ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡದ ಶಿಶು ಹಾಕಲು ತೊಟ್ಟಿಲು ವ್ಯವಸ್ಥೆ

Last Updated 23 ಮೇ 2017, 6:22 IST
ಅಕ್ಷರ ಗಾತ್ರ

ದಾವಣಗೆರೆ: ಪಾಲಕರಿಗೆ ಬೇಡವಾದ ಶಿಶುವನ್ನು ಬಿಟ್ಟು ಹೋಗಲು ಜಿಲ್ಲಾ ಆಸ್ಪತ್ರೆಯ ಹೆರಿಗೆ ವಾರ್ಡ್‌, ಬಾಲಮಂದಿರದ ಆವರಣ ಸೇರಿ ಕೆಲವೆಡೆ ಶೀಘ್ರದಲ್ಲೇ ಇಲಾಖೆಯಿಂದ ತೊಟ್ಟಿಲು ವ್ಯವಸ್ಥೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಕೆ.ಎಚ್‌. ವಿಜಯಕುಮಾರ್‌ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಭವನ ಸೊಸೈಟಿ, ಜಿಲ್ಲಾ ಬಾಲಭವನ, ಟ್ಯಾಲೆಂಟ್‌ ಸರ್ಚ್‌ ಫೌಂಡೇಶನ್‌ ಆಶ್ರಯದಲ್ಲಿ ನಡೆಯುತ್ತಿರುವ ‘ವಿದ್ಯಾ ವಿಹಾರ’ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಬೇಸಿಗೆ ಶಿಬಿರದ ಸಮಾರಂಭವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಹೆಣ್ಣು ಎಂಬ ಕಾರಣಕ್ಕೆ ಕೆಲವರು ನವಜಾತ ಶಿಶುಗಳನ್ನು ರಸ್ತೆ ಬದಿಗೆ ಬಿಟ್ಟು ಹೋಗುತ್ತಿದ್ದಾರೆ. ಆರ್ಥಿಕ ಸಮಸ್ಯೆಯಿಂದಾಗಿ ಗಂಡು ಶಿಶುವನ್ನೂ ಬಿಡುತ್ತಿದ್ದಾರೆ. ಹಂದಿ, ನಾಯಿ ಕಡಿತದಿಂದ ಅವು ಸಾವನ್ನಪ್ಪುತ್ತಿವೆ. ಇದನ್ನು ತಪ್ಪಿಸಲು ಜಿಲ್ಲಾ ಇಲಾಖೆಯು ತೊಟ್ಟಿಲು ವ್ಯವಸ್ಥೆ ಮಾಡಲಿದೆ ಎಂದರು.

ಬಾಲಮಂದಿರದಲ್ಲಿ ಬೆಳೆದ ಹೆಣ್ಣು ಮಕ್ಕಳನ್ನೇ ಹೆಚ್ಚು ದತ್ತು ತೆಗೆದುಕೊಳ್ಳಲಾಗುತ್ತಿದೆ. ಹೆಣ್ಣು ಎಂಬ ಕಾರಣಕ್ಕೆ ರಸ್ತೆ ಬದಿ ಬಿಟ್ಟುಹೋಗಿದ್ದ ಅನಾಥ ಮಕ್ಕಳು ಇಂದು ಕೋಟ್ಯಧಿಪತಿಗಳ ಮನೆ ಸೇರುತ್ತಿದ್ದಾರೆ ಎಂದು ಅವರು ಹೇಳಿದರು. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಇಲಾಖೆಯು ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿದೆ. ಇಲ್ಲಿ ಮಕ್ಕಳು ಕಲಿತಿರುವ ಕಲೆಗೆ ಪಾಲಕರು ಪ್ರೋತ್ಸಾಹ ನೀಡಬೇಕು ಎಂದು ವಿಜಯಕುಮಾರ್‌ ಸಲಹೆ ನೀಡಿದರು.

‘₹ 2.50 ಕೋಟಿ ವೆಚ್ಚದಲ್ಲಿ ಜೆ.ಎಚ್‌.ಪಟೇಲ್‌ ಬಡಾವಣೆಯಲ್ಲಿ ನಿರ್ಮಿಸುತ್ತಿರುವ ಬಾಲಭವನ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದೆ. ಮಕ್ಕಳ ಆಟಿಕೆ ಸಾಮಗ್ರಿಗಳನ್ನು ಅಳವಡಿಸಲಾಗುವುದು. ಮುಂದಿನ ಬೇಸಿಗೆ ಶಿಬಿರವನ್ನು ಅಲ್ಲೇ ಮಾಡಲಾಗುವುದು’ ಎಂದು ತಿಳಿಸಿದರು.

ಟ್ಯಾಲೆಂಟ್‌ ಸರ್ಚ್‌ ಫೌಂಡೇಶನ್‌ ಅಧ್ಯಕ್ಷ ಡಾ. ಸಲೀಂ ಜಿ. ಸೊನೆಖಾನ್‌, ‘ಇಂದಿನ ಶಾಲಾ ಪಠ್ಯಕ್ರಮಗಳಲ್ಲಿ ಮಕ್ಕಳ ಸಮಗ್ರ ಬೆಳವಣಿಗೆಗೆ ಪೂರಕವಾದಂತಹ ಹಾಗೂ ಅವರ ಪ್ರತಿಭೆಗೆ ಉತ್ತೇಜನ ನೀಡುವಂತಹ ವಿಷಯವಿಲ್ಲ. ಮಕ್ಕಳಲ್ಲಿ ಇರುವ ಕಲೆ ಮಾಸಿಹೋಗ ಬಾರದು ಎಂಬ ಉದ್ದೇಶದಿಂದ 2010ರಿಂದ ವಿದ್ಯಾ ವಿಹಾರ ಬೇಸಿಗೆ ಶಿಬಿರ ನಡೆಸುತ್ತಿದ್ದೇವೆ’ ಎಂದು ಹೇಳಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಎಂ. ಗುರುಸಿದ್ಧಸ್ವಾಮಿ, ಸರ್ಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕ ಮಹಾಂತಸ್ವಾಮಿ ಪೂಜಾರ, ಸರ್ಕಾರಿ ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ವೀಣಾ ಹಾಜರಿದ್ದರು. ಜಿಲ್ಲಾ ಬಾಲಭವನ ಸಂಯೋಜಕ ದೊಗ್ಗಳ್ಳಿ ಗೌಡ್ರು ಪುಟ್ಟರಾಜು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT