ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣಗುಡುತ್ತಿದೆ ಹಗಲು ಯೋಗಕ್ಷೇಮ ಕೇಂದ್ರ

Last Updated 22 ಮೇ 2017, 7:32 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ಹಬ್ಬುವಾಡದ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರವು ಹಿರಿಯ ಜೀವಗಳು ಬಾರದೇ ಬಣಗುಡುತ್ತಿದೆ. ಕೇಂದ್ರದಲ್ಲಿ ಹಲವು ಸೌಲಭ್ಯಗಳಿದ್ದರೂ ಸದುಪಯೋಗ ಆಗುತ್ತಿಲ್ಲ. ಅಲ್ಲದೇ ಫಲಾನುಭವಿಗಳನ್ನು ತನ್ನತ್ತ ಸೆಳೆಯುವಲ್ಲಿ ವಿಫಲವಾಗಿದೆ.

ಸಂಕಷ್ಟದಲ್ಲಿರುವ ಹಾಗೂ ಸೌಲಭ್ಯಗಳಿಂದ ವಂಚಿತರಾಗಿರುವ ಹಿರಿಯ ನಾಗರಿಕರ ಕಾಳಜಿಗಾಗಿ ರಾಜ್ಯ ಸರ್ಕಾರ ಹಲವು ಜಿಲ್ಲೆಗಳಲ್ಲಿ ಹಗಲು ಯೋಗಕ್ಷೇಮ ಕೇಂದ್ರವನ್ನು ಸ್ಥಾಪಿಸಿದೆ. ಅದೇ ರೀತಿ ಮೂರು ತಿಂಗಳ ಹಿಂದೆ ನಗರದ ಬಾಡಿಗೆ ಕಟ್ಟಡವೊಂದರಲ್ಲಿ ಕೇಂದ್ರವು ಆರಂಭವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ ಉದ್ಘಾಟಿಸಿದ್ದರು.

ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಬೆಳಗಾವಿಯ ಮಲ್ಲಿಕಾರ್ಜುನ ಜನ ಸೇವಾ ಸೊಸೈಟಿಯು ಈ ಕೇಂದ್ರವನ್ನು ನಡೆಸುವ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಸರ್ಕಾರವು ಈ ಸಂಸ್ಥೆಗೆ ವಾರ್ಷಿಕವಾಗಿ ₹ 11.20 ಲಕ್ಷ ಅನುದಾನ ನೀಡುತ್ತದೆ.

ಕೇಂದ್ರದಲ್ಲಿ ಏನೇನಿದೆ?: 60 ವರ್ಷ ತುಂಬಿದ ಹಿರಿಯ ನಾಗರಿಕರಿಗೆ ಈ ಕೇಂದ್ರವು ಹಲವು ಸೌಲಭ್ಯಗಳನ್ನು ಒದಗಿಸಿದೆ. ದಿನಪತ್ರಿಕೆ, ನಿಯತಕಾಲಿಕೆಗಳು, ಟಿ.ವಿ., ಸಾಂಸ್ಕೃತಿಕ ಕಾರ್ಯಕ್ರಮ, ಪ್ರವಾಸ, ಆರೋಗ್ಯ ತಪಾಸಣೆ ಸೌಲಭ್ಯಗಳು ಇಲ್ಲಿವೆ. ಸಮಯ ಕಳೆಯಲು ಕೇರಂ ಹಾಗೂ ಚೆಸ್‌ ಆಟಿಕೆಗಳು ಹಾಗೂ ಕೂರಲು ಅಗತ್ಯವಾದ ಪ್ಲಾಸ್ಟಿಕ್‌ ಖುರ್ಚಿಗಳು ಲಭ್ಯವಿದೆ. ಮಧ್ಯಾಹ್ನ ಲಘು ಉಪಾಹಾರ ಹಾಗೂ ಸಂಜೆ ಚಹಾ ಅಥವಾ ಕಷಾಯ ನೀಡಲಾಗುತ್ತದೆ. ಈ ಸೌಲಭ್ಯ ಪಡೆಯಲು ಹಿರಿಯ ನಾಗರಿಕರು ಯಾವುದೇ ಶುಲ್ಕ ಪಾವತಿ ಮಾಡಬೇಕಾಗಿಲ್ಲ. ಎಲ್ಲವೂ ಉಚಿತವಾಗಿರುತ್ತದೆ.

ಸಮಾಜ ವಿಷಯ ಪರಿಶೀಲಕರು 1, ಶುಶ್ರೂಷಕಿಯರು 2 ಹಾಗೂ ಅಡುಗೆ ಮಾಡುವವರು ಸೇರಿ ಒಟ್ಟು 4 ಮಂದಿ ಗೌರವಧನದ ಆಧಾರದ ಮೇಲೆ ಈ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕೇಂದ್ರವು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಕಾರ್ಯನಿರ್ವಹಿಸುತ್ತಿದ್ದು, ಭಾನುವಾರ ರಜೆ ಇರುತ್ತದೆ.

ಪ್ರಚಾರದ ಕೊರತೆ: ಈ ಕೇಂದ್ರ ಆರಂಭಗೊಂಡು ಮೂರು ತಿಂಗಳು ಕಳೆದರೂ ಹೆಚ್ಚು ಪ್ರಚಾರ ಪಡೆದುಕೊಂಡಿಲ್ಲ. ಹೀಗಾಗಿ ಪ್ರತಿನಿತ್ಯ ಬೆರಳೆಣಿಕೆಯಷ್ಟು ಮಂದಿ ಮಾತ್ರ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಅದರಲ್ಲೂ ಮಧ್ಯಾಹ್ನ ನಂತರ ಕೇಂದ್ರ ಖಾಲಿ ಹೊಡೆಯುತ್ತಿರುತ್ತದೆ.

ಈ ಕೇಂದ್ರಕ್ಕೆ ನಿತ್ಯ ಎಷ್ಟು ಮಂದಿ ಬಂದು ಹೋಗುತ್ತಾರೆ ಎಂಬುದನ್ನು ದಾಖಲಾತಿ ಪುಸ್ತಕದಲ್ಲಿ ನೋಂದಾಯಿಸುತ್ತಿದ್ದೇವೆ. ಪ್ರತಿದಿನ ಸುಮಾರು 35 ಮಂದಿ ಭೇಟಿ ನೀಡುತ್ತಾರೆ ಎಂಬುದು ನಮ್ಮ ನಿರೀಕ್ಷೆಯಾಗಿತ್ತು. ಆದರೆ ನಿತ್ಯ ಬರುವವರ ಸಂಖ್ಯೆ 10ರಿಂದ 15 ಮಾತ್ರ. ಕೇಂದ್ರದಲ್ಲಿ ಸಣ್ಣ  ಗ್ರಂಥಾಲಯ ಮಾಡುವ ಯೋಜನೆಯಿದ್ದು, ಹಿರಿಯರ ಅಭಿರುಚಿಗೆ ತಕ್ಕಂಥ ಪುಸ್ತಕಗಳನ್ನು ಅಲ್ಲಿ ಜೋಡಿಸಲಾಗುವುದು. ಹಿರಿಯ ನಾಗರಿಕರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಕೇಂದ್ರದ ಸಮಾಜ  ವಿಷಯ ಪರಿಶೀಲಕ  ರಾಜಗೋಪಾಲ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT