ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿವು ಮುಕ್ತ ರಾಜ್ಯ - ಕಾಂಗ್ರೆಸ್ ಸರ್ಕಾರದ ಸಂಕಲ್ಪ

Last Updated 23 ಮೇ 2017, 11:24 IST
ಅಕ್ಷರ ಗಾತ್ರ

ಬೆಳ್ತಂಗಡಿ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನೇ ಮೂಲಮಂತ್ರವಾಗಿರಿಸಿಕೊಂಡು ಆಡಳಿತ ನಡೆಸುತ್ತಿದ್ದು, ‘ಅನ್ನಭಾಗ್ಯ‘ ದಂತಹ ಯೋಜನೆಯ ಮೂಲಕ ಹಸಿವು ಮುಕ್ತ ರಾಜ್ಯ ನಿರ್ಮಾಣ ಮಾಡುವುದು ಸರ್ಕಾರದ ಸಂಕಲ್ಪವಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು.ಟಿ. ಖಾದರ್ ಹೇಳಿದರು.

ಗುರುವಾಯನಕೆರೆ ಕಿನ್ಯಮ್ಮ ಸಭಾಭವನದಲ್ಲಿ ಸೋಮವಾರ ನಡೆದ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಮತ್ತು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ರಾಜ್ಯ ಸರ್ಕಾರ ಬಡವರ ಪರವಾಗಿದ್ದು, ಅಧಿಕಾರಶಾಹಿಗಳಿಗೆ ಮಣೆ ಹಾಕಿಲ್ಲ. ಉಚಿತ ಕ್ಷೀರ ಭಾಗ್ಯ, ಅನ್ನಭಾಗ್ಯ, ಹೈನುಗಾರಿಕೆಗೆ ಸಬ್ಸಿಡಿ, ಭಾಗ್ಯಲಕ್ಷ್ಮಿ ಯೋಜನೆ ಕಾರ್ಯಕ್ರಮಗಳ ಮೂಲಕ ಚುನಾವಣಾ ಸಂದರ್ಭ ನೀಡಿದ ಆಶ್ವಾಸನೆಯಂತೆ ನಡೆದಿದೆ. ಜಾತಿ ಸಮೀಕ್ಷೆಯ ಹಿಂದೆ ಸಾಮಾಜಿಕ ಬದ್ಧತೆ ಇದ್ದು, ಮೂಲನಂಬಿಕೆಯನ್ನು ಉಳಿಸಿ ಅಂಧಶ್ರದ್ಧೆಯ ಮೂಢನಂಬಿಕೆಯನ್ನು ತೊಲಗಿಸುವ ಸರ್ವತೋಮುಖ ಅಭಿವೃದ್ಧಿಯೇ ಸರ್ಕಾರದ ಮೂಲ ಉದ್ಧೇಶವಾಗಿದೆ’ ಎಂದರು.

ಸಮಾರಂಭ ಉದ್ಘಾಟಿಸಿದ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ  ಕೆ.ವಸಂತ ಬಂಗೇರ ಮಾತನಾಡಿ, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಚುನಾವಣಾ ಸಂದರ್ಭದಲ್ಲಿ ನೀಡಿದ ಆಶ್ವಾಸನೆಗಳಲ್ಲಿ ಶೇ 95 ಭಾಗದಷ್ಟು ಈಡೇರಿಸಿದ್ದು, ಉಳಿದ 5 ಭಾಗವನ್ನು 11 ತಿಂಗಳ ಅವಧಿಯಲ್ಲಿ ಈಡೇರಿಸಿ ನುಡಿದಂತೆ ನಡೆದ ಸರ್ಕಾರ ಎನಿಸಿಕೊಳ್ಳಲಿದೆ.

ತಾಲ್ಲೂಕಿಗೆ 4 ವರ್ಷಗಳ ಅವಧಿಯಲ್ಲಿ ₹679.25 ಕೋಟಿ ಅನುದಾನ ತಂದಿದ್ದು, ದೊಡ್ಡ ತಾಲ್ಲೂಕಾದರೂ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ.  ಹಳ್ಳಿಗಳಿಗೆ ರಸ್ತೆ ಡಾಂಬರೀಕರಣ, ನೀರಿನ ವ್ಯವಸ್ಥೆ, ವಿದ್ಯುದೀಕರಣ, ಆಸ್ಪತ್ರೆ, ಗೋ ಆಸ್ಪತ್ರೆಯ ಸೌಲಭ್ಯವನ್ನು ಕಲ್ಪಿಸಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು’ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಸಹಕಾರಿ ಧುರೀಣ ಇ. ಸುಂದರ ಗೌಡ, ಮಹಿಳಾ ಘಟಕದ ಅಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ ಮಾತನಾಡಿದರು. ಇದೇ ಸಂದರ್ಭದಲ್ಲಿ ತನ್ನೀರುಪಂತ ಗ್ರಾಮದಿಂದ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಯುವಕರಿಗೆ ಪಕ್ಷದ ಧ್ವಜ ನೀಡುವ ಮೂಲಕ ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು.

ಅಗಲಿದ ಕಾಂಗ್ರೆಸ್ ಮುಖಂಡ ಮಹೇಶ್ ನಡಕ್ಕರ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿ ಅಧ್ಯಕ್ಷ ರಾಮಚಂದ್ರ ಗೌಡ ಸ್ವಾಗತಿಸಿದರು. ವೇದಿಕೆಯಲ್ಲಿ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಪೀತಾಂಬರ ಹೇರಾಜೆ, ಕೆಪಿಸಿಸಿ ಸದಸ್ಯ ಶ್ರೀನಿವಾಸ ಕಿಣಿ ಮತ್ತು ರಾಜಶೇಖರ ಅಜ್ರಿ, ತಾಲೂಕು ಪಂಚಾಯಿತಿ ಅಧ್ಯಕ್ಷೆ ದಿವ್ಯಜೋತಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಧರಣೇಂದ್ರ ಕುಮಾರ್, ಶೇಖರ ಕುಕ್ಕೇಡಿ, ನಮಿತಾ, ಮುಖಂಡರಾದ ಉಮ್ಮರ್ ಕುಂಞ ಮುಸ್ಲಿಯಾರ್, ಪದ್ಮಕುಲಾಲ್, ಬಿ.ಕೆ ವಸಂತ, ಯುವ ಘಟಕದ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಎಪಿಎಂಸಿ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಉಷಾ ಶರತ್, ಹಾಜಿರ, ನವೀನ್ ಗೌಡ, ನೆಮಿರಾಜ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾಮಗಾರಿ
ಆರೋಗ್ಯ ಇಲಾಖೆಯ ವಿವಿಧ ಕಾಮಗಾರಿಗಳಿಗೆ ₹8.80 ಕೋಟಿ, ಮೆಸ್ಕಾಂನ ವಿವಿಧ ಯೋಜನೆಗಳಿಗೆ ₹75.54 ಕೋಟಿ, ತೋಟಗಾರಿಕಾ ಇಲಾಖೆಯಿಂದ ₹4.14 ಕೋಟಿ, ಕೃಷಿ ಇಲಾಖೆಯಿಂದ ₹3 ಕೋಟಿ, ಸಮಾಜ ಕಲ್ಯಾಣ ಇಲಾಖೆಯಿಂದ ₹11.44 ಕೋಟಿ, ಪಂಚಾಯತ್‌ ರಾಜ್‌ ಎಂಜಿನಿಯರಿಂಗ್ ಉಪವಿಭಾಗದ ವಿವಿಧ ಕಾಮಗಾ ರಿಗಳಿಗೆ ₹45.59ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸಲಾಗುವುದು ಎಂದು ಶಾಸಕ ಕೆ.ವಸಂತ ಬಂಗೇರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT