ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಮಾಣು ವಿದ್ಯುತ್‌ ಮಾತ್ರವಲ್ಲ ಪುನರ್‌ನವೀಕರಣ ಇಂಧನವೂ ಬೇಕು

Last Updated 22 ಮೇ 2017, 19:30 IST
ಅಕ್ಷರ ಗಾತ್ರ
ಪರಮಾಣು ವಿದ್ಯುತ್‌ ಉತ್ಪಾದನೆಗೆ 10 ರಿಯಾಕ್ಟರ್‌ಗಳ ನಿರ್ಮಾಣಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.  ಇಷ್ಟೊಂದು ಸಂಖ್ಯೆಯ ರಿಯಾಕ್ಟರ್‌ಗಳ ನಿರ್ಮಾಣಕ್ಕೆ ಏಕಕಾಲಕ್ಕೆ ಅನುಮೋದನೆ ನೀಡಿರುವುದು ಪರಮಾಣು ಇಂಧನ ವಲಯ ಇತಿಹಾಸದಲ್ಲಿ ಇದೇ  ಮೊದಲು.  

ಪರಮಾಣು ಶಕ್ತಿ ಸಾಮರ್ಥ್ಯವನ್ನು  2025ರೊಳಗೆ ಮೂರು ಪಟ್ಟು ಹೆಚ್ಚಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗೆ ಅನುಗುಣವಾಗಿದೆ ಈ ನಿರ್ಧಾರ. ಶುದ್ಧ ಶಕ್ತಿಯ ಉತ್ಪಾದನೆಗೆ ಇದರಿಂದ ನೆರವಾಗಲಿದೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ. 
 
2005ರ ಭಾರತ– ಅಮೆರಿಕ ನಾಗರಿಕ ಪರಮಾಣು ಸಹಕಾರ ಒಪ್ಪಂದದ ನಂತರ  ಅಂತರರಾಷ್ಟ್ರೀಯ ಪರಮಾಣು ವಹಿವಾಟಿನಲ್ಲಿ ಭಾರತದ ಮೇಲೆ ಹೇರಲಾಗಿದ್ದ  ನಿರ್ಬಂಧಗಳು ತೆರವಾಗಿದ್ದವು.  
 
1974ರಲ್ಲಿ ತನಗಿರುವ  ಅಣ್ವಸ್ತ್ರ ಸಾಮರ್ಥ್ಯವನ್ನು ಭಾರತ ಹೊರಜಗತ್ತಿಗೆ ಪ್ರಕಟಿಸಿದ ನಂತರ ಈ ನಿರ್ಬಂಧಗಳನ್ನು ಹೇರಲಾಗಿತ್ತು.  ಮೂರು ದಶಕಕ್ಕೂ ಹೆಚ್ಚು ಕಾಲದ  ನಿರ್ಬಂಧಗಳ ತೆರವಿನ ನಂತರ ಯುರೇನಿಯಂ  ಆಮದು ಹಾಗೂ ಪರಮಾಣು ತಂತ್ರಜ್ಞಾನಗಳನ್ನು ಪಡೆದುಕೊಳ್ಳಲು ಭಾರತಕ್ಕೆ ಅವಕಾಶಗಳು ಮತ್ತೆ ಲಭ್ಯವಾದವು.
 
ಇದರಿಂದಾಗಿ ಭಾರತದಲ್ಲಿ ಅಣು ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಳವಾಗುವುದೆಂಬ ನಿರೀಕ್ಷೆಯೂ ಗರಿಗೆದರಿತ್ತು. ಆದರೆ 2010–11ರ ಅವಧಿಯಲ್ಲಿ ಭಾರತ ಸರ್ಕಾರ ಅಂಗೀಕರಿಸಿದ ನಾಗರಿಕ ಪರಮಾಣು ಬಾಧ್ಯಸ್ಥಿಕೆ ಕಾನೂನಿಗೆ ವಿದೇಶಿ ಪರಮಾಣು ಉದ್ಯಮದ ಸ್ಪಂದನ ನಕಾರಾತ್ಮಕವಾಗಿತ್ತು.
 
ಹೀಗಾಗಿ ಮತ್ತೆ  ವಿದೇಶಿ ಪರಮಾಣು ಸರಬರಾಜುದಾರರಿಗೆ ರಕ್ಷಣೆ ಒದಗಿಸುವಂತಹ ಭಾರತೀಯ ವಿಮಾ ನಿಧಿಯ ವ್ಯವಸ್ಥೆಯೊಂದನ್ನು 2016ರಲ್ಲಿ ಭಾರತ ಸರ್ಕಾರ ರೂಪಿಸಿದ್ದು ಇತಿಹಾಸ.
 
ಈಗ, ರಾಷ್ಟ್ರದಲ್ಲಿ 10 ಪರಮಾಣು ರಿಯಾಕ್ಟರ್‌ಗಳ ನಿರ್ಮಾಣಕ್ಕೆ ಮುಂದಾಗುತ್ತಿರುವುದು ದೇಶಿ ಪರಮಾಣು ಉದ್ಯಮಕ್ಕೆ ಪುನಶ್ಚೇತನ ನೀಡುವತ್ತ ಹೊಸ ಹೆಜ್ಜೆಯಾಗಿದೆ.  ಈ ರಿಯಾಕ್ಟರ್‌ಗಳಿಗೆ ಅಗತ್ಯವಾದ ಎಲ್ಲಾ ಬಿಡಿಭಾಗಗಳು ಹಾಗೂ ವಸ್ತುಗಳನ್ನು ಸರಬರಾಜು ಮಾಡಲು ಭಾರತದ ಉದ್ಯಮ ಸಶಕ್ತವಾಗಿದೆ ಎಂಬುದೂ ಹೆಗ್ಗಳಿಕೆ.  
 
ಇಂಧನ ಅಗತ್ಯ ಹೆಚ್ಚಾಗುತ್ತಿರುವ ಪ್ರಸಕ್ತ ಸಂದರ್ಭವನ್ನು ಗಮನದಲ್ಲಿ ಇಟ್ಟುಕೊಂಡು ದೇಶಿ ಪರಮಾಣು ವಿದ್ಯುತ್ ಘಟಕಗಳನ್ನು ಆರಂಭಿಸುವಂತಹ ಕೇಂದ್ರ ಸರ್ಕಾರದ  ಈ ನಿರ್ಣಯವನ್ನು ಪರಿಶೀಲಿಸುವುದು ಮುಖ್ಯ. ಏಕೆಂದರೆ,  ವಿದ್ಯುತ್‌ಗಾಗಿ ಬೇಡಿಕೆ ರಾಷ್ಟ್ರದಲ್ಲಿ ಹೆಚ್ಚುತ್ತಲೇ ಇದೆ.
 
ಅಂತರರಾಷ್ಟ್ರೀಯ ಇಂಧನ ಸಂಸ್ಥೆಯೊಂದು 2015ರಲ್ಲಿ ನೀಡಿರುವ ಮುನ್ನೋಟದ ಪ್ರಕಾರ, ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ ಪೂರೈಸಲು ರಾಷ್ಟ್ರದಲ್ಲಿ  ವಿದ್ಯುತ್ ಉತ್ಪಾದನೆ  2040ರೊಳಗೆ ನಾಲ್ಕು ಪಟ್ಟು ಹೆಚ್ಚಳ ಆಗಬೇಕು.  ಇಂತಹ ಸಂದರ್ಭದಲ್ಲಿ ವಿದ್ಯುತ್ ಬೇಡಿಕೆ ಪೂರೈಕೆಗಾಗಿ ಸಾಂಪ್ರದಾಯಿಕ ಇಂಧನ ಮೂಲಗಳಾಚೆ  ಪರಿಹಾರ ಕಂಡುಕೊಳ್ಳುವ ಪ್ರಯತ್ನ ಇಲ್ಲಿದೆ ಎನ್ನಬಹುದು. 
 
ಆದರೆ, 2011ರಲ್ಲಿ ಜಪಾನ್‌ನ ಫುಕುಷಿಮಾ ಪರಮಾಣು ಘಟಕದ ದುರಂತ, ಪರಮಾಣು ವಿದ್ಯುತ್‌ ಘಟಕಗಳ ಅಪಾಯದ ಬಗ್ಗೆ ಜಗತ್ತಿಗೆ ಎಚ್ಚರಿಕೆ ಗಂಟೆಯಾಯಿತು ಎಂಬುದನ್ನೂ ಇದೇ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳುವುದು ಅಗತ್ಯ.  
 
ಹೀಗಾಗಿ, ಪರಮಾಣು  ವಿದ್ಯುತ್ ಘಟಕಗಳ ಸುರಕ್ಷತೆ   ಬಗ್ಗೆ ಜನರಲ್ಲಿ ಇರುವ ಆತಂಕಗಳೂ ನಿವಾರಣೆಯಾಗಬೇಕು. ವಿಶೇಷವಾಗಿ  ಪರಮಾಣು ಘಟಕಗಳ ತ್ಯಾಜ್ಯವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆ. ಇವು ಹೊರಸೂಸುವ ವಿಕಿರಣಗಳಿಂದಾಗುವ ಅಪಾಯವನ್ನು ಕಡೆಗಣಿಸಲಾಗದು.  
 
ಕಲ್ಲಿದ್ದಲು ಮೂಲದ ವಿದ್ಯುತ್‌ಗಿಂತ ಪರಮಾಣು ವಿದ್ಯುತ್‌ ಬೆಲೆ ಕಡಿಮೆ ಇರುತ್ತದೆ ಎಂದು ಭಾರತ– ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಬಗ್ಗೆ ಸಂಸತ್‌ನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ  ಕೇಂದ್ರ ಸರ್ಕಾರ ಪ್ರತಿಪಾದಿಸಿತ್ತು.
 
ಆದರೆ ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಇದು ನಿಜವಲ್ಲ.  ಸೌರ ವಿದ್ಯುತ್‌ಗಿಂತ ಪರಮಾಣು ಇಂಧನ ಬೆಲೆಯೇ ಹೆಚ್ಚಾಗುತ್ತದೆ ಎಂಬ ಸ್ಥಿತಿ ಈಗ ಇದೆ. ಜೊತೆಗೆ ಪರಮಾಣು ಘಟಕಗಳನ್ನು ನಿರ್ಮಾಣ ಮಾಡಲೂ ಹಲವು ವರ್ಷಗಳು ಹಿಡಿಯುತ್ತವೆ ಎಂಬುದನ್ನೂ  ಗಮನಿಸಬೇಕು.
 
ಹೀಗಾಗಿ ಶುದ್ಧ  ಇಂಧನಕ್ಕಾಗಿ ಪರಮಾಣು ವಿದ್ಯುತ್‌ವೊಂದನ್ನೇ  ಅವಲಂಬಿಸುವುದು ಸರಿಯಲ್ಲ.  ಸೌರ ವಿದ್ಯುತ್, ಗಾಳಿ ಇಂಧನದಂತಹ ಪುನರ್‌ನವೀಕರಣ ಇಂಧನಗಳನ್ನು ಅಭಿವೃದ್ಧಿಪಡಿಸಲೂ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT