ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಳಿಕೆಗಳಲ್ಲಿ ಮಾತ್ರ ಕೆರೆಗೆ ಹರಿದ ನೀರು!

Last Updated 23 ಮೇ 2017, 6:44 IST
ಅಕ್ಷರ ಗಾತ್ರ

ಮೊಳಕಾಲ್ಮುರು:  ಐದಾರು ವರ್ಷಗಳಿಂದಮುಂಗಾರು ಹಾಗೂ ಹಿಂಗಾರು ಸರಿಯಾಗಿ ಬಾರದೇ ಇರುವುದರಿಂದ ತಾಲ್ಲೂಕಿನ ಕೆರೆ ಕಟ್ಟೆಗಳು ಬರಿದಾಗಿವೆ. ಅಂತರ್ಜಲ ಮಟ್ಟವು ತೀವ್ರ ಕುಸಿದು ಯಾವುದೇ ಗ್ರಾಮಕ್ಕೆ ಹೋದರೂ ಒಣಗಿದ ತೋಟ; ನಲ್ಲಿ ಮುಂದೆ ನೀರಿಗಾಗಿ ಇಟ್ಟಿರುವ ಖಾಲಿ ಕೊಡಗಳು ಸ್ವಾಗತಿಸುತ್ತಿವೆ.

‘ಮುಂದಿನ ವರ್ಷ ಚುನಾವಣೆ ನಡೆಯುವುದರಿಂದ ಸಭೆ– ಸಮಾರಂಭಗಳ ವೇದಿಕೆಗಳಲ್ಲಿ ಮಾತ್ರ ಕೆರೆಗಳಿಗೆ ನೀರು ಹರಿಸುವ ಭರವಸೆಗಳು ಕೇಳಿಬರುತ್ತಿವೆ. ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ಆರೋಪ– ಪ್ರತ್ಯಾರೋಪ ಮಾಡುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ.

ಐದಾರು ವರ್ಷಗಳಿಂದ ರಾಜಕೀಯ ನಾಯಕರನ್ನು ಕರೆಸಿ ಭಾಷಣ ಮಾಡಿಸುತ್ತಿದ್ದರೂ ಹನಿ ನೀರು ಹರಿಯಲಿಲ್ಲ. ಕೊನೆ ಪಕ್ಷ ಕಾಮಗಾರಿಯೂ ಆರಂಭವಾಗಿಲ್ಲ’ ಎಂದು ಸಂತೋಷ್‌, ನಾರಾಯಣಪ್ಪ, ಜ್ಯೋತಿ, ಶಂಕರ್‌ ಅಳಲು ತೋಡಿಕೊಂಡಿದ್ದಾರೆ.

ಭದ್ರಾ ಮೇಲ್ದಂಡೆ ಮೂಲ ಯೋಜನೆ ಮೊಳಕಾಲ್ಮುರು ಸೇರಿ ಐದು ತಾಲ್ಲೂಕುಗಳಿಗೆ ನೀರುಣಿಸಲು ಆರಂಭವಾಯಿತು. ಆದರೆ, ಯೋಜನೆ ಮಾರ್ಪಾಡುಗೊಂಡ ಬಳಿಕ ತಾಲ್ಲೂಕು ಕೈ ಬಿಟ್ಟುಹೋಗಿದೆ. ತಾಲ್ಲೂಕನ್ನು ಹೊಸದಾಗಿ ಸೇರ್ಪಡೆ ಮಾಡಿಸಲಾಗಿದೆ ಎಂದು ಭರವಸೆ ಕೊಡುತ್ತಿರುವುದೇ ದೊಡ್ಡ ಸಾಧನೆಯಾಗಿದೆ ಎಂದು ತಾಲ್ಲೂಕು ನೀರಾವರಿ ಹೋರಾಟ ಸಮಿತಿ ವ್ಯಂಗ್ಯವಾಡಿದೆ.

ರಾಂಪುರದಲ್ಲಿ ಕಳೆದ ತಿಂಗಳು ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮೂರು ತಿಂಗಳ ಒಳಗೆ ಬೆಳಗಟ್ಟ ಬಳಿಯಿಂದ
ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕಿನ 55 ಕೆರೆಗಳಿಗೆ ನೀರುಣಿಸುವ ಕಾರ್ಯದ ಸರ್ವೆ ಆರಂಭಗೊಳ್ಳಲಿದೆ ಎಂದು ಹೇಳಿದ್ದರು. ಆದರೆ, ಇದುವರೆಗೂ ಯಾವುದೇ ಪ್ರಗತಿಯಾಗಿಲ್ಲ ಎಂದು ಹೋರಾಟ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

ಬರಿದಾದ ಕೆರೆಗಳು
ರಂಗಯ್ಯನದುರ್ಗ ಜಲಾಶಯ, ಮುತ್ತಿಗಾರಹಳ್ಳಿ, ಹಿರೆಕೆರೆಹಳ್ಳಿ, ನಾಗಸಮುದ್ರ, ಪಕ್ಕುರ್ತಿ, ಹುಚ್ಚಂಗಿದುರ್ಗ, ದುಪ್ಪಿ, ಅಮಕುಂದಿ, ದೇವಸಮುದ್ರ ಕೆರೆಗಳು ಬತ್ತಿವೆ.

ರಂಗಯ್ಯನದುರ್ಗ ಜಲಾಶಯ ಹಾಗೂ ಪಕ್ಕುರ್ತಿ ಕೆರೆಯಿಂದ ಅನುಷ್ಠಾನ ಮಾಡಿದ್ದ ಕುಡಿಯುವ ನೀರಿನ ಯೋಜನೆಯೂ ಸ್ಥಗಿತವಾಗಿದೆ. ಪಕ್ಕುರ್ತಿ ಕೆರೆ ಹಿಂಭಾಗ ಬಳ್ಳಾರಿ ಜಿಲ್ಲೆಗೆ ಹೊಂದಿಕೊಂಡಿದೆ. ತುಂಗಭದ್ರಾ ಹಿನ್ನೀರಿನಿಂದ ನೀರು ಹಾಯಿಸಲು ಸಾಧ್ಯವಿದ್ದರೂ ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ರೈತರು ದೂರಿದ್ದಾರೆ.

ಹಿನ್ನೀರು ಕುಡಿಯಲು ಮಾತ್ರ
ತುಂಗಭದ್ರಾ ಹಿನ್ನೀರಿನ ಮೂಲಕ ತಾಲ್ಲೂಕಿಗೆ ನೀರು ನೀಡುವ ಯೋಜನೆಗೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರದುರ್ಗದಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಭರವಸೆ ನೀಡಿದ್ದಾರೆ. ₹ 1,780 ಕೋಟಿ ವೆಚ್ಚದ ಈ ಯೋಜನೆಯಲ್ಲಿ ಕೂಡ್ಲಿಗಿ, ಮೊಳಕಾಲ್ಮುರು, ಚಳ್ಳಕೆರೆ, ಪಾವಗಡ ತಾಲ್ಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಮಾತ್ರ ದೊರೆಯಲಿದೆ. ಆದರೆ, ಕೆರೆಗಳಿಗೆ ನೀರು ಹಾಯಿಸಲಾಗುವುದು ಎಂಬುದು ಬರೀ ಭರವಸೆ ಎಂದು ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ಹೇಳಿದ್ದಾರೆ.

ಅಂಕಿ ಅಂಶಗಳು
(ಮೊಳಕಾಲ್ಮುರು ತಾಲ್ಲೂಕು)

* 3,680 ತೋಟಗಾರಿಕೆ ಬೆಳೆಗಾರರು

* 723 ಹೆಕ್ಟೇರ್‌: ಒಟ್ಟು ತೋಟಗಾರಿಕೆ ಬೆಳೆ ಪ್ರದೇಶ

* * 

ಮೊಳಕಾಲ್ಮುರು ತಾಲ್ಲೂಕಿನಲ್ಲಿ  80 ಹೆಕ್ಟೇರ್‌ ತೋಟ  ಒಣಗಿದ್ದು, ಶೇ 70ರಷ್ಟು ತೋಟಗಳು ಸಂಕಷ್ಟದಲ್ಲಿವೆ
ರವಿ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT