ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘಟಿತ ಹೋರಾಟದಿಂದ ಗೆಲುವು

Last Updated 22 ಮೇ 2017, 19:30 IST
ಅಕ್ಷರ ಗಾತ್ರ

ಹೈದರಾಬಾದ್ :  ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಹತ್ತು ವರ್ಷಗಳ ಇತಿಹಾಸದಲ್ಲಿ  ಮುಂಬೈ ಇಂಡಿಯನ್ಸ್‌ ತಂಡದ ರೋಹಿತ್ ಶರ್ಮಾ ಅವರು ಅತ್ಯಂತ ಅದೃಷ್ಟವಂತ ನಾಯಕ ಎಂಬುದು ಈಗ ಮತ್ತೊಮ್ಮೆ ಸಾಬೀತಾಗಿದೆ.

ಮೂರು ಬಾರಿ ಪ್ರಶಸ್ತಿ ಗೆದ್ದ ಏಕೈಕ ನಾಯಕನೆಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಭಾನುವಾರ ರಾತ್ರಿ ಉಪ್ಪಳದ ರಾಜೀವಗಾಂಧಿ ಕ್ರೀಡಾಂಗಣದಲ್ಲಿ  ಮುಂಬೈ ತಂಡವು ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 129 ರನ್‌ ಗಳಿಸಿತ್ತು. ಆದರೆ ಈ ಸಾಧಾರಣ ಮೊತ್ತವನ್ನು ಮೀರಿ ನಿಲ್ಲಲು ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡಕ್ಕೆ ಆಗಲಿಲ್ಲ. ಮುಂಬೈ ತಂಡದ ಎಡಗೈ ವೇಗಿ ಮಿಷೆಲ್ ಜಾನ್ಸನ್ (26ಕ್ಕೆ3) ಮತ್ತು ಜಸ್‌ಪ್ರೀತ್ ಬೂಮ್ರಾ (26ಕ್ಕೆ2) ಅವರ ಶಿಸ್ತಿನ ದಾಳಿಯಿಂದಾಗಿ 1 ರನ್‌ ಅಂತರದಿಂದ ಪುಣೆ ತಂಡವು ಸೋತಿತು. ರೋಹಿತ್ ಬಳಗವು ರೋಚಕ ಗೆಲುವು ಸಾಧಿಸಿ ಟ್ರೋಫಿಗೆ ಮುತ್ತಿಕ್ಕಿತ್ತು. 

ಪುಣೆ ತಂಡದ ಕೈಯಿಂದ ಗೆಲುವು ಕಿತ್ತುಕೊಂಡ ಖುಷಿಯಲ್ಲಿದ್ದ ರೋಹಿತ್ ಶರ್ಮಾ  ಸುದ್ದಿಗಾರರೊಂದಿಗೆ ಮಾತನಾಡಿದರು. ‘ಒಬ್ಬ ಆಟಗಾರನ ವೈಯಕ್ತಿಕ ಶ್ರೇಷ್ಠ ಸಾಧನೆಯಿಂದ ಕೆಲವು ಪಂದ್ಯಗಳನ್ನು ಗೆಲ್ಲಬಹುದು. ಆದರೆ ಇಡೀ ತಂಡವೇ ಸಂಘಟಿತ ಹೋರಾಟ ಮಾಡಿದಾಗ ದೊಡ್ಡ ಪ್ರಶಸ್ತಿ ಗೆಲ್ಲುವುದು ಸಾಧ್ಯವಾಗುತ್ತದೆ’ ಎಂದರು.

‘ಮೂರು ಬಾರಿ ಪ್ರಶಸ್ತಿ ಗೆದ್ದಿರುವುದು ಸಂತಸದ ವಿಷಯ. ಎಲ್ಲವೂ ನನಗೆ ವಿಶೇಷವಾದದ್ದೆ. ತಂಡದ ಆಟಗಾರರ ಆಯ್ಕೆ ಮತ್ತು ಅವರನ್ನು ದುಡಿಸಿಕೊಳ್ಳುವ ರೀತಿ ಮುಖ್ಯವಾಗುತ್ತದೆ. ಸಂದರ್ಭಕ್ಕೆ ತಕ್ಕಂತೆ ಸಮರ್ಥರನ್ನು ಆಯ್ಕೆಮಾಡಿ ಹೊಣೆ ನೀಡುವುದು ಮುಖ್ಯ’ ಎಂದು ಮುಂಬೈಕರ್ ಅಭಿಪ್ರಾಯಪಟ್ಟರು.

‘ಆಸ್ಟ್ರೇಲಿಯಾದ ಅನುಭವಿ ಎಡಗೈ ವೇಗಿ ಮಿಷೆಲ್ ಜಾನ್ಸನ್ ಅವರ ಬೌಲಿಂಗ್ ಅಮೋಘವಾಗಿತ್ತು. ಪುಣೆಗೆ  ಕೊನೆಯ ಓವರ್‌ನಲ್ಲಿ 11 ರನ್‌ಗಳ ಅಗತ್ಯವಿದ್ದಾಗ ಅವರು ಬೌಲಿಂಗ್ ಮಾಡಿದರು. ಆ ಸಂದರ್ಭದಲ್ಲಿ ಅವರಿಗೆ ಚೆಂಡು ನೀಡಿದಾಗ ಸಂಪೂರ್ಣ ವಿಶ್ವಾಸವಿತ್ತು. ಅವರು ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿದರು’ ಎಂದು ಶ್ಲಾಘಿಸಿದರು.

‘ಪುಣೆ ತಂಡದ ನಾಯಕ ಸ್ಟೀವನ್ ಸ್ಮಿತ್ ಉತ್ತಮ ಬ್ಯಾಟ್ಸ್‌ಮನ್. ಅವರು ವೇಗಿಗಳ ಎಸೆತದ ವೇಗವನ್ನು ಬಳಸಿಕೊಂಡು ಹೊಡೆತಗಳನ್ನು ಆಡುತ್ತಿದ್ದರು.  ಆ ಬಗ್ಗೆ ಮಿಷೆಲ್ ಜೊತೆಗೆ ಚರ್ಚಿಸಿದೆ.  ಅವರನ್ನು ನಿಯಂತ್ರಿಸುವಲ್ಲಿ  ಮಿಷೆಲ್ ಯಶಸ್ವಿಯಾದರು. ಪಂದ್ಯಕ್ಕೆ ಸಿಕ್ಕ ಮಹತ್ವದ ತಿರುವು ಅದು’ ಎಂದರು.

‘ಈ ಪಿಚ್‌ನಲ್ಲಿ 140 ರಿಂದ 160 ರನ್‌ಗಳವರೆಗಿನ ಮೊತ್ತವು ಸವಾಲಿನದ್ದಾಗಿತ್ತು.  ಆದರೆ ನಮ್ಮ ತಂಡದ ಆರಂಭಿಕ ಬ್ಯಾಟಿಂಗ್‌ ಕ್ರಮಾಂಕವು ಕುಸಿದಿದ್ದು ಹಿನ್ನಡೆಯಾಯಿತು.   ಕೃಣಾಲ್ ಪಾಂಡ್ಯ ಅವರೊಬ್ಬರೇ ತಂಡದ ಮೊತ್ತವನ್ನು ಹೆಚ್ಚಿಸಿದರು. ಬೌಲಿಂಗ್‌ನಲ್ಲಿ ಲಸಿತ್ ಮಾಲಿಂಗ ಮತ್ತು ಜಸ್‌ಪ್ರೀತ್  ಬೂಮ್ರಾ ಅವರು ಮಿಷೆಲ್ ಜೊತೆಗೆ ಉತ್ತಮ ದಾಳಿ ಸಂಘಟಿಸಿದ್ದರು’ ಎಂದು ರೋಹಿತ್ ವಿಶ್ಲೇಷಿಸಿದರು.

‘ಭಾರತ ತಂಡದ ನಾಯಕನಾಗುವ ಗುರಿ ನಿಮಗಿದೆಯೇ’ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೋಹಿತ್, ‘ಅವಕಾಶ ಮತ್ತು ಸಮಯ ಬಂದಾಗ ನಿಭಾಯಿಸುತ್ತೇನೆ. ಅದಿನ್ನೂ ಬಹಳ ದೂರವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT