ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವು, ಮೂಸಂಬಿ, ಕಿತ್ತಳೆ ದುಬಾರಿ

Last Updated 23 ಮೇ 2017, 5:12 IST
ಅಕ್ಷರ ಗಾತ್ರ

 ಮಂಡ್ಯ: ಮಾವಿನ ಹಣ್ಣಿನ ಕಾಲ ಕೊನೆಗೊಳ್ಳುತ್ತಾ ಬಂದಿದೆ. ಮಾರುಕಟ್ಟೆಯಲ್ಲಿ ಪೂರೈಕೆ ಕಡಿಮೆಯಾಗಿರುವ ಕಾರಣ ಎಲ್ಲಾ ಬಗೆಯ ಮಾವಿನ ಹಣ್ಣಿನ ಬೆಲೆ ಕೆ.ಜಿ.ಗೆ ₹ 10 ಏರಿಕೆ ಕಂಡಿದೆ. ಜಿಲ್ಲೆಯಾದ್ಯಂತ ನಾಲ್ಕೈದು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣದಿಂದಲೂ ಮಾವಿನ ಹಣ್ಣಿನ ಬೆಲೆ ಏರಿಕೆಯಾಗಿದೆ. ಮಳೆಯಿಂದಾಗಿ ಕಾಯಿಗಳ ಕುಯ್ಲು ಕಡಿಮೆಯಾಗಿದೆ. ಇರುವ ಹಣ್ಣಿನ ಬೆಲೆ ಹೆಚ್ಚಿಸಿ ವ್ಯಾಪಾರಿಗಳು ಮಾರಾಟದಲ್ಲಿ ತೊಡಗಿದ್ದಾರೆ.

‘ಮೇ ಮುಗಿಯುತ್ತಿದ್ದಂತೆ ಮಾವಿನ ಹಣ್ಣುಗಳ ಕಾಲ ಮುಗಿಯುತ್ತಾ ಬರುತ್ತದೆ. ಹಣ್ಣುಗಳು ಕಡಿಮೆಯಾಗುತ್ತಿದ್ದಂತೆ ಸಹಜವಾಗಿ ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬರುತ್ತದೆ’ ಎಂದು ನಗರದ ಎಪಿಎಂಸಿ ಮಾರುಕಟ್ಟೆಯ ಹಣ್ಣಿನ ವ್ಯಾಪಾರಿ ರಮೇಶ್‌ ಹೇಳಿದರು.

ಮೂಸಂಬಿ ₹ 15 ಏರಿಕೆ: ಸೋಮವಾರ ನಗರದ ಎಪಿಎಂಸಿಯಲ್ಲಿ ಮೋಸಂಬಿ ಬೆಲೆ ಕಳೆದ ವಾರಕ್ಕಿಂತ ₹ 15 ಏರಿಕೆಯಾಗಿತ್ತು. ಕಳೆದ ವಾರ ಕೆ.ಜಿ.ಗೆ ₹ 65 ಇತ್ತು. ಈವಾರ ₹ 80ಕ್ಕೆ ಏರಿಕೆಯಾಗಿದೆ.ಮಳೆಯ ಕಾರಣದಿಂದ ಕಿತ್ತಳೆ ಹಣ್ಣಿನ ಬೆಲೆಯಲ್ಲೂ ಏರಿಕೆಯಾಗಿದೆ. ಕಳೆದ ವಾರ ಕೆ.ಜಿ.ಗೆ ₹ 70 ಇದ್ದ ಬೆಲೆ, ಈ ವಾರ ₹ 80ಕ್ಕೇರಿದೆ.

ವಿದೇಶಿ ಸೇಬು ಹಣ್ಣು: ಆಗಸ್ಟ್‌ವರೆಗೂ ಮಾರುಕಟ್ಟೆಯಲ್ಲಿ ದೇಶೀಯ ಸೇಬು ಹಣ್ಣಿಗೆ ಕೊರತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಮಾರುಕಟ್ಟೆಯನ್ನು ವಿದೇಶಿ ಹಣ್ಣುಗಳು ಆವರಿಸಿಕೊಂಡಿರುತ್ತವೆ. ಮಂಡ್ಯ ಮಾರುಕಟ್ಟೆಗೆ ಅಮೆರಿಕ (ವಾಷಿಂಗ್‌ಟನ್‌ ಆ್ಯಪಲ್‌), ಇಟಲಿ, ಬೆಲ್ಜಿಯಂ, ಫ್ರಾನ್ಸ್‌ ಸೇಬು ಹಣ್ಣುಗಳು ಬರುತ್ತವೆ. ಈ ವಿದೇಶಿ ಹಣ್ಣುಗಳ ಬೆಲೆ ಸ್ಥಿರವಾಗಿದೆ. ವಾಷಿಂಗ್‌ಟನ್‌ ಸೇಬಿನ ಬೆಲೆ ಸಗಟು ದರದಲ್ಲಿ ₹ 120 ಇದೆ.  ಚಿಲ್ಲರೆ ವ್ಯಾಪಾರಿಗಳು ಇದನ್ನೇ ₹ 140ಕ್ಕೆ ಮಾರಾಟ ಮಾಡುತ್ತಿದ್ದಾರೆ. ಇಟಲಿ ಸೇಬಿನ ಬೆಲೆ ₹ 110 (ಚಿಲ್ಲರೆ ವ್ಯಾಪಾರ ₹ 130),  ಬೆಲ್ಜಿಯಂ ₹ 100(ಚಿಲ್ಲರೆ ₹ 120) ಬೆಲೆ ಇದೆ.

ತಮಿಳುನಾಡು ಏಲಕ್ಕಿ: ನಗರದ ಎಪಿಎಂಸಿಯ ಬಾಳೆಹಣ್ಣು ಮಾರುಕಟ್ಟೆಯಲ್ಲಿ ತಮಿಳುನಾಡಿನ ಏಲಕ್ಕಿ ಬಾಳೆಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ಅದಕ್ಕೆ ಕಾರಣ ಸ್ಥಳೀಯ ಏಲಕ್ಕಿ ಬಾಳೆಹಣ್ಣಿನ ಕೊರತೆ. ಇದು ಮದುವೆ ಕಾಲವಾದ ಕಾರಣ, ಬಾಳೆಹಣ್ಣಿಗೆ ಬೇಡಿಕೆ ಹೆಚ್ಚಾಗೇ ಇದೆ. ಊಟದ ಪಂಕ್ತಿಯಲ್ಲಿ ಬಾಳೆಹಣ್ಣು ವಿತರಣೆ ವಾಡಿಕೆ.

‘ಮೇ ತಿಂಗಳಲ್ಲಿ ನಮ್ಮ ಏಲಕ್ಕಿ ಬಾಳೆ ಹಣ್ಣಿನ ಪೂರೈಕೆ ಕಡಿಮೆಯಾಗುತ್ತದೆ. ತಮಿಳುನಾಡು ಏಲಕ್ಕಿ ಬಾರದಿದ್ದರೆ ನಮ್ಮ ಹಣ್ಣಿನ ಬೆಲೆ ಕೆ.ಜಿ.ಗೆ ₹ 100 ತಲುಪಿಬಿಡುತ್ತದೆ. ಬೇಡಿಕೆ ತಣಿಸಲು ನಾವು ತಮಿಳುನಾಡು ಏಲಕ್ಕಿ ತರಿಸುತ್ತೇವೆ. ಮದುವೆ ಮುಗಿದ ಮೇಲೆ ನಾವು ತಮಿಳುನಾಡಿನ ಏಲಕ್ಕಿ ಮುಟ್ಟವುದಿಲ್ಲ. ತಮಿಳು ಏಲಕ್ಕಿ ನಮ್ಮ ಹಣ್ಣಿನಷ್ಟು ರುಚಿ ಇರುವುದಿಲ್ಲ’ ಎಂದು ವ್ಯಾಪಾರಿ ಉಮೇಶ್‌ ಹೇಳಿದರು.

‘ಗ್ರಾಹಕರಿಗೆ ತಮಿಳುನಾಡು – ಕರ್ನಾಟಕದ ಏಲಕ್ಕಿ ಹಣ್ಣಿನ ವ್ಯತ್ಯಾಸ ಗೊತ್ತಾಗುವುದಿಲ್ಲ. ಚಿಲ್ಲರೆ ವ್ಯಾಪಾರಿಗಳು ಎರಡೂ ಹಣ್ಣುಗಳನ್ನು  ₹ 60ಕ್ಕೆ ಮಾರುತ್ತಿದ್ದಾರೆ’ ಎಂದು ಗ್ರಾಹಕ ಜಯರಾಮೇಗೌಡ ಹೇಳಿದರು.

ಹಲಸು ಅಗ್ಗ, ಕಲ್ಲಂಗಡಿ ಸ್ಥಿರ: ಹಲಸಿನ ಹಣ್ಣಿನ ಪೂರೈಕೆ ಹೇರಳವಾಗಿರುವ ಕಾರಣ ಬೆಲೆ ಕಡಿಮೆಯಾಗಿದೆ. ಒಂದು ಹಣ್ಣಿಗೆ ₹ 20ರಿಂದ ಆರಂಭವಾಗುತ್ತದೆ.  ಕಲ್ಲಂಗಡಿ ಹಣ್ಣಿನ ಬೆಲೆಯಲ್ಲಿ ವ್ಯತ್ಯಾಸ ಕಂಡು ಬಂದಿಲ್ಲ. ಕಳೆದ ತಿಂಗಳಿಂದಲೂ ಕೆ.ಜಿ.ಗೆ ₹ 12 ಇದೆ.

ದ್ರಾಕ್ಷಿ ಹಣ್ಣಿನ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿದೆ. ಕೆ.ಜಿ. ‘ಸಾಂಗ್ಲಿ ಸೋನ’ ದ್ರಾಕ್ಷಿ ಹಣ್ಣಿನ ಬೆಲೆ ₹ 80 ಇದೆ. ಕಳೆದ ವಾರ ₹ 70 ಇತ್ತು. ದಾಳಿಂಬೆ ಹಣ್ಣಿನ ಬೆಲೆ ಸ್ಥಿರವಾಗಿದ್ದು ₹ 60 ಇದೆ. ಕರಬೂಜ ಹಣ್ಣಿನ ಬೆಲೆಯಲ್ಲಿ ಹತ್ತು ರೂಪಾಯಿ ಏರಿಕೆ ಕಂಡಿದ್ದು ಈ ವಾರ ಕೆ.ಜಿ.ಗೆ₹ 40 ಇದೆ. ಒಂದು ಪೈನಾಪಲ್‌ ಹಣ್ಣಿಗೆ ಈ ವಾರ ₹ 30 ಇದೆ. ಕಳೆದ ವಾರ ₹ 25 ಇತ್ತು.

ಪಪ್ಪಾಯ ಮತ್ತು ರಮ್ಜಾನ್‌: ಜೂನ್‌ 26ರಿಂದ ರಮ್ಜಾನ್‌ ಮಾಸ ಆರಂಭವಾಗುತ್ತಿದೆ. ರಮ್ಜಾನ್‌ ಉಪವಾಸ ನಿರತ ಮುಸ್ಲಿಮರು ಕಡ್ಡಾಯ ಎಂಬಂತೆ ಪಪ್ಪಾಯ ಹಣ್ಣು ಸೇವಿಸುತ್ತಾರೆ. ಹೀಗಾಗಿ ಈಗಿನಿಂದಲೇ ಪಪ್ಪಾಯ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ಕಳೆದವಾರ ಕೆ.ಜಿ.ಗೆ ₹ 10 ಇದ್ದ ಬೆಲೆ ಈ ವಾರ ₹ 15ಕ್ಕೇರಿದೆ.

ನೀಲಂ ಪ್ರವೇಶ: ಮಾರುಕಟ್ಟೆಗೆ ನೀಲಂ ಮಾವಿನ ಹಣ್ಣಿನ ತಳಿ ಪ್ರವೇಶವಾಯಿತೆಂದರೆ ಮಾವಿನ ಹಣ್ಣಿನ ಕಾಲ ಮುಗಿಯಿತು ಎಂದೇ ಅರ್ಥ. ಸೋಮವಾರ ಮಂಡ್ಯ ಮಾರುಕಟ್ಟೆಗೆ ವ್ಯಾಪಾರಿ ರಮೇಶ್‌ ಎರಡು ಕ್ವಿಂಟಲ್‌ ನೀಲಂ ಮಾವಿನ ಹಣ್ಣು ತಂದಿದ್ದರು. ಬೆಲೆ ಕೆ.ಜಿ.ಗೆ ₹ 30.

‘ಇದು ಕಡೆಯ ಆಟ. ನೀಲಂ ಬಂತೆಂದರೆ ಮುಂದೆ ಮಾವಿನ ಹಣ್ಣು ಸಿಗುವುದಿಲ್ಲ. ಇಂದು ನಾನೇ ಮೊದಲು ನೀಲಂ ತಂದಿದ್ದೇನೆ. ಚನ್ನಪಟ್ಟಣದ ರೈತರೊಬ್ಬರಿಂದ ಕೊಂಡು ತಂದಿದ್ದೇನೆ’ ಎಂದು ರಮೇಶ್‌ ತಿಳಿಸಿದರು.

* * 

ಇಟಲಿ, ಫ್ರಾನ್ಸ್‌ ಸೇರಿದಂತೆ 16 ದೇಶಗಳ ಸೇಬು ಹಣ್ಣುಗಳು ಜಿಲ್ಲೆಗೆ ಬರುತ್ತಿವೆ. ಪೂರೈಕೆ ಹೆಚ್ಚಾಗಿರುವ ಕಾರಣ ಬೆಲೆ ಸ್ಥಿರವಾಗಿದೆ
ತೌಫಿಕ್‌ ಎಂ.ಎಸ್‌. ಫ್ರೂಟ್‌ ಕಂಪೆನಿ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT