ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳೆಯೊಳಗಿದೆ ಬಾಳು

Last Updated 22 ಮೇ 2017, 19:30 IST
ಅಕ್ಷರ ಗಾತ್ರ

–ಚಂದ್ರಶೇಖರ ಪಿ.ದೊಡ್ಡಮನಿ

**

ಬಾಳೆ ಬೇಸಾಯ, ಕೋಳಿ ಸಾಕಾಣಿಕೆ ಹಾಗೂ ಹೈನುಗಾರಿಕೆಯಲ್ಲಿ ತೊಡಗಿ ‘ಯಶಸ್ವಿ ರೈತ’ ಎನಿಸಿಕೊಂಡವರು ಬೆಳಗಾವಿ ಜಿಲ್ಲೆ ಘಟಪ್ರಭಾ ಸಮೀಪದ ಗುಡಸ ಗ್ರಾಮದ ರಮೇಶ ಪರಗೌಡ ದೇಸಾಯಿ.

ಮೂರು ಎಕರೆ ಚೆಂಡುಹೂವು ಹಾಕಿ ಸೂಕ್ತ ಬೆಲೆ ಸಿಗದೆ ಲಕ್ಷಾಂತರ ರೂಪಾಯಿ ಕಳೆದುಕೊಂಡರು ರಮೇಶ. ವಿಚಲಿತರಾಗದೆ ‘ಅಂಗಾಂಶ ಕೃಷಿ ಬಾಳೆ’ ಬೆಳೆಯಲು ಮುಂದಡಿಯಿಟ್ಟರು. ಆ ಬೆಳೆ ಇವರನ್ನು ಆಪತ್ಬಾಂಧವನಂತೆ ಕೈಹಿಡಿಯಿತು. ನರ್ಸರಿಯಿಂದ 4,200 ಸಸಿಗಳನ್ನು ತಂದು ಮೂರು ಎಕರೆ ಪ್ರದೇಶದಲ್ಲಿ ನಾಟಿ ಮಾಡಿದರು. ಈಗ ಪ್ರತಿಯೊಂದು ಗಿಡ ಗೊನೆಗಳಿಂದ ನಳನಳಿಸುತ್ತ ಉತ್ತಮ ಇಳುವರಿ ನೀಡುತ್ತಿದೆ. ‘ಇದು ಭೂತಾಯಿಯ ವರದಾನ’ ಎನ್ನುವ ರಮೇಶ, ‘ವ್ಯವಸಾಯದಲ್ಲಿ ಒಂದೇ ಬೆಳೆಯನ್ನು ಅವಲಂಬಿಸುವುದು ಸರಿಯಲ್ಲ. ಬಹುಬೇಸಾಯ ಪದ್ಧತಿಯಿಂದ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ. 15 ಸಾವಿರ ಕೋಳಿ ಸಾಕಾಣಿಕೆ (ಪೌಲ್ಟ್ರಿ ಫಾರ್ಮ್) ಮಾತ್ರವಲ್ಲದೆ ಹೈನುಗಾರಿಕೆಯನ್ನೂ ಮಾಡುತ್ತಿದ್ದಾರೆ. ಮೂವರು ಸಹೋದರರೊಂದಿಗೆ ದಿನವಿಡೀ ಕೆಲಸದಲ್ಲಿ ತೊಡಗಿರುತ್ತಾರೆ.

ಪೂರಕ ಹವಾಮಾನ: ತೋಟದ ಸಮೀಪದಲ್ಲೇ ಕಾಲುವೆಯಿದ್ದು, ಸದಾ ತಂಪಾಗಿರುವ ಪ್ರದೇಶವಿದು. 15 ಡಿಗ್ರಿ ಇಂದ 38 ಡಿಗ್ರಿ ಸೆಲ್ಸಿಯಸ್‌ವರೆಗಿನ ಉಷ್ಣಾಂಶ ಬಾಳೆ ಬೇಸಾಯಕ್ಕೆ ಪೂರಕ ವಾತಾವರಣ. ನೀರು ಬಸಿಯಲು ಇಲ್ಲಿನ ಉಸುಕು ಮಿಶ್ರಿತ ಮಣ್ಣು ಹೇಳಿ ಮಾಡಿಸಿದಂತಿದೆ.

ಏಳು ಅಡಿಗಳ ಅಂತರದಲ್ಲಿ ಒಂದರಂತೆ ಗುಂಡಿಗಳನ್ನು ತೋಡಿ, ಅದರಲ್ಲಿ ಬೇವಿನ ಹಿಂಡಿ, ಕೆಂಪು ಮಣ್ಣು ಹಾಗೂ ಕೊಟ್ಟಿಗೆ ಗೊಬ್ಬರವನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ ಹಾಕಲಾಗಿದೆ. ನಂತರ ನಾಟಿ ಮಾಡಲಾಗಿದೆ. ನಾಟಿ ಮಾಡಿದ ಮೂವತ್ತು ದಿನಗಳಿಗೆ ಗೊನೆ ಕಾಣಿಸಿಕೊಂಡ ಕೂಡಲೇ ಕೋಳಿ ಗೊಬ್ಬರ ಹಾಕಲಾಗಿದ್ದು, ವೆಂಚುರಿ ಉಪಕರಣ ಬಳಸಿ ನೀರಿನ ಮೂಲಕ ಯೂರಿಯಾ ಹಾಗೂ ಪೋಷಕಾಂಶಗಳನ್ನು ಪೂರೈಸಲಾಗಿದೆ.  ಬಾಳೆಗಳಿಗೆ ರೋಗ ಬಾಧಿಸದಂತೆ ಕಾಲಕಾಲಕ್ಕೆ ಔಷಧಿ ಸಿಂಪರಿಸಲಾಗಿದೆ. ಗೊನೆ ಚಿಗಿತ ಕೂಡಲೇ ತಿಂಗಳಿಗೆ ಎರಡು ಬಾರಿಯಂತೆ ಲಘು ಪೋಷಕಾಂಶಗಳ ಮಿಶ್ರಣವನ್ನು ಗೊನೆಗಳಿಗೆ ಸಿಂಪಡಿಸಲಾಗಿದೆ. ಇದಾದ ಕೆಲ ದಿನಗಳಲ್ಲಿ ಗೊನೆಗಳೇ  ಮಾತನಾಡತೊಡಗಿದವು.

ಸಾವಯವ ಗೊಬ್ಬರ ಶ್ರೇಷ್ಠ...: ದನಕರು, ಕೋಳಿಯ ಸಾವಯವ ಗೊಬ್ಬರ ಬೇಸಾಯಕ್ಕೆ ಪೂರಕ. ಶೇ 75ರಷ್ಟು ಗೊಬ್ಬರ ನಮ್ಮ ಪೌಲ್ಟ್ರಿ ಫಾರ್ಮ್‌ ಹಾಗೂ ಗೋಶಾಲೆಯಲ್ಲೇ ಉತ್ಪಾದನೆ ಆಗುತ್ತಿದ್ದು, ಇದರಿಂದ ಆರ್ಥಿಕ ಹೊರೆ ಕಡಿಮೆಯಾಗಿದೆ.

‘ನಾಟಿ ಮಾಡಿದ ಆರಂಭದಲ್ಲಿ ದುಗುಡವಿತ್ತು. ಬರುಬರುತ್ತ 2–3 ತಿಂಗಳಲ್ಲಿ ಬದಲಾವಣೆ ಕಂಡು ಬಂದಾಗ ಆತ್ಮವಿಶ್ವಾಸ ಹೆಚ್ಚಿತು. ಸರಿಯಾದ ಪ್ರಮಾಣದಲ್ಲಿ ನೀರು, ಗೊಬ್ಬರ ಹಾಕಿದೆವು. ಈಗ ಬಾಳೆಯ ಸಾವಿರಾರು ಗಿಡಗಳು ಗೊನೆಗಳೊಂದಿಗೆ ಕಂಗೊಳಿಸತೊಡಗಿವೆ. ಸದ್ಯ ಬಾಳೆ ಹಣ್ಣುಗಳು ಚೆನ್ನಾಗಿ ಮಾರಾಟವಾಗುತ್ತಿವೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರಕುತ್ತಿದೆ’ ಎಂದು ಅವರು ಹೇಳುತ್ತಾರೆ.

ಪ್ರತಿಯೊಂದು ಗೊನೆ 25–30 ಕೆ.ಜಿಯಷ್ಟು ತೂಗುತ್ತವೆ. ಉತ್ತಮ ಬೆಲೆ ದೊರಕಿದಲ್ಲಿ ₹10 ಲಕ್ಷದಷ್ಟು ಆದಾಯದ ನಿರೀಕ್ಷೆ ಅವರದಾಗಿದೆ. ‘ಒಂದೇ ವರ್ಷದಲ್ಲಿ ಹಣ್ಣುಗಳು ಮಾರಾಟವಾಗುತ್ತವೆ. ಅಲ್ಪಾವಧಿಯಲ್ಲಿ ಬೆಳೆದು ಅಧಿಕ ಇಳುವರಿ ನೀಡುವುದರಿಂದ ಖರ್ಚು ಕೂಡ ಕಡಿಮೆ. ಹೀಗಾಗಿ ಲಾಭ ಖಂಡಿತ. ರೋಗ ನಿರೋಧಕ ಶಕ್ತಿ ಈ ತಳಿಗೆ ಹೆಚ್ಚಾಗಿದೆ’ ಎನ್ನುತ್ತಾರೆ ರಮೇಶ.

ಸಕಾಲದಲ್ಲಿ ನೀರುಣಿಸುವುದು, ಗಿಡಗಳಿಗೆ ಮಣ್ಣನ್ನು ಏರಿಸುವುದು, ಗೊನೆಗಳನ್ನು ಪ್ಲಾಸ್ಟಿಕ್ ಚೀಲದಿಂದ ಮುಚ್ಚುವುದು, ತೇವಾಂಶ ಕಾಪಾಡಿಕೊಳ್ಳಲು ಎಲೆಗಳನ್ನು ಹಾಕುವುದು – ಉತ್ತಮ ಇಳುವರಿ ದೃಷ್ಟಿಯಿಂದ ಅಪೇಕ್ಷಣೀಯ. ಜೈವಿಕ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿದ ಈ ತಳಿಗಳು ಬೆಂಗಳೂರು, ಮೈಸೂರು, ತಮಿಳುನಾಡಿನಲ್ಲಿ ದೊರಕುತ್ತವೆ ಎಂದು ಅವರು ಹೇಳುತ್ತಾರೆ. ಸಂಪರ್ಕ: 897052412

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT