ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ.ಪಂ ಸರಹದ್ದು ಪರಿಷ್ಕರಣೆಗೆ ಆಗ್ರಹ

Last Updated 23 ಮೇ 2017, 5:36 IST
ಅಕ್ಷರ ಗಾತ್ರ

ವಿರಾಜಪೇಟೆ:  ಪಟ್ಟಣ ಪಂಚಾಯಿತಿ ಸರಹದ್ದಿನ ವಿಸ್ತರಣೆಗೆ ಸಂಬಂಧಿಸಿ ಸರ್ವೆ ನಡೆಸಿ ನೂತನ ನಕ್ಷೆಯನ್ನು ರೂಪಿಸಿ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲು ಪಟ್ಟಣ ಪಂಚಾಯಿತಿ ಮಾಸಿಕ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಅಧ್ಯಕ್ಷ ಇ.ಸಿ ಜೀವನ್ ಅಧ್ಯಕ್ಷತೆಯಲ್ಲಿ ಸೋಮವಾರ ಪಂಚಾಯತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ತೀರ್ಮಾನಕ್ಕೆ ಬರಲಾಯಿತು. ಗಾಂಧಿನಗರ, ನಿಸರ್ಗ ಬಡಾವಣೆ ಸೇರಿ ಪಟ್ಟಣದ ಹಲವು ಬಡಾವಣೆಗಳು ಭಾಗಶಃ ಹತ್ತಿರದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿವೆ.

ಈ ಬಡಾವಣೆಗಳಿಗೆ ಪಟ್ಟಣ ಪಂಚಾಯಿತಿ ಮೂಲಸೌಕರ್ಯ ಒದಗಿಸುತ್ತಿದ್ದರೂ, ಕಂದಾಯ ಮಾತ್ರ ಸಂಬಂಧಿಸಿದ ಗ್ರಾಮ ಪಂಚಾಯಿತಿಗಳಿಗೆ ಸಲ್ಲಿಕೆಯಾಗುತ್ತಿದೆ. ಇದರಿಂದ ಪಟ್ಟಣ ಪಂಚಾಯಿತಿಗೆ ಆರ್ಥಿಕ ನಷ್ಟವಾಗುತ್ತಿದೆ. ಶೀಘ್ರವಾಗಿ ಪಂಚಾಯಿತಿ ಸರಹದ್ದನ್ನು ವ್ಶೆಜ್ಞಾನಿಕವಾಗಿ ವಿಸ್ತರಿಸಿ ನೂತನ ನಕ್ಷೆಯನ್ನು ತಯಾರಿಸಬೇಕು ಎಂದು ಸಭೆ ಅಭಿಪ್ರಾಯಪಟ್ಟಿತು.

ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ‘ವಾಸ್ತವವಾಗಿ ವಿರಾಜಪೇಟೆ ಪಟ್ಟಣ ಪಂಚಾಯಿತಿಯ ವಿಸ್ತೀರ್ಣ 12 ಚದರ ಕಿ.ಮೀ ಇದ್ದರೂ, ಪ್ರಸ್ತುತ ದಾಖಲೆಯ ಪ್ರಕಾರ 8.6 ಚದರ ಕಿ.ಮೀ ಮಾತ್ರ ಇದೆ’ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಅಶೋಕ್, ‘ಈ ಹಿಂದಿನ ನಕಾಶೆಯಲ್ಲಿ ಸರ್ವೆ ಸಂಖ್ಯೆ ಅದಲು ಬದಲಾಗಿದ್ದರಿಂದ ನಕಾಶೆಯಲ್ಲಿ ಎಲ್ಲ ಗಡಿ ರೇಖೆ ಸೇರ್ಪಡೆಯಾಗಿಲ್ಲ. ಪಂಚಾಯಿತಿ ಪರವಾಗಿ ಹೊಸ ನಕಾಶೆ ರೂಪಿಸಿದರೆ ಅನುಮೋದನೆಗೆ ಸರ್ಕಾರಕ್ಕೆ ಕಳುಹಿಸಲಾಗುವುದು’ ಎಂದು ತಿಳಿಸಿದರು.

ಪಂಚಾಯಿತಿ ಅಧ್ಯಕ್ಷ ಇ.ಸಿ.ಜೀವನ್, ಪಂಚಾಯಿತಿ ಸರಹದ್ದು  ನಿಗದಿ ಕುರಿತು  ಶೀಘ್ರ ವಿಶೇಷ ಸಭೆಯನ್ನು ಕರೆದು ತೀರ್ಮಾನಿಸಲಾಗುವುದು’ ಎಂದು ತಿಳಿಸಿದರು.ಸದಸ್ಯ ರಂಜಿ ಪೂಣಚ್,‘ಪಟ್ಟಣಕ್ಕೆ ನೀರು ಪೂರೈಕೆಯಾಗುವ ಭೇತ್ರಿಯ ಘಟಕಕ್ಕೆ ವಿರಾಜಪೇಟೆ ಹಾಗೂ ಮೂರ್ನಾಡು ಎರಡು ಕಡೆಯಿಂದ ವಿದ್ಯುತ್ ಸಂಪರ್ಕವಿದೆ. ಆದರೂ ಮಾಸಿಕ ಡೀಸೆಲ್‌ಗೆ  ₹3 ಲಕ್ಷ ವೆಚ್ಚ ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದರು.

ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಪೂರ್ಣವಾಗಿ ನಿಷೇಧಿಸಬೇಕು. ಪ್ಲಾಸ್ಟಿಕ್ ಬಲಸುವ ಮಾರಾಟಗಾರರ ಮೇಲೆ ಕಠಿಣ ಕ್ರಮಕೈಗೊಂಡು ಅಂಗಡಿ ಪರವಾನಗಿ ರದ್ದು ಪಡಿಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಪಟ್ಟಣದ ಆಯ್ದ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಸದಸ್ಯ ಡಿ.ಪಿ. ರಾಜೇಶ್ ಸಲಹೆ ನೀಡಿದರು. ಇದಕ್ಕೆ ಪಂಚಾಯಿತಿ ಎಂಜಿನಿಯರ್ ಎನ್.ಪಿ.ಹೇಮಕುಮಾರ್, ‘ಈಗ ಮೂರು ಕಡೆ ಕ್ಯಾಮೆರಾ ಅಳವಡಿಸಲು ಸಿದ್ದತೆ ನಡೆಸಿದೆ, ಇನ್ನು ಮೂರು ಕಡೆ ಹೆಚ್ಚುವರಿಯಾಗಿ ಅಳವಡಿಲಾಗುವುದು ಎಂದರು.

ಸದಸ್ಯೆ ಎಂ.ಕೆ.ದೇಚಮ್ಮ, ಪಟ್ಟಣದ ಮುಖ್ಯ ರಸ್ತೆಗಳ ಪಾದಚಾರಿ ಮಾರ್ಗದಲ್ಲಿ ಮಳೆಗಾಲಕ್ಕೆ ಮುನ್ನ ಹೊಸ ಸ್ಲ್ಯಾಬ್‌ ಅಳವಡಿಸಬೇಕು ಎಂದು ಗಮನಸೆಳೆದರು.
ನೀರು ಪೂರೈಕೆ ಸಮಸ್ಯೆ ಕುರಿತು ಚರ್ಚಿಸಲು ಆ ವಿಭಾಗದ ನೌಕರರು ಹಾಗೂ ಸದಸ್ಯರ ವಿಶೇಷ ಸಭೆಯನ್ನು ಶೀಘ್ರ ಕರೆಯಲಾಗುವುದು ಎಂದರು.

ತಿವಾರಿ ನಿಧನಕ್ಕೆ ಸಂತಾಪ:  ಕೊಡಗು ಜಿಲ್ಲಾಧಿಕಾರಿಯಾಗಿದ್ದ, ಈಚೆಗೆ ಉತ್ತರಪ್ರದೇಶದಲ್ಲಿ ಶಂಕಾಸ್ಪದವಾಗಿ ಮೃತಪಟ್ಟ ಅನುರಾಗ್ ತಿವಾರಿ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಸಭೆಯಲ್ಲಿ ಸದಸ್ಯರಾದ ಮೈನುದ್ದೀನ್, ಕೆ. ಸಚಿನ್, ಮತ್ತೀನ್, ಟಿ.ಜೆ. ಶಂಕರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT