ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಮೂಲಗಳ ಪುನಶ್ಚೇತನಕ್ಕೆ ಆದ್ಯತೆ: ಒತ್ತಾಯ

Last Updated 22 ಮೇ 2017, 7:42 IST
ಅಕ್ಷರ ಗಾತ್ರ

ಮುಂಡಗೋಡ: ಸತತ ಬರಗಾಲದಿಂದ ಕೆರೆಕಟ್ಟೆಗಳು ಬತ್ತಿ ಹೋಗಿರುವುದು ಒಂದೆಡೆಯಾದರೇ, ಅರಣ್ಯ ಪ್ರದೇಶದಲ್ಲಿ ಹುಲ್ಲು, ಮೇವು ಸಿಗದೇ  ಜಾನುವಾರು ಗಳು, ಕಾಡು ಪ್ರಾಣಿಗಳು ಪರಿತಪಿಸು ವಂತಾಗಿದೆ. ಪ್ರಾಣಿ, ಪಕ್ಷಿಗಳು ನೀರಿಗಾಗಿ  ತೀವ್ರ ತೊಂದರೆ ಅನುಭವಿಸಿ, ಜೀವ ಕಳೆದುಕೊಂಡಿವೆ. ಕಳೆದ ಒಂದು ದಶಕದ ಅವಧಿಯಲ್ಲಿ ಬರದ ಪೆಟ್ಟು ಕಾಡುಪ್ರಾಣಿಗಳಲ್ಲಿಯೂ ಕಂಡು ಬಂದಿರುವುದು ಇದೇ ಮೊದಲು ಎಂದು ಅಂದಾಜಿಸಲಾಗಿದೆ.

‘90ರ ದಶಕದ ಮಳೆಯ ಪ್ರಮಾಣಕ್ಕೂ, ಇತ್ತೀಚಿನ ಎಂಟತ್ತು ವರ್ಷದ ಮಳೆಯ ಪ್ರಮಾಣಕ್ಕೂ ಬಹಳ ವ್ಯತ್ಯಾಸ ಕಂಡುಬರುತ್ತಿದೆ. ಈ ಹಿಂದೆ ಸತತ ಮೂರನಾಲ್ಕು ತಿಂಗಳು ಒಂದೇ ಸಮನೆ ಸುರಿಯುತ್ತಿದ್ದ ಮಳೆಯ ಚಿತ್ರಣ, ಈಗ ನೆನಪಾಗಿದೆ. ಅರೆಮಲೆನಾಡು ಎಂದು ಕರೆಯಿಸಿಕೊಂಡರೂ, ಭತ್ತದ ಕಣಜ ತುಂಬುವಲ್ಲಿ ತಾಲ್ಲೂಕು ಮೊದಲನೆ ಸ್ಥಾನದಲ್ಲಿತ್ತು. ಆದರೆ, ಇತ್ತೀಚಿನ ಮಳೆಯನ್ನು ನೋಡಿದರೆ, ಅರೆಮಲೆನಾಡು ಸಹ ಹೋಗಿ ಬಯಲುಸೀಮೆಯ ವಾತಾವರಣ ನೋಡಿದಂತಾಗುತ್ತದೆ’ ಎಂದು ಹಿರಿಯರಾದ ಹನುಮಂತಪ್ಪ  ಹಿಂದಿನ ದಿನಗಳನ್ನು ಮೆಲುಕು ಹಾಕಿದರು.

‘ಕಳೆದ ಎರಡು ತಿಂಗಳ ಅವಧಿಯಲ್ಲಿ  ಆಹಾರ, ನೀರು ಅರಸುತ್ತ ನಾಡಿನತ್ತ ಮುಖ ಮಾಡಿ, ಜೀವ ಕಳೆದುಕೊಂಡ ಜಿಂಕೆಗಳ ಸಂಖ್ಯೆ 15 ರ ಆಸುಪಾಸಿ ನಲ್ಲಿರುವುದು ಸಮಸ್ಯೆಯ ಗಂಭೀರತೆ ಯನ್ನು ಸೂಚಿಸುತ್ತದೆ. ಒಣಗಿ ನಿಂತಿರುವ ಅರಣ್ಯ ಪ್ರದೇಶದಿಂದ ಕಾಡುಪ್ರಾಣಿ, ಪಕ್ಷಿಗಳು ನೀರಿನ ದಾಹ ಇಂಗಿಸಿಕೊಳ್ಳಲು ಜನವಸತಿಯತ್ತ ಬರುತ್ತಿರುವುದು ಮುಂದುವರಿದಿದೆ. ಸಾರ್ವಜನಿಕರು, ಅರಣ್ಯ ಇಲಾಖೆಯವರು ಅರಣ್ಯದಂಚಿ ನಲ್ಲಿ ಕೃತಕ ನೀರಿನ ತೊಟ್ಟಿಗಳನ್ನು ಮಾಡಿ, ಪ್ರಾಣಿ, ಪಕ್ಷಿಗಳ ಬಾಯಾರಿಕೆ ಇಂಗಿಸುವ ಪ್ರಯತ್ನ ಮಾಡಿರುವುದು ಪರಿಸ್ಥಿತಿಯ ಗಂಭೀರತೆಗೆ ಹಿಡಿದ ಕನ್ನಡಿಯಾಗಿದೆ’ ಎಂದು ಹೇಳುತ್ತಾರೆ.

‘ಗೌಳಿ ಜನಾಂಗದಲ್ಲಿ ಹೆಚ್ಚು ಸಂಖ್ಯೆ ಯಲ್ಲಿರುವ ಎಮ್ಮೆ, ಆಕಳು ಸೇರಿದಂತೆ ಜಾನುವಾರುಗಳಿಗೆ ಮೇವು, ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು,  ಒಂದೊಂದು ಗೌಳಿ ದಡ್ಡಿ (ಗ್ರಾಮ)ಯ ಜಾನುವಾರುಗಳನ್ನು ಗುಂಪಾಗಿ ಮಾಡಿ ಕೊಂಡು, ಅರಣ್ಯ ಪ್ರದೇಶದಲ್ಲಿ ಅಲ್ಪಸ್ವಲ್ಪ ಉಳಿದಿರುವ ನೀರಿನ ಸಂಗ್ರಹಗಳ ಸನಿಹ ಮೇಯಿಸಲು ಹೋಗುತ್ತೇವೆ. ಮೊದಲಿಗೆ ಬೆಳಿಗ್ಗೆ ಹೋಗಿ ಸಂಜೆಯ ವೇಳೆಗೆ ಜಾನುವಾರುಗಳನ್ನು ಮನೆಯತ್ತ ಕರೆದು ಕೊಂಡು ಬರಲಾಗುತ್ತಿತ್ತು. ಆದರೆ ಈಗ ನೀರಿದ್ದ ಕಡೆಯೇ ನಾಲ್ಕೈದು ದಿನಗಳ ವರೆಗೆ ಇದ್ದು, ಜಾನುವಾರು ಗಳನ್ನು ಮೇಯಿಸಲಾಗುತ್ತಿದೆ’ ಎಂದು  ಅರಿಶಿಣ ಗೇರಿ ಗೌಳಿ ದಡ್ಡಿಯ ವಿಠ್ಠು ವರಕ್‌ ಹೇಳಿದರು.

‘ಅರಣ್ಯಪ್ರದೇಶದಲ್ಲಿ ಮೇವು, ನೀರಿನ ಕೊರತೆಯಿಂದ ಪ್ರಾಣಿಗಳು ಜನವಸತಿಯತ್ತ ಬರುತ್ತಿವೆ. ಒಂದೆರೆಡು ದೊಡ್ಡ ಮಳೆ ಆದರೆ ಅರಣ್ಯದಲ್ಲಿ ಆಹಾರ, ನೀರಿನ ಸಮಸ್ಯೆ ಸುಧಾರಿಸುತ್ತದೆ. ಹೀಗಾಗಿ ಮಳೆಯ ನಿರೀಕ್ಷೆಯಲ್ಲಿದ್ದೇವೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ರಮೇಶ ಹೇಳಿದರು.

* * 

ಕಾಡಿನಲ್ಲಿರುವ ಪ್ರಾಣಿ, ಪಕ್ಷಿಗಳ ಅನುಕೂಲಕ್ಕೆ ಹಲವೆಡೆ ಕೃತಕ ನೀರಿನ ತೊಟ್ಟಿಗಳನ್ನು ಮಾಡಲಾಗಿದೆ. ಅರಣ್ಯಪ್ರದೇಶದಲ್ಲಿ ಹುಲ್ಲು, ಮೇವು ಸಿಗದಿರುವುದು ತೊಂದರೆಯಾಗಿದೆ
ಬಿ.ರಮೇಶ
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT