ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ ಮೀಸಲಾತಿಗೆ ಇಚ್ಛಾಶಕ್ತಿ ಕೊರತೆ

Last Updated 23 ಮೇ 2017, 4:30 IST
ಅಕ್ಷರ ಗಾತ್ರ

ಶಿರಾ: ‘ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯಂತೆ ಒಳಮೀಸಲಾತಿ ಕಲ್ಪಿಸುವ ಇಚ್ಛೆ ರಾಜ್ಯ ಸರ್ಕಾರಕ್ಕಿದೆ. ಆದರೆ ಇತರೆ ರಾಜಕೀಯ ಪಕ್ಷಗಳ ಇಚ್ಛಾಶಕ್ತಿ ಕೊರತೆಯಿಂದ ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ’ ಎಂದು ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ತಾಲ್ಲೂಕಿನ ಬರಗೂರು ಗ್ರಾಮದ ಶ್ರೀಆಂಜನೇಯ ಸ್ವಾಮಿ ಗ್ರಾಮಾಂತರ ಪ್ರೌಡಶಾಲೆ ಆವರಣದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಜಯಂತ್ಯುತ್ಸವ ಹಾಗೂ ಆದಿ ಜಾಂಬವ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಶಾಸಕ ತಿಮ್ಮರಾಯಪ್ಪ ಮಾತನಾಡಿ, ‘ನಮ್ಮನ್ನು ಆಳುವಂತಹ ಸರ್ಕಾರಗಳು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸಂಪನ್ಮೂಲವನ್ನು ಸಮರ್ಪಕವಾಗಿ ಹಂಚಿಕೆ ಮಾಡದ ಕಾರಣ ದಲಿತರ ಪ್ರಗತಿ ಕುಂಠಿತವಾಗಿದೆ. ಪರಿಶಿಷ್ಟರ ಬಗ್ಗೆ ಕಳೆದ ನಾಲ್ಕು ವರ್ಷಗಳಿಂದ ಸುಮ್ಮನಿದ್ದ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಮಾತ್ರ ಶೇ 24ರಷ್ಟು ಅನುದಾನ ನೀಡುತ್ತಿರುವುದು ವ್ಯವಸ್ಥಿತ ಶೋಷಣೆ’ ಎಂದರು.

ಮಾಜಿ ಸಚಿವ ಬಿ.ಸತ್ಯನಾರಾಯಣ ಮಾತನಾಡಿ  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಸಂಖ್ಯೆ ಆಧಾರದ ಮೇಲೆ ಒಳ ಮೀಸಲಾತಿ ಕಲ್ಪಿಸದೆ ತಾರತಮ್ಯ ಮಾಡುತ್ತಿದೆ ಎಂದರು.ಸಾಹಿತಿ ಕೆ.ಬಿ.ಸಿದ್ದಯ್ಯ ಮಾತನಾಡಿ, ‘ಒಳ ಮೀಸಲಾತಿ ಜಾರಿ ಮಾಡಿದರೆ ಮಾತ್ರ ಸಂವಿಧಾನದ ಅಶಯ ಈಡೇರುವುದು’ ಎಂದರು.

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮುಖಂಡ ಸಿ.ಪಿ.ಮೂಡಲಗಿರಿಯಪ್ಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ಕೆ.ಮಂಜುನಾಥ, ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚಿದಾನಂದ ಎಂ.ಗೌಡ, ಬಿಜೆಪಿ ಮುಖಂಡ ಜಗದೀಶ್ ಚೌದರಿ, ಜಿಲ್ಲಾ ಪಂಚಾಯತಿ ಸದಸ್ಯರಾದ ಎಸ್.ರಾಮಕೃಷ್ಣ, ಕೆಂಚಮಾರಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್, ಸದಸ್ಯೆ ವಸುಧಾ ತಿಪ್ಪೇಶ್‌ಗೌಡ, ಎಪಿಎಂಸಿ ಅಧ್ಯಕ್ಷ ಸತ್ಯನಾರಾಯಣ, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಚಂಗಾವರ ಮಾರಣ್ಣ, ಕಲ್ಕೆರೆ ರವಿಕುಮಾರ್, ಕೊಟ್ಟ ಶಂಕರ್, ಬರಗೂರು ನಟರಾಜು,  ಹಾರೋಗೆರೆ ಮಹೇಶ್, ಕೆ.ನರಸಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT