ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯೀಕರಣ: ಸೀಡ್‌ಬಾಲ್‌ ಸಹಕಾರಿ

Last Updated 23 ಮೇ 2017, 4:37 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕಿನ ಚಿಕ್ಕೋನಹಳ್ಳಿ ಸಮೀಪವಿರುವ ಸಾಮಾಜಿಕ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ  ‘ಬೀಜದ ಚೆಂಡು (ಸೀಡ್  ಬಾಲ್‌) ಮಾಡೋಣ, ಅರಣ್ಯವನ್ನು ಬೆಳೆಸೋಣ’ ಕಾರ್ಯಕ್ರಮ ಮಾಲಿನ್ಯ ಮುಕ್ತ ಸ್ವಚ್ಛ ಹಸಿರು ತುಮಕೂರು ಆಂದೋಲನದ ಭಾಗವಾಗಿ ಸೋಮವಾರ ನಡೆಯಿತು.

ಸಿಜ್ಞಾ ಯುವ ಸಂವಾದ ಕೇಂದ್ರ, ಯುವಮುನ್ನಡೆ, ತುಮಕೂರು ವಿಜ್ಞಾನ ಕೇಂದ್ರ ಹಾಗೂ ಸಾಮಾಜಿಕ ಜಾಲತಾಣದ ಆಸಕ್ತ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಇದ್ದರು.
ಸಿಜ್ಞಾ ಯುವ ಸಂವಾದ ಕೇಂದ್ರದ ಮಾರ್ಗದರ್ಶಕ ಜ್ಞಾನ ಸಿಂಧೂ ಸ್ವಾಮಿ ಮಾತನಾಡಿ, ‘ತುಮಕೂರನ್ನು ಹಸಿರು ನಗರ ಮಾಡಲು ಪಣ ತೊಡಲಾಗಿದೆ.

ಇದೊಂದು ಸಾಮಾಜಿಕ ಆಂದೋಲವನ್ನಾಗಿ ಪರಿಗಣಿಸಲಾಗಿದೆ. ಬೀಜದ ಚೆಂಡು ಮಾಡುವುದು ಸಾಮಾಜಿಕ ಪ್ರಕ್ರಿಯೆಯಾಗಬೇಕು. ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಹಳ್ಳಿ ಮತ್ತು ಕಾಡು ಪ್ರದೇಶಗಳಲ್ಲಿ ಈ ಪ್ರಯೋಗ ಮಾಡಬೇಕು’ ಎಂದು ಮನವಿ ಮಾಡಿದರು.

‘ಸಾವಯವ ಗೊಬ್ಬರ, ಮಣ್ಣು, ಮರಳು ಮಿಶ್ರಿತ ಮಣ್ಣಿಗೆ ಬೀಜಗಳನ್ನು ಸೇರಿಸಿ ಮಾಡಲಾಗುವ ಈ ಬೀಜದ ಚೆಂಡು ಪ್ರಕ್ರಿಯೆ ಉತ್ತಮ ಪರಿಣಾಮವನ್ನು ನೀಡಲಿದೆ. ಇದಕ್ಕೆ ಯಾವುದೆ ಪೋಷಣೆಯ ಅಗತ್ಯವಿಲ್ಲದ ಕಾರಣ ಅತ್ಯಂತ ಸರಳ ಮತ್ತು ಸಹಜವಾಗಿ ಅರಣ್ಯೀಕರಣವನ್ನು ಮಾಡಲು ಸಹಾಯಕವಾಗಿದೆ. ಇದಕ್ಕೆ ಯುವಜನರ ಸಹಭಾಗಿತ್ವ ಸಿಕ್ಕಿರುವುದು ಅತ್ಯಂತ ಶ್ಲಾಘನೀಯ ವಿಚಾರ’ ಎಂದರು.

‘ತುಮಕೂರು ನಗರ ಪ್ರದೇಶದ ಸುತ್ತಮುತ್ತ ಇರುವ ಹಾಲಿ ಅರಣ್ಯಗಳು ಬೋಳು ಬೋಳಾಗಿ ಕಾಣುತ್ತಿವೆ. ಅರಣ್ಯ ದಟ್ಟಣೆಯನ್ನು ಹೆಚ್ಚಿಸುವುದಕ್ಕೆ ಮಳೆ ಬೀಜಗಳನ್ನು ಚೆನ್ನಾಗಿ ಬೆಳೆಸಬೇಕೆಂದು ಸೀಡ್ ಬಾಲ್ ಮಾಡಲಾಗುತ್ತಿದೆ. ಇದಕ್ಕೆ ನಾಗರಿಕರು, ಯುವಜನರು ಹೆಚ್ಚಿನ ಪ್ರೋತ್ಸಾಹವನ್ನು ನೀಡಬೇಕಾದ ಅಗತ್ಯವಿದೆ’ ಎಂದು ಪರಿಸರವಾದಿ ಸಿ. ಯತಿರಾಜು ಅಭಿಪ್ರಾಯಪಟ್ಟರು.

ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ನಾಗೇಂದ್ರ  ಮಾತನಾಡಿ, ‘ಸೀಡ್ ಬಾಲ್ ಮಾಡಲು ಯುವಜನರು ಮುಂದಾಗಿರುವುದು ಅತ್ಯಂತ ಖುಷಿಯ ವಿಚಾರ. ಈ ಪ್ರಯೋಗದಿಂದ ಬೀಜದ ಉಂಡೆ ತನ್ನ ಬೇರಿನಿಂದ ಭೂಮಿಗೆ ನೇರ ಸಂಪರ್ಕವನ್ನು ಹೊಂದಿ, ಪರಾವಲಂಬಿಯಾಗದೆ ಜೀವವನ್ನು ಕಾಪಾಡಿಕೊಳ್ಳುವ ಶಕ್ತಿ ಹೊಂದಿದೆ. ಇದರಿಂದ ಪರಿಸರದ ನಡುವಿನ ಬಾಂಧವ್ಯ ಹೆಚ್ಚಲಿದೆ’ ಎಂದರು.

‘ಪಕ್ಷಿಗಳ ಸಂತತಿ ಕಡಿಮೆಯಾಗುತ್ತಿದೆ. ಮರಗಳ ಸಂತತಿಯೂ ಕ್ಷೀಣಿಸುತ್ತಾ ಹೋಗುತ್ತಿದೆ. ನಮ್ಮ ಮುಂದಿನ ಪೀಳಿಗೆಗೆ ಶುದ್ಧ ಗಾಳಿ, ಸ್ವಚ್ಛ ಸಮುದ್ರ, ನೀಲಿ ಆಕಾಶವನ್ನು ಬಳುವಳಿಯಾಗಿ ನೀಡಬೇಕಾದ ಅನಿವಾರ್ಯತೆ ನಮಗೆ ಇದೆ.  ಇದಕ್ಕಾಗಿ ಹಸಿರು ಚಿಂತನೆ ಅಗತ್ಯವಿದೆ’ ಎಂದು ಯುವ ಮುನ್ನಡೆ ಕಾರ್ಯಕರ್ತರಾದ ಹರೀಶ್ ಕೋಟೆ, ವರುಣ್ ಜೇನುಗೂಡು, ಜಂಬೆ ಬಾಬು, ಸುಕೃತಿ, ತರಂಗ ಅಭಿಪ್ರಾಯ ಪಟ್ಟರು. ರಶ್ಮಿ, ಲಕ್ಷ್ಮೀಶ್ರೀ, ನವೀನ್ ಹೊಂಬಾಳೆ, ನಾಗಭೂಷಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT