ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಗುಲಾಬಿ ನಮಗಾಗಿ...

Last Updated 22 ಮೇ 2017, 19:30 IST
ಅಕ್ಷರ ಗಾತ್ರ

ಸಮಾರಂಭ ಯಾವುದೇ ಆಗಿದ್ದರೂ ಅದರ ಸೊಬಗು ಹೆಚ್ಚಿಸುವ ಗುಲಾಬಿ ಪುಷ್ಪಕ್ಕೆ ಸರ್ವಋತುಗಳಲ್ಲೂ ಬಹುಬೇಡಿಕೆ. ಹಿಂದೆ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಹೀಗೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಿಗೆ ಬೇರೆ ರಾಜ್ಯಗಳಿಂದ ಗುಲಾಬಿ ಪುಷ್ಪ ಆಮದಾಗುತ್ತಿತ್ತು. ಕಳೆದ ನಾಲ್ಕೈದು ವರ್ಷಗಳಿಂದ ರಾಜ್ಯದಲ್ಲೇ ಗುಲಾಬಿ ಹೂವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ.

ಬೆಳೆಗಾರರಿಗೆ ಸೂಕ್ತ ಮಾಹಿತಿ, ಮಾರ್ಗದರ್ಶನ ನೀಡುವ ಜತೆಗೆ ಸಾಲದ ರೂಪದ ಆರ್ಥಿಕ ಸಹಕಾರವನ್ನೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡಲಾಗುತ್ತಿದೆ. ಈ ಯೋಜನೆ ಮೂಲಕ ರಾಜ್ಯದಲ್ಲಿ ಗುಲಾಬಿ ಬೆಳೆಗಾರರ ಕೂಟವೇ ನಿರ್ಮಾಣವಾಗಿದೆ. ಶಿವಮೊಗ್ಗ, ಭದ್ರಾವತಿ ತಾಲ್ಲೂಕುಗಳಲ್ಲಿ ಸಂಚಾರಿ ಪುಷ್ಪ ಮಾರುಕಟ್ಟೆಗಳ ಮೂಲಕ ಗುಲಾಬಿಯನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಕಳುಹಿಸಿ ಕೊಡಲಾಗುತ್ತಿದೆ. ಇದರಿಂದ ಬೆಳೆಗಾರನಿಗೆ ಸರ್ವಋತುಗಳಲ್ಲೂ ಮಾರುಕಟ್ಟೆ ಸೌಲಭ್ಯ ಸಿಕ್ಕಂತಾಗಿದೆ.

ರಾಜ್ಯದಲ್ಲಿ ಬೆಳೆದ ಗುಲಾಬಿ, ಬೆಂಗಳೂರು, ಮಂಗಳೂರು ಮಾತ್ರವಲ್ಲದೆ ನೆರೆ ರಾಜ್ಯಗಳ ಮುಂಬಯಿ, ಚೆನ್ನೈ, ಹೈದರಾಬಾದ್ ನಗರಗಳಿಗೂ ರಫ್ತು ಆಗುತ್ತಿದೆ. ಗುಲಾಬಿ ಪುಷ್ಪವನ್ನೇ ಆದಾಯದ ಮೂಲವನ್ನಾಗಿಸಿಕೊಂಡ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿದೆ.

ಧಾರವಾಡ ತಾಲ್ಲೂಕಿನ ಮರೇವಾಡದ ಪ್ರೇಮಲತಾ ಎಂ. ಹೆಬ್ಬಾಳ ಅಂತಹ ಗುಲಾಬಿ ಕೃಷಿಕರಲ್ಲಿ ಒಬ್ಬರು. ಅವರು ಓದಿದ್ದು ಪಿಯುಸಿ. ಅವರ ಕುಟುಂಬದ ಮೂರು ಎಕರೆ ಜಮೀನಿನಲ್ಲಿ ಹಿಂದೆ ಮಳೆಗಾಲದಲ್ಲಿ ಮಾತ್ರ ಕೃಷಿ ಚಟುವಟಿಕೆ ನಡೆಸಿ, ಉಳಿದ ಋತುಗಳಲ್ಲಿ ಭೂಮಿಯನ್ನು ಖಾಲಿ ಬಿಡಲಾಗುತ್ತಿತ್ತು. ಗ್ರಾಮಾಭಿವೃದ್ಧಿ ಯೋಜನೆಗೆ ಸೇರಿದ ಈ ಊರಿನ ಮಂದಿ ತಮ್ಮ ಭೂಮಿಯಲ್ಲಿ ಬಗೆಬಗೆಯ ಬೆಳೆಗಳನ್ನು ಬೆಳೆಯಲು ಆರಂಭಿಸಿದ್ದು, ಪ್ರೇಮಲತಾ ಅವರನ್ನು ಭಿನ್ನವಾಗಿ ಆಲೋಚಿಸುವಂತೆ ಪ್ರೇರೇಪಿಸಿತು. ಶಿವಶಂಕರ ಸ್ವಸಹಾಯ ಸಂಘದ ಸದಸ್ಯರಾಗಿ ಅವರು ಸೇರಿಕೊಂಡರು. ಗುಲಾಬಿ ಕೃಷಿ ಮಾಡುವಂತೆ ಯೋಜನೆಯ ಅಧಿಕಾರಿಗಳು ಪ್ರೋತ್ಸಾಹಿಸಿದರು. ಆದರೆ, ಗುಲಾಬಿ ಈ ಊರಿಗೆ ಹೊಸ ಬೆಳೆ. ಸಾವಿರಾರು ರೂಪಾಯಿ ತೊಡಗಿಸಿ ಗುಲಾಬಿ ಸಸಿಗಳನ್ನು ನೆಡುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಪ್ರೇಮಲತಾ ಸವಾಲನ್ನು ಮೆಟ್ಟಿನಿಂತರು. ಹುಬ್ಬಳ್ಳಿಯಿಂದ ₹12ಕ್ಕೆ ಒಂದರಂತೆ ಸಸಿಗಳನ್ನು ಖರೀದಿಸಿ ತಂದರು.

ಜೂನ್‌ನಿಂದ ಆಗಸ್ಟ್ ತಿಂಗಳು ನಾಟಿಗೆ ಸೂಕ್ತ ಕಾಲ. ಕಪ್ಪು, ಎರಿ ಮಣ್ಣಿನಲ್ಲಿ ಗಿಡ ಚೆನ್ನಾಗಿ ಬೆಳೆಯುತ್ತದೆ. ಪ್ರೇಮಲತಾ ಅವರು ಜುಲೈ ತಿಂಗಳಿನಲ್ಲಿ ಐದು ಸಾವಿರ ಸಸಿಗಳನ್ನು ನೆಟ್ಟರು. ಸಸಿಗಳನ್ನು ನೆಡುವುದಕ್ಕಿಂತ ಮುಂಚೆ ಜಮೀನನ್ನು ರೆಂಟೆ ಹೊಡೆದು ಗುಣಿ ತಯಾರಿಸಿ ನೀರು ಹಾಯಿಸಿದ್ದರು. ವಾರದ ನಂತರ ಸಾಲಿನಿಂದ ಸಾಲಿಗೆ ಆರು ಅಡಿ, ಗಿಡದಿಂದ ಗಿಡಕ್ಕೆ ಮೂರು ಅಡಿ ಅಂತರ ಬಿಟ್ಟು, ಎರಡೂವರೆ ಅಡಿಯಷ್ಟು ಆಳವಾಗಿ ಗುಂಡಿ ತೆಗೆದು ಸಸಿಗಳನ್ನು ನಾಟಿ ಮಾಡಿದರು. ನಾಟಿ ಹಂತದಲ್ಲಿ ಕೊಟ್ಟಿಗೆ ಗೊಬ್ಬರವನ್ನು ನೀಡಿದರು. 

ಸಾವಯವ ಗೊಬ್ಬರವನ್ನು ನೀಡಿದರೆ ಗುಲಾಬಿ ಗಿಡ ಹೆಚ್ಚು ದಿನಗಳ ಕಾಲ ಬದುಕುತ್ತದೆ. ಪ್ರೇಮಲತಾ ಅವರು ಕೊಳವೆಬಾವಿ ನೀರನ್ನು ಬಳಸುತ್ತಿದ್ದು ಪ್ರತಿ ಸಾಲಿಗೂ ಕಪ್ಪುಬಣ್ಣದ ಸಣ್ಣಗಾತ್ರದ ಪೈಪ್‌ ಅಳವಡಿಸಿದ್ದಾರೆ. ಎರಡು ದಿನಕ್ಕೊಂದು ಬಾರಿಯಂತೆ ನೀರನ್ನು ನೀಡುತ್ತಾರೆ. ಬೇಸಿಗೆ ಕಾಲದಲ್ಲಿ ನಾಲ್ಕೈದು ತಾಸು ನೀರು ನೀಡಬೇಕು. ಮಳೆಗಾಲದಲ್ಲಿ ನೀರಿನ ಅಗತ್ಯವಿಲ್ಲ. ಮೂರು ತಿಂಗಳಲ್ಲಿ ಒಂದು ಬಾರಿಯಂತೆ ಪೈಪ್‌ನ ಮೂಲಕವೇ ಗೊಬ್ಬರ ನೀಡುತ್ತಾರೆ. ಸೆಗಣಿ ಮತ್ತು ರಾಸಾಯನಿಕ ಎರಡೂ ವಿಧದ ಗೊಬ್ಬರ ನೀಡಬಹುದಾಗಿದೆ. ಅಪ್ಪಟ ಸಾವಯವದಲ್ಲಿ ಬೆಳೆದರೆ ಇಳುವರಿ ಕಡಿಮೆಗೊಳ್ಳುತ್ತದೆ. ಕೇವಲ ರಾಸಾಯನಿಕವನ್ನೇ ಉಣಿಸಿದರೂ ಗಿಡಗಳು ಹೆಚ್ಚು ವರ್ಷಗಳ ಕಾಲ ಬದುಕುವುದಿಲ್ಲ.

ಪ್ರೇಮಲತಾ ಅವರು ದಿನದ ಹೆಚ್ಚಿನ ಸಮಯವನ್ನು ಗಿಡಗಳ ಆರೈಕೆಯಲ್ಲಿ ಕಳೆದಿದ್ದಾರೆ. ಸಾಲಿನಲ್ಲಿ ಕಳೆ ಗಿಡಗಳನ್ನು ಪ್ರತಿದಿನ ಕೀಳುತ್ತಿದ್ದರು. ಆರಂಭಿಕ ಹಂತದಲ್ಲಿ ಮೊಗ್ಗನ್ನು ಕತ್ತರಿಸುತ್ತಿದ್ದರು. ಇದರಿಂದ ಗಿಡಗಳ ಆರೋಗ್ಯಕರ ಬೆಳವಣಿಗೆ ಸಾಧ್ಯವಾಯಿತು. ‘ಮೊದಲ ಮೂರು ತಿಂಗಳು ಇಳುವರಿ ಕಡಿಮೆಯಾಗಿದ್ದು, ಹೂವು ಕೂಡ ಸಣ್ಣದಾಗಿತ್ತು. ಮೂರು ತಿಂಗಳ ನಂತರ ಮಾರುಕಟ್ಟೆಗೆ ನೀಡಲು ಆರಂಭಿದೆ. ಜೂನ್‌ನಿಂದ ಅಕ್ಟೋಬರ್ ತಿಂಗಳಲ್ಲಿ ಹೆಚ್ಚು ಹೂವಿನ ಇಳುವರಿ ಪ್ರಮಾಣ ಹೆಚ್ಚಾಯಿತು’ ಎಂದು ಅವರು ಹೇಳುತ್ತಾರೆ.

ಹೂವು ಕಟಾವಿನ ಕೆಲಸವನ್ನು ಬೆಳಿಗ್ಗೆ ಬೇಗ ಮಾಡಿ ಮುಗಿಸಲಾಗುತ್ತದೆ. ಐದು ಸಾವಿರ ಗಿಡದ ಹೂವು ಕಟಾವಿಗೆ ಎಂಟು ಆಳುಗಳು ಬೇಕು. ಬೆಳಿಗ್ಗೆ 6ರಿಂದ 9ರೊಳಗೆ ಕಟಾವು ಕೆಲಸವನ್ನು ಮುಗಿಸಿ ಹೂವುಗಳನ್ನು ಮಾರುಕಟ್ಟೆಗೆ ಸಾಗಿಸಲು ತಯಾರಿ ನಡೆಸಲಾಗುತ್ತದೆ. ಗಿಡಕ್ಕೆ ಒಂದು ವರ್ಷ ಆದ ಕೂಡಲೇ ಕಸಿ ಮಾಡಬೇಕು. ಡಿಸೆಂಬರ್, ಜನವರಿ ತಿಂಗಳಲ್ಲಿ ಗಿಡಗಳನ್ನು ಕತ್ತರಿಸಲು ಸೂಕ್ತ ಸಮಯ. ಇಲ್ಲವಾದರೆ ಗಿಡ ಎತ್ತರಕ್ಕೆ ಬೆಳೆದು ಇಳುವರಿಯಲ್ಲಿ ಇಳಿಮುಖವಾಗುತ್ತದೆ. ಗಾಳಿಗೆ ತುಂಡಾಗುವ ಸಾಧ್ಯತೆ ಕೂಡ ಹೆಚ್ಚು. ಕಸಿಗೊಳಿಸಿದ ಒಂದೂವರೆ ತಿಂಗಳಲ್ಲಿ ಮತ್ತೆ ಹೂವುಗಳು ಲಭ್ಯ.  ಗುಲಾಬಿ ಕೃಷಿಗೆ ಮೊದಲು ₹ 2.5 ಲಕ್ಷದಷ್ಟು ಖರ್ಚು ತಗಲಿದರೆ, ನಂತರ ಪ್ರತಿ ತಿಂಗಳಿಗೆ ₹ 30 ಸಾವಿರ ವೆಚ್ಚವಾಗುತ್ತದೆ. ಪ್ರತಿ ಪುಷ್ಪಕ್ಕೆ ಸರಾಸರಿ ₹ 1ರಷ್ಟು ದರವಿದ್ದರೂ ಗುಲಾಬಿ ಲಾಭದಾಯಕ ಪುಷ್ಪ ಎನ್ನುವುದು ಪ್ರೇಮಲತಾ ಅವರ ಅನುಭವದ ಮಾತು.

ಐದು ಸಾವಿರ ಗಿಡಗಳಿಂದ ಪ್ರತಿನಿತ್ಯ ಸರಾಸರಿ 4,500 ಹೂವನ್ನು ಕಟಾವು ಮಾಡುತ್ತಿದ್ದು ಧಾರವಾಡ ಮಾರುಕಟ್ಟೆಗೆ ಸಾಗಿಸುತ್ತಾರೆ. ಬೇಡಿಕೆಗೆ ಅನುಗುಣವಾಗಿ ಪ್ರತಿ ಹೂವಿಗೆ 40 ಪೈಸೆಯಿಂದ 2 ರೂಪಾಯಿ ಬೆಲೆ ಇದೆ. ವೇದಿಕೆ ಅಲಂಕಾರ, ಮಾಲೆ ತಯಾರಿಯಲ್ಲಿ ಉಪಯೋಗಿಸುವ ಗುಲಾಬಿ ಪುಷ್ಪಕ್ಕೆ ಸಾಮಾನ್ಯವಾಗಿ ಸ್ಥಳೀಯ ಮಾರುಕಟ್ಟೆಗಳಲ್ಲೇ ಬಹುಬೇಡಿಕೆಯಿದೆ.

‘ಚಳಿಗಾಲದಲ್ಲಿ ಬೂದಿರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಗಿಡ ಬಿಳಿ ಬಣ್ಣಕ್ಕೆ ವಾಲುವುದು ಇದರ ಲಕ್ಷಣಗಳಲ್ಲೊಂದು. ರೋಗದ ಲಕ್ಷಣ ಕಂಡುಬಂದೊಡನೆ  ಔಷಧವನ್ನು ಸಿಂಪಡಿಸಬೇಕು. ಬುಡದಲ್ಲಿ ನೀರು ನಿಲ್ಲದಂತೆ ಜಾಗರೂಕತೆ ವಹಿಸಬೇಕು. ನೀರು ನಿಂತಲ್ಲಿ ಬುಡ ಕೊಳೆಯುವ ಸಾಧ್ಯತೆ ಇರುತ್ತದೆ. ಹನಿ ನೀರಾವರಿ ವಿಧಾನದಲ್ಲಿ ಪೈಪ್ ಮೂಲಕ ಗೊಬ್ಬರ ನೀಡುವುದರಿಂದ ಗಿಡ ಚೆನ್ನಾಗಿ ಬೆಳೆಯುತ್ತದೆ’ ಎಂದು ಅವರು ವಿವರಿಸುತ್ತಾರೆ.

ಗುಲಾಬಿ ಮೊಗ್ಗಿಗೆ ತಿಂಗಳಿಗೆ ಎರಡು ಬಾರಿ ಕೀಟನಾಶಕ ಔಷಧವನ್ನು ಸಿಂಪಡಣೆ ಮಾಡಬೇಕು. ಮುಂಗಾರಿನಲ್ಲಿ ಅಧಿಕ ಹೂವು ಲಭಿಸುತ್ತಿದ್ದು ಕೀಟಗಳ ಬಾಧೆ ಜಾಸ್ತಿ. ತಿಂಗಳಿಗೊಮ್ಮೆ ಗಿಡಗಳ ಮಧ್ಯದ ಕಳೆ ತೆಗೆಯಬೇಕು. ಇನ್ನು ಗುಲಾಬಿಯ ಮೊಗ್ಗನ್ನು ಸಂಜೆ 6 ಗಂಟೆ ನಂತರವೇ ಕಟಾವು ಮಾಡಬೇಕು. ಗಿಡಗಳಿಗೆ ಮಧ್ಯಾಹ್ನದ ಹೊತ್ತಿನಲ್ಲಿ ನೀರುಣಿಸಬಾರದು. ಎಲೆ ಮಡಚಿಕೊಳ್ಳುವುದು, ಕೆಂಪಾಗುವ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಕೀಟನಾಶಕವನ್ನು ಸಿಂಪಡಿಸಬೇಕು ಎನ್ನುವುದು ಅವರ ಸಲಹೆ.

ಮೊಗ್ಗಿನಲ್ಲಿ ಹಸಿರು ಕೀಟಗಳು ಕೆಲವು ಋತುಗಳಲ್ಲಿ ಕಾಣಸಿಗುತ್ತವೆ. ಆದರೆ ಅವುಗಳಿಂದ ಹೂವು ಅಥವಾ ಮೊಗ್ಗಿಗೆ ಯಾವುದೇ ತೊಂದರೆಗಳಿಲ್ಲ. ಇತರ ಪುಷ್ಪಕೃಷಿಗಳಿಗೆ ಹೋಲಿಸಿದರೆ ಗುಲಾಬಿ ದೀರ್ಘಕಾಲಿಕ ಪುಷ್ಪ ಬೆಳೆಯಾಗಿದೆ.

ಹೆಚ್ಚಿನ ಮಾಹಿತಿ ಬೇಕಾದಲ್ಲಿ ರಾತ್ರಿ 7ರಿಂದ 8 ಗಂಟೆಯೊಳಗೆ ಬೆಳೆಗಾರರನ್ನು ಸಂಪರ್ಕಿಸಬಹುದು. ಸಂಪರ್ಕ ಸಂಖ್ಯೆ: 84533 06616.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT