ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಧ ನಿತಿನ್‌ಗೆ ₹ 93 ಲಕ್ಷ

ಪ್ರೊ ಕಬಡ್ಡಿ ಐದನೇ ಆವೃತ್ತಿ ಹರಾಜು ಪ್ರಕ್ರಿಯೆ: ಕಬಡ್ಡಿ ಪಟುಗಳಿಗೆ ಬಂಪರ್ ಕೊಡುಗೆ
Last Updated 22 ಮೇ 2017, 19:39 IST
ಅಕ್ಷರ ಗಾತ್ರ

ನವದೆಹಲಿ : ಸರ್ವಿಸಸ್‌ ತಂಡದ ಕಬಡ್ಡಿ ಆಟಗಾರ  ನಿತಿನ್ ತೋಮರ್ ಅವರು ಸೋಮವಾರ ನಡೆದ ಪ್ರೊ ಕಬಡ್ಡಿ ಐದನೇ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ  ಅತಿ ಹೆಚ್ಚು ಮೌಲ್ಯ ಪಡೆದು ಹೊಸ ದಾಖಲೆ ಬರೆದರು.

ಜಿಎಂಆರ್‌ ಲಿಮಿಟೆಡ್ ಒಡೆತನದ ಉತ್ತರ ಪ್ರದೇಶ ತಂಡವು ₹ 93 ಲಕ್ಷ  ನೀಡಿ ಅವರನ್ನು ಖರೀದಿಸಿತು. 22 ವರ್ಷದ ನಿತಿನ್ ತೋಮರ್ ಅವರು ಹೋದ ಆವೃತ್ತಿಯಲ್ಲಿ  ಪುಣೆ ಪಲ್ಟನ್ ತಂಡದಲ್ಲಿ ಆಡಿದ್ದರು. ಆಲ್‌ ರೌಂಡರ್ ನಿತಿನ್ ಅವರು ತಮಗಿಂತ ಅನುಭವಿ ಆಟಗಾರರಾದ ರೋಹಿತ್ ಕುಮಾರ್ ಮತ್ತು ಮಂಜಿತ್ ಚಿಲ್ಲಾರ್ ಅವರನ್ನು ಕೂಡ ಹಿಂದಿಕ್ಕಿದರು. ನಿತಿನ್ ಅವರು ಹೋದ ವರ್ಷ ನಡೆದಿದ್ದ ವಿಶ್ವಕಪ್ ಕಬಡ್ಡಿ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

ರೋಹಿತ್ ಅವರನ್ನು ಬೆಂಗಳೂರು ಬುಲ್ಸ್‌ ತಂಡವು ₹ 81 ಲಕ್ಷ ಮತ್ತು ಮಂಜಿತ್ ಚಿಲ್ಲಾರ್ ಅವರನ್ನು ಜೈಪುರ ಪಿಂಕ್‌ಪ್ಯಾಂಥರ್ಸ್‌ ತಂಡವು ₹ 75.5 ಲಕ್ಷ ನೀಡಿ ಖರೀದಿಸಿತು.  ಇದರಿಂದಾಗಿ ರೋಹಿತ್ ಅವರು ಬುಲ್ಸ್‌ ತಂಡಕ್ಕೆ ಮರಳಿದಂತಾಗಿದೆ. ಮಂಜಿತ್ ಅವರು ಹೋದ ಎರಡು ಆವೃತ್ತಿಗಳಲ್ಲಿ ಪುಣೇರಿ ಪಲ್ಟನ್ ತಂಡವನ್ನು ಮುನ್ನಡೆಸಿದ್ದರು. 

30 ವರ್ಷದ ಮಂಜಿತ್ ಅವರು ಹರಿಯಾಣದವರು. 2013 ಮತ್ತು 2014ರಲ್ಲಿ  ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಪುಣೇರಿ ತಂಡವು ಅವರನ್ನು ಉಳಿಸಿ ಕೊಳ್ಳಲು ಪ್ರಯತ್ನಿಸಿತ್ತು. ಆದರೆ ಸ್ವತಃ ಮಂಜೀತ್ ಅವರೇ ತಾವು ಹರಾಜಿನಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು. 

ಹೋದ ವರ್ಷ ಬೆಂಗಳೂರು ಬುಲ್ಸ್‌ ತಂಡದ ನಾಯಕರಾಗಿದ್ದ ಸುರ್ಜಿತ್ ಸಿಂಗ್ ಅವರಿಗೆ  ಬೆಂಗಾಲ್ ವಾರಿಯರ್ಸ್  ₹ 73  ಲಕ್ಷ ನೀಡಿ ಸೇರ್ಪಡೆ ಮಾಡಿಕೊಂಡಿದೆ.  ರಾಜೇಶ್ ನರ್ವಾಲ್ (₹ 69 ಲಕ್ಷ) ಮತ್ತು ಸಂದೀಪ್ ನರ್ವಾಲ್ (₹ 66 ಲಕ್ಷ) ಅವರನ್ನು ಕ್ರಮವಾಗಿ ಉತ್ತರಪ್ರದೇಶ ಮತ್ತು ಪುಣೇರಿ ಪಲ್ಟನ್ ತಂಡಗಳು ಖರೀದಿಸಿವೆ.  ಇರಾನ್‌ನ ಮೊಹಮ್ಮದ್ದ ಮಗಸೌದೊಲು (₹ 8 ಲಕ್ಷ), ಜಪಾನಿನ ಟಕಾಮಿಸು ಕೊನೊ (₹ 8ಲಕ್ಷ) ಅವರು ಅತ್ಯಂಕ ಕಡಿಮೆ ಮೌಲ್ಯ ಪಡೆದವರಾಗಿದ್ದಾರೆ.

ನಾಲ್ಕು ತಂಡಗಳ ಸೇರ್ಪಡೆ: ಈ ವರ್ಷದಿಂದ ಟೂರ್ನಿಗೆ ಹೊಸದಾಗಿ ನಾಲ್ಕು ತಂಡಗಳನ್ನು ಸೇರ್ಪಡೆ ಮಾಡ ಲಾಗಿದೆ. ತಮಿಳುನಾಡು, ಗುಜರಾತ್, ಹರಿಯಾಣ ಮತ್ತು ಉತ್ತರಪ್ರದೇಶ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಕಳೆದ ನಾಲ್ಕು ಆವೃತ್ತಿಗಳಲ್ಲಿಯೂ ಎಂಟು ತಂಡಗಳು ಸ್ಪರ್ಧಿಸಿದ್ದವು. 

131 ಹೊಸ ಆಟಗಾರರು: ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 400 ಆಟಗಾರರು ಸ್ಪರ್ಧಿಸಲಿದ್ದಾರೆ.   ಅದರಲ್ಲಿ 131 ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಪ್ರತಿಯೊಂದು ಫ್ರಾಂಚೈಸ್‌ ತಲಾ 18 ರಿಂದ 25 ಆಟಗಾರರನ್ನು ಖರೀದಿಸುವ ಆವಕಾಶ ನೀಡಲಾಗಿತ್ತು.  ಪ್ರತಿಯೊಂದು ತಂಡದಲ್ಲಿ ಇಬ್ಬರಿಂದ ನಾಲ್ವರು ವಿದೇಶಿ ಆಟಗಾರರನ್ನು ಸೇರ್ಪಡೆ ಮಾಡಿಕೊಳ್ಳಬಹುದು.
ಭಾರತ ಸೇರಿದಂತೆ ಒಟ್ಟು 16 ದೇಶಗಳ ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಸ್ಪರ್ಧಿಸಿದ್ದರು.

ಜೀವಕುಮಾರ್‌ಗೆ ₹ 52 ಲಕ್ಷ; ಸುಖೇಶ್ ಗೆ ₹31.5 ಲಕ್ಷ
ಕರ್ನಾಟಕದ ಜೀವಕುಮಾರ್ ಮತ್ತು ಸುಖೆೇಶ್ ಹೆಗ್ಡೆ ಅವರು ಕ್ರಮವಾಗಿ ನೂತನ ತಂಡಗಳಾದ ಉತ್ತರ ಪ್ರದೇಶ ಮತ್ತು ಗುಜರಾತ್ ಪಾಲಾಗಿದ್ದಾರೆ. ಬೆಂಗಳೂರಿನ ಜೀವಕುಮಾರ್ ಅವರು ₹ 52 ಲಕ್ಷ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಖೇಶ್ ಹೆಗ್ಡೆ ಅವರು ₹ 31.5 ಲಕ್ಷ  ಮೌಲ್ಯ ಪಡೆದುಕೊಂಡಿದ್ದಾರೆ. ಹೋದ ಆವೃತ್ತಿಯಲ್ಲಿ ಜೀವಕುಮಾರ್ ಅವರು ಯು ಮುಂಬಾ ಮತ್ತು ಸುಖೇಶ್ ಅವರು ತೆಲುಗು ಟೈಟನ್ಸ್‌ನಲ್ಲಿ ಆಡಿದ್ದರು.

ಉಳಿಸಿಕೊಂಡ ಆಟಗಾರರು
ಪ್ರದೀಪ್ ನರ್ವಾಲ್ (ಪಟ್ನಾ ಪೈರೆಟ್ಸ್),  ರಾಹುಲ್ ಚೌಧರಿ (ತೆಲುಗು ಟೈಟನ್ಸ್),  ದೀಪಕ್ ನಿವಾಸ್ ಹೂಡಾ (ಪುಣೇರಿ ಪಲ್ಟನ್), ಅನೂಪ್ ಕುಮಾರ್ (ಯು ಮುಂಬಾ), ಆಶಿಶ್ ಸಂಗ್ವಾನ್ (ಬೆಂಗಳೂರು ಬುಲ್ಸ್‌), ಮೆರಾಜ್ ಶೇಖ್ (ದಬಂಗ್ ಡೆಲ್ಲಿ ),  ಜಂಗ್ ಕುನ್ ಲೀ(ಬೆಂಗಾಲ್ ವಾರಿಯರ್ಸ್)

ಪಾಕ್ ಆಟಗಾರರು ಬೇಡ
ನವದೆಹಲಿ (ಪಿಟಿಐ):  ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಪಾಕಿಸ್ತಾನದ ಆಟಗಾರರಿಗೆ ಅವಕಾಶ ನೀಡಬಾರದು  ಎಂದು ಕೇಂದ್ರ ಸರ್ಕಾರ  ಸೂಚಿಸಿದೆ. ಜೂನ್ 25ರಂದು ಪ್ರೊಕಬಡ್ಡಿ ಟೂರ್ನಿ ಆರಂಭವಾಗಲಿದೆ. ಸೋಮವಾರ ಮತ್ತು ಮಂಗಳವಾರ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಅದರಲ್ಲಿ ಪಾಕ್ ಆಟಗಾರರ ಹೆಸರು ಇತ್ತು. ಈ ಕುರಿತು ಕೇಂದ್ರ  ಕ್ರೀಡಾ ಸಚಿವ ವಿಜಯ್ ಗೋಯೆಲ್ ಪ್ರತಿಕ್ರಿಯಿಸಿದ್ದಾರೆ.

‘ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿರುವ ಪಾಕ್‌ ಜೊತೆಗೆ ಯಾವುದೇ ಕ್ರೀಡಾ ಸಂಬಂಧವೂ ಸರಿಯಲ್ಲ.  ಭಯೋತ್ಪಾದಕರಿಗೆ ನೆರವು ನೀಡುವುದನ್ನು ನಿಲ್ಲಿಸುವವರೆಗೆ ಪಾಕಿಸ್ತಾನದೊಂದಿಗೆ ಅಲ್ಲಿಯ ಕ್ರೀಡಾಪಟುಗಳಿಗೆ  ಇಲ್ಲಿ ಅವಕಾಶ ಸಿಗಬಾರದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT