ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಕಂಪದಿಂದ ಅರಸನಾದ

Last Updated 22 ಮೇ 2017, 19:30 IST
ಅಕ್ಷರ ಗಾತ್ರ

ರಾಜ್ಯದ ಅಧಿಕಾರ ಪಡೆಯುವುದು ಅಷ್ಟೊಂದು ಸುಲಭವಲ್ಲ. ಪ್ರಜೆಗಳು ಚುನಾವಣೆ ಮೂಲಕ ಆಯ್ಕೆ ಮಾಡಿದರೆ ಶಾಸನಬದ್ಧವಾಗಿ ಅಧಿಕಾರ ಅನುಭವಿಸ ಬಹುದು. ಯುದ್ಧದಲ್ಲಿ ಪರಾಕ್ರಮ ತೋರಿದರೆ ರಾಜ್ಯವನ್ನು ವಶಪಡಿಸಿಕೊಂಡು ಅಧಿಕಾರ ಕೈಗೆತ್ತಿಕೊಳ್ಳ ಬಹುದು. ಇವೆರಡೂ ಇಲ್ಲದಿದ್ದರೆ, ವಂಶಪಾರಂಪರ್ಯವಾಗಿ ಬರುವ ಅಧಿಕಾರದಿಂದಲಾದರೂ ಮೆರೆಯಬಹುದು.

ಈ ವ್ಯಕ್ತಿಗೆ ಮೇಲಿನ ಯಾವ ಅರ್ಹತೆಯೂ ಇರಲಿಲ್ಲ. ಆದರೂ, ಜನರ ಅನುಕಂಪದಿಂದ ರಾಜನಾಗಿ ಮೆರೆದ. ಒಂದಲ್ಲ, ಎರಡಲ್ಲ 20 ವರ್ಷ!

ಇಷ್ಟಕ್ಕೂ ನಡೆದದ್ದು ಏನೆಂದರೆ...

ಜುಷುವಾ ಅಬ್ರಹಾಂ ನಾರ್ಟನ್ 1818ರಲ್ಲಿ ಇಂಗ್ಲೆಂಡ್‌ನ ಶ್ರೀಮಂತ ಕುಟುಂಬದಲ್ಲಿ ಜನಿಸಿದ. ತಂದೆಯ ಮರಣದ ನಂತರ ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನೆಲ್ಲಾ ಮಾರಿ ಅಮೆರಿಕಕ್ಕೆ ವಲಸೆ ಹೋಗಿ ಸ್ಯಾನ್‌ಫ್ರಾನ್ಸಿಸ್ಕೊ ನಗರದಲ್ಲಿ ನೆಲೆಸಿದ. ಹಲವು ವ್ಯಾಪಾರಗಳನ್ನು ಮಾಡಿ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡ. ಡಾಲರ್‌ಗಟ್ಟಲೆ ಹಣ ಸಂಪಾದಿಸಿದ. ಕೈಗೆತ್ತಿಕೊಂಡ ಯಾವ ವ್ಯಾಪಾರದಲ್ಲಿಯೂ ಸೋಲು ಅನ್ನೋದೇ ಇರಲಿಲ್ಲ. ಇದೇ ಉಮೇದಿನಲ್ಲಿ ಪೆರುವಿಯನ್ ರೈಸ್‌ ಬಿಸಿನೆಸ್‌ನಲ್ಲಿ ಹಣ ಹೂಡಿದ.
ವ್ಯಾಪಾರದಲ್ಲಿ ವಿಪರೀತ ನಷ್ಟವಾಯಿತು. ಆಸ್ತಿಗಳೆಲ್ಲಾ ಮಂಜು ಕರಗುವ ಹಾಗೆ ಕರಗಿಹೋದವು. ಕೊನೆಗೆ ಮನೆಯನ್ನೂ ಕಳೆದುಕೊಂಡು ಬೀದಿಗೆ ಬಿದ್ದ.

‘ವ್ಯಾಪಾರದಲ್ಲಿ ಮೋಸ ಹೋಗಿದ್ದೇನೆ. ನನಗೆ ಅನ್ಯಾಯವಾಗಿದೆ. ನ್ಯಾಯ ದೊರಕಿಸಿಕೊಡಿ’ ಎಂದು ಕೋರ್ಟು, ಕಚೇರಿಯನ್ನು ಅಲೆದರೂ ಏನೂ ಪ್ರಯೋಜನವಾಗಲಿಲ್ಲ. ಇದರಿಂದ ಮನೋವ್ಯಥೆಗೆ ಗುರಿಯಾದ. ಅಲ್ಲದೆ, 1859ರ ಸೆಪ್ಟೆಂಬರ್ 17ರಂದು ‘ನ್ಯೂಟನ್ ಐ ಎಂಬ ನಾನು ಯುನೈಟೆಡ್‌ ಸ್ಟೇಟ್ಸ್ ಆಫ್ ಅಮೆರಿಕದ ರಾಜ’ ಎಂದು ತನ್ನನ್ನು ತಾನೇ ಘೋಷಿಸಿಕೊಂಡ. ಅಲ್ಲದೆ, ‘ನಾನು ಮೆಕ್ಸಿಕೊ ದೇಶದ ರಕ್ಷಕ’ ಎಂದು ಕಂಡಕಂಡಲ್ಲಿ ಭಿತ್ತಿಪತ್ರಗಳನ್ನು ಅಂಟಿಸಿದ. ಪತ್ರಿಕೆಗಳಲ್ಲಿ ಜಾಹೀರಾತನ್ನೂ ನೀಡಿದ!

ತನ್ನನ್ನು ಅಮೆರಿಕಾಗೆ ರಾಜನಾಗಿ ಪಟ್ಟಾಭಿಷೇಕ ಮಾಡುವಂತೆ ಕ್ರೈಸ್ತ ಧರ್ಮಗುರುಗಳ ಬಳಿ ಕೇಳಿಕೊಂಡ. ನಾರ್ಟನ್‌ನ ವರ್ತನೆ ಕಂಡು ಹಲವರು ಆಡಿಕೊಂಡರು. ಬಹುಶಃ ಬುದ್ಧಿಭ್ರಮಣೆಯಾಗಿ ಆತ ಈ ರೀತಿ ವರ್ತಿಸುತ್ತಿರಬಹುದು ಎಂದು ನಕ್ಕು ಸುಮ್ಮನಾದರು.

ಆದರೆ ಸ್ಯಾನ್‌ಫ್ರಾನ್ಸಿಸ್ಕೊ ಜನರಿಗೆ ಮಾತ್ರ ಆತನ ಮೇಲೆ ವಿಪರೀತ ಕರುಣೆ ಉಕ್ಕಿಬಂತು. ಶ್ರೀಮಂತನಾಗಿ ಮೆರೆದು ಹಣವಿಲ್ಲದೆ ಬಿಕಾರಿಯಾಗಿದ್ದಾನೆ ಎಂದು ಮರುಗಿದರು. ಕೊನೆಗೆ ನಾರ್ಟನ್‌ನನ್ನು ಸ್ಯಾನ್‌ಫ್ರಾನ್ಸಿಸ್ಕೊದ ರಾಜ ಎಂದು ಒಪ್ಪಿಕೊಂಡರು!

ಅಮೆರಿಕ ಸೇನೆ ಆತನಿಗೆ ರಾಜಪೋಷಾಕು ತೊಡಿಸಿ ಗೌರವಿಸಿತು.  ಅದನ್ನೇ ಆಧರಿಸಿ ಆತ ಅಧಿಕಾರ ನಡೆಸಿದ.  ಕೈಯಲ್ಲಿ ನಾಲ್ಕು ಕಾಸು ಇಲ್ಲದಿದ್ದರೂ ತನ್ನ ಹೆಸರಿನ ಕರೆನ್ಸಿಯನ್ನು ಚಲಾವಣೆಗೆ ತಂದ! ಆತನ ಈ ವರ್ತನೆ ಪ್ರಜೆಗಳಿಗೆ ಇಷ್ಟವಾಗಲಿಲ್ಲ. ಆದರೂ ಆತ ಚಲಾವಣೆಗೆ ತಂದ ಕರೆನ್ಸಿಯನ್ನು ಬಳಸಿದರು.

ನಾರ್ಟನ್‌ ಎಲ್ಲಿಗೆ ಹೋದರೂ ರಾಜ ಮರ್ಯಾದೆ ಸಿಗುತ್ತಿತ್ತು. ಎಲ್ಲ ಸತ್ಕಾರಗಳೂ ನಡೆಯುತ್ತಿದ್ದವು. ರೆಸ್ಟೊರೆಂಟ್, ಕ್ಲಬ್‌ಗಳಲ್ಲಿ ಉಚಿತ ಸೇವೆ ಒದಗಿಸುತ್ತಿದ್ದರು.

1870ರ ಜನಗಣತಿಯಲ್ಲಿ ಆತನ ಹೆಸರನ್ನು ರಾಜನೆಂದೇ ನಮೂದಿಸಲಾಯಿತು. ಆದರೆ ಮತದಾನದ ಹಕ್ಕನ್ನು ಮಾತ್ರ ಕಲ್ಪಿಸಲಿಲ್ಲ. ‘ನಾನು ರಾಜ ನಾನೇಕೆ ಮತದಾನ ಮಾಡಬೇಕು’ ಎಂದು ನಾರ್ಟನ್‌ ಭಾವಿಸಿದರೆ, ಜನ ಮಾತ್ರ ಆತನಿಗೆ ಬುದ್ಧಿ ಭ್ರಮಣೆಯಾಗಿರುವುದರಿಂದ ಮತದಾನದ ಹಕ್ಕನ್ನು ನೀಡಬಾರದು ಎಂದು ಪ್ರತಿಪಾದಿಸಿದರು.

ತಾನು ರಾಜ ಎಂದು ಬೀಗುತ್ತಿದ್ದರೂ, ಅಧಿಕಾರಿಗಳೊಂದಿಗೆ, ಇತರ ದೇಶದ ನಾಯಕ ರೊಂದಿಗೆ ಆತನಿಗೆ  ಯಾವುದೇ ಸಂಬಂಧವಿರಲಿಲ್ಲ.   ಆದರೂ, ಸ್ಯಾನ್‌ಫ್ರಾನ್ಸಿಸ್ಕೊ ಮತ್ತು ಒಕ್ಲಾಂಡ್‌ ನಡುವೆ ಸೇತುವೆ ನಿರ್ಮಿಸುವಲ್ಲಿ ನಾರ್ಟನ್‌ ಮುಖ್ಯ ಪಾತ್ರವಹಿಸಿದ.

ಹೀಗೆ ರಾಜನೆಂಬ ಭ್ರಮೆಯಲ್ಲೇ ಬದುಕಿದ ನಾರ್ಟನ್‌,  8 ಜನವರಿ 1880ರಲ್ಲಿ ಬೀದಿಯಲ್ಲಿ ಅಲೆಯುತ್ತಾ ಕುಸಿದುಬಿದ್ದು ಪ್ರಜ್ಞೆ ಕಳೆದುಕೊಂಡ. ಸ್ಥಳೀಯರು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಪ್ರಾಣಬಿಟ್ಟ.

ನಾರ್ಟನ್‌ ಅಂತಿಮ ಸಂಸ್ಕಾರವನ್ನು  ಜನರೆಲ್ಲಾ ಹಣ ಕೂಡಿಸಿ ನೆರವೇರಿಸಿದರು. ಅಂತಿಮ ಯಾತ್ರೆಯಲ್ಲಿ 30 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT