ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕಿಪಿಕ್ಕಿ ಜನಾಂಗಕ್ಕೆ ಸೌಲಭ್ಯ ಕಲ್ಪಿಸಲು ಆಗ್ರಹ

Last Updated 23 ಮೇ 2017, 5:06 IST
ಅಕ್ಷರ ಗಾತ್ರ

ಮಂಡ್ಯ: ಗ್ರಾಮಕ್ಕೆ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗಾಮನಹಳ್ಳಿ ಹಕ್ಕಿಪಿಕ್ಕಿ ಜನಾಂಗದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.

ಗಾಮನಹಳ್ಳಿ ಗ್ರಾಮದಲ್ಲಿ 10 ವರ್ಷಗಳಿಂದ 40 ಕುಟುಂಬಗಳ ಸದಸ್ಯರು ವಾಸ ಮಾಡುತ್ತಿದ್ದೇವೆ. ಯಾವುದೇ ಸೌಲಭ್ಯಗಳು ಇಲ್ಲದೆ ವಾಸ ಮಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ನಮ್ಮ ಕುಟುಂಬಗಳು ವಿದ್ಯುತ್‌ ಕಂಡಿಲ್ಲ. ಸೀಮೆ ಎಣ್ಣೆ ದೀಪದ ಕೆಳಗೆ ನಮ್ಮ ಬದುಕು ನಡೆಯುತ್ತಿದೆ. ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ.

ನಾವು ವಾಸ ಮಾಡುತ್ತಿರುವ ಮನೆಗಳಿಗೂ ಹಕ್ಕು ಪತ್ರ ಇಲ್ಲ. ಹೀಗಾಗಿ ಯಾರು, ಯಾವಾಗ ನಮ್ಮ ಒಕ್ಕಲು ಎಬ್ಬಿಸುತ್ತಾರೋ ಎಂಬ ಭಯದಲ್ಲಿ ಜೀವನ ನಡೆಸುತ್ತಿದ್ದೇವೆ ಎಂದು ಪ್ರತಿಭಟನಾಕಾರರು ಹೇಳಿದರು.

ನಮಗೆ ಮೂಲ ಸೌಕರ್ಯ ಒದಗಿಸಬೇಕು ಎಂದು ಹಲವು ವರ್ಷಗಳಿಂದ ಕೇಳುತ್ತಿದ್ದೇವೆ. ನಮ್ಮ ಮನವಿಗೆ ರಾಜಕಾರಣಿಗಳು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು. ನಮ್ಮ ಮಕ್ಕಳು ಕೂಡ ಎಲ್ಲ ಮಕ್ಕಳಂತೆ ಶಾಲೆಗೆ ಹೋಗಬೇಕು ಎಂಬುದು ನಮ್ಮ ಆಸೆ. ಆದರೆ ನಮ್ಮ ಕನಸು ನನಸಾಗುವ ಕಾಲ ಇನ್ನೂ ಬಂದಿಲ್ಲ. ಕಷ್ಟದಲ್ಲಿ ಹುಟ್ಟಿ ಕಷ್ಟದಲ್ಲೇ ಜೀವನ ನಡೆಸುತ್ತಿದ್ದೇವೆ. ನಮ್ಮ ಮಕ್ಕಳೂ ಕಷ್ಟ ಪಡಬೇಕಾ ಎಂದು ಅವರು ಪ್ರಶ್ನಿಸಿದರು.

ಜಿಲ್ಲಾಡಳಿತ ಅಕ್ಕಿಪಿಕ್ಕಿ ಜನಾಂಗದ ನೆರವಿಗೆ ಬರಬೇಕು. ನಮ್ಮ ಹೋರಾಟ ಸರ್ಕಾರದ ಗಮನಕ್ಕೆ ಬರಬೇಕು. ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಕಾಲೊನಿಗೆ ಬಂದು ನಮ್ಮ ಪರಿಸ್ಥಿತಿಯನ್ನು ಕಣ್ಣಾರೆ ಕಾಣಬೇಕು. ಆಗಲಾದರೂ ನಮ್ಮ ಸಮಸ್ಯೆ ಅವರಿಗೆ ಅರ್ಥವಾಗುತ್ತದೆ ಎಂದು ಹೇಳಿದರು.

ಅಕ್ಕಿಪಿಕ್ಕಿ ಜನಾಂಗ ಎಲ್ಲಾ ಸೌಲಭ್ಯಗಳಿಂದ ವಂಚಿತವಾಗಿದೆ. ಸರ್ಕಾರ ನಮ್ಮ ಹಕ್ಕುಗಳನ್ನು ಸರ್ಕಾರ ಕೂಡಲೇ ಕೊಡಿಸಬಹುದು. ಆದರೆ ರಾಜಕಾರಣಿಗಳಿಗೆ ಇಚ್ಛಾಶಕ್ತಿ ಇಲ್ಲ.  ಅಪಾರ ತೊಂದರೆ ಎದುರಿಸುತ್ತಿರುವ ಅಕ್ಕಿಪಿಕ್ಕಿ ಜನಾಂಗಕ್ಕೆ ಸೂಕ್ತ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಗ್ರಾಮಸ್ಥರಾದ ಸುಬ್ರಹ್ಮಣ್ಯ, ರವಿ, ಶಾಂತಮ್ಮ, ಕಾವೇರಿ, ಮಾರಮ್ಮ, ರವಿ, ಮಹದೇವು, ಪಾರ್ವತಿ, ಲಕ್ಷ್ಮಿ, ವೆಂಕಟಮ್ಮ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT