ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ನೀರಿನ ಘಟಕಗಳನ್ನು ವಶಕ್ಕೆ ಪಡೆಯಿರಿ

Last Updated 23 ಮೇ 2017, 6:36 IST
ಅಕ್ಷರ ಗಾತ್ರ

ಹೊಳಲ್ಕೆರೆ: ಪಟ್ಟಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಖಾಸಗಿಯವರಿಗೆ ನೀಡಿದ್ದು, ಕೂಡಲೇ ಪಟ್ಟಣ ಪಂಚಾಯ್ತಿ ವಶಕ್ಕೆ ಪಡೆದುಕೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು. ಪಟ್ಟಣದಲ್ಲಿ ಸೋಮವಾರ ನಡೆದ ಪಟ್ಟಣ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಈ ಒತ್ತಾಯ ಕೇಳಿಬಂದಿತು.

ಪಟ್ಟಣದಲ್ಲಿ ಎರಡು ಶುದ್ಧನೀರಿನ ಘಟಕಗಳಿದ್ದು, ಖಾಸಗಿಯವರಿಗೆ ಕೊಡಲಾಗಿದೆ. ಸರ್ಕಾರದ ಹಣದಲ್ಲಿ ಘಟಕಗಳನ್ನು ನಿರ್ಮಿಸಿದ್ದು, ಖಾಸಗಿಯವರಿಗೆ ಕೊಡುವ ಅಗತ್ಯ ಇಲ್ಲ. ಅವರು ಘಟಕಗಳನ್ನು ಸರಿಯಾಗಿ ನಿರ್ವಹಿಸುವುದಿಲ್ಲ. ಒಂದು ಕ್ಯಾನ್ ನೀರಿಗೆ ₹5 ಪಡೆಯುತ್ತಿದ್ದು, ದಿನಕ್ಕೆ ಸಾವಿರಾರು ರೂ ಸಂಗ್ರಹಿಸುತ್ತಿದ್ದಾರೆ.

ಬದಲಾಗಿ ಪಟ್ಟಣ ಪಂಚಾಯ್ತಿಯೇ ಘಟಕಗಳನ್ನು ನಿರ್ವಹಿಸಿ, ₹ 2ರಂತೆ ಹಣ ಪಡೆಯಬಹುದು. ಸಾರ್ವಜನಿಕರಿಗೆ ಅನುಕೂಲ ಮಾಡಲು ಘಟಕಗಳನ್ನು ಆರಂಭಿಸಲಾಗಿದೆಯೇ ಹೊರತು, ಹಣ ಮಾಡುವ ಉದ್ದೇಶದಿಂದ ಅಲ್ಲ  ಎಂದು ಕೆ.ಸಿ.ರಮೇಶ್ ಹೇಳಿದರು.

‘ಶುದ್ಧನೀರಿನ ಘಟಕಗಳನ್ನು ವಶಕ್ಕೆ ಪಡೆಯಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಪಟ್ಟಣದಲ್ಲಿ ಇನ್ನೂ ಹೊಸದಾಗಿ ಶುದ್ಧ ನೀರಿನ ಘಟಕಗಳನ್ನು ಆರಂಭಿಸುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ’ ಎಂದು ಮುಖ್ಯಾಧಿಕಾರಿ ಡಿ.ಉಮೇಶ್ ಉತ್ತರಿಸಿದರು.

ಫಲಾನುಭವಿಗಳ ಪಟ್ಟಿ ಕೊಡಿ: ಪಟ್ಟಣದಲ್ಲಿ ನಿವೇಶನ ಮಂಜೂರಾದ ಫಲಾನುಭವಿಗಳ ಪಟ್ಟಿಯನ್ನು ಸದಸ್ಯರಿಗೆ ಕೊಟ್ಟಿಲ್ಲ. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ‘ಆಶ್ರಯ ಸಮಿತಿಯ ಸದಸ್ಯರು ಬಡ ಫಲಾನುಭವಿಗಳನ್ನು ಆಯ್ಕೆ ಮಾಡುತ್ತಾರೆ. ಇದಕ್ಕೆ ಸದಸ್ಯರ ಅನುಮತಿ ಬೇಕಾಗಿಲ್ಲ’ ಎಂದರು.
‘ಸದಸ್ಯರ ಅನುಮತಿ ಅಗತ್ಯವಿಲ್ಲದ ಮೇಲೆ ಸಭೆಯ ಅಜೆಂಡಾದಲ್ಲಿ ಈ ವಿಷಯ ಏಕೆ ಸೇರಿಸಿದಿರಿ?’ ಎಂದು  ಕೆ.ಸಿ.ರಮೇಶ್ ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಮೈರಾಡ ಸಮೀಪ 173 ಫಲಾನುಭವಿಗಳಿಗೆ ನಿವೇಶನ ನೀಡ ಲಾಗಿದೆ. ಕೇಂದ್ರ ಸರ್ಕಾರದ ‘ಹೌಸಿಂಗ್ ಫಾರ್‌ ಆಲ್‌’ ಯೋಜನೆಯ ಅಡಿಯಲ್ಲಿ ಮನೆ ನಿರ್ಮಾಣಕ್ಕೆ ₹ 2.59 ಕೋಟಿ ಬಿಡುಗಡೆ ಆಗಿದೆ. ರಾಜ್ಯ ಸರ್ಕಾರ ₹ 2.71 ಕೋಟಿ ಅನುದಾನ ನೀಡಲಿದ್ದು, ಫಲಾನುಭವಿಗಳಿಂದ ₹ 1.19 ಕೋಟಿ ಸಂಗ್ರಹಿಸಲಾಗುವುದು. ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಎಲ್ಲರಿಗೂ ಸುಸಜ್ಜಿತ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದು ಮುಖ್ಯಾಧಿಕಾರಿ ಹೇಳಿದರು.

ತ್ರಿಚಕ್ರ ವಾಹನಗಳನ್ನು ಅರ್ಹ ಅಂಗವಿಕಲರಿಗೆ ವಿತರಿಸಬೇಕು ಎಂದು ಸದಸ್ಯೆ ಸವಿತಾ ನರಸಿಂಹ ಖಾಟ್ರೋತ್ ಸಲಹೆ ನೀಡಿದರು. ಸಿದ್ದರಾಮಪ್ಪ ಬಡಾವಣೆಯಲ್ಲಿ ಮಾತಾಜಿ ಟ್ರಸ್ಟ್ ವತಿಯಿಂದ ದೇವಾಲಯ ನಿರ್ಮಾಣ, ಎಸ್ಎಫ್‌ಸಿ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುವುದು, ಅಡುಗೆ ಅನಿಲ ಫಲಾನುಭವಿಗಳನ್ನು ಆಯ್ಕೆ ಮಾಡುವುದು, ಅಂಗವಿಕಲರಿಗೆ ಮನೆ ನಿರ್ಮಾಣ, ಹರಾಜು ವಿವರಗಳನ್ನು ಸ್ವೀಕರಿಸುವುದು, ರಾಜ್ಯ ಹಣಕಾಸು ಯೋಜನೆಯ ಮುಕ್ತನಿಧಿ ಅನುದಾನದಲ್ಲಿ ₨42.78 ಲಕ್ಷಕ್ಕೆ ಕ್ರಿಯಾಯೋಜನೆ ತಯಾರಿಸುವುದು, ಫಾಗಿಂಗ್ ಯಂತ್ರ ಖರೀದಿ, ಶಿಥಿಲಗೊಂಡ ವಿದ್ಯುತ್ ಕಂಬ ಹಾಗೂ ಹಾಗೂ ಟ್ರಾನ್ಸ್ ಫಾರ್ಮರ್ ಬದಲಿಸುವ ಬಗ್ಗೆ ಚರ್ಚಿಸಿ ಅನುಮೋದನೆ ನೀಡಲಾಯಿತು.

ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸವಿತಾ ಬಸವರಾಜು, ಸದಸ್ಯರಾದ ಮುರುಗೇಶ್, ರಾಜಪ್ಪ, ಯಶೋದಮ್ಮ, ಶಾರದಮ್ಮ, ಚಂದ್ರಕಲಾ ಪ್ರಕಾಶ್, ಸಯೀದ್, ಸಜೀಲ್, ಖಾದರ್, ಅಲ್ಲಾ ಬಕಷ್, ಹಬೀಬ್, ಇಂದೂಧರ ಮೂರ್ತಿ ಉಪಸ್ಥಿತರಿದ್ದರು.

* *

₹ 5 ಕೋಟಿ ವಿಶೇಷ ಅನುದಾನ ಒದಗಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಂದ ನಂತರ ಎಲ್ಲ ವಾರ್ಡ್‌ಗಳಿಗೆ ಸಮಾನವಾಗಿ ಹಂಚಲಾಗುವುದು.
-–ಡಿ.ಉಮೇಶ್
ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT