ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕರ, ಗ್ರಾಮಸ್ಥರ ಆಕ್ರೋಶ: ರಸ್ತೆ ತಡೆ

Last Updated 23 ಮೇ 2017, 6:34 IST
ಅಕ್ಷರ ಗಾತ್ರ

ಚಿಕ್ಕಜಾಜೂರು:  ಇಲ್ಲಿನ ಈಡಿಗರ ಓಬಳಸ್ವಾಮಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 9ನೇ ತರಗತಿ ಆರಂಭಿಸದೇ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಇದಕ್ಕೆ ತಾಲ್ಲೂಕು ಮತ್ತು ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳೇ ಕಾರಣ ಎಂದು ಪೋಷಕರು ಮತ್ತು ಗ್ರಾಮಸ್ಥರು ಆಕ್ರೋಶಗೊಂಡು ಸೋಮವಾರ ಶಾಲೆಯ ಮುಂಭಾಗ ರಸ್ತೆ ತಡೆ ನಡೆಸಿದರು.

ಪೋಷಕರು, ವಿದ್ಯಾರ್ಥಿಗಳು ದಿಢೀರ್‌ ರಸ್ತೆ ತಡೆ ನಡೆಸಿದ್ದರಿಂದ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಈ ಶಾಲೆಯಲ್ಲಿ 2016–17ನೇ ಸಾಲಿನಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ವಿಭಾಗಗಳಲ್ಲಿ ಎಂಟನೇ ತರಗತಿ ಆರಂಭಿಸಲಾಗಿತ್ತು. ಒಟ್ಟು 70 ವಿದ್ಯಾರ್ಥಿಗಳು ದಾಖಲಾಗಿದ್ದರು.

ಆದರೆ ಪ್ರಸಕ್ತ ಶೈಕ್ಷಣಿಕ ಸಾಲಿಗೆ ಶಾಲೆಯಲ್ಲಿ 9ನೇ ತರಗತಿ ಆರಂಭಿಸಲು ಇಲಾಖೆಯಿಂದ ಇನ್ನೂ ಆದೇಶ ಬಂದಿರಲಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ಸಮರ್ಪಕ ವರದಿ ಬರದ ಕಾರಣ 9ನೇ ತರಗತಿ ಮಂದುವರಿಕೆಗೆ ಅವಕಾಶವಿಲ್ಲ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳ ಪೋಷಕರು, ಗ್ರಾಮದ ಮುಖಂಡರು ರಸ್ತೆ ತಡೆ ನಡೆಸಿದರು.

ಪ್ರತಿಭಟನೆಯಿಂದ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎ. ತಿಮ್ಮಣ್ಣ ಸ್ಥಳಕ್ಕೆ ಧಾವಿಸಿ ಪ್ರತಿಭಟನಾನಿರತರ ಮನವೊಲಿಸಲು ಯತ್ನಿಸಿದರು.
‘ಇದಕ್ಕೆಲ್ಲಾ ನೀವೇ ಹೊಣೆ. ಮಕ್ಕಳ ಭವಿಷ್ಯದ ಜತೆ ಆಟವಾಡುತ್ತಿದ್ದೀರಾ’ ಎಂದು ಚಿಕ್ಕಜಾಜೂರು, ಕೋಟೆಹಾಳ್‌, ಬಾಣಗೆರೆ, ಗುಂಜಿಗನೂರು, ಚನ್ನಪಟ್ಟಣ ಗ್ರಾಮಗಳಿಂದ ಬಂದಿದ್ದ ಪೋಷಕರು ಬಿಇಒ ಅವರನ್ನು ತರಾಟೆಗೆ ತೆಗೆದುಕೊಂಡರು.

ತಹಶೀಲ್ದಾರ್‌ ಭೇಟಿ: ವಿಷಯ ತಿಳಿದ ತಹಶೀಲ್ದಾರ್‌ ಸೋಮಶೇಖರ್‌ ಸ್ಥಳಕ್ಕೆ ಭೇಟಿ ನೀಡಿ, ಬಿಇಒ ಹಾಗೂ ಶಾಲೆಯ ಮುಖ್ಯ ಶಿಕ್ಷಕಿ ಎಸ್‌.ಎಸ್‌.ಪರ್ವೀನ್‌ ಅವರಿಂದ ಮಾಹಿತಿ ಪಡೆದರು. ಗ್ರಾಮ ಪಂಚಾಯ್ತಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಶಾಲೆಯ ದತ್ತು ಸಂಸ್ಥೆ ಸ್ನೇಹ ಬಳಗ ಕನ್ನಡ ಯುವಕ ಸಂಘದ ಅಧ್ಯಕ್ಷ ಸೋಮಶೇಖರ್‌ ಅವರೊಂದಿಗೆ ಚರ್ಚೆ ನಡೆಸಿದರು.

ಗ್ರಾಮಕ್ಕೆ ಸರ್ಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಅವಶ್ಯಕತೆ ಇದ್ದು, ಈಗಿರುವ ಸರ್ಕಾರಿ ಶಾಲೆಯಲ್ಲೇ ಇದನ್ನು ಆರಂಭಿಸುವಂತೆ ಗ್ರಾಮಸ್ಥರು ಮಾಡಿದ ಮನವಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದರು.

ಪ್ರಯಾಣಿಕರ ಪರದಾಟ: ರಸ್ತೆ ತಡೆಯಿಂದ ದಾವಣಗೆರೆ, ಹೊಳಲ್ಕೆರೆ, ಹೊಸದುರ್ಗ ಮತ್ತಿತರ ಕಡೆಗೆ ತೆರಳುವ ಬಸ್ಸು, ಕಾರು, ಟ್ರ್ಯಾಕ್ಟರ್‌, ರಿಕ್ಷಾ ಮೊದಲಾದ ವಾಹನಗಳ ಸಂಚಾರ ತಡೆ ಹಿಡಿದಿದ್ದರಿಂದ ಸುಮಾರು ಒಂದು ಗಂಟೆ ಸಂಚಾರದಲ್ಲಿ ವ್ಯತ್ಯಾಯವಾಯಿತು. ರಸ್ತೆಯ ಎರಡೂ ಕಡೆಗಳಲ್ಲಿ ನೂರಾರು ವಾಹನಗಳು ನಿಂತಿದ್ದವು.
ಪ್ರತಿಭಟನಾನಿರತರು ರಸ್ತೆ ತಡೆ ಮಧ್ಯೆಯೂ ಎರಡು ಆ್ಯಂಬುಲೆನ್ಸ್‌ಗೆ ಮಾತ್ರ ಸಂಚಾರ ಮುಂದುವರಿಸಲು ಅವಕಾಶ ಮಾಡಿಕೊಟ್ಟರು.

ಪರ್ಯಾಯವ್ಯವಸ್ಥೆ: ಬಿಇಒ
ಎಂಟನೇ ತರಗತಿ ಮುಗಿಸಿರುವ 70 ವಿದ್ಯಾರ್ಥಿಗಳಲ್ಲಿ 29 ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳನ್ನು ಖಾಸಗಿ ಅನುದಾನ ರಹಿತ ಆಂಗ್ಲಮಾಧ್ಯಮ ಪ್ರೌಢಶಾಲೆಗೆ ದಾಖಲು ಮಾಡಿಸಲಾಗುವುದು. ಕನ್ನಡ ಮಾಧ್ಯಮ ವಿದ್ಯಾರ್ಥಿಗಳನ್ನು ಅನುದಾನಿತ ಶಾಲೆಗೆ ಸೇರಿಸಲಾಗುವುದು. ಈ ವಿದ್ಯಾರ್ಥಿಗಳ ಸಮವಸ್ತ್ರ, ಶುಲ್ಕ ಹಾಗೂ ಪುಸ್ತಕಗಳನ್ನು ಕೊಡಿಸುವ ಜವಾಬ್ದಾರಿ ವಹಿಸುತ್ತೇನೆ ಎಂದು ಬಿಇಒ ಡಿ.ಎ. ತಿಮ್ಮಣ್ಣ ಅವರು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT