ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಸಮಸ್ಯೆಗೆ ಶಾಸಕರೇ ಹೊಣೆ: ರೇಣುಕಾಚಾರ್ಯ ಆರೋಪ

Last Updated 23 ಮೇ 2017, 6:15 IST
ಅಕ್ಷರ ಗಾತ್ರ

ಹೊನ್ನಾಳಿ: ‘ತಾಲ್ಲೂಕಿನ ಎಲ್ಲೆಡೆ ಮರಳಿನ ಸಮಸ್ಯೆಗೆ ಹಾಗೂ ಆಶ್ರಯ ಮನೆಗಳ ಫಲಾನುಭವಿಗಳಿಗೆ ಮರಳು ತಲುಪದೇ ಇರುವುದಕ್ಕೆ ಶಾಸಕ ಡಿ.ಜಿ.ಶಾಂತನಗೌಡ ಅವರೇ ನೇರ ಕಾರಣ’ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.

‘ತಾಲ್ಲೂಕಿನಲ್ಲಿರುವ ದೊಡ್ಡ ಕ್ವಾರಿಗಳಲ್ಲಿನ ಮರಳನ್ನು ಆಶ್ರಯ ಮನೆಗಳ ಹೆಸರಿನಲ್ಲಿ ಶಾಸಕರ ಪುತ್ರರು ಹಾಗೂ ಅವರ ಹಿಂಬಾಲಕರು ಈಗಾಗಲೇ ದೋಚಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಕಳಪೆ ಗುಣಮಟ್ಟದ ಹಾಗೂ ಅಳಿದುಳಿದ ಮರಳನ್ನು ನೆಮ್ಮದಿ ಕೇಂದ್ರದ ಮೂಲಕ ಆಶ್ರಯ ಮನೆಗಳಿಗೆ ಹಾಗೂ ಶೌಚಾಲಯ ನಿರ್ಮಿಸುವವರಿಗೆ ಈಗ ವಿತರಿಸಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ತಾಲ್ಲೂಕಿನ ಹರಳಹಳ್ಳಿ ಹಾಗೂ ಗೋವಿನಕೋವಿ ಕ್ವಾರಿಗಳಲ್ಲಿನ ಮರಳನ್ನು ನೆಮ್ಮದಿ ಕೇಂದ್ರದ ಮೂಲಕ ವಿತರಿಸಲು ಗುರುತಿಸಲಾಗಿದೆ. ಆದರೆ, ನಾಲ್ಕೇ ದಿನಗಳಿಗೆ ಅಲ್ಲಿನ ಮರಳು ಖಾಲಿಯಾಗಿದೆ. ಕೆಲವರು ಆಶ್ರಯ ಮನೆಗಳನ್ನು ನಿರ್ಮಿಸಿಕೊಳ್ಳುವವರ ಹೆಸರಿನಲ್ಲಿ ಮರಳನ್ನು ದೋಚುತ್ತಿದ್ದಾರೆ’ ಎಂದು ಆರೋಪಿಸಿದರು.

ತಾಲ್ಲೂಕಿನ ಬೀರಗೊಂಡನಹಳ್ಳಿ ಗ್ರಾಮದ ಒಂದು ಟನ್‌ ಮರಳಿಗೆ ₹ 2,275, ಹುರುಳೆಹಳ್ಳಿ ಗ್ರಾಮದಲ್ಲಿ  ₹ 7,852 ಹಾಗೂ ಬಿದರಗಡ್ಡೆ ಗ್ರಾಮದಲ್ಲಿ ಒಂದು ಟನ್‌ ಮರಳಿಗೆ ₹ 3,737 ಎಂದು ನಮೂದಿಸಲಾಗಿದೆ. ಆದರೆ, ಈ ಮರಳಿಗೆ ನಿರ್ವಹಣೆ ವೆಚ್ಚ ಶೇ 10 ರಷ್ಟು ವಿಧಿಸಲಾಗುತ್ತಿದೆ. ಹೀಗಾಗಿ ಬಾಡಿಗೆ ಮತ್ತು ಇತರೆ ಖರ್ಚು ಸೇರಿ ಒಂದು ಟ್ರ್ಯಾಕ್ಟರ್ ಮರಳಿಗೆ  ₹ 10ಸಾವಿರದಿಂದ 12 ಸಾವಿರದವರಗೆ ದರ ವಿಧಿಸಲಾಗುತ್ತಿದೆ.

ಇದರಿಂದ ಸಾಮಾನ್ಯ ಜನರು ಮರಳು ತೆಗೆದುಕೊಂಡು ಮನೆ ಕಟ್ಟುವುದು ಕಷ್ಟವಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆದ್ದರಿಂದ ತಾಲ್ಲೂಕಿನಲ್ಲಿರುವ ಎಲ್ಲ ಮರಳಿನ ಕ್ವಾರಿಗಳನ್ನು ತಕ್ಷಣವೇ ಆರಂಭಿಸಬೇಕು. ಇದರಿಂದ ಸ್ಥಳೀಯರಿಗೆ ಮರಳು ಲಭ್ಯವಾಗುತ್ತದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಗೋವಿನಕೋವಿ ಚಂದ್ರಪ್ಪ, ಮಂಜಪ್ಪ, ಮುಕ್ತೇನಹಳ್ಳಿ ಕುಮಾರ, ನೆಲಹೊನ್ನೆ ಮಿಥುನ್ ಹಾಜರಿದ್ದರು.

* * 

ತಾಲ್ಲೂಕಿನ ಎಲ್ಲ ಮರಳು ಕ್ವಾರಿಗಳನ್ನು ಶೀಘ್ರದಲ್ಲಿ ಆರಂಭಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳ ಬೇಕು. ಇಲ್ಲದಿದ್ದರೆ ಹೋರಾಟ ಆರಂಭಿಸಲಾಗುವುದು.
ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT