ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕರು ಪರಿಸರ ಕಾಳಜಿ ವಹಿಸಲು ಸಲಹೆ

Last Updated 22 ಮೇ 2017, 6:47 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ನೃಪತುಂಗ ಬೆಟ್ಟದಿಂದ ನಗರ ಬಸ್‌ ನಿಲ್ದಾಣದವರೆಗೆ ನೂತನ ಬಸ್‌ ಸಂಚಾರಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಭಾನುವಾರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಬಸ್‌ಗೆ ಚಾಲನೆ ನೀಡಿದ ಬಳಿಕ, ನೃಪತುಂಗ ಬೆಟ್ಟದಿಂದ ನಗರ ಬಸ್‌ ನಿಲ್ದಾಣದವರೆಗೆ ಟಿಕೆಟ್‌ ಪಡೆದು, ಗಣ್ಯರೊಂದಿಗೆ ಪ್ರಯಾಣಿಸಿದರು. ‘ನೃಪತುಂಗ ಬೆಟ್ಟ ಪ್ರವಾಸಿ ತಾಣವಾಗಿ ಬೆಳೆದಿದೆ. ಎಲ್ಲರೂ ಬೆಟ್ಟದ ಸವಿಯನ್ನು ಸವಿಯಬೇಕು’ ಎಂದು ಶೆಟ್ಟರ್‌ ಹೇಳಿದರು. ‘ಬೆಟ್ಟಕ್ಕೆ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅವರಿಗೆ ಈ ಬಸ್‌ ಸೌಲಭ್ಯ ಉಪಯೋಗ ಆಗಲಿದೆ’ ಎಂದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿ, ‘ಸಂಸ್ಥೆಗೆ ಒಂದು ತಿಂಗಳ ಹಿಂದೆ ನೃಪತುಂಗ ಬೆಟ್ಟಕ್ಕೆ ಬಸ್‌ ಪ್ರಾರಂಭಿಸಲು ಮನವಿ ಬಂದಿತ್ತು. ಅದನ್ನು ಅಧಿಕಾರಿಗಳ ಜೊತೆ ಚರ್ಚಿಸಿ, ಒಪ್ಪಿಗೆ ಪಡೆದ ನಂತರ ನೂತನ ಬಸ್‌ ಸೇವೆಗೆ ಚಾಲನೆ ನೀಡಲಾಗಿದೆ’ ಎಂದರು. ‘ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮಿನಿ ಬಸ್‌ನಲ್ಲಿ ಪ್ರಯಾಣಿಸುವುದರ ಮೂಲಕ ಪರಿಸರ ಕಾಳಜಿ ವಹಿಸಬೇಕು’ ಎಂದು ಮನವಿ ಮಾಡಿದರು. 

‘ಜನರ ಸೇವೆ ಮಾಡುವುದು ಮುಖ್ಯ. ಲಾಭ ಗಳಿಸುವುದು ಸಂಸ್ಥೆಯ ಉದ್ದೇಶ ಅಲ್ಲ. ಯಾವ ಸ್ಥಳಗಳಿಗೆ ಬಸ್‌ ವ್ಯವಸ್ಥೆ ಇಲ್ಲ ಎಂಬುದರ ಬಗ್ಗೆ ಸ್ಥಳೀಯರು ನಮ್ಮ ಗಮನಕ್ಕೆ ತಂದರೆ ಬಸ್ ಸೇವೆ ಪ್ರಾರಂಭಿಸಲು ಕ್ರಮ ಕೈಗೊಳ್ಳುತ್ಥೇವೆ’ ಎಂದರು.

‘ಹುಬ್ಬಳ್ಳಿ– ಧಾರವಾಡ ಮಹಾನಗರದಲ್ಲಿ ಮಿನಿ ಬಸ್‌ ವ್ಯವಸ್ಥೆಯನ್ನು ಸಂಸ್ಥೆ ಮಾಡಿದ್ದೇ ಆಧಲ್ಲಿ ಬಹುತೇಕ ಬಡಾವಣೆಗಳಲ್ಲಿ ನಿಲ್ದಾಣಗಳ ಕೊರತೆ ಇದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗಲಿದೆ. ಬಡಾವಣೆಗಳಲ್ಲಿ ಬಸ್‌ ನಿಲ್ದಾಣ ಕಟ್ಟಲು ಜಗದೀಶ ಶೆಟ್ಟರ್‌ ಅವರು ವ್ಯವಸ್ಥೆ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್‌, ‘ಬಡಾವಣೆಯಲ್ಲಿರುವ ಪಾಲಿಕೆಯ ಖಾಲಿ ಜಾಗವನ್ನು ಗುರುತಿಸಿ ನನಗೆ ತಿಳಿಸಿ’ ಎಂದರು.

ಬಸ್‌ನಲ್ಲಿ ಪ್ರಯಾಣಿಸುವ ವೇಳೆ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಉಣಕಲ್‌ ಕೆರೆ ವಿಷಯ ಪ್ರಸ್ತಾಪಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್‌ ‘ಎಲ್ಲರೂ ಸೇರಿ ಚರ್ಚಿಸೋಣ’ ಎಂದಷ್ಟೇ ಉತ್ತರಿಸಿದರು.

ಸಂಸದ ಪ್ರಹ್ಲಾದ ಜೋಶಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ ಅಧ್ಯಕ್ಷ ವೇದವ್ಯಾಸ ಕೌಲಗಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಾರ್ಮಿಕ ಕಲ್ಯಾಣಾಧಿಕಾರಿ ಎಸ್‌.ಕೆ. ಹಳ್ಳಿ, ಎಂ.ಎಸ್‌. ಪಾಟೀಲ, ಮಂಜು ನಾಥ ಉಗಳಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT