ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿಗರ ಆಕರ್ಷಣೆಯ ಪ್ರವಾಸಿ ತಾಣಗಳು

Last Updated 22 ಮೇ 2017, 7:38 IST
ಅಕ್ಷರ ಗಾತ್ರ

ಹೊನ್ನಾವರ: ಅರಣ್ಯ ಇಲಾಖೆ ಈಗ ಕೇವಲ ಅರಣ್ಯ ಬೆಳೆಸುವ ಅಥವಾ ರಕ್ಷಿಸುವ ಇಲಾಖೆಯಾಗಿ ಉಳಿದಿಲ್ಲ. ತನ್ನ ವ್ಯಾಪ್ತಿಯ ಹಲವು ಜಾಗಗಳನ್ನು ಪ್ರವಾಸಿ ತಾಣವಾಗಿಸಿ ಜನಸ್ನೇಹಿ ಇಲಾಖೆಯಾಗುವತ್ತ ದಾಪುಗಾಲು ಇಡುತ್ತಿದೆ.

ಪಶ್ಚಿಮ ಘಟ್ಟದ ಸಾಲಿನ ಹಸಿರು ಹಾಗೂ ಅರಬ್ಬೀ ಸಮುದ್ರದ ನೀಲ ರಾಶಿಯ ನಡುವೆ ಪವಡಿಸಿರುವ ಕರಾವಳಿ ತೀರದ ಹೊನ್ನಾವರ ತಾಲ್ಲೂಕಿನಲ್ಲಿ ಪ್ರಾಕೃತಿಕ ಚೆಲುವುಳ್ಳ ಹಲವು ಪ್ರದೇಶಗಳಿವೆ. ಈ ಸಹಜ ಸೌಂದರ್ಯದ ಜಾಗಗಳ ಸೌಂದರ್ಯ ವರ್ಧನೆ ಮಾಡಿ ಅವುಗಳನ್ನು ಪರಿಸರ ಪ್ರವಾಸಿ ತಾಣಗಳನ್ನಾಗಿ ಪರಿವರ್ತಿಸುವಲ್ಲಿ ಅರಣ್ಯ ಇಲಾಖೆ ಮಹತ್ವದ ಕಾರ್ಯ ಮಾಡುತ್ತಿದೆ.

ಕೃಷ್ಣ ಡಿ.ಉದಪುಡಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದಾಗ ಆರಂಭ ಗೊಂಡ ಈ ಕೆಲಸ ಮುಂದೆ ಡಾ.ಎಸ್.ರಮೇಶ ಅವರ ಅಧಿಕಾರಾ ವಧಿಯಲ್ಲಿ ಮುಂದುವರಿದು ಇದೀಗ ವಸಂತ ರೆಡ್ಡಿ ಕೆ.ವಿ. ಅವರ ನೇತೃತ್ವದಲ್ಲಿ ಇನ್ನಷ್ಟು ಬಲ ಪಡೆದುಕೊಂಡಿದೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ ಎಚ್.ಸಿ. ಅವರಂಥ ಕಳಕಳಿಯುಳ್ಳ ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡ ಈ ದಿಶೆಯಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತಿದೆ.

ಅಪ್ಸರಕೊಂಡದ ಸಮುದ್ರ ತೀರ, ಕಾಸರಕೋಡ ಇಕೋ ಬೀಚ್, ಹೈಗುಂದ ದ್ವೀಪ, ಇಡಗುಂಜಿಯ ವಿನಾಯಕ ವನ, ಗೇರುಸೊಪ್ಪದ ಸಿಂಗಳೀಕ ಪಾರ್ಕ್‌ ಇವೆಲ್ಲ ಅರಣ್ಯ ಇಲಾಖೆ ಈಗಾಗಲೇ ಅಭಿವೃದ್ಧಿಪಡಿಸಿರುವ ತಾಲ್ಲೂಕಿನ ಪರಿಸರ ಪ್ರವಾಸಿ ತಾಣಗಳು. ಇದರ ಜೊತೆಗೆ ರಾಮತೀರ್ಥ, ಕಾಮಕೋಡ ದೇವರಕಾಡು, ಕರಿಕಾಲಮ್ಮನ           ಗುಡ್ಡ ಮೊದಲಾದ ಪೌರಾಣಿಕ  ಹಾಗೂ ಧಾರ್ಮಿಕ ಹಿನ್ನೆಲೆಯುಳ್ಳ ಪ್ರಾಕೃತಿಕ ತಾಣಗಳು ಪ್ರವಾಸಿಗರಿಗೆ ಸೌಂದರ್ಯ ಉಣಬಡಿಸುತ್ತ ತಮ್ಮ ಕತೆ ಹೇಳುತ್ತಿವೆ.

ಅಪ್ಸರಕೊಂಡ, ಕಾಸರಕೋಡನಲ್ಲಿ ಪ್ರವಾಸಿಗರಿಗಾಗಿ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಗೇರುಸೊಪ್ಪದ ಸಿಂಗಳೀಕ ಇಕೋಪಾರ್ಕ್‌ನಲ್ಲಿ ಪ್ರವಾಸಿಗರಿಗೆ ಉಳಿದುಕೊಳ್ಳಲು ಕಾಟೇಜ್‌ಗಳಿವೆ. ಪರಿಸರ ಶಿಕ್ಷಣ ನೀಡಲು ಅಗತ್ಯ ತಾಂತ್ರಿಕತೆ, ತಂತ್ರಜ್ಞರಿದ್ದಾರೆ. ಈ ಸ್ಥಳಗಳಲ್ಲಿರುವ ನರ್ಸರಿಗಳಲ್ಲಿ ನಾಟಿಗೆ ಸಿದ್ಧವಾಗಿರುವ ಗಿಡಗಳು ಆಳೆತ್ತರಕ್ಕೆ ಬೆಳೆದು ನಿಂತಿದ್ದು ವಿದ್ಯಾರ್ಥಿಗಳಿಗೆ ಇವು ಸಸ್ಯಶಾಸ್ತ್ರದ ಜೀವಂತ ಪ್ರಯೋಗಾಲಯದಂತಿವೆ.

ಪರಿಸರ ಪ್ರವಾಸಿ ತಾಣಗಳ ಅಭಿವೃದ್ಧಿ ಅರಣ್ಯ ರಕ್ಷಣೆಗೂ ನೆರವಾಗಿದ್ದು ಈ ಜಾಗಗಳ ಅತಿಕ್ರಮಣಕ್ಕೆ ಕಡಿವಾಣ ಹಾಕಿವೆ. ಶರಾವತಿ ಸೇರಿದಂತೆ ತಾಲ್ಲೂಕಿನಲ್ಲಿ ಹರಿಯುವ ಹಲವು ನದಿಗಳು ಹಾಗೂ ಸಮುದ್ರ ಬೋಟಿಂಗ್ ಹಾಗೂ ಇತರ ನೀರಾಟಗಳಿಗೆ ಅವಕಾಶ ಕಲ್ಪಿಸಿವೆ. ಮುಖ್ಯವಾಗಿ ಕಾಸರಕೋಡ ಹಾಗೂ ಅಪ್ಸರಕೊಂಡ ದಿನನಿತ್ಯ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಪ್ರವಾಸಿ ತಾಣಗಳಲ್ಲಿ ಕೆಲ ಉದ್ಯೋಗ ಸೃಷ್ಟಿಯಾಗಿದೆ.

‘ಅರಣ್ಯ ಉತ್ಪನ್ನಗಳಿಗೆ ಇಲ್ಲಿ ಮಾರುಕಟ್ಟೆ ಕಲ್ಪಿಸಿ ಜನರ ಆದಾಯ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ ಎಚ್.ಸಿ.ತಿಳಿಸಿದರು.

ನಿರ್ವಹಣೆಗೆ ಸಂಬಂಧಿಸಿದಂತೆ ಈ ಎಲ್ಲ ಪರಿಸರ ಪ್ರವಾಸಿ ತಾಣಗಳನ್ನು ಅವಲಂಬನಾ ರಹಿತವಾಗಿಸುವ ಉದ್ದೇಶ ಇಲಾಖೆಗಿದೆ. ಕಾಸರಕೋಡ ಇಕೋ ಬೀಚ್‌ನಲ್ಲಿ ಪ್ರವಾಸಿಗರಿಂದ ಶುಲ್ಕದ ರೂಪದಲ್ಲಿ ಸಾಕಷ್ಟು ಹಣ ಸಂಗ್ರಹವಾಗುತ್ತಿದ್ದು ನಿರ್ವಹಣೆಗೆ ಹಣದ ಕೊರತೆಯಿಲ್ಲ’ಎಂದು ಶರಾವತಿ ಅರಣ್ಯ ಸಮಿತಿಯ ಅಧ್ಯಕ್ಷ ನಾರಾಯಣ ಭಟ್ ತಿಳಿಸಿದರು.

ತಾಲ್ಲೂಕಿನ ಎಲ್ಲ ಪ್ರವಾಸಿ ತಾಣಗಳನ್ನು ಜೋಡಿಸಿ ‘ಪ್ಯಾಕೇಜ್ ಟೂರ್’ ಕಲ್ಪಿಸುವ ಮೂಲಕ ಪ್ರವಾಸಿಗರಿಗೆ ಎಲ್ಲ ಪ್ರವಾಸಿ ತಾಣಗಳನ್ನು ಆನಂದಿಸುವ ಅವಕಾಶ ಕಲ್ಪಿಸಬೇಕು’ ಎಂದು ಕಾಸರಕೋಡ್‌ನಲ್ಲಿ ಸಿಕ್ಕ ಪ್ರವಾಸಿಗರೋರ್ವರು ಸಲಹೆ ನೀಡಿದರು.

‘ಶೈಕ್ಷಣಿಕ ಉದ್ದೇಶ’
ಪರಿಸರ ರಕ್ಷಣೆ ಹಾಗೂ ಹಾಗೂ ಇದರ ಮಹತ್ವದ ಕುರಿತು ಅರಿವು ಮೂಡಿಸುವ ಶೈಕ್ಷಣಿಕ ಉದ್ದೇಶ ಈ ಪರಿಸರ ಪ್ರವಾಸಿ ತಾಣಗಳ ಅಭಿವೃದ್ಧಿಯಿಂದ ಈಡೇರಲು ಸಾಧ್ಯ. ಜನರಿಗೆ ಮನರಂಜನೆಯ ಜೊತೆಗೆ ಆದಾಯವೂ ಸಿಗುತ್ತದೆ ಎಂದು ಹೊನ್ನಾವರ ಉಪ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ  ಬಾಲಚಂದ್ರ ಎಚ್.ಸಿ. ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT