ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ಯ 430 ಕಿ.ಮೀ ರಸ್ತೆ ಸ್ವಚ್ಛಗೊಳಿಸಲಿವೆ

9 ಕಸ ಗುಡಿಸುವ ಯಂತ್ರ ಲೋಕಾರ್ಪಣೆ
Last Updated 22 ಮೇ 2017, 19:33 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಹೆಚ್ಚು ಸಂಚಾರ ದಟ್ಟಣೆ ಇರುವ ಮಾರ್ಗಗಳಲ್ಲಿ, ಆರ್ಟಿರಿಯಲ್‌ ಮತ್ತು ಸಬ್‌ ಆರ್ಟಿರಿಯಲ್‌ ರಸ್ತೆಗಳಲ್ಲಿ, ಪಾದಚಾರಿ ಮಾರ್ಗಗಳಲ್ಲಿ ಹಾಗೂ ರಸ್ತೆ ವಿಭಜಕಗಳ ಬಳಿ ಸಂಗ್ರಹವಾಗುವ ಕಸ ಗುಡಿಸುವುದಿನ್ನು ಯಂತ್ರಗಳ ಕೆಲಸ.

ಎಂಟು ದೊಡ್ಡ ಯಂತ್ರ (ಏಕಕಾಲದಲ್ಲಿ 5 ಚದರ ಮೀಟರ್‌ ಜಾಗದಲ್ಲಿ ಕಸ ಗುಡಿಸುತ್ತದೆ ) ಹಾಗೂ ಒಂದು ಸಣ್ಣ ಯಂತ್ರವನ್ನು (ಒಂದು ಚದರ ಮೀಟರ್‌ ಜಾಗದಲ್ಲಿ ಕಸ ಗುಡಿಸುತ್ತದೆ)  ಬಿಬಿಎಂಪಿಯು ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯ ಅನುದಾನದಲ್ಲಿ ಖರೀದಿಸಿದೆ. ಈ ಯಂತ್ರಗಳು ದಿನವೊಂದಕ್ಕೆ 430 ಕಿ.ಮೀ. ಉದ್ದದ ರಸ್ತೆ ಸ್ವಚ್ಛಗೊಳಿಸುವ ಸಾಮರ್ಥ್ಯ ಹೊಂದಿವೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಈ ಯಂತ್ರಗಳನ್ನು ಲೋಕಾರ್ಪಣೆ ಮಾಡಿದರು. ವಿಧಾನಸೌಧದ ಮುಂಭಾಗದ ರಸ್ತೆಯಲ್ಲಿ ಕಸ ಗುಡಿಸುವ ಮೂಲಕ ಈ ಯಂತ್ರಗಳು ಕಾರ್ಯಾರಂಭ ಮಾಡಿದವು.

‘ರಸ್ತೆಗಳ ಅಂಚಿನಲ್ಲಿ ಮಣ್ಣು ಮತ್ತು ಮರಳಿನ ಕಣಗಳಿಂದ ದಟ್ಟವಾದ ದೂಳು ಉತ್ಪತ್ತಿಯಾಗಿ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆ ಆಗುತ್ತಿದೆ. ಇದನ್ನು ತಪ್ಪಿಸಲು ಹಾಗೂ ವಾಯು ಮಾಲಿನ್ಯ ನಿಯಂತ್ರಿಸಲು ಈ ಯಂತ್ರಗಳು ನೆರವಾಗಲಿವೆ’ ಎಂದು  ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದರು.   

ಜಿಪಿಎಸ್‌ ಕಣ್ಗಾವಲು: ‘ಈ ಯಂತ್ರಗಳ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಜಿಪಿಎಸ್‌ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಕಸ ಗುಡಿಸಿದ್ದನ್ನು ವಿಡಿಯೊ ಚಿತ್ರೀಕರಣ ಮಾಡುವ ವ್ಯವಸ್ಥೆ ಇದರಲ್ಲಿದೆ. ಪಾಲಿಕೆಯ ಎಂಟು ವಲಯಗಳಲ್ಲೂ ಜಿಪಿಎಸ್‌ ನಿಯಂತ್ರಣ ಕೇಂದ್ರ ಸ್ಥಾಪಿಸಿ  ಯಂತ್ರಗಳ ಕಾರ್ಯನಿರ್ವಹಣೆ ಮೇಲೆ ನಿಗಾ ಇಡಲಾಗುವುದು. ಕೇಂದ್ರ ಕಚೇರಿಯಲ್ಲಿರುವ ನಿಯಂತ್ರಣ ಕೊಠಡಿ ಮೂಲಕ 8 ವಲಯಗಳಲ್ಲಿ ಈ ಯಂತ್ರಗಳು ಹೇಗೆ ಕಾರ್ಯ ನಿರ್ವಹಿಸಲಿವೆ ಎಂಬ ಬಗ್ಗೆ ಕಣ್ಣಿಡಲಾಗುವುದು’ ಎಂದು ಮೇಯರ್‌ ಜಿ.ಪದ್ಮಾವತಿ ವಿವರಿಸಿದರು.      
        
ರಾತ್ರಿ ವೇಳೆ ಕಸ ಗುಡಿಸಲಿದೆ ಯಂತ್ರ: ‘ದೊಡ್ಡ ಯಂತ್ರವು ನಿತ್ಯವೂ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 4 ಗಂಟೆಯವರೆಗೆ  ಕಸ ಗುಡಿಸಲಿದೆ. ದಿನವೊಂದಕ್ಕೆ   50 ಕಿ.ಮೀ  ರಸ್ತೆಯನ್ನು ಸ್ವಚ್ಛಗೊಳಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.  ಸಣ್ಣ ಯಂತ್ರವು ದಿನವೊಂದಕ್ಕೆ 30 ಕಿ.ಮೀ ರಸ್ತೆಯನ್ನು ಸ್ವಚ್ಛಗೊಳಿಸಬಲ್ಲುದು’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ಯಂತ್ರಕ್ಕಿಂತ ಅದರ ನಿರ್ವಹಣೆಗೆ ಹೆಚ್ಚು ವೆಚ್ಚ
ಯಂತ್ರ ಖರೀದಿಗೆ ಮಾಡಿರುವ ವೆಚ್ಚಕ್ಕಿಂತ ಎರಡೂವರೆ ಪಟ್ಟು ಹೆಚ್ಚು ಮೊತ್ತವನ್ನು ಅದರ ನಿರ್ವಹಣೆಗಾಗಿ ಪಾಲಿಕೆ ಟಿಪಿಎಸ್‌ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ ಕಂಪೆನಿಗೆ ಪಾವತಿಸಬೇಕಿದೆ. ದೊಡ್ಡ ಯಂತ್ರಕ್ಕೆ ವರ್ಷಕ್ಕೆ ₹ 2.48 ಕೋಟಿ ಹಾಗೂ ಸಣ್ಣ ಯಂತ್ರಕ್ಕೆ ₹ 1.51 ಕೋಟಿ ಮೊತ್ತವನ್ನು ನಿರ್ವಹಣಾ ವೆಚ್ಚದ ರೂಪದಲ್ಲಿ ನೀಡಬೇಕಿದೆ.

‘ಇದು ದೊಡ್ಡ ಮೊತ್ತವೇನಲ್ಲ. ಐದು ವರ್ಷ ಯಂತ್ರದ ನಿರ್ವಹಣೆಯನ್ನು ಕಂಪೆನಿಯೇ ನೋಡಿಕೊಳ್ಳಲಿದೆ. ನಾವು ಯಂತ್ರದ ಒಟ್ಟು ಮೊತ್ತದ ಶೇಕಡಾ 60ರಷ್ಟನ್ನು ಮಾತ್ರ ಅವರಿಗೆ ಪಾವತಿಸುತ್ತೇವೆ. ನಂತರ ಅದರ ನಿರ್ವಹಣೆ ನೋಡಿಕೊಂಡು ಕಂತಿನ ರೂಪದಲ್ಲಿ ಹಣ ಪಾವತಿಸಲಾಗುತ್ತದೆ’ ಎಂದು ಬಿಬಿಎಂಪಿ  ಅಧಿಕಾರಿಯೊಬ್ಬರು ಸಮಜಾಯಿಷಿ ನೀಡಿದರು.

‘ಈ ಯಂತ್ರ ಕೆಟ್ಟುಹೋದರೆ ದುರಸ್ತಿ ಪಡಿಸುವುದು ಸವಾಲಿನ ಕೆಲಸ. ಇದರ ಬ್ರಷ್‌ ಒಂದಕ್ಕೆ ₹ 25 ಸಾವಿರ ಬೆಲೆ ಇದೆ.  ಕಂಪೆನಿಯೇ ಅವುಗಳನ್ನು ನಿರ್ವಹಿಸುವುದರಿಂದ  ದುರಸ್ತಿಯ ಹೊಣೆಯೂ ಅವರದೇ ಆಗಿರುತ್ತದೆ.  ಡೀಸೆಲ್‌ ವೆಚ್ಚವನ್ನೂ ಅವರೇ ಭರಿಸಬೇಕು’ ಎಂದರು.

‘ವಾಹನ ದಟ್ಟಣೆ ಹೆಚ್ಚು ಇರುವ ರಸ್ತೆಗಳನ್ನು ಸ್ವಚ್ಛಗೊಳಿಸಲು ಪೌರ ಕಾರ್ಮಿಕರನ್ನು ಬಳಸುವುದು ಅಪಾಯಕಾರಿ. 1,600 ಪೌರಕಾರ್ಮಿಕರು ದಿನವೊಂದಕ್ಕೆ ಮಾಡುವ ಕೆಲಸವನ್ನು ಈ ಯಂತ್ರಗಳು  ನಿರ್ವಹಿಸಲಿವೆ. ಇಷ್ಟು ಕಾರ್ಮಿಕರಿಗೆ ತಿಂಗಳಿಗೆ ಕೂಲಿ ನೀಡಲು ₹ 2 ಕೋಟಿಯಷ್ಟು ಮೊತ್ತ ಬೇಕಾಗುತ್ತಿತ್ತು. ಆದರೆ, ಈ ಯಂತ್ರಗಳ ನಿರ್ವಹಣೆಗೆ ₹ 48 ಲಕ್ಷ ಸಾಕು’ ಎಂದು ಸಮರ್ಥಿಸಿಕೊಂಡರು.

ವರ್ಷಕ್ಕೆ 46 ಕೋಟಿ ಉಳಿತಾಯ: ‘ರಸ್ತೆಗಳ ಕಸ ಗುಡಿಸಲು ಯಂತ್ರ ಬಳಸುವುದರಿಂದ ಪಾಲಿಕೆಗೆ  ವರ್ಷವೊಂದರಲ್ಲಿ  ಸುಮಾರು ₹ 46 ಕೋಟಿ ಉಳಿತಾಯವಾಗಲಿದೆ. 5 ವರ್ಷಗಳಲ್ಲಿ ಪಾಲಿಕೆಗೆ  ಸುಮಾರು ರೂ ₹ 230 ಕೋಟಿ ಉಳಿತಾಯ ಆಗಲಿದೆ’ ಎಂದು ಮೇಯರ್‌ ತಿಳಿಸಿದರು.

ಅಂಕಿ ಅಂಶ
₹1.09 ಕೋಟಿ
ಕಸ ಗುಡಿಸುವ ದೊಡ್ಡ ಯಂತ್ರದ ಬೆಲೆ
₹47.10ಲಕ್ಷ ಕಸ ಗುಡಿಸುವ ಸಣ್ಣ ಯಂತ್ರದ ಬೆಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT