ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಚ್ಚರಿ ಕೊಟ್ಟ ಫ್ಯಾಬಿಯೊ ಫ್ಯಾಗ್ನಾ

Last Updated 22 ಮೇ 2017, 19:30 IST
ಅಕ್ಷರ ಗಾತ್ರ

ತುಂಬು ಗರ್ಭಿಣಿ ಪತ್ನಿ ‘ಗೆದ್ದು ಬಾ’ ಎಂದು ಹೇಳಿ ಕಳುಹಿಸಿದಾಗಲೇ ಫ್ಯಾಬಿಯೊ ಫಾಗ್ನಿನಿ ಅರ್ಧ ಗೆದ್ದು ಆಗಿತ್ತು. ರೋಮ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನಲ್ಲಿ ಬ್ರಿಟನ್‌ನ ಆ್ಯಂಡಿ ಮರ್ರೆ ಎದುರು 27ನೇ ರ‍್ಯಾಂಕಿಂಗ್‌‌ನ ಈ ಆಟಗಾರ ಎರಡು ನೇರ ಸೆಟ್‌ಗಳಿಂದ ಗೆದ್ದದ್ದು ವಿಶ್ವದಾದ್ಯಂತ ಕ್ರೀಡಾ ಮಾಧ್ಯಮಗಳಿಗೆ ದೊಡ್ಡ ಸುದ್ದಿ. ಯಾಕೆಂದರೆ, ಮರ್ರೆ ಮೊದಲ ಶ್ರೇಯಾಂಕದ ಆಟಗಾರ.

ಫ್ಯಾಬಿಯೊ ಪತ್ನಿಯ ಹೆಸರು ಫ್ಲೇವಿಯಾ ಪೆನ್ನಟ್ಟಾ. ಅವರು 2015ರಲ್ಲಿ ಅಮೆರಿಕ ಓಪನ್ ಟೆನಿಸ್‌ನಲ್ಲಿ ಕಪ್‌ ಗೆದ್ದು ಬೀಗಿದ್ದವರು. ಯಾವುದೇ ಕ್ಷಣದಲ್ಲಿ ಮಗುವಿನ ನಿರೀಕ್ಷೆಯಲ್ಲಿರುವ ಅವರಿಗೆ ಗಂಡನ ಈ ಗೆಲುವು ವಿಶೇಷ ಸಂಭ್ರಮ ನೀಡಿತು.

ಐದು ಅಡಿ ಹತ್ತು ಇಂಚು ಎತ್ತರದ ಫ್ಯಾಬಿಯೊ ಫುಟ್‌ಬಾಲ್‌ ಪ್ರಿಯ. ಇಂಟರ್ ಮಿಲಾನ್ ತಂಡದ ಪರಮ ಅಭಿಮಾನಿ. ಆದರೆ, ಟೆನಿಸ್‌ ಆಡಲು ಆರಂಭಿಸಿದ್ದು ನಾಲ್ಕರ ವಯಸ್ಸಿನಲ್ಲಿ. ಅಪ್ಪ ವ್ಯಾಪಾರಿ. ಮಗನ ಆಸೆಗೆ ಎಂದೂ ಅಡ್ಡಿಪಡಿಸಿದವರಲ್ಲ.

ಮೋಟಾರ್ ಬೈಕ್‌ ರೇಸ್ ಮೋಹವಿದ್ದ ಫ್ಯಾಬಿಯೊ ಹರೆಯದಲ್ಲಿ ಏನಾಗಬೇಕು ಎಂಬ ಗೊಂದಲಕ್ಕೆ ಬಿದ್ದವರೇ. ಬೇಗ ಅವರಿಗೆ ಟೆನಿಸ್‌ನಲ್ಲಿ ಭವಿಷ್ಯವಿದೆ ಎಂದು ಅರಿವಾಯಿತು.
ಕೆಂಪು ಮಣ್ಣಿನ ಅಂಕಣ ಫ್ಯಾಬಿಯೊಗೆ ಹೇಳಿಮಾಡಿಸಿದ್ದು. ಮೊನ್ನೆ ಮರ್ರೆ ಎದುರು ಅವರು ಹಾಕಿದ ‘ಡ್ರಾಪ್‌’ಗಳಿಂದಲೇ ಮಣ್ಣಿನ ಮೈದಾನದಲ್ಲಿ ಅವರು ಹೇಗೆ ಪಳಗಿದ್ದಾರೆ ಎನ್ನುವುದು ಸ್ಪಷ್ಟವಾಯಿತು.

2004ರಲ್ಲಿ ಜೂನಿಯರ್ ಟೆನಿಸ್‌ನಲ್ಲಿ ಛಾಪು ಮೂಡಿಸಿದ ಇಟಲಿಯ  ಫ್ಯಾಬಿಯೊ, ಆ ಹಂತದಲ್ಲಿ 72 ಪಂದ್ಯಗಳನ್ನು ಗೆದ್ದರು. ಸೋತಿದ್ದು 36ರಲ್ಲಿ. ಆಡಿದ ನೂರಕ್ಕೂ ಹೆಚ್ಚು ಪಂದ್ಯಗಳಲ್ಲಿ ಮುಕ್ಕಾಲು ಭಾಗವನ್ನು ಗೆಲ್ಲುವುದು ತಮಾಷೆಯ ಮಾತಲ್ಲ. ಮೇ 2004ರಲ್ಲಿ ಆಸ್ಟ್ರೇಲಿಯಾ ಓಪನ್ ಹಾಗೂ ಫ್ರೆಂಚ್‌ ಓಪನ್‌ ಜೂನಿಯರ್ ಟೆನಿಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿ ಗಮನ ಸೆಳೆದರು. ಫ್ಯೂಚರ್, ಚಾಲೆಂಜರ್ ಸರಣಿಯ ಪಂದ್ಯಗಳಲ್ಲಿ ಆಡಿ ಪಳಗಿದರು.

2005ರಲ್ಲಿ ಮೊದಲ ಪ್ರಶಸ್ತಿ ಎತ್ತಿ ಹಿಡಿಯುವ ಹೊತ್ತಿಗೆ ಅವರ ವಯಸ್ಸು ಹದಿನೇಳು.

ಅವರು ಜನಪ್ರಿಯರೇನೂ ಅಲ್ಲ. ‘ಫ್ಯಾಗ್ನಾ’ ಎಂಬ ಮುದ್ದು ಹೆಸರಿನಿಂದ ಅವರನ್ನು ಕೆಲವರು ಕರೆಯುತ್ತಾರೆ.

ಮೊನ್ನೆ ಮರ್ರೆ ಎದುರು ಅವರು ಪಂದ್ಯ ಗೆದ್ದಾಗ ಅವರ ಅಭಿಮಾನಿಗಳ ಸಣ್ಣ ಗುಂಪು ಫುಟ್‌ಬಾಲ್ ನೋಡುತ್ತಿತ್ತು. ಅಲ್ಲಿಯ ಪಂದ್ಯದ ಫಲಿತಾಂಶವನ್ನು ಮರೆತು ಅಲ್ಲಿದ್ದವರು ಫ್ಯಾಬಿಯೊ ವಿಜಯದ ಬಗೆಗೆ ಮಾತನಾಡತೊಡಗಿದರು. ಜೋರು ದನಿಯಲ್ಲಿ ಸಂಗೀತ ಹಾಕಿಕೊಂಡು, ಕುಣಿದು ವಿಜಯೋತ್ಸವ ಆಚರಿಸಿದರು.

‘ಮರ್ರೆ ಆ ದಿನ ಹೇಗೆ ಆಡಿದರು ಎನ್ನುವುದು ಅವರಿಗೆ ಗೊತ್ತು. ನನಗೆ ಕಳೆದುಕೊಳ್ಳುವುದು ಏನೂ ಇರಲಿಲ್ಲ. ಯಾವುದೇ ಹಂತದಲ್ಲಿ ಸೋತು ಆಟದಿಂದ ನಿರ್ಗಮಿಸುವವರ ಪಟ್ಟಿಯಲ್ಲಿ ಅನೇಕರು ನನ್ನ ಹೆಸರನ್ನು ಬರೆದಿದ್ದರು. ಅದಕ್ಕೇ ಖುಷಿಯಿಂದ ಆಡಿದೆ. ಅಷ್ಟು ಸುಲಭವಾಗಿ ಗೆಲ್ಲುವೆ ಎಂದು ಎಣಿಸಿರಲಿಲ್ಲ’ ಎಂದು ಫ್ಯಾಬಿಯೊ ಪ್ರತಿಕ್ರಿಯಿಸಿದರು.

2015ರಲ್ಲಿ ಫ್ಲೇವಿಯಾ ಅವರಷ್ಟೇ ಪ್ರಶಸ್ತಿಯ ಪುಲಕದಲ್ಲಿರಲಿಲ್ಲ. ಫ್ಯಾಬಿಯೊ ಅದೇ ವರ್ಷ ಆಸ್ಟ್ರೇಲಿಯಾ ಓಪನ್ ಡಬಲ್ಸ್‌ನಲ್ಲಿ ಸಿಮೋನ್‌ ಬೊಲೆಲ್ಲಿ ಜೊತೆ ಆಡಿ, ಪ್ರಶಸ್ತಿ ಗೆದ್ದಿದ್ದರು. ಈಗ ಅದೇ ಆಟಗಾರನ ಎದುರು ಗೆದ್ದ ಇನ್ನೊಂದು ಸಂಭ್ರಮವೂ ಅವರದ್ದಾಗಿದೆ. ಅವರ ಗರ್ಭಿಣಿ ಪತ್ನಿಗೆ ಸುಖಪ್ರಸವವಾಗುವ ಲಕ್ಷಣಗಳಿವು ಎಂದೂ ಆಪ್ತೇಷ್ಟರು ಹೆಮ್ಮೆಯಿಂದ ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT