ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳಿವ ನೆನಪಿಗೆ ಸಿಗುವುದೇ ಮೋಕ್ಷ

Last Updated 22 ಮೇ 2017, 19:30 IST
ಅಕ್ಷರ ಗಾತ್ರ

ಮುಗಿಯದ ಪ್ರಯಾಣದ ಸುದೀರ್ಘ ರಸ್ತೆ, ರಸ್ತೆಯಲ್ಲಿ ಕಾರು ಚಲಿಸಿದಂತೆ ಬರಡು ಭೂಮಿಯಿಂದ ಏಳುವ ಕೆಂಪನೆಯ ದೂಳು. ಕಾವು ಹೆಚ್ಚಿಸುವ ಬಿಸಿಲು. ಈ ವಾತಾವರಣದಲ್ಲಿ ದಾರಿ ಮಧ್ಯ ಗಂಭೀರವಾಗಿ ನಿಂತ ನಾಯಿ. ಇದೇ ‘ರೆಡ್‌ ಡಾಗ್’. ಹೀಗೆ ಒಂಟಿಯಾಗಿ ನಿಂತ ನಾಯಿಯ ಮಾನಸಿಕ ತುಮುಲ ಸುತ್ತಲಿನ ನೀರವ ವಾತಾವರಣದೊಂದಿಗೆ ಬೆರತು ಒಂದಾದ ಪ್ರೇಮ್‌ನೊಂದಿಗೆ ‘ರೆಡ್‌ ಡಾಗ್’ ಸಿನಿಮಾ ಆರಂಭವಾಗುತ್ತದೆ.

ಕಬ್ಬಿಣದ ಅದಿರು ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡುವ ಜಾಕ್‌ಗೆ ಈ ನಾಯಿ ಸಿಗುತ್ತದೆ. ಜಾಕ್, ‘ರೆಡ್‌ ಡಾಗ್’ ಎಂದು ಹೆಸರಿಟ್ಟು ತನ್ನೊಂದಿಗೆ ಕರೆದುಕೊಂಡು ಹೋಗುತ್ತಾನೆ.

ಇದೇ ಕಾರ್ಖಾನೆಯ ಬಸ್‌ ಚಾಲಕನಾಗಿ ಬರುವ ಜಾನ್‌ ಗ್ರ್ಯಾಂಟ್‌ ಎಂಬಾತನನ್ನು ನಾಯಿ ಹೆಚ್ಚು ಹಚ್ಚಿಕೊಳ್ಳುತ್ತದೆ. ನಂತರ ಸಿನಿಮಾ ಒಂದಿಷ್ಟು ಲಘು ಬಗೆಯ ಹಾಸ್ಯದೊಂದಿಗೆ ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತದೆ.

ಕ್ರೀವ್‌ ಸ್ಟಾಂಡರ್ಡ್ಸ್‌ ನಿರ್ದೇಶಿಸಿದ 2011ರಲ್ಲಿ ತೆರೆಕಂಡ ಸಿನಿಮಾ ‘ರೆಡ್‌ ಡಾಗ್’. ತನ್ನ ಒಡೆಯನಿಗೆ ನಿಷ್ಠೆಯಿಂದ ಇರುವ ನಾಯಿ, ಮೌನವಾಗಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತದೆ.

ಜಾನ್‌ ಈ ನಡುವೆ, ನ್ಯಾನ್ಸಿ ಎಂಬಾಕೆಯೊಂದಿಗೆ ಪ್ರೇಮದಲ್ಲಿ ಬೀಳುತ್ತಾನೆ. ತನ್ನ ಒಡೆಯ ನ್ಯಾನ್ಸಿಯೊಂದಿಗೆ ಯಾವಾಗಲೂ ಕಾಲ ಕಳೆಯುವುದನ್ನು ನೋಡಲಾಗದ ರೆಡ್‌ ಡಾಗ್‌, ಅವರು ಹೋದಲ್ಲೆಲ್ಲಾ ಹಿಂಬಾಲಿಸುತ್ತದೆ. ನ್ಯಾನ್ಸಿಯೊಂದಿಗೆ ಅವಳ ಮನೆಗೆ ಹೋಗುವ ಜಾನ್, ‘ನಾನು ಬರುವವರೆಗೆ ಇಲ್ಲೇ ಕಾಯುತ್ತಿರು’ ಎನ್ನುತ್ತಾನೆ.

ಆದರೆ ಮರಳಿ ನ್ಯಾನ್ಸಿ ಮನೆಯಿಂದ ಬರುವ ದಾರಿಯಲ್ಲಿ ಅಪಘಾತಕ್ಕೆ ಒಳಗಾಗಿ ಮೃತಪಡುತ್ತಾನೆ. ಜಾನ್‌ಗಾಗಿ ಆತನ ಮನೆ ಮುಂದೆ ಕಾಯುತ್ತಾ ಕುಳಿತ ರೆಡ್‌ ಡಾಗ್ ಮೂರು ವಾರವಾದರೂ ಅಲ್ಲೇ ಕಾಯುತ್ತಾ ಕುಳಿತಿರುತ್ತದೆ. ಜಾನ್‌ ಗೆಳೆಯರೆಲ್ಲಾ ರೆಡ್‌ ಡಾಗ್‌ ಈ ಪರಿಸ್ಥಿತಿ ಕಂಡು ಮರುಗುತ್ತಾರೆ. ತೆಳುವಾದ ಹಾಸ್ಯ, ನಾಯಿಯ ಮುಗ್ಧತೆಯಿಂದ ಹರಿಯುತ್ತಿದ್ದ ಸಿನಿಮಾ ಜಾನ್‌ ಸಾವಿನಿಂದ ಸೂತಕವನ್ನು ಹೊದ್ದುಕೊಳ್ಳುತ್ತದೆ.

ರೆಡ್‌ ಡಾಗ್‌ ತಳಮಳವನ್ನು, ಹುಡುಕಾಟವನ್ನು, ನೋವನ್ನು ಪ್ರತಿ ಫ್ರೇಮಿನಲ್ಲೂ ಹಿಡಿದಿಡುವಲ್ಲಿ ಛಾಯಾಗ್ರಾಹಕ ಜೆಫ್ರಿ ಹಾಲ್ ಯಶಸ್ವಿಯಾಗಿದ್ದಾರೆ. ಜಾನ್‌ನನ್ನು ಹುಡುಕುತ್ತಾ ಮೂರು ವರ್ಷ ಅಲೆಯುವ ರೆಡ್‌ ಡಾಗ್‌ನ ಅಲೆಮಾರಿತನಕ್ಕೆ ಹೊಂದುವ ಹಿನ್ನೆಲೆ ಸಂಗೀತ ಭಾವರಸ ಉಮ್ಮಳಿಸಿ ಬರುವಂತೆ ಮಾಡಿದೆ.

ತನ್ನ ಒಡೆಯನೆಲ್ಲಿ ಎಂದು, ಕಾರ್ಖಾನೆಯ ಪ್ರತಿಯೊಬ್ಬ ಕೆಲಸಗಾರನ ಬಳಿ ರೆಡ್‌ ಡಾಗ್ ಬಂದು ಮುಖ ನೋಡುವಾಗ ತೋರಿಸುವ ಕ್ಲೋಸ್‌ಅಪ್ ದೃಶ್ಯಗಳಲ್ಲಿ ಎಲ್ಲರ ಕಣ್ಣು ಮಾತನಾಡಿದಂತೆ ಭಾಸವಾಗುತ್ತದೆ.  ಮೂರು ವರ್ಷ ಇಡೀ ಪಟ್ಟಣವನ್ನೇ ಹುಡುಕುವ ರೆಡ್‌ ಡಾಗ್‌ ಕೊನೆಗೆ ಜಾನ್‌ ಮನೆಗೆ ಬಂದು ನೋವಿನಿಂದ ಒದ್ದಾಡುತ್ತದೆ. ಏನೂ ಮಾಡಲಾಗದೆ ನ್ಯಾನ್ಸಿ ಮನೆಗೆ ಓಡಿ ಹೋಗುತ್ತದೆ.

ಕೊನೆಯಲ್ಲಿ ಕಾರ್ಮಿಕರೆಲ್ಲರೂ ರೆಡ್‌ ಡಾಗ್‌ ಮನೆಗೆ ಮರಳಿ ಬಂತು ಎಂಬ ಸಂಭ್ರಮದಲ್ಲಿ ಪಬ್‌ನಲ್ಲಿ ಕುಡಿಯುತ್ತಾ ತಮ್ಮ ಕುಡಿತವನ್ನು ಜಾನ್‌ ನೆನಪಿಗೆ ಎಂದು ಅರ್ಪಿಸಿ, ಜಾನ್‌ ಜಾನ್ ಎಂದು ಜೋರಾಗಿ ಕೂಗುತ್ತಾರೆ. ಪಬ್‌ನ ಕೊಠಡಿಯೊಂದರಲ್ಲಿ ಮಲಗಿದ್ದ ರೆಡ್‌ ಡಾಗ್ ಜಾನ್‌ ಹೆಸರು ಕೇಳಿಸಿಕೊಂಡು ಹೊರಬರುತ್ತದೆ. ಎಲ್ಲರನ್ನೂ ಒಮ್ಮೆ ತದೇಕಚಿತ್ತದಿಂದ ನೋಡಿ ನಿಟ್ಟುಸಿರು ಬಿಟ್ಟು ಪಬ್‌ನಿಂದ ಹೊರಬೀಳುತ್ತದೆ. ಜಾನ್‌ ಸಮಾಧಿ ಮುಂದೆ ಬಂದು ಕೂತ ನಾಯಿ,  ಸಮಾಧಿಯನ್ನು ನೋಡುತ್ತಾ ಇಹಲೋಕ ತ್ಯಜಿಸುತ್ತದೆ.

ರೆಡ್‌ಡಾಗ್ ನೆನಪಿಗೆ ಎಲ್ಲರೂ ಸೇರಿ ಅದರ ಪ್ರತಿಮೆಯನ್ನು ಕಟ್ಟಿಸುತ್ತಾರೆ. ಸಿನಿಮಾ ರುಚಿ ಕಳೆದುಕೊಳ್ಳುವುದೇ ಇಲ್ಲಿ. ಒಡೆಯನ ಅಗಲಿಕೆ ನೋವು ರೆಡ್‌ ಡಾಗ್‌ನನ್ನು ಕಾಡುವ ಹೊತ್ತಿಗೆ ಇದ್ದ ನಾಯಿ ಮೇಲಿನ ಮರುಕ, ಪ್ರತಿಮೆಯಾದ ರೆಡ್‌ಡಾಗ್ ಮುಂದೆ ಕ್ಲೀಷೆ ಎನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT