ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಮ್‌ ಬಾಡಿ ಮೋಡಿ

Last Updated 22 ಮೇ 2017, 19:30 IST
ಅಕ್ಷರ ಗಾತ್ರ

ಮನಬಂದಂತೆ ದೇಹ ದಂಡಿಸಬಾರದು. ಮನಸ್ಸು ನಿಮ್ಮೊಂದಿಗೆ ಮಾತನಾಡುವಂತೆ, ದೇಹವೂ ತನ್ನ ಇರಾದೆಯನ್ನು ಹೇಳುತ್ತಿರುತ್ತದೆ. ಒಂದೇ ಬಾರಿ ಅತಿಯಾಗಿ ದೇಹ ದಂಡಿಸಬಾರದು. ನಿಧಾನವಾಗಿ ದಿನದಿಂದ ದಿನಕ್ಕೆ ವ್ಯಾಯಾಮ ಹೆಚ್ಚಿಸಬೇಕು. ಇನ್ನು ಜಿಮ್ ಕಸರತ್ತು ನಿಲ್ಲಿಸುವಾಗಲೂ ಅಷ್ಟೇ ಒಮ್ಮೆಲೇ ಬಿಡಬಾರದು.

‘ದೇಹದ ತೂಕ ಇಳಿಸಿಕೊಳ್ಳುವ ಸಂದರ್ಭದಲ್ಲಿ ಸೈಕ್ಲಿಂಗ್, ರನ್ನಿಂಗ್ ಮೊದಲಾದ ಕಾರ್ಡಿಯೊ ಕಸರತ್ತು ಮಾಡುತ್ತೇವೆ. ಇದು ತಪ್ಪು’ ಎನ್ನುತ್ತಾರೆ ಬೆಂಗಳೂರು ಜಯನಗರದ ಜಿಮ್ ತರಬೇತುದಾರ ಪ್ರದೀಪ್.

‘ಮಾಂಸಖಂಡಗಳನ್ನು ಬೆಳೆಸುವ ಕಾರಣಕ್ಕೆ ಭಾರ ಎತ್ತುವ ಕಸರತ್ತು ಮಾಡಿಸುತ್ತೇವೆ. ಹಾಗಂತ ಇದನ್ನು ಸಣ್ಣ ಆಗಬೇಕು ಎಂದುಕೊಳ್ಳುವವರು ಮಾಡಬಾರದು ಎಂದೇನಿಲ್ಲ. ಕಾರ್ಡಿಯೊ ಕಸರತ್ತು ಜೊತೆ ಭಾರ ಎತ್ತುವ ಕಸರತ್ತನ್ನು ಮಾಡಬೇಕು’ ಎನ್ನುತ್ತಾರೆ ಅವರು.

ಯಂತ್ರಗಳನ್ನು ಅವಲಂಬಿಸಬೇಡಿ: ಪ್ರತಿದಿನ ವ್ಯಾಯಾಮದಲ್ಲಿ ಎಷ್ಟು ಕ್ಯಾಲೊರಿ ಬರ್ನ್‌ ಮಾಡಿದ್ದೇವೆ ಎಂದು ತಿಳಿಯಲು ಯಂತ್ರವನ್ನೇ ನಂಬಬೇಡಿ. ಕೆಲವೊಮ್ಮೆ ಕಾರ್ಡಿಯೊ ಯಂತ್ರದ ಫಲಿತಾಂಶ ಕರಾರುವಾಕ್ಕಾಗಿ ಇರುವುದಿಲ್ಲ. ತರಬೇತಿದಾರರ ಸಲಹೆ ಪಡೆದುಕೊಳ್ಳಬೇಕು. ಸ್ವವೈದ್ಯರಾಗುವ ಸಾಹಸ ಬೇಡ.

(ಜಿಮ್ ತರಬೇತುದಾರ ಪ್ರದೀಪ್)

ಸ್ಪಲ್ಪ ಕಷ್ಟಪಡಿ: ಸೈಕ್ಲಿಂಗ್ ಇಷ್ಟ, ಟ್ರೆಡ್‌ಮಿಲ್‌ ಸುಲಭ ಎಂದು ಮಾಡಿದ್ದನ್ನೇ ಮಾಡುವುದಿದ್ದರೆ ಜಿಮ್‌ಗೆ ಯಾಕೆ ಹೋಗಬೇಕು? ಸುಲಭದ ವ್ಯಾಯಾಮವನ್ನೇ ದಿನಾ ಮಾಡುತ್ತಿದ್ದರೆ ಅದರಿಂದ ಯಾವುದೇ ಉಪಯೋಗವಿಲ್ಲ.

ಒಮ್ಮೆ ಆ್ಯಬ್ಸ್‌, ಬೈಸಿಪ್ಸ್‌, ಕಾಲುಗಳಿಗೆ, ಕುತ್ತಿಗೆ, ಪಾದ, ಭುಜ ಹೀಗೆ ದೇಹದ ಎಲ್ಲಾ ಭಾಗಗಳಿಗೂ ಸೂಕ್ತ ರೀತಿ ವ್ಯಾಯಮ ಬೇಕು. ಹೊಟ್ಟೆ ಕರಗಿಸಬೇಕು ಎಂದು ಬರೀ ಆ್ಯಬ್ಸ್‌ ವ್ಯಾಯಾಮವನ್ನೇ ಮಾಡುತ್ತಿದ್ದರೆ ದೇಹದ ಒಂದೇ ಭಾಗಕ್ಕೆ ಹೆಚ್ಚು ಒತ್ತಡ ಬೀಳುತ್ತದೆ.

ಬದಲಾವಣೆ ನಿಧಾನ: ಜಿಮ್ ಸೇರಿದ ವಾರ–ತಿಂಗಳಿಗೇ ವ್ಯತ್ಯಾಸ ಬೇಕೆಂದು ಹಪಹಪಿಸುವುದು ತರವಲ್ಲ. ದೇಹ ರಚನೆ ನಿಧಾನವಾಗಿ ಬದಲಾಗಬೇಕು. ಪ್ರತಿದಿನ ಕಸರತ್ತು ಮಾಡಿದರೆ, ದೇಹ ನಿಧಾನವಾಗಿ ಹುರಿಗಟ್ಟುತ್ತದೆ.

ಶಕ್ತಿವರ್ಧಕ ಮಾತ್ರೆ ತೆಗೆದುಕೊಳ್ಳುವ ಮುನ್ನ: ದೇಹ ಬೆಳೆಸುವ ಅಥವಾ ಕರಗಿಸುವ ಉಮೇದು ಹೆಚ್ಚಾದಂತೆ ಪರ್ಯಾಯ ಮಾರ್ಗಗಳನ್ನು ಹುಡುಕುತ್ತೇವೆ. ಕೆಲವರು ಶಕ್ತಿವರ್ಧಕ ಮಾತ್ರೆ, ಪುಡಿಗಳನ್ನು ಸೇವಿಸುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.

‘ಶಕ್ತಿವರ್ಧಕ ಔಷಧಿ, ತೂಕ ಹೆಚ್ಚಿಸಿಕೊಳ್ಳುವ ಅಥವಾ ಇಳಿಸಿಕೊಳ್ಳುವ ಮಾತ್ರೆ, ಪುಡಿಗಳನ್ನು ಬಳಸುವುದರಿಂದ ಹಾರ್ಮೋನ್‌ಗಳಲ್ಲಿ ಅಸಮತೋಲನ ಉಂಟಾಗುತ್ತದೆ’ ಎನ್ನುತ್ತಾರೆ ನ್ಯೂಟ್ರಿಷನಿಸ್ಟ್‌ ಸ್ವರ್ಣಶುಭಾ.

ನೋವಾಗಬೇಕಿಲ್ಲ: ದೇಹಕ್ಕೆ ನೋವು ಮಾಡಿಕೊಂಡರಷ್ಟೆ ವ್ಯಾಯಾಮ ಮಾಡಿದ್ದೇವೆ ಎಂಬ ಭಾವನೆ ಹಲವರಲ್ಲಿ ಇದೆ. ಜಿಮ್‌ಗೆ ಸೇರಿದ ವಾರದೊಳಗೆ ದೇಹ ಕಸರತ್ತಿಗೆ ಒಗ್ಗಿಕೊಳ್ಳುತ್ತದೆ. ಹಾಗಾಗಿ ಪ್ರತಿ ಬಾರಿ ಕಸರತ್ತು ಮಾಡಿದಾಗಲೂ ದೇಹಕ್ಕೆ ನೋವಾಗಲೇ ಬೇಕು ಎಂಬ ಭ್ರಮೆ ಬೇಡ.

**

ಹಲವರು ಡಯಟ್‌ ಎಂದರೆ ಅನ್ನ ತಿನ್ನುವುದನ್ನು ಬಿಟ್ಟುಬಿಡುವುದು ಎಂಬ ಭ್ರಮೆಯಲ್ಲಿ ಇದ್ದಾರೆ. ಎಷ್ಟು ಪ್ರಮಾಣದಲ್ಲಿ ತಿನ್ನುತ್ತೇವೆ ಎನ್ನುವುದು ಮುಖ್ಯ. ಸಮತೋಲಿತ ಆಹಾರ ಸೇವಿಸುತ್ತಾ ಕಸರತ್ತು ಮಾಡಬೇಕು. ಪ್ರತಿ ಎರಡು ಗಂಟೆಗೊಮ್ಮೆ ಹಣ್ಣು, ತರಕಾರಿ, ಕಾಳುಗಳನ್ನು ತಿನ್ನಬೇಕು.


–ಡಾ. ಅರ್ಜುನ್‌,
ಬೆಂಗಳೂರು

**

ಜಿಮ್‌ನಲ್ಲಿ ವರ್ಕೌಟ್‌ ಮಾಡುವುದರೊಂದಿಗೆ ದೇಹ ಪ್ರಕೃತಿಗೆ ಅನುಗುಣವಾಗಿ ಆಹಾರ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಚರ್ಮ, ಮೂಳೆ, ದೇಹಕ್ಕೆ ಬೇಕಾದಷ್ಟು  ಪೋಷಕಾಂಶಗಳನ್ನೂ ಕೊಡಬೇಕು. ಕೃತಕ ಫುಡ್‌ ಸಪ್ಲಿಮೆಂಟ್‌ ಸೇವಿಸುವುದನ್ನು ಸಾಧ್ಯವಾದಷ್ಟು ತಪ್ಪಿಸಿ.


–ಸ್ವರ್ಣಶುಭಾ,
ಪೌಷ್ಟಿಕ ಆಹಾರ ತಜ್ಞೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT