ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಲಗಳು ಸಾರ್‌ ಮೊಲಗಳು!

ಅಕ್ಷರ ಗಾತ್ರ

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಬೊಮ್ಮನಹಳ್ಳಿಯ ಎಂ.ಒ. ಶಿವರಾಜ್ ಮತ್ತು ಎಂ.ಎಸ್.ಪಾಟೀಲ ಸಹೋದರರು ಮೊಲ ಸಾಕಾಣಿಕೆಯಿಂದ ಆರ್ಥಿಕ ಸ್ವಾವಲಂಬನೆ ಸಾಧಿಸಿದ್ದಾರೆ. ಅವರು ಸ್ಥಾಪಿಸಿದ ಪದ್ಮಗಿರಿ ಮೊಲ ಸಾಕಾಣಿಕೆ ಕೇಂದ್ರದಲ್ಲಿ ‘ರಷ್ಯನ್ ಗ್ರೇ ಜೈಂಟ್ಸ್’ ತಳಿಯ 400 ಮೊಲಗಳಿವೆ. ಅವುಗಳಿಗೆ ಸುಸಜ್ಜಿತ ಶೆಡ್ ನಿರ್ಮಿಸಿದ್ದು, ನೀರು ಕುಡಿಯಲು ನಿಪ್ಪಲ್ ವ್ಯವಸ್ಥೆ ಮಾಡಿದ್ದಾರೆ.

ಮೊಲ ಸಾಕಾಣಿಕೆಯಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ಗಳಿಸಬಹುದು. ಮೊಲದ ಗರ್ಭಧಾರಣೆ ಅವಧಿ 30 ದಿನಗಳಾಗಿದ್ದು, ಒಂದು ಮೊಲ 5 ರಿಂದ 12 ಮರಿಗಳನ್ನು ಹಾಕುತ್ತದೆ. ಒಂದು ಯುನಿಟ್‌ನಲ್ಲಿ ಏಳು ಹೆಣ್ಣು ಮೊಲಗಳಿದ್ದು, ಸರಾಸರಿ ಆರು ಮರಿಗಳೆಂದರೂ 42 ಮರಿಗಳಾಗುತ್ತವೆ. ಮರಿಗಳನ್ನು ನಾಲ್ಕು ತಿಂಗಳು ಸಾಕಿದರೆ ತಲಾ 2.5 ಕೆ.ಜಿ ತೂಕ ಬರುತ್ತವೆ. ಅಂದರೆ 40 ಮೊಲಗಳಿಗೆ 100 ಕೆ.ಜಿ ಮಾಂಸ ಸಿಗುತ್ತದೆ.

‘ಮಾರುಕಟ್ಟೆಯಲ್ಲಿ ಮೊಲದ ಮಾಂಸ ಪ್ರತಿ ಕೆ.ಜಿಗೆ ₹250 ಇದ್ದು, ಒಂದು ಯುನಿಟ್‌ನಿಂದ ₹ 25 ಸಾವಿರ ಆದಾಯ ಬರುತ್ತದೆ. ನಮ್ಮಲ್ಲಿ 40 ಯುನಿಟ್‌ಗಳಿದ್ದು, ಖರ್ಚು ಕಳೆದು ಎರಡು ತಿಂಗಳುಗಳಲ್ಲಿ ಏನಿಲ್ಲವೆಂದರೂ ₹5 ಲಕ್ಷ ಆದಾಯ ಗಳಿಸುತ್ತಿದ್ದೇವೆ’ ಎನ್ನುತ್ತಾರೆ ಶಿವರಾಜ್.

ಮೊಲ ಸಾಕಾಣಿಕೆಯಲ್ಲಿ ಆಸಕ್ತಿ ಇರುವವರಿಗೆ ಇವರೇ ಯುನಿಟ್‌ಗಳನ್ನು ಮಾರಾಟ ಮಾಡುತ್ತಾರೆ. ಒಂದು ಯುನಿಟ್‌ನಲ್ಲಿ ಏಳು ಹೆಣ್ಣು, ಮೂರು ಗಂಡು ಸೇರಿದಂತೆ ಒಟ್ಟು 10 ಮೊಲಗಳಿರುತ್ತವೆ. ಒಂದು ಯುನಿಟ್‌ಗೆ ₹ 17,500 ವೆಚ್ಚವಾಗುತ್ತದೆ. ಇದರಲ್ಲಿ 10 ಮೊಲಗಳು, 10x4 ಅಡಿ ಅಳತೆಯ ಒಂದು ಪಂಜರ, ಔಷಧಿ ಕಿಟ್ ಇರುತ್ತದೆ. ಯುನಿಟ್‌ಗಳನ್ನು ಇವರೇ ರೈತರ ಮನೆ ಬಾಗಿಲಿಗೆ ತಲುಪಿಸುತ್ತಾರೆ.

ಸುಲಭ ನಿರ್ವಹಣೆ: ಮೊಲ ಸಾಕಾಣಿಕೆ ಕಷ್ಟದ ಕೆಲಸವಲ್ಲ. ಮನೆಯ ಕಾಂಪೌಂಡ್, ಹಿತ್ತಲು, ಟೆರೆಸ್ ಮೇಲೂ ಸಾಕಬಹುದು. ಒಂದು ಹೆಣ್ಣು ಮೊಲದಿಂದ ವರ್ಷಕ್ಕೆ 30 ರಿಂದ 40 ಮರಿ ಪಡೆಯಬಹುದು. ಮೊಲದ ಮಾಂಸದಲ್ಲಿ ಕೊಬ್ಬಿನ ಅಂಶ ಕಡಿಮೆ ಇರುವುದರಿಂದ ಹೆಚ್ಚು ಬೇಡಿಕೆ ಇದೆ. ‘ಮೊಲದ ಮಾಂಸ ಹೆಚ್ಚು ಉಷ್ಣಾಂಶದಿಂದ ಕೂಡಿರುವುದರಿಂದ ಶೀತ ಪ್ರದೇಶಗಳಲ್ಲಿ ಹೆಚ್ಚು ಮಾರಾಟ ಆಗುತ್ತದೆ. ಕೆಲವು ದೇಶಗಳಲ್ಲಿ ಸೈನಿಕರಿಗೆ ಮೊಲದ ಮಾಂಸ ಕೊಡುತ್ತಾರೆ’ ಎನ್ನುತ್ತಾರೆ ಪಾಟೀಲ.

‘ಮೊಲದ ಗೊಬ್ಬರ ಕೂಡ ಬೆಳೆಗಳಿಗೆ ಸೂಕ್ತವಾಗಿದೆ. ರೈತರಷ್ಟೇ ಅಲ್ಲ, ನಿರುದ್ಯೋಗಿ ಯುವಕ, ಯುವತಿಯರು, ಮಹಿಳೆಯರು, ಉದ್ಯೋಗಿಗಳೂ ಮೊಲ ಸಾಕಬಹುದು. ಮೊಲಗಳನ್ನು ನಾವೇ ಕೆ.ಜಿಗೆ ₹250ರಂತೆ ಖರೀದಿ ಮಾಡುತ್ತೇವೆ. 10 ವರ್ಷಗಳ ಖರೀದಿ ಕರಾರು ಪತ್ರವನ್ನೂ ಕೊಡುತ್ತೇವೆ’ ಎನ್ನುತ್ತಾರೆ ಈ ಮೊಲ ಸಾಕಾಣಿಕೆ ಕೇಂದ್ರದ ಒಡೆಯರು.

ಆಹಾರಕ್ಕೆ ಕುದುರೆ ಮೆಂತ್ಯ: ಮೊಲಗಳಿಗೆ ಬೆಳಿಗ್ಗೆ ಅಕ್ಕಿ, ಗೋಧಿ, ಮೆಕ್ಕೆಜೋಳ, ಹುರುಳಿ, ಕಡಲೆ ಸಿಪ್ಪೆ, ಉಪ್ಪು, ಖನಿಜಗಳ ಮಿಶ್ರಣದ ವಲ್ಲಭ ಪಂಚಾಮೃತ ಕೊಡಲಾಗುತ್ತದೆ. ರಾತ್ರಿ ಕುದುರೆ ಮೆಂತ್ಯೆ ಸೊಪ್ಪು, ಅಲಸಂದಿ, ಗಿನಿಯ, ತೊಗಚೆ, ಸೆಣಬು, ಕಳೆಹುಲ್ಲು, ಸುಬಾಬುಲ್, ಎಗ್ಲೂಸನ್, ಆಲುವಾಣ, ನುಗ್ಗೆ ಸೊಪ್ಪು –ಅವುಗಳ ಊಟದ ಮೆನುವಿನಲ್ಲಿ ಇರುತ್ತದೆ. ಹೊಲದಲ್ಲಿನ ಹುಲ್ಲು, ಕಳೆ, ಉಳಿದ ತರಕಾರಿ, ಹಣ್ಣುಗಳನ್ನು ಸಹ ತಿನ್ನಿಸಬಹುದು.

ಹೆಚ್ಚಿನ ಮಾಹಿತಿಗೆ: 91080 73400

**

ಕಾಲೇಜಿನಿಂದ  ಮೊಲದ ಶೆಡ್‌ಗೆ!
ಮೊಲ ಸಾಕಾಣಿಕೆಯಲ್ಲಿ ತೊಡಗಿದ ಈ ಸಹೋದರರು ಇಬ್ಬರೂ ಪದವೀಧರರು. ಶಿವರಾಜ್ ಬಿಬಿಎಂ ಓದಿದ್ದರೆ, ಪಾಟೀಲ ಬಿಎ ಪದವಿ ಪೂರೈಸಿದ್ದಾರೆ. ‘2016ರ ಜನವರಿಯಲ್ಲಿ ಬೆಂಗಳೂರಿನ ಹೆಸರುಘಟ್ಟದಲ್ಲಿ ತರಬೇತಿ ಪಡೆದು ಹೊಲದಲ್ಲಿ ಶೆಡ್ ನಿರ್ಮಿಸಿ ಮೊಲ ಸಾಕಾಣಿಕೆ ಆರಂಭಿಸಿದೆವು. ಯುವಕರು ಪದವಿ ಪಡೆದ ನಂತರ ಉದ್ಯೋಗ ಅರಸಿ ಹೋಗುತ್ತಾರೆ. ಎಲ್ಲರೂ ನಗರಕ್ಕೆ ಹೋದರೆ ಕೆಲಸ ಸಿಗುವುದಿಲ್ಲ. ಯಾವುದೇ ಉದ್ಯೋಗವನ್ನು ಶ್ರದ್ಧೆಯಿಂದ ಮಾಡಿದರೆ ಯಶಸ್ಸು ಸಿಗುತ್ತದೆ ಎನ್ನುತ್ತಾರೆ’ ಈ ಸಹೋದರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT