡಾಟಕ್ಕೆ ಮುಕ್ತಗೊಳ್ಳಲಿದೆ ಎಂದು ಚಿಕ್ಕಲಿಂಗಯ್ಯ ತಿಳಿಸಿದರು.

*
ಈ ಯೋಜನೆಯಿಂದ ನಷ್ಟವೇ ಹೆಚ್ಚು. ನಿರಂತರವಾಗಿ ಸಮಸ್ಯೆಗಳೂ ಎದುರಾಗುತ್ತಿವೆ. ಒಪ್ಪಿಕೊಳ್ಳಬಾರದಿತ್ತು ಎಂದೆನಿಸುತ್ತಿದೆ. ಆದರೆ, ನಷ್ಟವಾದರೂ ಗುಣಮಟ್ಟದ ಮೆಟ್ಟಿಲುಗಳನ್ನು ನಿರ್ಮಿಸಿಕೊಡುತ್ತೇನೆ.
-ಚಿಕ್ಕಲಿಂಗಯ್ಯ,
ಸಹಾಯಕ ಎಂಜಿನಿಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT