ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಜನ್ಮದಿನ: ಸೌಲಭ್ಯ ವಿತರಣೆ, ಆರೋಗ್ಯ ತಪಾಸಣೆ

Last Updated 23 ಮೇ 2017, 5:08 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಶಾಸಕ ರಮೇಶ ಬಂಡಿಸಿದ್ದೇಗೌಡ ಅವರ 50ನೇ ವರ್ಷದ ಜನ್ಮ ದಿನದ ಅಂಗವಾಗಿ ಪಟ್ಟಣದಲ್ಲಿ ಸೋಮವಾರ 3 ಸಾವಿರಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ಜತೆಗೆ ಜನರಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.ಇಲ್ಲಿನ ಶಿಕ್ಷಕರ ಭವನ ಆವರಣದಲ್ಲಿ ನಡೆದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಮೈಸೂರಿನ ಬಿಜಿಎಸ್‌ ಅಪೊಲೋ ಆಸ್ಪತ್ರೆ ಮತ್ತು ಬೆಂಗಳೂರಿನ ಪೂರ್ಣಸುಧಾ ಕ್ಯಾನ್ಸರ್‌ ಸೆಂಟರ್‌ನ ತಜ್ಞ ವೈದ್ಯರು ಆರೋಗ್ಯ ತಪಾಸಣೆ ನಡೆಸಿದರು.

ಹೃದ್ರೋಗ, ನರ ರೋಗ, ಮೂತ್ರಪಿಂಡ, ಪಿತ್ತಜನಕಾಂಗ, ಕ್ಯಾನ್ಸರ್‌, ಗರ್ಭಿಣಿ ಮತ್ತು ಸ್ತ್ರೀರೋಗ, ಕೀಲು ಮತ್ತು ಮೂಳೆ, ದಂತ ಸಮಸ್ಯೆ, ಕಿವಿ, ಮೂಗು ಮತ್ತು ಗಂಟಲು, ನೇತ್ರ, ಚರ್ಮರೋಗ ಹಾಗೂ ಮಾನಸಿಕ ರೋಗ ತಪಾಸಣೆ ನಡೆಯಿತು. ಸ್ಕ್ಯಾನಿಂಗ್‌, ಇಸಿಜಿ, ಎಕೋ–ಸ್ಕ್ಯಾನಿಂಗ್‌, ರಕ್ತ ಮತ್ತು ಮೂತ್ರ ಪರೀಕ್ಷೆಯನ್ನು ಉಚಿತವಾಗಿ ನಡೆಸಿ ಅಗತ್ಯ ಔಷಧ ವಿತರಿಸಲಾಯಿತು. ಮಂಡ್ಯ ಜಿಲ್ಲಾ ಔಷಧ ವಿತರಕರ ಸಂಘ ಹಾಗೂ ಎ.ಎಸ್‌. ಬಂಡಿಸಿದ್ದೇಗೌಡ ಪ್ರತಿಷ್ಠಾನದಿಂದ ರೋಗಿಗಳಿಗೆ ₹ 3 ಲಕ್ಷ ಬೆಲೆಯ ಔಷಧ ವಿತರಿಸಲಾಯಿತು.

2016–17ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪಿಯುನಲ್ಲಿ ಹೆಚ್ಚು ಅಂಕ ಪಡೆದ ಪಿ.ಎಸ್‌. ದೀಪಿಕಾ, ಎಸ್‌. ಸೋನ, ಎಂ.ಪಿ. ಪ್ರಿಯದರ್ಶಿನಿ, ಜೆ.ಪ್ರೀತಿ, ಎನ್‌. ಕೋಮಲಾ, ಸ್ವಾಗತ್‌, ಎಚ್‌. ಶೋಭಾ, ಎಂ. ಪ್ರತಾಪ್‌ ಹಾಗೂ ಸಿ.ಪಿ. ಕಾರ್ತಿಕ್‌ಕುಮಾರ್‌; ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಎಂ. ಸುಚಿತ್ರಾ, ಎನ್‌. ಲೋಕಶರಧಿ, ಸಿ.ಆರ್‌. ಚಂದನಾ, ದಯಾನಂದರಾಜೇ ಅರಸ್‌, ಬಿ.ಕೆ. ಶ್ರೀನಿವಾಸ್‌, ಮಹದೇವಸ್ವಾಮಿ, ಸಿಂಧು, ಸಿ.ಆರ್‌.ಚಂದನ ಮತ್ತು ಶೇ100 ಫಲಿತಾಂಶ ಪಡೆದ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮುಖ್ಯಸ್ಥರನ್ನು ಗಾಂಧಿವಾದಿ ಡಾ.ಸುಜಯಕುಮಾರ್‌ ಗೌರವಿಸಿದರು.

ಇಲ್ಲಿನ ಅಂಬೇಡ್ಕರ್‌ ಭವನದಲ್ಲಿ 2,500 ಮಂದಿಗೆ ಸೀರೆ, 2,500 ಮಂದಿಗೆ ಪಂಚೆ ಮತ್ತು ಟವೆಲ್‌, 2,500 ವಿದ್ಯಾರ್ಥಿಗಳಿಗೆ ಸ್ಕೂಲ್‌ ಬ್ಯಾಗ್‌ ಮತ್ತು 25 ಸಾವಿರ ನೋಟ್‌ ಪುಸ್ತಕ ವಿತರಿಸಲಾಯಿತು. ಪಟ್ಟಣ ಮಾತ್ರವಲ್ಲದೆ ಸುತ್ತಮುತ್ತಲ ಗ್ರಾಮಗಳ ಜನರು ಸವಲತ್ತು ಪಡೆದುಕೊಂಡರು. ಊಟದ ವ್ಯವಸ್ಥೆ ಮಾಡಲಾಗಿತ್ತು. ಮಾಜಿ ಶಾಸಕಿ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಶಿಕ್ಷಕರ ಭವನದ ಆವರಣದಲ್ಲಿ ಗಿಡಗಳನ್ನು ನೆಟ್ಟು ನೀರೆರೆದರು. 500 ಮಂದಿಗೆ ಹೆಬ್ಬೇವು, ಸಪೋಟಾ, ತೆಂಗು ಸಸಿಗಳನ್ನು ವಿತರಿಸಲಾಯಿತು.

ಪಟ್ಟಣದ ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ಅಧ್ಯಕ್ಷ ಡಾ.ಭಾನುಪ್ರಕಾಶ್‌ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ಹೊನ್ನರಾಜು, ಪುರಸಭೆ ಮುಖ್ಯಾಧಿಕಾರಿ ಎಸ್‌.ಲೋಕೇಶ್‌, ಸಿಪಿಐ ಚಂದ್ರಶೇಖರ್‌, ಟಿಎಪಿಸಿಎಂಎಸ್‌ ಮಾಜಿ ಅಧ್ಯಕ್ಷ ಬಿ.ಎಸ್‌. ಚಂದ್ರಶೇಖರ್‌, ನಿರ್ದೇಶಕ ಶಿವಯ್ಯ, ಕಸಾಪ ತಾಲ್ಲೂಕು ಅಧ್ಯಕ್ಷ ಸಿದ್ದಲಿಂಗು, ನಗರ ಘಟಕದ ಅಧ್ಯಕ್ಷ ಕೆ.ಬಿ. ಬಸವರಾಜು, ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಡಾ.ಮನೋಹರ್‌, ಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಸಿಎಂಒ ಡಾ.ಮಾರುತಿ, ಪುರಸಭೆ ಸದಸ್ಯರಾದ ಎಂ.ಎಲ್‌. ದಿನೇಶ್‌, ಸುಮಾ, ರಾಜೇಶ್ವರಿ, ಪಾರ್ವತಮ್ಮ, ಕಾಳೇನಹಳ್ಳಿ ಮಂಜುನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT