ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲಾಪುರ ಕೆರೆಯ ಹೂಳಿಗೂ ಮೋಕ್ಷ

ಅಕ್ಷರ ಗಾತ್ರ

ಹೊಸಪೇಟೆ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಳ್ಳಾರಿ ಜಿಲ್ಲಾ ಘಟಕವು ಇಲ್ಲಿನ ತುಂಗಭದ್ರಾ ಜಲಾಶಯದಲ್ಲಿ ನಾಲ್ಕು ದಿನಗಳಿಂದ ‘ಹೂಳಿನ ಜಾತ್ರೆ’ ನಡೆಸುತ್ತಿದ್ದರೆ, ತಾಲ್ಲೂಕಿನ ಕಮಲಾಪುರ ಕೆರೆಯಲ್ಲಿ ಸದ್ದಿಲದೇ ಹೂಳು ಸಾಗಿಸುವ ಕೆಲಸ ನಡೆದಿದೆ.

ತಾಲ್ಲೂಕಿನ ಮಲಪನಗುಡಿ, ಹೊಸಮಲಪನಗುಡಿ, ಕಡ್ಡಿರಾಂಪುರ, ಹಂಪಿ, ಕಮಲಾಪುರ, ಬುಕ್ಕಸಾಗರ, ಕಂಪ್ಲಿ, ಕೊಂಡನಾಯಕನಹಳ್ಳಿ, ಸೀತಾ ರಾಮ ತಾಂಡಾ, ಪಾಪಿನಾಯಕನಹಳ್ಳಿ ಸೇರಿದಂತೆ ಕೆರೆ ಸುತ್ತಮುತ್ತಲಿನ ಗ್ರಾಮ ಸ್ಥರು ಮೂರು ದಿನಗಳಿಂದ ಹೂಳು ಕೊಂಡೊಯ್ಯುತ್ತಿದ್ದಾರೆ. ಹತ್ತು ಜೆ.ಸಿ.ಬಿ, ಎರಡು ಹಿಟಾಚಿ ಹಾಗೂ 120ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಲ್ಲಿ ರೈತರು ತಮ್ಮ ಜಮೀನುಗಳಿಗೆ ಮಣ್ಣು ಕೊಂಡೊ ಯ್ಯುತ್ತಿದ್ದಾರೆ.

ನಿತ್ಯ ಸಾವಿರಕ್ಕೂ ಹೆಚ್ಚು ಟ್ರಿಪ್‌ ಟ್ರ್ಯಾಕ್ಟರ್‌ಗಳಲ್ಲಿ ಮಣ್ಣು ಹೋಗುತ್ತಿದೆ. ಮೂರೇ ದಿನಗಳಲ್ಲಿ ಸುಮಾರು ಐದು ಎಕರೆ ಕೆರೆ ಜಾಗದಿಂದ ಮೂರರಿಂದ ನಾಲ್ಕು ಅಡಿಗಳಷ್ಟು ಫಲವತ್ತಾದ ಮಣ್ಣು ರೈತರ ಹೊಲಗಳಿಗೆ ಸೇರಿದೆ. ಬೆಳಿಗ್ಗೆ ಎಂಟು ಗಂಟೆಗೆ ಹೂಳು ಸಾಗಿಸುವ ಕೆಲಸ ಆರಂಭವಾದರೆ ಸೂರ್ಯಾಸ್ತದ ವರೆಗೆ ಎಡೆಬಿಡದೇ ನಡೆಯುತ್ತಿದೆ. ಕಮಲಾ ಪುರ ಕೆರೆಯ ಅಂಗಳದಲ್ಲಿ ಈಗ ಏನಿ ದ್ದರೂ ಜೆಸಿಬಿ, ಹಿಟಾಚಿ ಹಾಗೂ ಟ್ರ್ಯಾಕ್ಟರ್‌ಗಳ ಕಾರುಬಾರು.

ಹಂಪಿ ರಸ್ತೆ ಅಕ್ಕಪಕ್ಕದ ಹೊಲಗಳ ಮೇಲೆ ಕಣ್ಣಾಡಿಸಿದರೆ ಟ್ರ್ಯಾಕ್ಟರ್‌ಗಳಿಂದ ಹೂಳು ಇಳಿಸುತ್ತಿರುವ ದೃಶ್ಯ ಸರ್ವೇ ಸಾಮಾನ್ಯ. ಒಂದು ರೀತಿಯಲ್ಲಿ ‘ಹೂಳಿನ ಜಾತ್ರೆ’ ಎಂಬಂತೆ ಭಾಸವಾಗುತ್ತಿದೆ.

ಸರ್ಕಾರದ ಕಣ್ಣು ತೆರೆಸಲು ರಾಜ್ಯ ರೈತ ಸಂಘವು ತುಂಗಭದ್ರಾ ಜಲಾಶಯ ದಲ್ಲಿ ಸಾಂಕೇತಿಕವಾಗಿ ‘ಹೂಳಿನ ಜಾತ್ರೆ’ ಆಯೋಜಿಸಿದೆ. ಇದಕ್ಕಾಗಿ ಜಿಲ್ಲೆಯಾ ದ್ಯಂತ ವ್ಯಾಪಕ ಪ್ರಚಾರ ನಡೆಸಿದೆ. ದೇಣಿಗೆ ಕೂಡ ಸಂಗ್ರಹಿಸುತ್ತಿದೆ. ಆದರೆ, ಕಮಲಾಪುರ ಕೆರೆಯಿಂದ ಹೂಳೆತ್ತು ವುದರ ಬಗ್ಗೆ ಯಾವುದೇ ಪ್ರಚಾರ ನಡೆದಿರಲಿಲ್ಲ.

ಯಾರಿಂದ ಹಣವೂ ಸಂಗ್ರಹಿಸಿಲ್ಲ. ರೈತರು ತಾವೇ ಸ್ವತಃ ಜೆಸಿಬಿಗೆ ಹಣ ಪಾವತಿಸಿ ತಮ್ಮ ಟ್ರ್ಯಾಕ್ಟರ್‌ ಗಳಲ್ಲಿ ಮಣ್ಣು ತೆಗೆದುಕೊಂಡು ಹೋಗು ತ್ತಿದ್ದಾರೆ. ಜಿಲ್ಲಾಧಿಕಾರಿ ರಾಮಪ್ರಸಾದ ಮನೋಹರ್‌ ಅವರ ನಿರ್ದೇಶನದ ಮೇರೆಗೆ ಇತ್ತೀಚೆಗೆ ಕೆರೆಯ ಸರ್ವೇ ನಡೆಸಿ, ಗಡಿ ಗುರುತಿಸಲಾಗಿದೆ.

‘ಸರ್ಕಾರ ಕೆರೆ ಹೂಳು ತೆಗೆಸಬೇಕು ಅಥವಾ ರೈತರಿಗೆ ಹೂಳು ಕೊಂಡೊಯ್ಯಲು ಅವಕಾಶ ಕಲ್ಪಿಸಬೇಕು’ ಎಂದು ಜನ ಸಂಗ್ರಾಮ ಪರಿಷತ್‌ನ ರಾಜ್ಯ ಕಾರ್ಯ ಕಾರಿ ಸದಸ್ಯ ಶಿವಕುಮಾರ ಮಾಳಗಿ ಅವರು ಜಿಲ್ಲಾಧಿಕಾರಿಗೆ ಕೋರಿದ್ದರು. ನೀರಾವರಿ ಇಲಾಖೆಯು ರೈತರಿಗೆ ಹೂಳು ಕೊಂಡೊಯ್ಯಲು ಅನುಮತಿ ನೀಡಿದೆ. ಆರಂಭದಲ್ಲಿ ನಾಲ್ಕೈದು ಜನ ಮಾತ್ರ ಹೂಳು ತೆಗೆದುಕೊಂಡು ಹೋಗುತ್ತಿ ದ್ದರು. ಒಬ್ಬರಿಂದ ಒಬ್ಬರ ಕಿವಿಗೆ ಈ ವಿಷಯ ಮುಟ್ಟಿದ ನಂತರ ರೈತರು ತಾ ಮುಂದೆ, ನಾ ಮುಂದೆ ಎಂದು ಬಂದು ಅವರೇ ಟ್ರ್ಯಾಕ್ಟರ್‌ಗಳಲ್ಲಿ ಮಣ್ಣು ಒಯ್ಯು ತ್ತಿದ್ದಾರೆ’ ಎಂದರು.

‘ತುಂಗಭದ್ರಾ ಜಲಾಶಯದಲ್ಲಿನ ಮಣ್ಣಿಗೆ ಹೋಲಿಸಿದರೆ ಕಮಲಾಪುರ ಕೆರೆಯ ಮಣ್ಣು ಬಹಳ ಫಲವತ್ತಾಗಿದೆ. ಮುಖ್ಯರಸ್ತೆಗೆ ಹೊಂದಿಕೊಂಡಂತೆ ಕೆರೆ ಇರುವುದರಿಂದ ವಾಹನಗಳು ಓಡಾಡುವುದಕ್ಕೆ ಯಾವುದೇ ತೊಂದರೆ ಇಲ್ಲ. ಕೆರೆಗೆ ಹೊಂದಿಕೊಂಡಂತೆ ಹಲವು ಗ್ರಾಮಗಳಿವೆ.

ಆ ಗ್ರಾಮಗಳ ರೈತರೇ ಹೆಚ್ಚಿನ ಸಂಖ್ಯೆಯಲ್ಲಿ ಹೂಳು ಕೊಂಡೊಯ್ಯುತ್ತಿರುವ ಕಾರಣ ಹೆಚ್ಚಿನ ಆರ್ಥಿಕ ಹೊರೆ ಕೂಡ ಬೀಳುವುದಿಲ್ಲ’ ಎನ್ನುತ್ತಾರೆ ಶಿವಕುಮಾರ ಮಾಳಗಿ.
ನೀರಾವರಿ ಇಲಾಖೆ ಅನುಮತಿ ಪಡೆದುಕೊಂಡೇ ರೈತರು ಅವರ ಜಮೀನುಗಳಿಗೆ ಕಮಲಾಪುರ ಕೆರೆಯ ಹೂಳು ಕೊಂಡೊಯ್ಯುತ್ತಿದ್ದಾರೆ ಎಂದು ಉಪವಿಭಾಗಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ ಹೇಳಿದರು.

‘ಹೂಳಿನ ಜಾತ್ರೆ’ ನಾಲ್ಕನೇ ದಿನಕ್ಕೆ
ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಳ್ಳಾರಿ ಜಿಲ್ಲಾ ಘಟಕವು ಹಮ್ಮಿಕೊಂಡಿರುವ ‘ಹೂಳಿನ ಜಾತ್ರೆ’ ಭಾನುವಾರ ನಾಲ್ಕನೇ ದಿನಕ್ಕೆ ಕಾಲಿರಿಸಿದೆ.

ತಾಲ್ಲೂಕಿನ ಮರಿಯಮ್ಮನಹಳ್ಳಿ, ವೆಂಕಟಾಪುರ, ಹಂಪನಕಟ್ಟೆ, ವ್ಯಾಸನಕೆರೆ, ಅಯ್ಯನಹಳ್ಳಿ ಗ್ರಾಮಸ್ಥರು ತಮ್ಮ ಹೊಲಗಳಿಗೆ ಟ್ರ್ಯಾಕ್ಟರ್‌ಗಳಲ್ಲಿ ಮಣ್ಣು ಕೊಂಡೊಯ್ದರು. ನಾಲ್ಕು ಜೆಸಿಬಿ, ಐದು ಟಿಪ್ಪರ್‌ ಲಾರಿ ಹಾಗೂ 80ಕ್ಕಿಂತ ಹೆಚ್ಚಿನ ಟ್ರ್ಯಾಕ್ಟರ್‌ಗಳಲ್ಲಿ ಮಣ್ಣು ಸಾಗಿಸಲಾಗುತ್ತಿದೆ.

ನಾಲ್ಕು ದಿನಗಳಲ್ಲಿ ನಾಲ್ಕು ಎಕರೆ ಜಮೀನಿನಲ್ಲಿ ಮೂರು ಅಡಿಗಳಷ್ಟು ಮಣ್ಣು ಕೊಂಡೊಯ್ಯಲಾಗಿದೆ.ರಂಗಭೂಮಿ ಕಲಾವಿದೆ ನಾಗರತ್ನಮ್ಮ ಹಾಗೂ ಇತರ ಕಲಾವಿದರು ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ರೈತ ಸಂಘದ ಕೆಲಸಕ್ಕೆ ಬೆಂಬಲ ಸೂಚಿಸಿದರು.

‘ಫಲವತ್ತಾದ ಮಣ್ಣು ದುಡ್ಡು ಕೊಟ್ಟರೂ ಬೇರೆಲ್ಲೂ ಸಿಗೊಲ್ಲ’
‘ಫಲವತ್ತಾದ ಮಣ್ಣು ದುಡ್ಡು ಕೊಟ್ಟರೂ ಬೇರೆ ಎಲ್ಲಿಯೂ ಸಿಗೊಲ್ಲ. ಈ ಮಣ್ಣು ಹಾಕಿದರೆ ಭೂಮಿಗೆ ಗೊಬ್ಬರ ಹಾಕದಿದ್ದರೂ ಬೆಳೆ ಬೆಳೆಯಬಹುದು’ ಎನ್ನುತ್ತಾರೆ ಹಳೆ ಮಲಪನಗುಡಿಯ ರೈತ ಜಿಗಳಿ ಗಾಳೆಪ್ಪ.

‘ಕಬ್ಬು, ಭತ್ತ, ಹತ್ತಿ, ಮೆಕ್ಕೆಜೋಳ ಬೆಳೆಯುವುದಕ್ಕೆ ಕಪ್ಪು ಮಣ್ಣು ಹೇಳಿ ಮಾಡಿಸಿದ್ದು. ನನಗೆ ಸೇರಿದ ಮೂರು ಎಕರೆ ಜಮೀನಿದ್ದು, ಇಲ್ಲಿಯವರೆಗೆ ಟ್ರ್ಯಾಕ್ಟರ್‌ನಲ್ಲಿ 50 ಟ್ರಿಪ್‌ ಮಣ್ಣನ್ನು ಕೊಂಡೊಯ್ದು ಹೊಲದಲ್ಲಿ ಸುರಿದಿದ್ದೇನೆ. ಕಮಲಾಪುರ ಕೆರೆಯಿಂದ ಯಾರು ಬೇಕಾದರೂ ಮಣ್ಣು ಕೊಂಡೊಯ್ಯಬಹುದು ಎಂಬ ವಿಷಯ ತಿಳಿಯಿತು. ಅದನ್ನು ತಿಳಿದು ಇಲ್ಲಿಗೆ ಬಂದೆ’ ಎಂದು ಹೇಳಿದರು.

ಕೊಂಡನಾಯಕ ನಹಳ್ಳಿಯಲ್ಲಿ ಎರಡು ಎಕರೆ ಭೂಮಿ ಹೊಂದಿರುವ ದುರುಗೇಶ್‌ ಕೂಡ ಇದೇ ಮಾತು ಪುನರುಚ್ಚರಿಸಿದರು. ‘ಮಧ್ಯಾಹ್ನ ಕೆಲಸ ಆರಂಭಿಸಿದ್ದು, ಇಲ್ಲಿಯವರೆಗೆ ಟ್ರ್ಯಾಕ್ಟರ್‌ನಲ್ಲಿ ನಾಲ್ಕು ಟ್ರಿಪ್‌ ಮಣ್ಣು ತೆಗೆದುಕೊಂಡು ಹೋಗಿದ್ದೇನೆ. ಜೆಸಿಬಿ ಹಾಗೂ ಟ್ರ್ಯಾಕ್ಟರ್‌ಗೆ ಡೀಸೆಲ್‌ ಹಾಕಿಸುವುದು ಬಿಟ್ಟರೆ ಬೇರೇನೂ ಖರ್ಚು ಇಲ್ಲ. ನನ್ನ ಊರು ಕೂಡ ಸಮೀಪದಲ್ಲೇ ಇರುವುದರಿಂದ ಹೆಚ್ಚು ಡೀಸೆಲ್‌ ಕೂಡ ಬೇಕಾಗಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT