ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ಮುಗಿಯದ ಬ್ರೀಮ್ಸ್‌ ಆಸ್ಪತ್ರೆ ಕಾಮಗಾರಿ

Last Updated 22 ಮೇ 2017, 6:37 IST
ಅಕ್ಷರ ಗಾತ್ರ

ಬೀದರ್: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಜೂನ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಬೀದರ್‌ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅತ್ಯಾಧುನಿಕ ಆಸ್ಪತ್ರೆಯ ಕಟ್ಟಡವನ್ನು ಉದ್ಘಾಟಿಸಲು ನಿರ್ಧರಿಸಿರುವುದರಿಂದ ತೆವಳುತ್ತ ಸಾಗಿದ್ದ ಕಟ್ಟಡದ ಕಾಮಗಾರಿ ಮೇಲ್ನೋಟಕ್ಕೆ ಸ್ವಲ್ಪ ವೇಗ ಪಡೆದುಕೊಂಡಿದೆ.  ಆದರೆ ಮೇ ಅಂತ್ಯದಲ್ಲಿ ಪೂರ್ಣಗೊಳ್ಳುವ ಲಕ್ಷಣಗಳು ಕಂಡು ಬರುತ್ತಿಲ್ಲ.

ಕಳೆದ ವರ್ಷ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್‌ ಆಸ್ಪತ್ರೆಯ ಕಟ್ಟಡದ ಕಾಮಗಾರಿ ವೀಕ್ಷಣೆ ಮಾಡಿದ್ದರು. ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದರೂ ಸಚಿವರಾಗಲಿ, ಆಸ್ಪತ್ರೆಯ ಆಡಳಿತ ಮಂಡಳಿಯಾಗಲಿ ಗಂಭೀರವಾಗಿ ಪರಿಗಣಿಸಿರಲಿಲ್ಲ. ಮೇ 16 ರಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಆಸ್ಪತ್ರೆಯ ಬಹುಮಹಡಿ ಕಟ್ಟಡ ವೀಕ್ಷಣೆಗೆ ತೆರಳಿದ್ದಾಗ ಇನ್ನೂ ಶೇ 20 ರಷ್ಟು ಕಾಮಗಾರಿ ಬಾಕಿ ಉಳಿದಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ್ದರು.  ಒಟ್ಟು ಆರು ಅಂತಸ್ತಿನ ಕಟ್ಟಡದ ಕೆಲ ಕಿಟಕಿಗಳಿಗೆ ಸ್ಟೀಲ್‌, ಗ್ರೀಲ್‌ ಹಾಗೂ ಕಟ್ಟಡದೊಳಗೆ ಗ್ರಾನೈಟ್‌ ಅಳವಡಿಸುವ ಕೆಲಸ ಇನ್ನೂ ಬಾಕಿ ಇದೆ.

ನಾಗಾರ್ಜುನ ಕನ್‌ಸ್ಟ್ರಕ್ಷನ್‌ ಕಂಪೆನಿಯು ಬೆಂಗಳೂರು ಹಾಗೂ ಕಲಬುರ್ಗಿಯಲ್ಲಿ ಬೃಹತ್‌ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಬೀದರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ  ಬಹುತೇಕ ಅಧಿಕಾರಿಗಳನ್ನು ಬೆಂಗಳೂರು, ಕಲಬುರ್ಗಿಗೆ ಕಳಿಸಿದೆ. ಹೀಗಾಗಿ ಬ್ರೀಮ್ಸ್‌ ಆಸ್ಪತ್ರೆಯ ಕಾಮಗಾರಿಯ ವೇಗ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

2014ರಲ್ಲಿ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಆದೇಶ ನೀಡಲಾಗಿದೆ. ಗುತ್ತಿಗೆ ಕಂಪೆನಿಯೊಂದಿಗೆ ಮಾಡಿಕೊಂಡ ಒಪ್ಪಂದ ಪ್ರಕಾರ 2016ರಲ್ಲಿಯೇ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಸರಿಯಾಗಿ ಮೇಲುಸ್ತುವಾರಿ ನಡೆಸದ ಕಾರಣ ಗುತ್ತಿಗೆದಾರರು ಆಸಕ್ತಿಯಿಂದ ಕೆಲಸ ಮಾಡಲಿಲ್ಲ. ಡಿಸೆಂಬರ್‌ನಲ್ಲಿ ವಿಧಾನಸಭೆ ಚುನಾವಣೆಯ ಪ್ರಕ್ರಿಯೆ ಶುರುವಾಗಲಿರುವ ಕಾರಣ ಈಗಿನ ಜಿಲ್ಲಾ ಉಸ್ತುವಾರಿ ಸಚಿವರು ಎಚ್ಚೆತ್ತುಕೊಂಡಂತೆ ಕಾಣುತ್ತಿದೆ.

‘₹ 87.70 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. 2016ರಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆಗಲೇ ಒಂದು ವರ್ಷ ವಿಳಂಬವಾಗಿದೆ. ಮೇ 31 ರೊಳಗೆ ಕಾಮಗಾರಿ  ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಉಪ ಗುತ್ತಿಗೆ ಮೂಲಕ ಹೆಚ್ಚುವರಿ ಕಾರ್ಮಿಕರನ್ನು ಬಳಸಿಕೊಂಡು 15 ದಿನಗಳಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬಹುದಾಗಿದೆ. ಗುತ್ತಿಗೆದಾರರು ಆಸಕ್ತಿಯಿಂದ ಕೆಲಸ ಮಾಡಬೇಕು ಅಷ್ಟೇ’ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ  ಕಾರ್ಯನಿರ್ವಾಹಕ ಎಂಜಿನಿಯರ್ ಶಶಿಕಾಂತ ಮಳ್ಳಿ. 

‘ವೈದ್ಯಕೀಯ ಕಾಲೇಜಿಗೆ ಅನುಮತಿ ದೊರೆತು 10 ವರ್ಷಗಳಾಗಿವೆ. ಪ್ರಸ್ತುತ 100 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಇದೆ. ಪ್ರಸಕ್ತ ಸಾಲಿನಿಂದ 50 ಹೆಚ್ಚುವರಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ಕೋರಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಡಿವಿಕೆ ರಾವ್‌ ಅವರಿಗೆ ಮೇ 16ರಂದು ಪತ್ರ ಬರೆಯಲಾಗಿದೆ. ಜೂನ್‌ನಲ್ಲಿ ಭಾರತೀಯ ವೈದ್ಯಕೀಯ ಪರಿಷತ್ತಿನ ತಂಡ ಕಾಲೇಜಿಗೆ ಭೇಟಿ ಕೊಡುವ ಸಾಧ್ಯತೆ ಇದೆ. ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಎಲ್ಲ ಸೌಕರ್ಯಗಳೂ ಇರುವುದರಿಂದ ಅನುಮತಿ ದೊರೆಯುವ ವಿಶ್ವಾಸ ಇದೆ’ ಎನ್ನುತ್ತಾರೆ ಬೀದರ್‌ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯಕೀಯ ನಿರ್ದೇಶಕ ಸಿ. ಚೆನ್ನಣ್ಣ.

ವೈದ್ಯಕೀಯ ಉಪಕರಣ ಖರೀದಿ
‘ಅತ್ಯಾಧುನಿಕ ಆಸ್ಪತ್ರೆಗೆ ₹ 5 ಕೋಟಿ ಬೆಲೆಯ ವೈದ್ಯಕೀಯ ಉಪಕರಣಗಳನ್ನು ಖರೀದಿ ಮಾಡಲಾಗಿದೆ. ಕೆಲವು ಮಹತ್ವದ ಉಪಕರಣಗಳ ಖರೀದಿಗೆ ಟೆಂಡರ್‌ ಕರೆಯಲಾಗಿದೆ. ಹೊಸ ಆಸ್ಪತ್ರೆಯ ಕಟ್ಟಡದಲ್ಲಿ ಒಟ್ಟು 19 ವಿಭಾಗಗಳು ಕಾರ್ಯನಿರ್ವಹಿಸಲಿವೆ. ಸಿಟಿ ಸ್ಕ್ಯಾನ್‌, ಪ್ಲೇಟ್‌ಲೆಟ್‌ ಪರೀಕ್ಷೆಯನ್ನು ಇಲ್ಲಿಯೇ ನಡೆಸಲಾಗುವುದು. ಅಕ್ಟೋಬರ್‌ನಿಂದ ಬ್ರೀಮ್ಸ್‌ನಲ್ಲೇ ರಕ್ತಬ್ಯಾಂಕ್‌ ಕಾರ್ಯಾರಂಭ ಮಾಡಲಿದೆ. ಕಟ್ಟಡ ಶೀಘ್ರ ಪೂರ್ಣಗೊಳ್ಳುವ ನಿರೀಕ್ಷೆಯಲ್ಲಿದ್ದೇವೆ’ ಎಂದು ಹೇಳುತ್ತಾರೆ ಸಿ. ಚೆನ್ನಣ್ಣ.

ಗುತ್ತಿಗೆದಾರರ ಮೇಲೆ ಒತ್ತಡ
ಬ್ರೀಮ್ಸ್‌ ವೈದ್ಯಕೀಯ ಕಾಲೇಜಿನ ಆಸ್‍ಪತ್ರೆಯ ಕಟ್ಟಡದ ಕಾಮಗಾರಿಯನ್ನು ಮೇ 31ರೊಳಗೆ ಪೂರ್ಣಗೊಳಿಸುವಂತೆ ನಾಗಾರ್ಜುನ ಕನ್‌ಸ್ಟ್ರಕ್ಷನ್‌ ಕಂಪೆನಿಯ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗಿದೆ. ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸಿ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಕಂಪೆನಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜೂನ್‌ ವೇಳೆಗೆ ಕಟ್ಟಡ ಉದ್ಘಾಟನೆಗೆ ಅಣಿಯಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್  ಶಶಿಕಾಂತ ಮಳ್ಳಿ.

ಆಸ್ಪತ್ರೆಯಲ್ಲಿನ ಸೌಲಭ್ಯಗಳು
* 750 ಹಾಸಿಗೆಗಳ ಆಸ್ಪತ್ರೆಯಲ್ಲಿ ದೊರೆಯಲಿದೆ ಎಲ್ಲ ಸೌಲಭ್ಯ

* ವಿಸ್ತರಣೆಯಾದ ಅವಧಿ ಕಂಪೆನಿ ಜತೆಗಿನ ಒಪ್ಪಂದದ ಪ್ರಕಾರ 2016ರಲ್ಲಿಯೇ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು.

* 50ಹೆಚ್ಚುವರಿ ವಿದ್ಯಾರ್ಥಿಗಳ ಪ್ರವೇಶ ಅನುಮತಿಗೆ  ಮನವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT