ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಆರಂಭವಾದ ತಕ್ಷಣ ಸೌಲಭ್ಯ ವಿತರಿಸಿ

Last Updated 23 ಮೇ 2017, 6:38 IST
ಅಕ್ಷರ ಗಾತ್ರ

ಚಿತ್ರದುರ್ಗ: ಸರ್ಕಾರ ನೀಡುತ್ತಿರುವ ಶೈಕ್ಷಣಿಕ ಸೌಲಭ್ಯಗಳಾದ ಪಠ್ಯಪುಸ್ತಕ, ಸಮವಸ್ತ್ರ, ಶೂ, ಬೈಸಿಕಲ್‌ಗಳನ್ನು ಶಾಲೆ ಆರಂಭವಾದ ತಕ್ಷಣ ದಿನಾಂಕ ನಿಗದಿಗೊಳಸಿ ಏಕಕಾಲದಲ್ಲಿ ಜಿಲ್ಲೆಯ ಎಲ್ಲಾ ಶಾಲೆಯ ಮಕ್ಕಳಿಗೆ ವಿತರಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಸೂಚನೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಸಭಾಂಗಣದಲ್ಲಿ ಸೋಮವಾರ ಉಪನಿರ್ದೇಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾಧಿಕಾರಿ ಕಚೇರಿ, ಸರ್ವಶಿಕ್ಷಣ ಅಭಿಯಾನ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ 2017 – 18 ನೇ ಸಾಲಿನ ಸರ್ವಶಿಕ್ಷಣ ಅಭಿಯಾನ ಚಟುವಟಿಕೆಗಳ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಶಿಕ್ಷಕರ ಕೊರತೆ ಇರುವಂಥ ಶಾಲೆಗಳಿಗೆ ಹೆಚ್ಚುವರಿ ಶಿಕ್ಷಕರನ್ನು ಶಾಲೆ ಪ್ರಾರಂಭದಲ್ಲೇ ನಿಯೋಜಿಸಬೇಕು. ಅದನ್ನು ಬಿಟ್ಟು ಶಾಲೆ ಆರಂಭವಾಗಿ ಮೂರು ತಿಂಗಳಾದ ನಂತರ ನೇಮಿಸಿದರೆ, ಗುಣಮಟ್ಟದ ಶಿಕ್ಷಣ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿರುವ ಬಗ್ಗೆ ಕಳೆದ ವರ್ಷವೇ ಪ್ರಸ್ತಾಪಿಸಿದ್ದೆ. ಪ್ರಸಕ್ತ ಸಾಲಿನಲ್ಲಿ ಈ ಕುರಿತು ಎಚ್ಚರ ವಹಿಸಬೇಕು’ ಎಂದರು.

ಇದೇ ತಿಂಗಳ 29 ರಿಂದ ಶಾಲೆಗಳು ಆರಂಭವಾಗುತ್ತಿದೆ. 30 ರ ವರೆಗೆ ದಾಖಲಾತಿ ಆಂದೋಲನಕ್ಕೆ ಏನೇನು ಕ್ರಮ ಕೈಗೊಳ್ಳಬೇಕು, ಪ್ರಸಕ್ತ ಸಾಲಿನ ಶೈಕ್ಷಣಿಕ ಸೌಲಭ್ಯ ವಿತರಿಸಲು ಯಾವ ರೀತಿಯ ಕ್ರಮ ವಹಿಸಬೇಕು ಎಂಬುದರ ಬಗ್ಗೆ ಎಲ್ಲಾ ಮುಖ್ಯ ಶಿಕ್ಷಕರ ಸಭೆ ಕರೆದು ಸೂಚಿಸಲಾಗಿದೆ. ಶಾಲೆ ಆರಂಭವಾದ ತಕ್ಷಣವೇ ಪಠ್ಯಪುಸ್ತಕ, ಸಮವಸ್ತ್ರ, ಶೂ ವಿತರಿಸಲಾಗುತ್ತದೆ. ಬೈಸಿಕಲ್ ಇನ್ನೂ ಬಂದಿಲ್ಲ ಎಂದು ಡಿಡಿಪಿಐ ಎಂ.ರೇವಣಸಿದ್ದಪ್ಪ ಹೇಳಿದರು.

ಜೂನ್ ಒಂದರಿಂದ ದೈನಂದಿನ ತರಗತಿಗಳು ಆರಂಭವಾಗಲಿವೆ. ಇದೇ ತಿಂಗಳಲ್ಲಿ ಬ್ರಿಜ್‌ ಕೋರ್ಸ್‌ಗಳನ್ನು ನಡೆಸಲಾಗುತ್ತದೆ. ಜೂನ್‌ನಲ್ಲೇ ಹೆಚ್ಚುವರಿ ಶಿಕ್ಷಕರನ್ನು ಕೊರತೆ ಇರುವ ಶಾಲೆಗಳಿಗೆ ನಿಯೋಜಿಸಲಾಗುತ್ತದೆ. ಈ ಬಾರಿ ಹೆಚ್ಚಿನ ಪ್ರಮಾಣದ ಫಲಿತಾಂಶ ತರಲು ಇನ್ನಷ್ಟು ಶ್ರಮಿಸಲಾಗುವುದು ಎಂದು ತಿಳಿಸಿದರು.

ಕಳೆದ ವರ್ಷ ವಿಜ್ಞಾನ ವಿಷಯದಲ್ಲಿ ಕಡಿಮೆ ಫಲಿತಾಂಶ ಬಂದಿತ್ತು. ಈ ಬಾರಿ ಗಣಿತ ವಿಷಯದಲ್ಲಿ ಕಡಿಮೆ ಫಲಿತಾಂಶ ಬಂದಿದೆ. ಆದ್ದರಿಂದ ಕ್ಲಿಷ್ಟಕರ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಆರನೇ ತರಗತಿಯಿಂದಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ಮಾತನಾಡಿದರು. ಡಿವೈಪಿಸಿ ಎ.ಕೆ.ಕೆಂಗಪ್ಪ, ಡಿವೈಪಿಸಿ ಆರ್‌ಎಂಎಸ್‌ಎ ಉಮಾದೇವಿ, ವಿದ್ಯಾಧಿಕಾರಿ ಎಸ್‌ಕೆಬಿ ಪ್ರಸಾದ್, ಬಿಇಓಗಳಾದ ರವಿಶಂಕರ್‌ರೆಡ್ಡಿ, ಹನುಮಂತರಾಯ, ರಾಜಣ್ಣ, ತಿಮ್ಮಣ್ಣ, ರಾಮಯ್ಯ, ಅಬ್ದುಲ್ ಬಷೀರ್, ಎಲ್ಲ ತಾಲ್ಲೂಕುಗಳ ಬಿಆರ್‌ಸಿ, ಅಕ್ಷರ ದಾಸೋಹ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT