ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

42 ಉದ್ಯಾನಗಳ ನಿರ್ವಹಣೆಗೆ 8 ಸಿಬ್ಬಂದಿ!

ವಿವಿಧ ಸಂಘ– ಸಂಸ್ಥೆ, ಬಡಾವಣೆಗಳ ನಿವಾಸಿಗಳಿಂದ ಪಾರ್ಕ್ ಉಸ್ತುವಾರಿ
Last Updated 22 ಮೇ 2017, 7:16 IST
ಅಕ್ಷರ ಗಾತ್ರ

ಎಂ.ಎನ್‌.ಯೋಗೇಶ್‌

ಮಂಡ್ಯ: ನಗರದಲ್ಲಿರುವ 42 ಉದ್ಯಾನ ಗಳ ನಿರ್ವಹಣೆಗೆ ಕೇವಲ 8 ಮಂದಿ ಸಿಬ್ಬಂದಿ ಇದ್ದು, ಪಾರ್ಕ್‌ಗಳ ಸ್ವಚ್ಛತೆ ಕಾಪಾಡಿಕೊಳ್ಳುವುದು ಕಗ್ಗಂಟಾಗಿ ಪರಿಣಮಿಸಿದೆ.

ಎಂಟು ಮಂದಿ ಪಾರ್ಕ್‌ ನಿರ್ವಹಣಾ ಸಿಬ್ಬಂದಿಯಲ್ಲಿ ಒಬ್ಬರು ಮುಖ್ಯಸ್ಥರು, ಉಳಿದವರು ಸ್ವಚ್ಛತಾ ಸಿಬ್ಬಂದಿ. ಎರಡು ಉದ್ಯಾನಗಳಿಗೆ ಒಬ್ಬ ಸಿಬ್ಬಂದಿಯನ್ನು ನೇಮಿಸಿದ್ದು, ಪ್ರತಿದಿನ ಸ್ವಚ್ಛಗೊಳಿಸಲು ಸಾಧ್ಯವಾಗುತ್ತಿಲ್ಲ. ಸಿಬ್ಬಂದಿ ಕೊರತೆಯಿಂದ ಉದ್ಯಾನಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ ಎಂಬುದು ನಾಗರಿಕರ ಆರೋಪ.

‘ನಗರಸಭೆ ಸಿಬ್ಬಂದಿ ವಾರಕ್ಕೊಮ್ಮೆ ಬಂದು ಕಸ ಗುಡಿಸಿ ಹೋಗುತ್ತಾರೆ ಅಷ್ಟೆ, ಆದರೆ ಸಸಿ ನೆಡುವುದು, ಹಸಿರುಮಯ ವಾತಾವರಣ ಸಂರಕ್ಷಿಸುವ ಕೆಲಸ ನಡೆಯುತ್ತಿಲ್ಲ’ ಎಂದು ವಿದ್ಯಾನಗರದ ನಿವಾಸಿ ದೇವಪ್ಪ ಹೇಳುತ್ತಾರೆ.

‘ಕೊನೇ ಪಕ್ಷ ಒಂದು ಉದ್ಯಾನಕ್ಕೆ ಒಬ್ಬ ಸಿಬ್ಬಂದಿಯಾದರೂ ಬೇಕು. ಅವರಿಗೆ ಬೇರೆ ಯಾವ ಕೆಲಸ ನೀಡಬಾರದು. ಆಗ ಮಾತ್ರ ಉದ್ಯಾನ ಉಳಿಸಿಕೊಳ್ಳ ಬಹುದು’ ಎಂಬುದು ಅಶೋಕ ನಗರದ ಸ್ವಾಮಿಗೌಡ ಅವರ ಅಭಿಪ್ರಾಯ.

‘ಹೊರವಲಯದ ಬಡಾವಣೆಗಳ ಉದ್ಯಾನ ಲೆಕ್ಕಕ್ಕೆ ತೆಗೆದುಕೊಂಡರೆ ನಗರ ದಲ್ಲಿ 53 ಉದ್ಯಾನಗಳಿವೆ. ಮೊದಲು ಉದ್ಯಾನ  ನಿರ್ವಹಣೆಗಾಗಿ 35 ಮಂದಿ ಕಾರ್ಮಿಕರು ಇದ್ದರು. ಪಾರ್ಕ್‌ ನಿರ್ವಹಣೆ ಯಲ್ಲದೆ ಬೇರೆ ಯಾವ ಕೆಲಸಗಳನ್ನೂ ಅವರು ಮಾಡುತ್ತಿರಲಿಲ್ಲ. ಆದರೆ, ಕಾಲ ಕಳೆದಂತೆ ಅವರಿಗೆ ವಯಸ್ಸಾಯಿತು. ಕೆಲವರು ಮೃತಪಟ್ಟಿದ್ದಾರೆ. ಅವರ ನಂತರ ನಗರಸಭೆಯಿಂದ ನೇಮಕಾತಿ ನಡೆದಿಲ್ಲ’ ಎಂದು ನಗರಸಭೆ ಸದಸ್ಯ ಅರುಣ್‌ಕುಮಾರ್ ಹೇಳಿದರು.

‘ನೇಮಕಾತಿ ನಿಯಮ ಬದಲಾಗಿರುವ ಕಾರಣ ಇಷ್ಟು ವರ್ಷ ಸಿಬ್ಬಂದಿ ನೇಮಕಾತಿ ನಡೆದಿಲ್ಲ. ಸದ್ಯ ಹೊರ ಗುತ್ತಿಗೆ ಆಧಾರದ ಮೇಲೆ 10 ಮಂದಿ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಪ್ರಕ್ರಿಯೆ ನಡೆಯುತ್ತಿದೆ. ಈ ಬಗ್ಗೆ ನಗರಸಭೆ ಸಾಮಾನ್ಯ ಸಭೆಯಲ್ಲೇ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಅನುಮತಿ ಪಡೆದು ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗುವುದು’ ಎಂದು ನಗರಸಭೆ ಆಯುಕ್ತ ಟಿ.ಎನ್. ನರಸಿಂಹಮೂರ್ತಿ ಹೇಳಿದರು.

ಸಂಘಟನೆಗಳಿಂದ ನಿರ್ವಹಣೆ: ನಗರದ ಹಲವು ಉದ್ಯಾನಗಳನ್ನು ವಿವಿಧ ಸಂಘಟನೆಗಳು ನಿರ್ವಹಣೆ ಮಾಡುತ್ತಿವೆ. ನಗರಸಭೆಯಿಂದ ಅನುಮತಿ ಪಡೆದು ಉದ್ಯಾನ ಅಭಿವೃದ್ಧಿ ಕೆಲಸಗಳನ್ನೂ ಮಾಡುತ್ತಿವೆ.

ಎಸ್‌.ಬಿ.ಶೈಕ್ಷಣಿಕ ಸಂಸ್ಥೆ ವತಿಯಿಂದ ಹಲವು ಉದ್ಯಾನಗಳ ಅಭಿವೃದ್ಧಿ ಕಾರ್ಯ ನಡೆದಿತ್ತು. ಡಿ.ದೇವರಾಜ ಅರಸು ಸ್ವಾಭಿ ಮಾನಿ ಹಿಂದುಳಿದ ವರ್ಗಗಳ ವೇದಿಕೆ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದ ಎದುರಿನ ವೆಂಕಟಗಿರಿಯಪ್ಪ ಉದ್ಯಾನ ನಿರ್ವಹಣೆ ಮಾಡುತ್ತಿದೆ. ವೇದಿಕೆ ವತಿಯಿಂದ ಉದ್ಯಾನದಲ್ಲಿ ಸಸಿ ನೆಡಲಾಗಿದೆ. ಅಲ್ಲಲ್ಲಿ ಕಸದ ತೊಟ್ಟಿ ಇಡಲಾಗಿದ್ದು ಭದ್ರತಾ ಸಿಬ್ಬಂದಿ ನೇಮಕ ಮಾಡಲಾ ಗಿದೆ. ಶುದ್ಧ ಕುಡಿಯುವ ನೀರಿನ ಘಟಕವನ್ನೂ ಸ್ಥಾಪನೆ ಮಾಡಲಾಗಿದೆ.

ನಾಗರಿಕರಿಂದ ನಿರ್ವಹಣೆ: ಆಯಾ ಬಡಾವಣೆ ನಿವಾಸಿಗಳೇ ಉದ್ಯಾನ ನಿರ್ವಹಣೆ ಮಾಡುತ್ತಿದ್ದಾರೆ. ಕಲ್ಲಹಳ್ಳಿ ಜನರು ನಗರಸಭೆಯಿಂದ ಅನುಮತಿ ಪಡೆದು ನಿರ್ವಹಣೆ ಹೊಣೆ ಹೊತ್ತಿದ್ದಾರೆ. ಡಾ.ರಾಜ್‌ಕುಮಾರ್‌ ಬಡಾವಣೆ ಯಲ್ಲಿ ಜನರು ರಾಜ್‌ ಹೆಸರಿನ ವೇದಿಕೆ ರಚನೆ ಮಾಡಿಕೊಂಡು ಉದ್ಯಾನ ನೋಡಿಕೊಳ್ಳುತ್ತಿದ್ದಾರೆ.

₹ 2 ಕೋಟಿ ಅನುದಾನ: ‘ಅಮೃತ್‌ ಯೋಜನೆಯಡಿ ವಿವಿಧ ಪಾರ್ಕ್‌ಗಳ ಅಭಿವೃದ್ಧಿಗಾಗಿ ₹ 2 ಕೋಟಿಗೆ ಅನುಮೋದನೆ ದೊರೆತಿದೆ. ಈಗಾಗಲೇ ಅಶೋಕನಗರ ಪಾರ್ಕಿಗೆ ₹ 40 ಲಕ್ಷ ಬಿಡುಗಡೆಯಾಗಿದೆ. ಹಂತ ಹಂತವಾಗಿ ನಗರದ ಎಲ್ಲ ಪಾರ್ಕ್‌ಗಳ ಅಭಿವೃದ್ಧಿಗೊ ಳಿಸಲಾಗುವುದು’ ಎಂದು ಆಯುಕ್ತ ನರಸಿಂಹ ಮೂರ್ತಿ ತಿಳಿಸಿದರು.

ಮಳೆ ನೀರು ಸಂಗ್ರಹ ಘಟಕ ಕಡ್ಡಾಯ
ಮಂಡ್ಯ:
ಅಮೃತ್‌ ಯೋಜನೆಯಡಿ ಉದ್ಯಾನ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವಾಗ ಕೆಲ ಕಡ್ಡಾಯ ನಿಯಮ ವಿಧಿಸಲಾಗಿದೆ. ಅದರಲ್ಲಿ ಪ್ರತಿ ಉದ್ಯಾನದಲ್ಲಿ ಮಳೆ ನೀರು ಸಂಗ್ರಹ ಘಟಕ  ಕಡ್ಡಾಯ. ಇದರಿಂದ ವ್ಯರ್ಥವಾಗಿ ಹರಿದು ಹೋಗುವ ನೀರಿನ ಸಂರಕ್ಷಣೆ ಮಾಡುವ ಜತೆಗೆ ಉದ್ಯಾನಕ್ಕೆ ಬರುವ ಜನರಲ್ಲಿ  ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ.

*
ಉದ್ಯಾನ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ನಿರ್ವಹಣಾ ಸಿಬ್ಬಂದಿ ಕೊರತೆ ಶೀಘ್ರದಲ್ಲಿ ಬಗೆಹರಿಯಲಿದ್ದು 10 ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗುವುದು.
-ಟಿ.ಎನ್‌.ನರಸಿಂಹಮೂರ್ತಿ,
ನಗರಸಭೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT