ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಹಿತ್ಯದಿಂದ ಭಾಷೆಯ ಶ್ರೀಮಂತಿಕೆ ವೃದ್ಧಿ’

Last Updated 23 ಮೇ 2017, 5:52 IST
ಅಕ್ಷರ ಗಾತ್ರ

ಮಂಗಳೂರು: ಒಂದು ಭಾಷೆಯ ಬೆಳವಣಿಗೆ ಆಗಬೇಕಾದರೆ, ಅದರ ಸೊಗಡನ್ನು ಹೊರಗೆ ತರಬೇಕು. ಸಾಹಿತ್ಯ ಈ ಕೆಲಸವನ್ನು ಸಮರ್ಥವಾಗಿ ಮಾಡು ತ್ತಿದ್ದು, ಸಾಹಿತ್ಯದಿಂದ ಭಾಷೆಯ ಶ್ರೀಮಂತಿಕೆ ಹೆಚ್ಚಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು. ನಗರದ ಶ್ರೀನಿವಾಸ ಹೋಟೆಲ್‌ನಲ್ಲಿ ಸೋಮವಾರ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಹೊರತಂಡ ನೂರು ಬ್ಯಾರಿ ಕವಿಗಳ ಕವನ ಗುಚ್ಛ ‘ಬ್ಯಾರಿ ಕಾವ್ಯ ಸಂಪುಟ’ವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಈ ಭಾಗದಲ್ಲಿ ಬ್ಯಾರಿ ಭಾಷಿಕರ ಸಂಖ್ಯೆ ಕಡಿಮೆ ಇಲ್ಲ. ತುಳು, ಕನ್ನಡ ಮಾತನಾಡುವವ ಜನರಷ್ಟೇ, ಬ್ಯಾರಿ ಭಾಷಿಕರೂ ಇಲ್ಲಿದ್ದಾರೆ. ಕೇವಲ ವ್ಯಾಪಾ ರಕ್ಕೆ ಸೀಮಿತವಾಗಿದ್ದ ಬ್ಯಾರಿ ಭಾಷಿಕರು, ಇದೀಗ ಸಾಹಿತ್ಯ ಕ್ಷೇತ್ರದಲ್ಲಿ ಮುಂದೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಬ್ಯಾರಿ ಭಾಷೆ ಸಾಹಿತ್ಯ, ಶ್ರೀಮಂತಿಕೆ ಯನ್ನು ಹೊರತರುವ ನಿಟ್ಟಿನಲ್ಲಿ ಕರ್ಣಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಒಳ್ಳೆಯ ಕೆಲಸ ಮಾಡಿದೆ. ಬ್ಯಾರಿ ಭಾಷೆಯ ಸಾಹಿತಿಗಳಿಗೆ ವೇದಿಕೆಯಾಗಿದೆ. ಬ್ಯಾರಿ–ಕನ್ನಡ–ಇಂಗ್ಲಿಷ್‌ ನಿಘಂಟು, ಬ್ಯಾರಿ ಕಾವ್ಯ ಸಂಪುಟ ಸೇರಿದಂತೆ ಅನೇಕ ಕೃತಿಗಳನ್ನು ಹೊರತರುವ ಮೂಲಕ ಭಾಷೆಯ ಸೌಂದರ್ಯವನ್ನು ಅನಾವರಣ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್‌ ಆಡಳಿತ ಪಕ್ಷದ ಮುಖ್ಯ ಸಚೇತಕ ಐವನ್ ಡಿಸೋಜ, ಸಾಹಿತಿಗಳು ಎಲ್ಲದಕ್ಕೂ ಮಿಗಿಲಾದವರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕನ್ನಡ, ತುಳು, ಕೊಂಕಣಿ, ಬ್ಯಾರಿ ಭಾಷೆಯ ಸಾಹಿತ್ಯಗಳ ಸಂಗಮವಾಗಿದೆ. ಬ್ಯಾರಿ ಭಾಷೆಯಲ್ಲಿ ಸಾಹಿತ್ಯ ಕೃಷಿ ಹೆಚ್ಚಾಗಿದ್ದು, 100 ಕವಿಗಳ ಕವನ ಸಂಪುಟವೇ ಇದಕ್ಕೆ ಸಾಕ್ಷಿ ಎಂದರು.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬ್ಯಾರಿ ಅಧ್ಯಯನ ಪೀಠವನ್ನು ಸರ್ಕಾರ ಮಂಜೂರು ಮಾಡಿದೆ. ಇದೀಗ ನಿವೇಶನವನ್ನು ಒದಗಿಸಿದೆ. ಬರುವ ದಿನಗಳಲ್ಲಿ ಸ್ವತಂತ್ರ ಕಟ್ಟಡವೂ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ. ಮುಹಮ್ಮದ್‌ ಹನೀಫ್‌, ಅಕಾಡೆಮಿಗೆ ನೀಡಲಾಗಿದ್ದ ₹60 ಲಕ್ಷ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಲಾಗಿದೆ. ಬ್ಯಾರಿ ಸಾಹಿತ್ಯಕ್ಕೆ ಸಂಬಂ ಧಿಸಿದ ಕಾರ್ಯಕ್ರಮ, ಪ್ರಕಟಣೆಗಳನ್ನು ಹೊರತರಲಾಗಿದೆ ಎಂದು ಹೇಳಿದರು.

ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ರಾಯ್‌ ಕ್ಯಾಸ್ತಲಿನೋ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ಜಾನಕಿ ಎಂ. ಬ್ರಹ್ಮಾವರ, ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ರಹೀಂ ಉಚ್ಚಿಲ್‌, ಸಾಹಿತಿಗಳಾದ ಮುಹಮ್ಮದ್‌ ಬಡ್ಡೂರು, ಬಿ.ಎಂ. ಶಂಶುದ್ದೀನ್‌ ಮಡಿಕೇರಿ, ಬಶೀರ್‌ ಅಹ್ಮದ್‌, ಅಬ್ದುಲ್‌ ಬಶೀರ್‌ ಕಿನ್ಯಾ, ಅಬ್ದುಲ್ ಲತೀಫ್‌ ಪುತ್ತೂರು ವೇದಿಕೆಯಲ್ಲಿದ್ದರು.

ಬ್ಯಾರಿ ಭವನಕ್ಕೆ ಮಂಜೂರಾದ ಜಾಗ ಅಕಾಡೆಮಿ ಹೆಸರಿಗೆ ನೋಂದಣಿ ಮಾಡಿದ ಪತ್ರವನ್ನು ಸಚಿವ ಬಿ. ರಮಾ ನಾಥ ರೈ ಅವರು, ಅಧ್ಯಕ್ಷ ಮುಹಮ್ಮದ್‌ ಹನೀಫ್‌ ಅವರಿಗೆ ಹಸ್ತಾಂತರಿಸಿದರು. ರಿಜಿಸ್ಟ್ರಾರ್‌ ಉಮ ರಬ್ಬ ಸ್ವಾಗತಿಸಿದರು. ಅಬ್ದುಲ್‌ ಹಮೀದ್‌ ಗೋಳ್ತಮಜಲು ನಿರೂಪಿಸಿ ದರು. ಮುಹಮ್ಮದ್‌ ಝಕರಿಯ ಕಲ್ಲಡ್ಕ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT